ರಾಮನಗರ, ಮಾರ್ಚ್ 25: ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ವಿರುದ್ಧ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಡಾ. ಸಿಎನ್ ಮಂಜುನಾಥ್ (Dr CN Manjunath) ಕಣಕ್ಕಿಳಿದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಮಧ್ಯೆ, ರಾಮನಗರ ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಮುನಿರತ್ನ (Munirathna), ಬಿಜೆಪಿ (BJP) ಅಭ್ಯರ್ಥಿ ಮಂಜುನಾಥ್ ಪರ ಬ್ಯಾಟ್ ಬೀಸಿದ್ದಾರೆ. ಮಂಜುನಾಥ್ ಪರ ಮತ ಚಲಾಯಿಸುವಂತೆ ಮನವಿ ಮಾಡಿದ ಅವರು, ಬೇರೆಯವರಿಗೆ ಮತ ಹಾಕಿದರೆ ಸ್ವಾರ್ಥಕ್ಕೆ ಹಾಕಿದಂತೆ ಎಂದು ಸುರೇಶ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಡಾ. ಸಿಎನ್ ಮಂಜುನಾಥ್ ರಾಜಕಾರಣಕ್ಕೆ ಬಂದಿದ್ದು ಸ್ವಾರ್ಥಕ್ಕಲ್ಲ, ಜನಸೇವೆಗೆ. ಬೇರೆಯವರಿಗೆ ವೋಟ್ ಹಾಕಿದರೆ ಅದು ಸ್ವಾರ್ಥಕ್ಕೆ ಹೋಗುತ್ತದೆ. ದೇಶದ 140 ಕೋಟಿ ಜನರಿಗೂ ಡಾ. ಮಂಜುನಾಥ್ ಸೇವೆ ಬೇಕು. ಮುಂದೆ ರಚನೆಯಾಗುವ ಕೇಂದ್ರ ಸರ್ಕಾರದಲ್ಲಿ ಮೈತ್ರಿಯಿಂದ ಸಚಿವರು ಎಂದು ಯಾರಾದರೂ ಆದರೆ ಅದು ಡಾ. ಮಂಜುನಾಥ್ ಎಂದು ಮುನಿರತ್ನ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ಸಚಿವ ಸಂಪುಟದಲ್ಲಿ ಡಾ. ಮಂಜುನಾಥ್ ಸಚಿವರಾಗುವುದು ಸತ್ಯ. ಸ್ವರ್ಗಕ್ಕೆ ಹೋಗಬೇಕೆಂಬ ಆಸೆ ಇದ್ದರೆ ಮಂಜುನಾಥ್ಗೆ ಮತ ನೀಡಿ. ಒಂದು ತಪ್ಪು ಮತ ಹಾಕಿದರೆ ನಿಮಗೆ ಯಮ ಕಾಣಿಸುತ್ತಾನೆ. ಸ್ವರ್ಗಕ್ಕೆ ಹೋದರೆ ರಂಭೆ, ಊರ್ವಶಿ, ಮೇನಕೆ ನೋಡಬಹುದು. ನಾನು ‘ಕಠಾರಿವೀರ ಸುರಸುಂದರಾಂಗಿ’ ಎಂಬ ಸಿನಿಮಾ ಮಾಡಿದ್ದೇನೆ. ಅದರಲ್ಲಿ ಸ್ವರ್ಗ, ನರಕ ಹೇಗಿರುತ್ತದೆ ಎಂದು ನೋಡಿದ್ದೇನೆ. ನಿಮಗೆ ರಾಮ ಬೇಕಾ, ರಾವಣ ಬೇಕಾ ಎಂದು ಮುನಿರತ್ನ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕಾರ್ಯಕರ್ತರ ಉತ್ಸಾಹ ನೋಡಿದರೆ ಗೆಲುವು ನಮ್ಮದೇ: ರಾಮನಗರದಲ್ಲಿ ಇನ್ನೂ ಏನೇನೆಂದರು ನೋಡಿ ಡಾ ಮಂಜುನಾಥ್
ಮತದಾನ ಮಾಡುವಾಗ ಜೆಡಿಎಸ್ ಇಲ್ಲ ಎಂದು ಗೊಂದಲಕ್ಕೆ ಒಳಗಾಗಬೇಡಿ. ಬಿಜೆಪಿ ಹೃದಯದಲ್ಲಿ ಜೆಡಿಎಸ್ ಇದೆ. ಮಂಜುನಾಥ್ ಹೃದಯದಲ್ಲಿ ಜೆಡಿಎಸ್ ಇದೆ, ಹಾಗಾಗಿ ಬಿಜೆಪಿಗೆ ಮತ ನೀಡಿ ಎಂದು ಮುನಿರತ್ನ ಮನವಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Mon, 25 March 24