ಚೇತರಿಕೆ ಹಾದಿಯಲ್ಲಿ ಚನ್ನಪಟ್ಟಣದ ಗೊಂಬೆ ವ್ಯಾಪಾರ: ಕಾರ್ಮಿಕರ ಕೊರತೆಯದ್ದೇ ಚಿಂತೆ
ಇದೀಗ ದಸರಾ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಬೊಂಬೆಗಳಿಗೆ ಬೇಡಿಕೆ ಬಂದಿದ್ದು, ಬೊಂಬೆ ವ್ಯಾಪಾರಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ರಾಮನಗರ: ಕೊರೊನಾ ಎಂಬ ಮಹಾಮಾರಿ ಇಡೀ ಜಗತ್ತನ್ನೇ ಅಲ್ಲೊಲ್ಲ ಕಲ್ಲೋಲ ಮಾಡಿತ್ತು. ಅದರಲ್ಲೂ ಕೊವಿಡ್ನಿಂದಾಗಿ ಬೊಂಬೆ ಉದ್ಯಮ ನೆಲಕಚ್ಚಿತ್ತು. ಆದರೆ ಇದೀಗ ದಸರಾ ಹಿನ್ನೆಲೆ ಬೊಂಬೆಗಳಿಗೆ ಬೇಡಿಕೆ ಬಂದಿದ್ದು, ಬೊಂಬೆ ವ್ಯಾಪಾರಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಕೊರೊನಾ ಎಂಬ ಮಹಾಮಾರಿಯಿಂದ ನೆಲಕಚ್ಚಿದ್ದ ಬೊಂಬೆ ಉದ್ಯಮ, ಇದೀಗ ಸ್ವಲ್ಪಮಟ್ಟಿಗೆ ಚೇತರಿಕೆ ಕಾಣುತ್ತಿದ್ದು, ಚನ್ನಪಟ್ಟಣದ ಬೊಂಬೆಗಳಿಗೆ ಇದೀಗ ಮತ್ತೆ ಬೇಡಿಕೆ ಬಂದಿದೆ. ಲಾಕ್ಡೌನ್ನಿಂದಾಗಿ ಅದೆಷ್ಟೋ ಉದ್ಯಮಗಳು ಮುಚ್ಚಿಹೋಗಿದ್ದವು. ಬೊಂಬೆ ಉದ್ಯಮವೂ ಇಂಥದ್ದೇ ಪರಿಸ್ಥಿತಿ ಎದುರಿಸುತ್ತಿತ್ತು. ಕುಶಲಕರ್ಮಿಗಳು ತಾವು ತಯಾರಿಸಿದ ಬೊಂಬೆಗಳಿಗೆ ಬೇಡಿಕೆ ಇಲ್ಲದೆ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ ಒಂದೂವರೆ ವರ್ಷಗಳ ನಂತರ ಇದೀಗ ಮತ್ತೆ ಬೊಂಬೆಗಳಿಗೆ ಬೇಡಿಕೆ ಬಂದಿದೆ. ದಸರಾ ಸಮಯದಲ್ಲಿ ಬೊಂಬೆಗಳನ್ನು ಮನೆಯಲ್ಲಿ ಕೂರಿಸುವುದು ವಾಡಿಕೆ.
ಆದರೆ ಕಳೆದ ಬಾರಿ ಸರಳ ದಸರಾ ಹಿನ್ನೆಲೆಯಲ್ಲಿ ಅಷ್ಟಾಗಿ ಬೊಂಬೆಗಳಿಗೆ ಬೇಡಿಕೆ ಇರಲಿಲ್ಲ. ಈ ಬಾರಿ ಕೊರೊನಾ ಪ್ರಭಾವ ಕೊಂಚ ಕಡಿಮೆ ಆಗಿದ್ದು, ದಸರಾವನ್ನು ಆಚರಣೆ ಮಾಡುತ್ತಿರುವುದರಿಂದ ಬೊಂಬೆಗಳಿಗೆ ಮತ್ತೆ ಬೇಡಿಕೆ ಬಂದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಬೊಂಬೆಗಳನ್ನು ಕೇಳಿಕೊಂಡು ಬೊಂಬೆ ಕಾರ್ಖಾನೆಗಳ ಬಳಿಯೇ ಜನರು ಬರುತ್ತಿದ್ದಾರೆ.
ಈ ಬಾರಿ ಬೊಂಬೆಗಳಿಗೆ ಬೇಡಿಕೆಯಿದೆ. ಆದರೆ ಕೆಲಸಗಾರರ ಕೊರತೆಯಿಂದ ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗಿಲ್ಲ. ಲಾಕ್ಡೌನ್ ನಂತರ ಕೆಲಸಗಾರರು ಬೇರೆ ಊರುಗಳಿಗೆ ಹೋಗಿದ್ದಾರೆ. ಹೀಗಾಗಿ ಸಮಸ್ಯೆಯಾಗಿದೆ ಎಂದು ಬೊಂಬೆ ಕಾರ್ಖಾನೆ ಮಾಲೀಕ ಕುಮಾರ್ ಪ್ರತಿಕ್ರಿಯಿಸಿದರು.
ವಿಶೇಷ ವರದಿ: ಪ್ರಶಾಂತ್ ಹುಲಿಕೆರೆ
ಇದನ್ನೂ ಓದಿ: Piyush Goyal Tweet: ಚನ್ನಪಟ್ಟಣದ ರೈಲ್ವೇ ನಿಲ್ದಾಣದಲ್ಲಿ ಬೊಂಬೆಗಳ ಪ್ರದರ್ಶನ: ರೈಲ್ವೇ ಸಚಿವ ಪಿಯೂಶ್ ಗೋಯಲ್ ಟ್ವೀಟ್, ಪ್ರಧಾನಿ ಮೋದಿ ರೀಟ್ವೀಟ್ ಇದನ್ನು ಓದಿ: ಮನ್ ಕಿ ಬಾತ್‌ನಲ್ಲಿ ಪ್ರಧಾನಿಯಿಂದ ಚನ್ನಪಟ್ಟಣದ ಬೊಂಬೆ ಪ್ರಸ್ತಾಪ: ಸ್ಥಳೀಯರಲ್ಲಿ ಹರ್ಷದ ಹೊನಲು