ರಾಮನಗರದಲ್ಲಿ ಭೀಕರ ಅಪಘಾತ; 2 ಕಾರು, ಬೈಕ್ ಮೇಲೆ ಟಿಪ್ಪರ್ ಬಿದ್ದು 6 ಜನರ ದುರ್ಮರಣ

| Updated By: preethi shettigar

Updated on: Jan 10, 2022 | 9:55 PM

ಜೆಲ್ಲಿ ಸಾಗಿಸುತ್ತಿದ್ದ ಟಿಪ್ಪರ್​ ಅಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೈಕ್​ ಸವಾರ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಸದ್ಯ ಸ್ಥಳಕ್ಕೆ ಕುಂಬಳಗೋಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಮನಗರದಲ್ಲಿ ಭೀಕರ ಅಪಘಾತ; 2 ಕಾರು, ಬೈಕ್ ಮೇಲೆ ಟಿಪ್ಪರ್ ಬಿದ್ದು 6 ಜನರ ದುರ್ಮರಣ
ಸಾಂಕೇತಿಕ ಚಿತ್ರ
Follow us on

ರಾಮನಗರ: ಜಿಲ್ಲೆಯ ಕುಂಬಳಗೋಡು ಬಳಿ ಭೀಕರ ಅಪಘಾತ (Accident) ಸಂಭವಿಸಿದೆ. 2 ಕಾರು ಮತ್ತು ಒಂದು ಬೈಕ್​ ಮೇಲೆ ಟಿಪ್ಪರ್ ಬಿದ್ದು ನಾಲ್ವರು ಮೃತಪಟ್ಟಿದ್ದಾರೆ. ಎರಡು ಕಾರುಗಳಲ್ಲಿ (Car) ತಲಾ 5 ರಂತೆ 10 ಜನ ತೆರಳುತ್ತಿದ್ದರು. ಅಪಘಾತದಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೆಲ್ಲಿ ಸಾಗಿಸುತ್ತಿದ್ದ ಟಿಪ್ಪರ್​ ಅಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಬೈಕ್ (Bike)​ ಸವಾರ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಸದ್ಯ ಸ್ಥಳಕ್ಕೆ ಕುಂಬಳಗೋಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

KA-02 MM- 7749 ಕಾರಿನಲ್ಲಿದ್ದ ನಾಲ್ವರು ಈ ಅಪಘಾತದಲ್ಲಿ ಸಾವನ್ನಪ್ಪಿದ್ದು, ನಿಖಿತಾ ರಾಣಿ (29), ವೀಣಮ್ಮ(42), ಇಂದ್ರಕುಮಾರ್ (14), ಕೀರ್ತಿಕುಮಾರ್ (40) ಮೃತ ದುರ್ದೈವಿಗಳು. KA 05 MJ 9924 ಕಾರಿನಲ್ಲಿದ್ದ ಒಬ್ಬರು ಮೃತಪಟ್ಟಿದ್ದು, ಮೃತರನ್ನು ಟೊಯೋಟಾ ಕಂಪೆನಿಯ ಸಿಬ್ಬಂದಿ ಟಿ.ಜೆ ಶಿವಪ್ರಕಾಶ್ ಎಂದು ಗುರುತಿಸಲಾಗಿದೆ. ಬೈಕ್​ನಲ್ಲಿದ್ದ ಜಿತಿನ್ ಬಿ. ಜಾರ್ಜ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಟ್ಟು ಜಲ್ಲಿ ಲಾರಿ ಅಪಘಾತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.

ಕೋಲಾರ ಜಿಲ್ಲಾಸ್ಪತ್ರೆ ಸರ್ಜನ್​ ಡಾ.ರವಿಕುಮಾರ್​ ಅಮಾನತು
50,000 ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆಬಿದ್ದಿದ್ದ ಕೋಲಾರ ಜಿಲ್ಲಾಸ್ಪತ್ರೆ ಸರ್ಜನ್​ ಡಾ.ರವಿಕುಮಾರ್ ಅವರನ್ನು ಅಮಾನತ್ತು ಮಾಡಲಾಗಿದೆ. ಗುತ್ತಿಗೆದಾರ ಗಿರೀಶ್​ರಿಂದ ಲಂಚ ಸ್ವೀಕರಿಸುವಾಗ ಡಿ.20ರಂದು ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆಬಿದ್ದಿದ್ದ ಸರ್ಜನ್​, ನ್ಯಾಯಾಂಗ ಬಂಧನದಲ್ಲಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ರವಿಕುಮಾರ್​ ಬಿಡುಗಡೆಯಾಗಿದ್ದಾರೆ. ಆದರೆ ಡಿ.21ರಿಂದಲೇ ಸರ್ಕಾರ ಸರ್ಜನ್​ ಡಾ.ರವಿಕುಮಾರ್​ರನ್ನು ಸೇವೆಯಿಂದ ಅಮಾನತುಗೊಳಿಸಿದೆ.

ಬೆಂಗಳೂರು: ಮಹಿಳೆಗೆ ವಿಡಿಯೋ ಕಾಲ್‌ ಮಾಡಿ ಅಶ್ಲೀಲ ವಿಡಿಯೋ ತೋರಿಸಿದ್ದ ಆರೋಪಿ ಬಂಧನ
ಬೆಂಗಳೂರು: ಮಹಿಳೆಗೆ ವಿಡಿಯೋ ಕಾಲ್‌ ಮಾಡಿ ಅಶ್ಲೀಲ ವಿಡಿಯೋ ತೋರಿಸಿದ್ದ ಆರೋಪಿಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ನಗರದ ಮಾರುತಿ(23) ಬಂಧಿತ ಆರೋಪಿ. ದಿನಸಿ ಅಂಗಡಿ ನಡೆಸುತ್ತಿದ್ದ ಮಹಿಳೆಯಿಂದ ಮೊಬೈಲ್ ನಂಬರ್ ಪಡೆದಿದ್ದ ಆರೋಪಿ, ಆಗಾಗ ಪ್ರಾವಿಜನ್ ಸ್ಟೋರ್​ಗೆ ಬರುತ್ತಿದ್ದ. 25 ವರ್ಷದ ಮಹಿಳೆಗೆ ವಿಡಿಯೋ ಕಾಲ್ ಮುಖಾಂತರ ಖಾಸಗಿ ಅಂಗ ತೋರಿಸದ್ದ. ಈ ಬಗ್ಗೆ ಮಹಿಳೆ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಬಾಗಲಗುಂಟೆ ಠಾಣೆಯಲ್ಲಿ IPC1860, ರೀತ್ಯಾ 354(D)ಪ್ರಕರಣ ದಾಖಲು ಮಾಡಲಾಗಿದೆ.

ಮಂಡ್ಯ: ವಿದ್ಯುತ್ ಶಾರ್ಟ್ ಸೆರ್ಕ್ಯೂಟ್; ಹೊತ್ತಿ ಉರಿದ ಅಂಗಡಿಗಳು
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಸಮೀಪದ ಬೆಳ್ಳೆಕೆರೆ ಸರ್ಕಲ್ ಬಳಿ ವಿದ್ಯುತ್ ಶಾರ್ಟ್ ಸೆರ್ಕ್ಯೂಟ್​ನಿಂದ ಆಟೋಮೊಬೈಲ್ ಮಳಿಗೆ, 2 ಕೋಳಿ ಅಂಗಡಿಗಳಿಗೆ ಬೆಂಕಿ ತಗುಲಿದೆ. ಮೊಗಣ್ಣ ಹಾಗೂ ಯೋಗಾನಂದ ಅವರಿಗೆ ಸೇರಿದ ಅಂಗಡಿಗಳು ಸಂಪೂರ್ಣ ಭಸ್ಮ ಆಗಿದೆ. ಸರ್ವೀಸ್ ಸ್ಟೇಷನ್​ನಲ್ಲಿದ್ದ ಐದಾರು ಬೈಕ್, ಆಯಿಲ್, ಟೈರ್​ಗಳು ಬೆಂಕಿಗೆ ಆಹುತಿಯಾಗಿದೆ. ಮಾಲೀಕರಿಗೆ ಸುಮಾರು 15 ಲಕ್ಷ ರೂ.‌ ಗಳಿಗೂ ಹೆಚ್ಚು ನಷ್ಟವಾಗಿದೆ.

ನೆಲಮಂಗಲದಲ್ಲಿ ಕಾಡು ಪ್ರಾಣಿಗಳ ಬೇಟೆ ಪ್ರಕರಣ; 6 ಜನರ ವಿರುದ್ಧ ಪ್ರಕರಣ ದಾಖಲು
ನೆಲಮಂಗಲದಲ್ಲಿ ಕಾಡು ಪ್ರಾಣಿಗಳ ಬೇಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 51(B) ಅಡಿಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯತಿ ಸದಸ್ಯ ಉಮೇಶ್, ಹನುಮಯ್ಯ, ಮಂಜುನಾಥ್, ಹೇಮಂತ್, ಜಯರಾಮಯ್ಯ, ಶಿವಲಿಂಗ, ವಿರುದ್ಧ ಕೇಸ್ ದಾಖಲಾಗಿದೆ.

ಕೊಂದ ಕಾಡು ಪ್ರಾಣಿಗಳನ್ನು ಕೋಲಿನಲ್ಲಿ ನೇತು ಹಾಕಿ ಸಂಭ್ರಮ ಪಟ್ಟಿದ್ದರು. ಹೆಚ್ಚು ಜನ ಸೇರಿ ಕೊವಿಡ್​ ನಿಯಮ ಉಲ್ಲಂಘನೆ ಮಾಡಿ ಸಂಭ್ರಮಚಾರಣೆ ನಡೆಸಿದ್ದರು. ಜನವರಿ7 ರಂದು ಯಂಟಗಾನಹಳ್ಳಿಯಲ್ಲಿ ಘಟನೆ ನಡೆದಿತ್ತು. ಸದ್ಯ ನೆಲಮಂಗಲ ಗ್ರಾಮಾಂತರ ಠಾಣೆ ಹಾಗೂ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಹಿಟ್ ಅಂಡ್ ರನ್​ ಪ್ರಕರಣ; ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ
ಮುಂದೆ ಹೋಗುತ್ತಿದ್ದ ಬೈಕ್​ಗೆ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ದೊಡ್ಡಬಳ್ಳಾಪುರ ತಾಲ್ಲೂಕಿನ ತಂಬೇನಹಳ್ಳಿ ಬಳಿ‌ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ವೆಂಕಟೇಶ್ (35) ಮೃತ ಬೈಕ್ ಸವಾರ. ಅಪಘಾತದ ನಂತರ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾರೆ.

ಇದನ್ನೂ ಓದಿ:
ಒಂದೇ ದಿನ ಎರಡು ಅಪಘಾತದಿಂದ ಪಾರಾದ ಬೈಕ್​ ಸವಾರ: ವಿಡಿಯೋ ವೈರಲ್​

Nice Road Accident: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಭೀಕರ ಸರಣಿ ಅಪಘಾತ: ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವು

Published On - 7:36 pm, Mon, 10 January 22