AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟ್ಯಾಂತರ ರೂ. ಬೆಲೆ ಬಾಳುವ ಜಮೀನಿಗಾಗಿ ಜಗಳ: ಬೆಂಕಿಗಾಹುತಿಯಾದ ಕಾರು, ಬೈಕ್​ಗಳು

ಅದು ಬೆಂಗಳೂರು ಹೊರವಲಯದಲ್ಲಿರುವ ಜಮೀನು. ಕೋಟ್ಯಾಂತರ ರೂ ಬೆಲೆ ಬಾಳುತ್ತದೆ. ಅದೇ ಜಮೀನು ವಿಚಾರವಾಗಿ ಅದೊಂದು ಗ್ರಾಮದ ಗ್ರಾಮಸ್ಥರು ಹಾಗೂ ಆರ್ಟ್ ಆಫ್ ಲಿವಿಂಗ್​ನ ಸಿಬ್ಬಂದಿಗಳ ನಡುವೆ ಗಲಾಟೆ ನಡೆದಿದೆ. ಅದು ವಿಕೋಪಕ್ಕೆ ತಿರುಗಿ ಬೈಕ್​ಗಳು ಸುಟ್ಟು ಹೋಗಿದ್ರೆ, ಕಾರುಗಳು ಜಖಂ ಆಗಿವೆ. ಏನಿದು ಅಂತೀರಾ? ಇಲ್ಲಿದೆ ನೋಡಿ.

ಕೋಟ್ಯಾಂತರ ರೂ. ಬೆಲೆ ಬಾಳುವ ಜಮೀನಿಗಾಗಿ ಜಗಳ: ಬೆಂಕಿಗಾಹುತಿಯಾದ ಕಾರು,  ಬೈಕ್​ಗಳು
ಜಮೀನಿಗಾಗಿ ಗಲಾಟೆ
ಕಿರಣ್ ಹನುಮಂತ್​ ಮಾದಾರ್
|

Updated on:May 02, 2023 | 1:10 PM

Share

ರಾಮನಗರ: ಸುಟ್ಟು ಕರಕಲಾಗಿರುವ ಬೈಕ್​ಗಳು, ಜಖಂ ಆಗಿರುವ ಕಾರುಗಳು. ನೆಲಕ್ಕೆ ಉರಳಿರುವ ಕಂಪೌಂಡ್. ಇಂತಹ ದೃಶ್ಯ ಕಂಡು ಬಂದಿದ್ದು, ಬೆಂಗಳೂರು ದಕ್ಷಿಣ(Bengaluru South) ತಾಲೂಕಿನ ವಡೇರಹಳ್ಳಿ ಗ್ರಾಮದ ಬಳಿ. ಹೌದು‌ ಜಮೀನು ವಿಚಾರವಾಗಿ ಆರ್ಟ್ ಆಫ್ ಲಿವಿಂಗ್​ನ ಸಿಬ್ಬಂದಿಗಳು ಹಾಗೂ ವಡೇರಹಳ್ಳಿ‌ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ‌ ನಡೆದು, ಅದು‌ ವಿಕೋಪಕ್ಕೆ ತಿರುಗಿದೆ. ಅಂದಹಾಗೆ ವಡೇರಹಳ್ಳಿ ಗ್ರಾಮದ ಸರ್ವೆ ನಂಬರ್ 137 ರಲ್ಲಿ ಒಟ್ಟು 36 ಎಕರೆ ಜಮೀನು ಇದ್ದು, ಆ ಪೈಕಿ ಕೆಲವರ ಜಮೀನಿಗೆ ಆರ್ಟ್ ಆಫ್ ಲಿವಿಂಗ್​ನ ಕಡೆಯವರು ರಾತ್ರೋರಾತ್ರಿ ಕಪೌಂಡ್ ಹಾಕಲು ಮುಂದಾಗಿದ್ದಾರೆ. ಆದರೆ ಆ ಜಾಗದಲ್ಲಿ ವಡೇರಹಳ್ಳಿ ಗ್ರಾಮದ ಕೆಲವರು ವ್ಯವಸಾಯ ಮಾಡುತ್ತಿದ್ದು, ನಮ್ಮ ಜಮೀನಿಗೆ ಬಂದು ಕಪೌಂಡ್ ಹಾಕುತ್ತಿದ್ದಾರೆ ಎಂದು ಗ್ರಾಮದ ನಂಜುಂಡಯ್ಯ ಎಂಬಾತನು ಪ್ರಶ್ನೆ ಮಾಡಲು ಹೋದಾಗ ಆಶ್ರಮದ ಕಡೆಯವರು ಹಲ್ಲೆ ಮಾಡಿದ್ದಾರಂತೆ.

ಹೀಗಾಗಿ ಈ ವಿಚಾರ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಒಟ್ಟಾಗಿ ಬಂದು, ಆಶ್ರಮದ ಸಿಬ್ಬಂದಿ ನಡುವೆ ಗಲಾಟೆ ನಡೆಸಿದ್ದಾರೆ. ಈ ವೇಳೆ ಆರ್ಟ್ ಆಫ್ ಲಿವಿಂಗ್​ಗೆ ಸೇರಿದ ಮಧುವನ ಎಂಬ ಫಾರ್ಮ್ ಹೌಸ್​ನಲ್ಲಿ ಎಂಟು ಬೈಕ್​ಗಳು ಬೆಂಕಿಗಾಹುತಿ ಆಗಿದೆ‌. ಅಲ್ಲದೆ ಐದು ಬೈಕ್ ಗಳು, ನಾಲ್ಕು ಕಾರುಗಳು ಜಖಂ ಆಗಿವೆ. ಅಲ್ಲದೆ ಸೆಕ್ಯುರಿಟಿ ರೂಮ್ ನ ಗಾಜುಗಳು ಪುಡಿಪುಡಿಯಾಗಿವೆ. ಇನ್ನು ಕಪೌಂಡ್ ಸಹ ನೆಲಕ್ಕೆ ಉರಳಿದೆ. ಈ ಕುರಿತು ಆಶ್ರಮದ ಸಿಬ್ಬಂದಿಗಳು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಕಗ್ಗಲಿಪುರ ‌ಪೊಲೀಸ್ ಠಾಣೆಯಲ್ಲಿ ದೂರು‌ ನೀಡಿದ್ದಾರೆ.

ಇದನ್ನೂ ಓದಿ:ಜಗಳೂರು‌ ದೊಡ್ಡ ಮಾರಿಕಾಂಬಾ ಜಾತ್ರೆ ವೇಳೆ ಯುವಕರ ಗುಂಪಿನಿಂದ ಸ್ವಾಮೀಜಿ, ವಕೀಲೆಯೊಬ್ಬರ ಮೇಲೆ ಹಲ್ಲೆ

ಅಂದಹಾಗೆ ಗಲಾಟೆಯಲ್ಲಿ ಗ್ರಾಮಸ್ಥರು ನಮ್ಮ ಜಾಗಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ರವಿಶಂಕರ್ ಗುರೂಜಿ ಆಶ್ರಮದ ಕಡೆಯವರು ದೂರುತ್ತಿದ್ದರೇ, ಬೇಕು ಅಂತಲೇ ಆಶ್ರಮದವರೆ ಬೈಕ್​ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಇನ್ನು ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಘಟನೆ ನಂತರ ರಾಮನಗರ ಎಸ್ ಪಿ ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ‌ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ‌ನೀಡಲು ರಾಮನಗರ ಎಸ್ ಪಿ ಕಾರ್ತಿಕ್ ರೆಡ್ಡಿ ಹಿಂದೇಟೂ ಹಾಕಿದ್ದಾರೆ‌. ಒಟ್ಟಾರೆ ಜಮೀನು ವಿಚಾರವಾಗಿ ಗ್ರಾಮಸ್ಥರು ಹಾಗೂ ಆರ್ಟ್ ಆಫ್ ಲಿವಿಂಗ್ ನ ಸಿಬ್ಬಂದಿಗಳ ನಡುವೆ ಗಲಾಟೆ ನಡೆದಿದೆ. ದೂರು ಪ್ರತಿದೂರು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:06 pm, Tue, 2 May 23