ರಾಮನಗರ,ಅ.06: ‘ಕಳೆದ 30 ವರ್ಷದಿಂದ ಯಾವುದೇ ಅಬಕಾರಿ ಲೈಸೆನ್ಸ್ ನೀಡಿಲ್ಲ, ಜೊತೆಗೆ ಹಳ್ಳಿಯಲ್ಲಿ ನಾವು ಬಾರ್ ತೆಗೆಯುವುದಿಲ್ಲ. ಈ ಕುರಿತು ಚರ್ಚಿಸಿ ಸೂಕ್ತ ಪ್ರದೇಶಗಳಲ್ಲಿ ಬಾರ್(Bar)ಗಳನ್ನು ತೆರೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ರಾಮನಗರ ಜಿಲ್ಲೆಯ ಮಾಗಡಿ(Magadi) ತಾಲೂಕಿನ ಕುದೂರು ಗ್ರಾಮದಲ್ಲಿ ಮಾತನಾಡಿದ ಅವರು ‘ಕುಡಿಯುವುದನ್ನು ಯಾರೂ ತಪ್ಪಿಸಲು ಸಾಧ್ಯವಾಗುವುದಿಲ್ಲ ಎಂದರು.
ಇನ್ನೊಂದೆಡೆ ಚಿತ್ರದುರ್ಗದಲ್ಲಿ ಇಂದು (ಅ.06) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ‘ ನಮ್ಮ ಸರ್ಕಾರ ಮದ್ಯದ ಅಂಗಡಿ ತೆಗೆಯಲ್ಲ, ಬಿಜೆಪಿ ಆಡಳಿತದಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ನಮ್ಮ ಅವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಗ್ಯಾರಂಟಿ ಯೋಜನೆ, ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದರು.
ಇದನ್ನೂ ಓದಿ:ಪಂಚಾಯಿತಿಗೊಂದು ಬಾರ್ ವಿವಾದದ ಬಗ್ಗೆ ಸಿಎಂ, ಡಿಸಿಎಂ ಸ್ಪಷ್ಟನೆ: ಎಲ್ಲಾ ಅಂತೆ-ಕಂತೆಗಳಿಗೆ ತೆರೆ
ಹೌದು, ನೂತನ ಮದ್ಯದಂಗಡಿಗಳಿಗೆ ಪರವಾನಗಿ ನೀಡುವ ಕುರಿತು ಇತ್ತೀಚೆಗೆ ಮಾತನಾಡಿದ್ದ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್, ‘ಪಾಪದ ಹಣದಲ್ಲಿ ಸರ್ಕಾರ ನಡೆಸುವ ಅಗತ್ಯವಿಲ್ಲ. ಮದ್ಯದ ಅಂಗಡಿಗಳನ್ನು ಯಾವ ಪುರುಷಾರ್ಥಕ್ಕೆ ಹೆಚ್ಚಿಸುತ್ತಿದ್ದಾರೆ? ಸರ್ಕಾರ ನಡೆಸಲು ಆರ್ಥಿಕ ಸಮಸ್ಯೆಗಳಿದ್ದರೆ ಬೇರೆ ಮಾರ್ಗ ಹುಡುಕಲಿ. ಶ್ರೀಮಂತರಿಗೆ ಯಾಕೆ ಉಚಿತ ಯೋಜನೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಜೊತೆಗೆ ‘ನನ್ನಂತಹವರಿಗೆ ಉಚಿತ ವಿದ್ಯುತ್ ನೀಡುವ ಅಗತ್ಯವೇನಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ತಜ್ಞರು, ಮ್ಯಾನೇಜ್ ಮಾಡುವ ನಂಬಿಕೆ ಇದೆ. ಈ ವಿಚಾರವನ್ನು ಶಾಸಕರ ಸಭೆ, ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪ ಮಾಡುತ್ತೇನೆ. ಒಂದು ವೇಳೆ ಸರ್ಕಾರ ಈ ನಿರ್ಣಯದಿಂದ ಹಿಂದೆ ಸರಿಯದಿದ್ದರೆ ನಾನೇ ಹೋರಾಟ ನಡೆಸುವೆ ಎಂದು ಸ್ವ-ಪಕ್ಷದ ಶಾಸಕ ಬಿ.ಆರ್.ಪಾಟೀಲ್ ಎಚ್ಚರಿಕೆ ನೀಡಿದ್ದರು. ಇವುಗಳ ಬೆನ್ನಲ್ಲೆ ಇದೀಗ ಡಿಕೆ ಶಿವಕುಮಾರ್ ಸೂಕ್ತ ಪ್ರದೇಶಗಳಲ್ಲಿ ಬಾರ್ಗಳನ್ನು ತೆರೆಯುತ್ತೇವೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ