ಕೆರೆಗೆ ಹಾರಿ ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಯ ಯತ್ನ; ಮೂವರು ಜಲಸಮಾಧಿ, ಬಾಲಕಿಯ ಸ್ಥಿತಿ ಗಂಭೀರ
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆರೆಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ದಮ್ಮನಕಟ್ಟೆಯಲ್ಲಿ ನಡೆದಿದೆ.
ರಾಮನಗರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೆರೆಗೆ ಹಾರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ದಮ್ಮನಕಟ್ಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಬಾಲಕಿ ಮಾತ್ರ ಪ್ರಾಣಾಪಾಯದಿಂದ ಪಾರಗಿದ್ದಾಳೆ. ಸಿದ್ದಮ್ಮ(55), ಸುಮಿತ್ರಾ(30), ಹನುಮಂತ ರಾಜು(35) ಮೃತ ದುರ್ದೈವಿಗಳು.
ಹನುಮಂತ, ಸುಮಿತ್ರಾ ದಂಪತಿ ಪುತ್ರಿ ಕೀರ್ತನಾ ಸ್ಥಿತಿ ಗಂಭೀರವಾಗಿದೆ. ಕೀರ್ತನಾಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕುಡಿದು ಗಲಾಟೆ ಮಾಡಿಕೊಂಡು ಮಾತಿಗೆ ಮಾತು ಬೆಳೆದು ಆತ್ಮಹತ್ಯೆಗೆ ಕುಟುಂಬ ಯತ್ನಿಸಿದೆ ಎಂಬ ಮಾಹಿತಿ ಸಿಕ್ಕಿದೆ. ಮೊದಲಿಗೆ ಒಟ್ಟು ಐವರು ಕೆರೆಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದರು. ಆದರೆ ಮೃತ ಸುಮಿತ್ರಾಳ ಹತ್ತು ವರ್ಷದ ಮಗಳು ಚಂದನಾ(10) ಬಂದು ಗ್ರಾಮಸ್ಥರಿಗೆ ಮಾಹಿತಿ ತಿಳಿಸಿದ್ದಾಳೆ. ಮಾಹಿತಿ ಪಡೆದ ಗ್ರಾಮಸ್ಥರು ಕೀರ್ತನಾ ರಕ್ಷಣೆ ಮಾಡಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ದು ಗುಂಡುಗಳಿಂದ ಕೌಟುಂಬಿಕ ಕಲಹ ಬೆಂಗಳೂರಿನಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ಕೌಟುಂಬಿಕ ಕಲಹಕ್ಕೆ ಮದ್ದುಗುಂಡು ಕಾರಣವೆಂಬ ಅಪನಂಬಿಕೆ ಸೃಷ್ಟಿಯಾಗಿದೆ. ಮನೆಯಲ್ಲಿದ್ದ ಮದ್ದು ಗುಂಡುಗಳಿಂದ ಕೌಟುಂಬಿಕ ಕಲಹವೆಂದು ಮದ್ದು ಗುಂಡುಗಳನ್ನು ಗುಂಡಿ ತೋಡಿ ಮಹಿಳೆ ಹೂತಿಟ್ಟ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕದಲ್ಲಿರುವ ಹೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆ ಮದ್ದು ಗುಂಡುಗಳನ್ನು ಹೂತಿಟ್ಟಿದ್ದಾರೆ. ಹೋಟೆಲ್ ಸಿಬ್ಬಂದಿಗೆ ಒಂದು ಮದ್ದು ಗುಂಡು ಸಿಕ್ಕ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆದಿದ್ದು ಈ ವೇಳೆ ಮತ್ತೊಂದು ಮದ್ದು ಗುಂಡು ಪತ್ತೆಯಾಗಿತ್ತು.
ಬಳಿಕ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಮಹಿಳೆಯೊಬ್ಬರು ಗುಂಡು ಹೂತಿಟ್ಟಿರುವುದು ಪತ್ತೆಯಾಗಿದೆ. ಏರ್ ಪೋರ್ಸ್ ನಿವೃತ್ತ ಗ್ರೂಪ್ ಕ್ಯಾಪ್ಟನ್ ಪತ್ನಿಯಾಗಿರುವ ಮಹಿಳೆಯನ್ನು ವಿಚಾರಣೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪತಿಯ ಬಳಿ ಲೈಸೆನ್ಸ್ ಗನ್ ಇತ್ತು, ಅದನ್ನು ಮಾರಿದ್ದರು. ಆದರೆ ಮದ್ದು ಗುಂಡುಗಳು ಮಾತ್ರ ಮನೆಯಲ್ಲಿಯೇ ಇತ್ತು. ಅದರಿಂದ ನನ್ನ ಪುತ್ರನ ಸಾಂಸಾರಿಕ ಜೀವನ ಹಾಳಾಗಿತ್ತು. ಹೀಗಾಗಿ ಆ ಮದ್ದು ಗುಂಡು ಹೂತಿಟ್ಟಿರುವುದಾಗಿ ಮಹಿಳೆ ಹೇಳಿಕೆ ನೀಡಿದ್ದಾಳೆ.
ರಾಮನಗರ: ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ಪ್ರಸಾದ್, ನಂದಕುಮಾರ್, ನಾಗೇಶ್ ಬಂಧಿತ ಆರೋಪಿಗಳು. ಬಂಧಿತರಿಂದ 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು: ದೊಡ್ಡಬಿದರಕಲ್ಲಿನ ಸಪ್ತಗಿರಿ ಲೇಔಟ್‌ನಲ್ಲಿ ಇಸ್ಪೀಟ್ ಆಡುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗರಾಜ್, ವೆಂಕಟೇಶ್, ಹಿರೇಮಠ್, ರವಿ, ಸಂತೋಷ್, ಬಸವ, ನಾಗರಾಜುನನ್ನು ಪೀಣ್ಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಡ್ಡೆಯಲ್ಲಿದ್ದ 7ಜನ ಸೇರಿ 20ಸಾವಿರ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ‘ಶಿವಣ್ಣ ಹೇಳಿದಂತೆ ನಮ್ಮ ಭಾಷೆಗಾಗಿ ನಾವು ಪ್ರಾಣ ಕೊಡೋಕೂ ರೆಡಿ’; ಅಜಯ್ ರಾವ್
Published On - 7:23 am, Wed, 22 December 21