ರಾಮನಗರ: ಕೊರೊನಾ ಹೆಮ್ಮಾರಿ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನ ಚಾಚ್ತಾ ಇದೆ. ವೈದ್ಯರು ಮತ್ತು ಸರ್ಕಾರ ಎಷ್ಟೆಲ್ಲಾ ಕ್ರಮಗಳನ್ನ ಕೈಗೊಂಡರೂ, ಹೆಮ್ಮಾರಿ ಮಾತ್ರ ಹತೋಟಿಗೆ ಬರುತ್ತಿಲ್ಲ. ಅದ್ರಲ್ಲೂ ಇದುವರೆಗೂ ಹತೋಟಿಯಲ್ಲಿದ್ದ ರಾಮನಗರದ ಕನಕಪುರದಲ್ಲಿ ಕೊರೊನಾ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಿವೆ. ಹೀಗಾಗಿ ಕನಕಪುರ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ಆಗಲು ಮುಂದಾಗಿದೆ.
ಹೌದು, ಈ ಸಂಬಂಧ ಕನಕಪುರದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಕೊರೊನಾ ನಿಯಂತ್ರಿಸಲು ಜೂನ್ 30ರ ವರೆಗೆ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಲಾಕ್‌ಡೌನ್ ಮಾಡಲು ತೀರ್ಮಾನಿಸಲಾಯಿತು. ಬೆಳಗ್ಗೆ 7ರಿಂದ 11ರವರೆಗೆ ಮಾತ್ರ ವ್ಯಾಪಾರ ವಹಿವಾಟು ಮಾಡಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ. ಉಳಿದಂತೆ ಅಗತ್ಯ ಸೇವೆಗಳಿಗೆ ಸಂಜೆವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.
ಕನಕಪುರದ ಶಾಸಕ ಡಿಕೆ ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್, ರಾಮನಗರದ ಡಿಸಿ, ಎಸ್‌ಪಿ, ನಗರಸಭೆಯ ಜನಪ್ರತಿನಿಧಿಗಳು, ಕನಕಪುರದ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ತರು ಮತ್ತು ಸ್ಥಳೀಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.