ರಾಮನಗರ: ಮೊಲ ಹಿಡಿಯಲು ಹಾಕಿದ್ದ ಉರುಳಿಗೆ ಸಿಲುಕಿ ಹೆಣ್ಣು ಚಿರತೆ (Leopard) ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಅರಳಿಮರದೊಡ್ಡಿ ಗ್ರಾಮದಲ್ಲಿ ನಡೆದಿದೆ. ನರಸಿಂಹಯ್ಯ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಚಿರತೆ ಮೃತಪಟ್ಟಿದೆ. ಜಮೀನು ಮಾಲೀಕರಿಗೆ ಗೊತ್ತಿಲ್ಲದೆ ಮೊಲ ಹಿಡಿಯಲು ಸ್ಥಳೀಯರು ಉರುಳು ಬಿಟ್ಟಿದ್ದರು. ಈ ಉರುಳಿಗೆ ಸಿಲುಕಿ ಮೂರು ವರ್ಷದ ಹೆಣ್ಣು ಚಿರತೆ ಇಂದು (ಡಿಸೆಂಬರ್ 26) ಸಾವನ್ನಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರೀಶಿಲನೆ ನಡೆಸಿದ್ದಾರೆ.
ಮಂಡ್ಯ: ಚಿರತೆ ದಾಳಿಗೆ 16 ಕುರಿಗಳು ಬಲಿ ಚಿರತೆ ದಾಳಿಗೆ 16 ಕುರಿಗಳು ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹರಳಕೆರೆ ಗ್ರಾಮದಲ್ಲಿ ನಡೆದಿದೆ. ಕುರಿ ಕೊಟ್ಟಿಗೆಗೆ ನುಗ್ಗಿ ಚಿರತೆ ದಾಳಿ ನಡೆಸಿದ್ದು, ಗ್ರಾಮದ ಕೆಸ್ತೂರಮ್ಮ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದೆ. ಸದ್ಯ ಚಿರತೆ ದಾಳಿಯಿಂದಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಪರಿಹಾರಕ್ಕಾಗಿ ತಾಲೂಕು ಆಡಳಿತಕ್ಕೆ ಕೆಸ್ತೂರಮ್ಮ ಮನವಿ ಮಾಡಿದ್ದಾರೆ. ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಾವೇರಿ: ಚರಂಡಿಯಲ್ಲಿ ಬಿದ್ದು ಮೇಲೆ ಬರಲಾರದೆ ನರಳಾಡುತ್ತಿದ್ದ ಕರು ರಕ್ಷಣೆ ಮಾಡಿದ ಸ್ಥಳೀಯರು ಹಾವೇರಿ ನಗರದ ವಿ.ಕಾಂಪ್ಲೆಕ್ಸ್ ಬಳಿ ಚರಂಡಿಯಲ್ಲಿ ಬಿದ್ದು ಮೇಲೆ ಬರಲಾರದೆ ನರಳಾಡುತ್ತಿದ್ದ ಕರುವನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆಕಸ್ಮಿಕವಾಗಿ ಕರು ಚರಂಡಿಗೆ ಬಿದ್ದಿದ್ದು, ಕರುವನ್ನು ರಕ್ಷಿಸಲು ತಾಯಿ ಹಸು ಹರಸಾಹಸ ಪಡುತ್ತಿತ್ತು. ಇದನ್ನು ಕಂಡ ಸ್ಥಳೀಯರು ಕರುವನ್ನು ಮೇಲೆತ್ತಿ ತಾಯಿ ಮತ್ತು ಕರುವನ್ನು ಒಂದು ಮಾಡಿದ್ದಾರೆ.
ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ ಮೈಸೂರು ಜಿಲ್ಲೆಯ ಕುಕ್ಕರಹಳ್ಳಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷದಿಂದ ವಾಯುವಿಹಾರಿಗಳಲ್ಲಿ ಆತಂಕ ಮೂಡಿದೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಕೆರೆಯ ದಡದಲ್ಲಿ ಜನರು ವಾಯುವಿಹಾರ ಮಾಡುತ್ತಾರೆ. ಹೀಗಾಗಿ ಮೊಸಳೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ವಾಯುವಿಹಾರಿಗಳು ಒತ್ತಾಯಿಸಿದ್ದಾರೆ. ಈ ಹಿಂದೆ ಕೂಡ ಇದೇ ಸ್ಥಳದಲ್ಲಿ ಮೊಸಳೆ ಕಾಣಿಸಿಕೊಂಡಿತ್ತು.
ಇದನ್ನೂ ಓದಿ: ನೊಣವಿನಕೆರೆಯಲ್ಲೂ ಬಿತ್ತೊಂದು ಚಿರತೆ ಬೋನಿಗೆ, ಜನರ ಕಾಟ ಕಂಡು ಅದು ಅಂದುಕೊಂಡಿದ್ದು ಯಾಕಾದ್ರೂ ಬಂದೆನೋ ಊರಿಗೆ!
ಚಿಕ್ಕಮಗಳೂರು: ಕಾರ್ಮಿಕರ ಪಕ್ಕದಲ್ಲೇ ಮಲಗಿದ್ದ ನಾಯಿಯ ಮೇಲೆ ಚಿರತೆ ದಾಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ದೃಶ್ಯ