ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ವೇನಲ್ಲಿ ಟೋಲ್​ ತಪ್ಪಿಸಿಕೊಳ್ಳುತ್ತಿದ್ದ ವಾಹನ ಸವಾರರಿಗೆ ಶಾಕ್..!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ (Bengaluru Mysuru Expressway) ಟೋಲ್ ಕಟ್ಟದೇ ತಪ್ಪಿಸಿಕೊಂಡು ಹೋಗುತ್ತಿದ್ದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ಕೊಟ್ಟಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳು ಹೆದ್ದಾರಿಯಿಂದ ಸರ್ವೀಸ್ ರಸ್ತೆ ಸಂಪರ್ಕ ಕಡಿತಗೊಳಿಸಲಾಗಿದೆ. ಇದರಿಂದ ಇನ್ಮುಂದೆ ಸರ್ವೀಸ್ ರಸ್ತೆ ಇಲ್ಲದೇ ವಾಹನ ಸವಾರರು ಟೋಲ್​ ಕಟ್ಟಲೇಬೇಕಿದೆ.

ಮೈಸೂರು-ಬೆಂಗಳೂರು ಎಕ್ಸ್​ಪ್ರೆಸ್​ವೇನಲ್ಲಿ ಟೋಲ್​ ತಪ್ಪಿಸಿಕೊಳ್ಳುತ್ತಿದ್ದ ವಾಹನ ಸವಾರರಿಗೆ ಶಾಕ್..!
National Highways Authority closed mysuru bengaluru expressway service road In bidadi News In kannada
Updated By: ರಮೇಶ್ ಬಿ. ಜವಳಗೇರಾ

Updated on: Feb 07, 2025 | 11:13 AM

ರಾಮನಗರ, (ಫೆಬ್ರವರಿ 07): ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇನಲ್ಲಿನಲ್ಲಿ ಟೋಲ್‌ನಿಂದ (Toll) ಎಸ್ಕೇಪ್‌ ಆಗುತ್ತಿದ್ದ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬ್ರೇಕ್ ಹಾಕಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳು ಟೋಲ್ ಪಾವತಿಸದೇ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಬರುತ್ತಿದ್ದವು. ಇದರಿಂದ ಇದೀಗ ಹೆದ್ದಾರಿ ಪ್ರಾಧಿಕಾರ, ಬಿಡದಿ ಬಳಿಯ ನಿರ್ಗಮನ ರಸ್ತೆ ಬಂದ್ ಮಾಡಿದೆ. ಈ ಮೂಲಕ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಇದ್ದ ಸಂಪರ್ಕವನ್ನು ಕಡಿತಗೊಳಿಸಿದೆ.

ಮೈಸೂರಿಂದ ಬೆಂಗಳೂರಿಗೆ ಬರುವ ವಾಹನ ಸವಾರರು ಶೇಷಗಿರಿಹಳ್ಳಿ ಬಳಿ ಟೋಲ್ ಕಟ್ಟದೆ ಬಿಡದಿಯಿಂದ ಮುಂದೆ ಬಂದು ಬೆಂಗಳೂರು ತಲುಪುತ್ತಿದ್ದರು. ಆದ್ರೆ, ಇದೀಗ ಇದಕ್ಕೆ ಹೆದ್ದಾರಿ ಪ್ರಾಧಿಕಾರವು ಸರ್ವಿಸ್ ರಸ್ತೆಯನ್ನೇ ಬಂದ್ ಮಾಡಿದೆ. ಹೀಗಾಗಿ ಬೆಂಗಳೂರಿಗೆ ಬರುವ ವಾಹನ ಸವಾರರು ಶೇಷಗಿರಿಹಳ್ಳಿ ಟೋಲ್ ಪಾವತಿಸಿ ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ಇನ್ನು ರಾಷ್ಟ್ರೀಯ ಹೆದ್ದಾರಿಯ ಕ್ರಮಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಚನಾ ಫಲಕವನ್ನೂ ಅಳವಡಿಸದೇ ಏಕಾಏಕಿ ಎಕ್ಸಿಟ್‌ ರಸ್ತೆಯನ್ನು ಬಂದ್‌ ಮಾಡಿರುವುದು ಸರಿಯಲ್ಲ. ರಾಮನಗರದಿಂದ ಬೆಂಗಳೂರಿಗೆ ಹೋಗುವುದಕ್ಕೂ ದುಬಾರಿ ಟೋಲ್ ಕಟ್ಟಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿ ಟೋಲ್ ಶುಲ್ಕ ವಿಚಾರವಾಗಿ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಸರ್ವಿಸ್ ರಸ್ತೆ ಪೂರ್ಣಗೊಳಿಸದೆ ಟೋಲ್ ವಿಧಿಸಬಾರದೆಂದು ವಿವಿಧ ಸಂಘಟನೆಗಳು ಮಾತ್ರವಲ್ಲದೆ ರಾಜಕೀಯ ಪಕ್ಷಗಳು ಪ್ರತಿಭಟನೆ ನಡೆಸಿದ್ದವು. ಇದರ ನಡುವೆಯೂ ಟೋಲ್ ಶುಲ್ಕ ಸಂಗ್ರಹಣೆ ಆರಂಭವಾದ ಬಳಿಕ ಮೂರು ಬಾರಿ ಪರಿಷ್ಕರಣೆಗೆ ಒಳಪಟ್ಟಿದೆ.

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ 2023 ಜು.1 ರಿಂದ ಪೂರ್ಣ ಪ್ರಮಾಣದ ಟೋಲ್ ಸಂಗ್ರಹಣೆ ಆರಂಭವಾಗಿತ್ತು. ರಾಜ್ಯದಲ್ಲಿರುವ ಬೇರೆ ರಾಷ್ಟ್ರೀಯ ಹೆದ್ದಾರಿಗಳಿಗೆ ಹೋಲಿಕೆ ಮಾಡಿದಲ್ಲಿ ಬೆಂಗಳೂರು – ಮೈಸೂರು ನಡುವಿನ ಎಕ್ಸ್ ಪ್ರೆಸ್ ವೇ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಕಣ್ಣಿಣಿಕೆ – ಶೇಷಗಿರಿಹಳ್ಳಿ ಟೋಲ್ ನಲ್ಲಿ 278.91 ಕೋಟಿ ರೂ. ಸಂಗ್ರವಾಗಿತ್ತು. ಇನ್ನು 2024-25ನೇ ಸಾಲಿನಲ್ಲಿ 167.32 ಕೋಟಿ ರು. ಟೋಲ್ ಶುಲ್ಕ ವಸೂಲಿಯಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ