ಬೆನ್ನುಮೂಳೆ ಮುರಿದು ನರಳುತ್ತಿದ್ದ ಸ್ನೇಹಿತನ ಕೆರೆಯಲ್ಲಿ ಮುಳುಗಿಸಿ ಕೊಂದ ಗೆಳೆಯರು! ಘನಘೋರ ಕೃತ್ಯಕ್ಕೆ ಬೆಚ್ಚಿಬಿದ್ದ ಮಾಗಡಿ

ಎಷ್ಟೋ ಸಲ ರಕ್ತ ಸಂಬಂಧಿಕರಿಂದಲೂ ಸ್ನೇಹಿತರೇ ಆಪತ್ತಿಗೆ ಒದಗುವವರಾಗಿರುತ್ತಾರೆ. ಕಷ್ಟ ಕಾಲದಲ್ಲಿ ಸ್ನೇಹಿತರು ಕೈಹಿಡಿಯುತ್ತಾರೆ ಎಂಬುದೂ ನಿಜ. ಪ್ರಾಣಕ್ಕೆ ಪ್ರಾಣ ಕೊಡುವಂಥಾ ಸ್ನೇಹಿತರ ಬಗ್ಗೆಯೂ ಕೇಳಿರುತ್ತೇವೆ. ಆದರೆ, ಮಾಗಡಿ ತಾಲೂಕಿನಲ್ಲಿ ನಡೆದ ವಿಚಿತ್ರ ಪ್ರಕರಣವೊಂದು ಇದಕ್ಕೆ ಅಪವಾದವೆಂಬಂತಿದೆ. ಮದ್ಯದಲ್ಲಿ ಎಳನೀರು ಬೆರೆಸಲೆಂದು ಸ್ನೇಹಿತನ ಮರಹತ್ತಿಸಿದವರು, ಆತ ಬಿದ್ದು ಗಾಯಗೊಂಡಾಗ ಚಿಕಿತ್ಸೆಗೆ ಹಣ ಖರ್ಚಾಗುತ್ತದೆಂದು ಆತನನ್ನೇ ಕೊಲೆ ಮಾಡಿದ್ದಾರೆ!

ಬೆನ್ನುಮೂಳೆ ಮುರಿದು ನರಳುತ್ತಿದ್ದ ಸ್ನೇಹಿತನ ಕೆರೆಯಲ್ಲಿ ಮುಳುಗಿಸಿ ಕೊಂದ ಗೆಳೆಯರು! ಘನಘೋರ ಕೃತ್ಯಕ್ಕೆ ಬೆಚ್ಚಿಬಿದ್ದ ಮಾಗಡಿ
ಆರೋಪಿಗಳಾದ ಪ್ರಜ್ವಲ್ ಮತ್ತು ಸುದೀಪ್
Edited By:

Updated on: Jan 21, 2026 | 9:21 AM

ರಾಮನಗರ, ಜನವರಿ 21: ಹೀಗೂ ಸ್ನೇಹಿತರು ಇರುತ್ತಾರಾ? ತಮ್ಮ ಸ್ವಾರ್ಥಕ್ಕೆ ಸ್ನೇಹಿತನನ್ನು ತೆಂಗಿನ ಮರ ಹತ್ತಿಸಿ ಆತ ಬಿದ್ದು ಬೆನ್ನು ಮೂಳೆಗೆ ಏಟು ಮಾಡಿಕೊಂಡಾಗ ಚಿಕಿತ್ಸಗೆ ಹತ್ತಾರು ಲಕ್ಷ ರೂ. ಖರ್ಚಾಗುತ್ತದೆಂದು ಸ್ನೇಹಿತರೇ ಆತನನ್ನು ಕೊಲೆ ಮಾಡಿದ ದಾರುಣ ಘಟನೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ (Ramanagara) ಮಾಗಡಿ (Magadi) ತಾಲೂಕಿನ ವಾಜರಹಳ್ಳಿ ಗ್ರಾಮ ಸಾಕ್ಷಿಯಾಗಿದೆ. ನ್ಯೂ ಇಯರ್ ಪಾರ್ಟಿ ಮಾಡಲು ತೆರಳಿದ್ದ ಗೆಳೆಯರ ಗುಂಪೇ, ತಮ್ಮ ಜೊತೆಯಲ್ಲಿದ್ದ ಯುವಕನನ್ನು ನಿರ್ದಯವಾಗಿ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಅಮಾನವೀಯ ಘಟನೆ ಇದೀಗ ಬಯಲಾಗಿದೆ.

ಕೊಲೆಯಾದ ಯುವಕ ವಿನೋದ್ ಕುಮಾರ್ (26) ಹಾಗೂ ಆರೋಪಿಗಳಾದ ಸುದೀಪ್ ಮತ್ತು ಪ್ರಜ್ವಲ್ ಮೂವರೂ ಮಾಗಡಿ ತಾಲೂಕಿನ ಕಲ್ಯಾಣಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಜನವರಿ 1ರಂದು ಹೊಸವರ್ಷ ಆಚರಣೆಗಾಗಿ ಐವರು ಸ್ನೇಹಿತರು ಒಟ್ಟಾಗಿ ಪಾರ್ಟಿಗೆ ತೆರಳಿದ್ದರು. ಈ ವೇಳೆ ಮದ್ಯಕ್ಕೆ ಎಳನೀರು ಬೆರೆಸಲು ತೀರ್ಮಾನಿಸಿದ ಅವರು, ವಿನೋದ್ ಕುಮಾರ್​​ನನ್ನು ತೆಂಗಿನ ಮರ ಹತ್ತುವಂತೆ ಮಾಡಿದ್ದರು ಎನ್ನಲಾಗಿದೆ.

ವಿನೋದ್ ಕುಮಾರ್

ಆ ಸಂದರ್ಭದಲ್ಲಿ ವಿನೋದ್ ಕುಮಾರ್ ಮರದಿಂದ ಕೆಳಗೆ ಬಿದ್ದಿದ್ದ. ಪರಿಣಾಮವಾಗಿ ಆತನ ಬೆನ್ನುಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ. ಚಿಕಿತ್ಸೆಗೆ ಹತ್ತಾರು ಲಕ್ಷ ರೂಪಾಯಿ ಖರ್ಚಾಗಬಹುದು ಎಂಬ ಆತಂಕದಿಂದ ಆರೋಪಿಗಳು ಭೀತಿಗೊಂಡಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ವಿನೋದ್​ನನ್ನು ಮನೆಗೆ ಬಿಡುತ್ತೇವೆ ಎಂದು ನಂಬಿಸಿ, ಮಾರ್ಗಮಧ್ಯೆ ವಾಜರಹಳ್ಳಿ ಸಮೀಪದ ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ ಎಂಬುದು ಇದೀಗ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ತಂತಿಯಿಂದ ಕಲ್ಲುಕಟ್ಟಿ ಮೃತದೇಹವ ಬಾವಿಗೆ ಎಸೆದಿದ್ದ ಆರೋಪಿಗಳು

ಆರೋಪಿಗಳು ವಿನೋದ್​ನನ್ನು ಕೆರೆಯಲ್ಲಿ ಮುಳುಗಿಸಿದ ನಂತರ ಆರಾಮವಾಗಿ ಊರಿನಲ್ಲಿ ಓಡಾಡಿದ್ದರು. ಸಂಜೆ ವೇಳೆಗೆ ಮತ್ತೆ ಸ್ಥಳಕ್ಕೆ ಬಂದು ಕೆರೆಯಿಂದ ಮೃತದೇಹವನ್ನು ಹೊರತೆಗೆದು, ತಂತಿಯಿಂದ ಸೈಜುಕಲ್ಲು ಕಟ್ಟಿ ಬಾವಿಗೆ ಎಸೆದಿದ್ದರು.

ಕೊಲೆ ಪ್ರಕರಣ ಬೆಳಕಿಗೆ ಬಂದಿದ್ಹೇಗೆ?

ವಿನೋದ್ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ಅವರ ಪೋಷಕರು ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಡೆಸಿದ ಸೂಕ್ಷ್ಮವಾಗಿ ತನಿಖೆ ನಡೆಸಿದ್ದು, ಸ್ನೇಹಿತರಿಂದಲೇ ಕೊಲೆಯಾಗಿರುವ ರಹಸ್ಯ ಬಯಲಾಗಿದೆ. ಇದೀಗ ಸುದೀಪ್ ಮತ್ತು ಪ್ರಜ್ವಲ್​ನನ್ನು ಬಂಧಿಸಿರುವ ಪೊಲೀಸರು, ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ