ರಾಮನಗರ, ಜನವರಿ 4: ಒಂದೆಡೆ ಅಯೋಧ್ಯೆಯ ರಾಮ ಮಂದಿರ (Ayodhya Ram Temple) ಉದ್ಘಾಟನೆ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದರೆ ರಾಮನಗರ (Ramanagara) ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ (Iqbal Hussain) ಗುರುವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ನಾನೂ ಕೂಡಾ ರಾಮಭಕ್ತ. ನಾನು ರಾಮನನ್ನು ಪೂಜೆ ಮಾಡುತ್ತೇನೆ. ರಾಮನಗರದಲ್ಲಿ ರಾಮೋತ್ಸವ ನಡೆಸಬೇಕು ಎಂದು ಚಿಂತನೆ ಮಾಡಿದ್ದೆವು. ಅದನ್ನ ಭಕ್ತಿ ಪೂರ್ವಕವಾಗಿ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.
ನಾನೂ ರಾಮನ ಭಕ್ತ. ನಾನು ಎಲ್ಲಾ ದೇವರನ್ನು ಪೂಜಿಸುತ್ತೇನೆ. ನಾನು ಚಿಕ್ಕವಯಸ್ಸಿನಿಂದಲೇ ಎಲ್ಲಾ ದೇವರ ಪೂಜೆ ಮಾಡಿದ್ದೇನೆ. ಹಾಗೆಯೇ ರಾಮನ ಪೂಜೆಯನ್ನೂ ಮಾಡುತ್ತೇನೆ. ರಾಮಮಂದಿರ ವಿಚಾರವನ್ನು ಯಾರೋ ರಾಜಕೀಯವಾಗಿ ಬಳಸಿಕೊಳ್ಳಬಹುದು. ಆದರೆ ನಾವು ಇದನ್ನ ರಾಜಕೀಯವಾಗಿ ಬಳಸಿಕೊಳ್ಳಲ್ಲ. ಜನರನ್ನ ಒಡೆದು ಕೆಲವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಬದ್ಧತೆ, ಸಿದ್ಧಾಂತ ಇದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮಾಡುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದು ಅವರಿಗೆ ಬಿಟ್ಟಿರುವ ವಿಚಾರ. ಆದರೆ ನಾವು ರಾಮನನ್ನು ಮನೆ ದೇವರು ಎಂದು ಪೂಜೆ ಮಾಡುತ್ತೇವೆ. ಅವರಿಗೆ ರಾಮನ ಪೂಜೆ ಹೊಸದಿರಬಹದು, ಆದರೆ ನಮಗೆ ಹೊಸದೇನಲ್ಲ. ಅದಕ್ಕಾಗಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿಯನ್ನು ಇಕ್ಬಾಲ್ ಹುಸೇನ್ ದೂರಿದ್ದಾರೆ.
ಒಂದೆಡೆ, ರಾಮ ಮಂದಿರ ಉದ್ಘಾಟನೆಗೆ ಪ್ರತಿಪಕ್ಷಗಳ ನಾಯಕರಿಗೆ, ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ಕೊಟ್ಟಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ, ಬಿಜೆಪಿ ಆಡಳಿತ ಇರುವ ರಾಜ್ಯಗಳ ನಾಯಕರಿಗೂ ಆಹ್ವಾನ ಕೊಟ್ಟಿಲ್ಲ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ. ಜತೆಗೆ, ಆಹ್ವಾನ ನೀಡುವ ವಿಚಾರ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ಸಂಬಂಧಿಸಿದ್ದು ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಟೀಕೆಗಳ ನಡುವೆಯೇ ಲಕ್ಷ್ಮೀ ಹೆಬ್ಬಾಳ್ಕರ್ಗೆ ರಾಮ ಮಂದಿರ ಉದ್ಘಾಟನೆ ಆಮಂತ್ರಣ ನೀಡಿದ ವಿಹೆಚ್ಪಿ
ಈ ಮಧ್ಯೆ, ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ವಿಚಾರವಾಗಿ ಕೂಡ ರಾಜ್ಯದಲ್ಲಿ ರಾಜಕೀಯ ಕೋಲಾಹಲ ಏರ್ಪಟ್ಟಿದೆ. ರಾಮ ಭಕ್ತರ ಮೇಲೆ ಸಿದ್ದರಾಮಯ್ಯ ಸರ್ಕಾರ ಪ್ರಹಾರ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಇಕ್ಬಾಲ್ ಅವರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ