ನಕಲಿ ಔಷಧ ತಯಾರಿಸುತ್ತಿದ್ದ ಬೃಹತ್ ಜಾಲ ಪತ್ತೆ: ದೇಶದ ಹಲವು ರಾಜ್ಯಗಳಿಗೆ ಜಾಲ ವಿಸ್ತರಿಸಿರುವ ಶಂಕೆ!

Ramanagara Fake Medicine News: ಬಹುದೊಡ್ಡ ನಕಲಿ ಔಷಧಿ ಜಾಲವೊಂದು ಇದೀಗ ಬೆಂಗಳೂರಿನಲ್ಲಿ ಬಯಲಾಗಿದೆ. ಬರೋಬ್ಬರಿ 6 ಕೋಟಿಗೂ ಅಧಿಕ ಮೌಲ್ಯದ ನಕಲಿ ಔಷಧಿ ಜಾಲದ ಕರಾಳ ಮುಖವಾಡ ಕಳಚಿದೆ. ಆದರೆ ದೇಶದ ಹಲವು ರಾಜ್ಯಗಳಿಗೆ ಈ ಜಾಲ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ನಕಲಿ ಔಷಧ ತಯಾರಿಸುತ್ತಿದ್ದ ಬೃಹತ್ ಜಾಲ ಪತ್ತೆ: ದೇಶದ ಹಲವು ರಾಜ್ಯಗಳಿಗೆ ಜಾಲ ವಿಸ್ತರಿಸಿರುವ ಶಂಕೆ!
ನಕಲಿ ಔಷಧ ಜಾಲ
Image Credit source: tv9 kannada
Edited By:

Updated on: Aug 19, 2026 | 4:06 PM

ಮುಖ್ಯಾಂಶಗಳು

  • ಫಾರ್ಮ್​ಹೌಸ್​ನಲ್ಲಿ ನಕಲಿ ಔಷಧ ಪತ್ತೆ ಕೇಸ್
  • ದೇಶದ ಹಲವು ರಾಜ್ಯಗಳಿಗೆ ಜಾಲ ವಿಸ್ತರಿಸಿರುವ ಶಂಕೆ
  • ಇಂದು ಅಥವಾ ನಾಳೆ ಎಸ್​ಐಟಿ ರಚನೆ ಎಂದ ಪ್ರಿಯಾಂಕ್ ಖರ್ಗೆ

ರಾಮನಗರ, ಆಗಸ್ಟ್​ 19: ರಾಮನಗರದ (Ramanagara) ದೊಡ್ಡೇರಿ ಗ್ರಾಮದ ಬಳಿ ಫಾರ್ಮ್‌ಹೌಸ್‌ನಲ್ಲಿ ನಕಲಿ ಔಷಧ ದಂಧೆ ಜಾಲ ಪತ್ತೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಸದ್ಯ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ವಿದೇಶದಲ್ಲಿರುವ ಪ್ರಮುಖ ಆರೋಪಿಗಾಗಿ ಬಲೆ ಬೀಸಿದ್ದಾರೆ. ಮತ್ತೊಂದು ಆಘಾತಕಾರಿ ಸಂಗತಿ ಎಂದರೆ ಕಳೆದ ಒಂದೂವರೆ ವರ್ಷದಿಂದ ಈ ದಂಧೆ ನಡೆಯುತ್ತಿದ್ದು, ದೇಶದ ಹಲವು ರಾಜ್ಯಗಳಿಗೆ ಜಾಲ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದೆ.

ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಿಂದ ಔಷಧ ಪೂರೈಕೆ 

ಬೆಂಗಳೂರು ಹೊರವಲಯದ ದೊಡ್ಡೇರಿ ಗ್ರಾಮದ ಬಳಿಯ 10 ಎಕರೆ ಫಾರ್ಮ್ ಹೌಸ್​​ನಲ್ಲಿ ನಕಲಿ ಔಷಧಿಗಳ ತಯಾರಿಕೆ ಮಾಡಲಾಗುತ್ತಿತ್ತು. ಯಾವುದೇ ಲೈಸೆನ್ಸ್ ಇಲ್ಲದೆ ಕಡಿಮೆ ಬೆಲೆಯ ಔಷಧಿಗಳನ್ನು ಹೊರ ರಾಜ್ಯಗಳಿಂದ ತರಿಸಿ, ಪ್ರತಿಷ್ಠಿತ MNC ಕಂಪನಿಗಳ ಲೇಬಲ್ ಅಂಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಔಷಧಿಗಳು ಹಿಮಾಚಲ ಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಂದ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಪೂರೈಕೆ ಜಾಲದ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ.

ಇದನ್ನೂ ಓದಿ: ನಕಲಿ ಔಷಧ ಜಾಲ ಪತ್ತೆಯಾಗಿದ್ದು ಹೇಗೆ? ರೋಚಕ ಮಾಹಿತಿ ಬಿಚ್ಚಿಟ್ಟ ರಾಮನಗರ ಎಸ್​ಪಿ

ಅಂದಹಾಗೆ ಈ ಫಾರ್ಮ್ ಹೌಸ್ ಮೂಲತಃ ತಮಿಳುನಾಡು ಮೂಲದ ಶರಿಯಪ್ಪ ಅವರಿಗೆ ಸೇರಿದ್ದು, ಕುಮುದ ಹೆಸರಿನಲ್ಲಿ ಲೀಸ್ ಪಡೆದು ಪ್ರಶಾಂತ್ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಮೆಡಿಕಲ್ ರೆಪ್ ಆಗಿ ಕೆಲಸ ಮಾಡಿದ್ದ ಅನುಭವವನ್ನು ಬಳಸಿಕೊಂಡು, ತನ್ನ ಭಾಮೈದ ತೇಜಸ್ ಹಾಗೂ ಪ್ರಭುದೇವ್ ಸೇರಿದಂತೆ ಹಲವರೊಂದಿಗೆ ನಕಲಿ ಔಷಧಿ ಜಾಲ ಕಟ್ಟಿದ್ದ.

ತಾವರೆಕೆರೆ ಪೊಲೀಸರು ದಾಳಿ ವೇಳೆ ಜಾಲ ಪತ್ತೆ

ಅಂದಹಾಗೆ ಬೀಟ್ ಸಿಬ್ಬಂದಿಗಳಾದ ಶಿವರಾಜು ಮತ್ತು ರಘು ನೀಡಿದ ಅನುಮಾನಾಸ್ಪದ ಮಾಹಿತಿ ಆಧರಿಸಿ ತಾವರೆಕೆರೆ ಪೊಲೀಸರು ದಾಳಿ ನಡೆಸಿದ್ದಾರೆ. ಬಳಿಕ ಡ್ರಗ್ ಕಂಟ್ರೋಲರ್ ಅಧಿಕಾರಿಗಳೊಂದಿಗೆ ಜಂಟಿಯಾಗಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ರಾಮನಗರ ಮೂಲದ ಪ್ರಭುದೇವ್ ಬಂಧನವಾಗಿದ್ದು, ತೇಜಸ್, ವೆಂಕಟೇಶ್, ನವೀನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ದುಬೈನಲ್ಲಿ ಇರುವ ಕಿಂಗ್‌ಪಿನ್ ಪ್ರಶಾಂತ್ ಸೇರಿದಂತೆ ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

4.91 ಕೋಟಿ ರೂ ಅಧಿಕ ಮೌಲ್ಯದ ನಕಲಿ ಔಷಧಿ ಸಾಮಾಗ್ರಿ ಜಪ್ತಿ

ಪೊಲೀಸರು ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಜಂಟಿ ದಾಳಿ ವೇಳೆ Pfizer ಸೇರಿದಂತೆ ಹಲವು ಬಹುರಾಷ್ಟ್ರೀಯ ಕಂಪನಿಗಳ ಹೆಸರಿನ ನಕಲಿ ಇಂಜೆಕ್ಷನ್‌ಗಳು, ಸಾವಿರಾರು ಬಾಟಲಿಗಳು, ಲೇಬಲ್‌ಗಳು, ಕ್ಯಾಪ್‌, ಸ್ಟಾಪರ್‌, ಬಾಕ್ಸ್‌ಗಳು ಹಾಗೂ ಪ್ಯಾಕಿಂಗ್ ಸಾಮಗ್ರಿ ಪತ್ತೆಯಾಗಿದೆ. ಒಟ್ಟು 4.91 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಕಲಿ ಔಷಧಿ ಮತ್ತು ಉತ್ಪಾದನಾ ಸಾಮಾಗ್ರಿ ಜಪ್ತಿಯಾಗಿದೆ. ಐಸಿಯುನಲ್ಲಿ ಬಳಸುವ ಹೈಎಂಡ್ ಔಷಧಿಗಳನ್ನೇ ನಕಲಿ ಮಾಡಿರುವುದು ಆರೋಗ್ಯ ಇಲಾಖೆಯ ಆತಂಕಕ್ಕೆ ಕಾರಣವಾಗಿದೆ.

ಇಂದು ಅಥವಾ ನಾಳೆ ಎಸ್​ಐಟಿ ರಚನೆ ಎಂದ ಪ್ರಿಯಾಂಕ್ ಖರ್ಗೆ

ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ‘ದೊಡ್ಡೇರಿ ಬಳಿಯ ಫಾರ್ಮ್​ಹೌಸ್​ನಲ್ಲಿ ನಕಲಿ ಔಷಧ ಪತ್ತೆ ಕೇಸ್​​ ಬಗ್ಗೆ ಯು.ಟಿ.ಖಾದರ್ ಮಾಹಿತಿ ನೀಡಿದ್ದಾರೆ. ಎಸ್​ಐಟಿ ರಚನೆಗೆ ನಾವು ತೀರ್ಮಾನ ಮಾಡಿದ್ದೇವೆ. ಇಂದು ಅಥವಾ ನಾಳೆ ಎಸ್​ಐಟಿ ರಚನೆ ಮಾಡುತ್ತೇವೆ. ಯಾರು, ಹೇಗೆ ಮತ್ತು ಎಲ್ಲಿ ಮಾರಾಟ ಮಾಡುತ್ತಾರೆ, ಹೇಗೆ ತಯಾರಿಸ್ತಾರೆ ಅಂತಾ ತನಿಖೆ ಮಾಡಿಸುತ್ತೇವೆ’ ಎಂದಿದ್ದಾರೆ.

Fake Medicine: ರಾಜ್ಯವನ್ನೇ ಬೆಚ್ಚಿ ಬೀಳಿಸುವ ಕೋಟಿ ಕೋಟಿ ಮೌಲ್ಯದ ಫೇಕ್ ಮೆಡಿಸಿನ್ ಜಾಲ ಪತ್ತೆ ಆಗಿದ್ದೇಗೆ? | #TV9D
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:55 pm, Wed, 19 August 26

Loading...
Unable to load recommendations.
Follow Us