ರಾಮನಗರ, ಫೆಬ್ರವರಿ 20: ವಕೀಲರ ವಿರುದ್ಧ ದೂರು ದಾಖಲು ವಿಚಾರಕ್ಕೆ ಸಂಬಂಧಿಸಿದಂತೆ ಪಿಎಸ್ಐ ತನ್ವೀರ್ ಅಮಾನತಿಗೆ ಆಗ್ರಹಿಸಿ ರಾಮನಗರದ (Ramanagara) ಐಜೂರು ಸರ್ಕಲ್ ಬಳಿ ವಕೀಲರು ಸೋಮವಾರ ನಡೆಸಿದ ಪ್ರತಿಭಟನೆ (Lawyers Protest) ಈಗ ರಾಜಕೀಯ ಆಯಾಮ ಪಡೆದುಕೊಂಡಿದೆ. ಪ್ರತಿಭಟನಾ ನಿರತ ವಕೀಲರಿಗೆ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy), ಪ್ರತಿಪಕ್ಷ ನಾಯಕ ಆರ್ ಅಶೋಕ (R Ashoka) ಸೋಮವಾರ ರಾತ್ರಿ ಸಾಥ್ ನೀಡಿದರು. ಇದೇ ವೇಳೆ, ಉಭಯ ನಾಯಕರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಕೀಲರ ಧರಣಿಗೆ ಮಧ್ಯರಾತ್ರಿವರೆಗೂ ಧರಣಿಗೆ ಸಾಥ್ ನೀಡಿದ ಕುಮಾರಸ್ವಾಮಿ, ಆರ್ ಅಶೋಕ ಸರ್ಕಾರದ ವಿರುದ್ಧ ಕಿಡಿಕಾರಿದರು. ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಆಡಳಿತ ನೀವು ನಡೆಸ್ತಿದ್ದೀರೋ ಅಥವಾ ಯಾರು ನಡೆಸುತ್ತಿದ್ದಾರೆ? ಯಾವನೋ ಶಾಸಕ ಅಥವಾ ಜಿಲ್ಲಾ ಮಂತ್ರಿ ನಡೆಸ್ತಿದ್ದಾನಾ? ನೀವು ಅವರ ಕೈಕೆಳಗೆ ಕೆಲಸ ಮಾಡ್ತೀರೋ ಅಥವಾ ಜನರನ್ನ ರಕ್ಷಿಸ್ತೀರೋ? ಇಂಥ ಕಟ್ಟಡ ಕಟ್ಟಿಸಿದ್ದು ರೌಡಿಗಳ ಜತೆ ಕೆಲಸ ಮಾಡೋಕಲ್ಲ ಎಂದರು.
ಇಂತಹ ಕೆಲಸ ಮಾಡೋಕೆ ನಾನು ಜಿಲ್ಲಾ ಕೇಂದ್ರ ಮಾಡಿದ್ನಾ? ಜಿಲ್ಲಾ ಕೇಂದ್ರ ಬೆಂಗಳೂರಿಗೆ ತಗೊಂಡ್ ಹೋಗಿಬಿಡ್ತಾನಂತೆ. ಅದೇನೋ ಬ್ರ್ಯಾಂಡ್ ಬೆಂಗಳೂರು ಮಾಡ್ತಾನಂತೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಉಲ್ಲೇಖಿಸದೆ ಲೇವಡಿ ಮಾಡಿದರು.
ಮೊದಲು ಹಿರಿಯ ವಕೀಲರ ಬಳಿ ಘಟನೆಯ ಮಾಹಿತಿ ಪಡೆದ ಹೆಚ್ಡಿಕೆ, ಪ್ರಕರಣದ ಒಟ್ಟು ಸಾರಾಂಶ ಏನು? ಯಾಕೆ ವಿಚಾರ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಿತು ಎಂದು ತಿಳಿದುಕೊಂಡರು. ಬಳಿಕ ಮಾತನಾಡಿ, ರಾಮನಗರದಲ್ಲಿ ನಡೆದಿರುವ ಘಟನೆ ಚಿಕ್ಕದು. ಆದರೆ, ವಕೀಲರೊಬ್ಬರು ಸಾಮಾಜಿಕ ಜಾಲಾತಾಣದಲ್ಲಿ ಹಾಕಿದ್ದು ಬಹಳ ಗಂಭೀರವಾದ ವಿಚಾರ. ಇದನ್ನು ಸಣ್ಣ ಮಟ್ಟದಲ್ಲೇ ಚಿವುಟಿ ಹಾಕಬಹುದಿತ್ತು. ರಾಜ್ಯದಲ್ಲಿ ಯಾವ ರೀತಿ ಆಡಳಿತ ಇದೆ? ನಾನು ಪಕ್ಷದ ಬಗ್ಗೆ ಹೇಳಲ್ಲ, ಜನರಿಗೆ ರಕ್ಷಣೆ ಕೊಡುವಂತಹದ್ದು ಆಡಳಿತಾಧಿಕಾರಿಗಳ ಕರ್ತವ್ಯ. ಮಾಧ್ಯಮಗಳಲ್ಲಿ ನೋಡಿ ನಾನು ಅಧಿಕಾರಿಗಳಿಗೆ ಕೇಳಿದೆ. ಅದೇನಿಲ್ಲ, ಅಂಥಾ ಪ್ರಕರಣ ಏನಿಲ್ಲ ಅದನ್ನು ಸರಿ ಪಡಸ್ತೀವಿ ಅಂದಿದ್ರು. ಎಸ್ಪಿಗೂ ಈ ಬಗ್ಗೆ ಗಮನಕ್ಕೆ ತರಲಾಗಿತ್ತು. ಈ ವಿಚಾರ ಅಧಿವೇಶನದಲ್ಲಿ ಮಾತಾಡ್ತಾರೆ. ಇಂಥಾ ವಿಚಾರಗಳನ್ನು ನನ್ನ ಸ್ವಂತಕ್ಕೆ ಬಳಸಿಕೊಂಡಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ರೈತರ ಮೇಲೆ ಗೋಲಿಬಾರ್ ಆದ ಮೇಲೆ ದೇವೇಗೌಡರು ಪಾದಯಾತ್ರೆ ಮಾಡಿದ ಇತಿಹಾಸ ಇದೆ. ಮಂಡ್ಯದಲ್ಲೂ ಒಂದು ಘಟನೆ ನಡೆದಿತ್ತು. ಅವತ್ತೂ ಜಿಲ್ಲಾಧಿಕಾರಿಗಳಿಗೆ ಹೇಳಿದ್ದೆ, ಯಾಕಿಷ್ಟು ಪೊಲೀಸರನ್ನು ಕರೆಸಿದ್ದರು ಎಂಬುದಾಗಿ. ಪಾಪ ಆ ಕಾನಸ್ಟೇಬಲ್ಗಳಿಗೆ ಊಟ ಇರಲ್ಲ, ಮತ್ತೊಂದಿಲ್ಲ. ಅವರ ಕಷ್ಟನೂ ಇವರಿಗೆ ಗೊತ್ತಾಗಲ್ಲ. ಇಷ್ಟು ಜನ ಪೊಲೀಸರನ್ನು ನೋಡಿ ಆಶ್ಚರ್ಯ ಆಯ್ತು. ನಾನು ರಾಮನಗರಲ್ಲಿದ್ದಾಗ ಇಂಥಾ ಪರಿಸ್ಥಿತಿ ಇರಲಿಲ್ಲ. ಅವನ್ಯಾರೋ ರಫಿಕ್ ಅನ್ನೋನು ದೂರು ಕೊಟ್ಟಿದ್ದಾನೆ. ದೂರು ದಾಖಲಾಗಿದೆ, ಯಾರೋ ರಾಮನಗರ ಉಳಿಸೋಕೆ ಪ್ರಗತಿಪರರು ಪ್ರತಿಭಟನೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ನಾನು ಎಂದೂ ಜಾತಿ ನೋಡಿರಲಿಲ್ಲ. ಫೇಸ್ಬುಕ್ನಲ್ಲಿ ಕವನ ಬರೆದೋನು ಮುಸ್ಲಿಂ, ದೂರು ಕೊಟ್ಟವನೂ ಮುಸ್ಲಿಂ, ಶಾಸಕನೂ ಮುಸ್ಲಿಂ. ಇವತ್ತು ನಡೀತಾ ಇರೋದು ರಾಮನಗರ ಜನ ನೋಡಿಲ್ಲ ಎಂದು ಹೆಚ್ಡಿಕೆ ಕಿಡಿ ಕಾರಿದರು.
ಕಾಂಗ್ರೆಸ್ ಪಕ್ಷದ ಶಾಸಕರೇ ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದಾರೆ. ಮೊನ್ನೆ ಹಾವೇರಿಗೆ ಹೋಗಿದ್ದಾಗ ಸಿಎಂ ಸಿದ್ದರಾಮಯ್ಯ ಹೇಳಿದ್ದರಂತೆ, ‘ನಿಂದೇ ಈ ಸ್ಟೇಷನ್ ಅಂತ ಅಲ್ಲಿನ ಶಾಸಕನಿಗೆ.’ ಇದೊಂದು ಗುಂಡಾ ರಾಜ್ಯ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಗಲಾಟೆ ಪ್ರಕರಣವೊಂದರಲ್ಲಿ ವಕೀಲರ ಮೇಲೆ ಸುಳ್ಳು ಎಫ್ಐಆರ್ ಆರೋಪ: ಊಟ ಬಿಟ್ಟು ಬಂದು ಮನವಿ ಸ್ವೀಕರಿಸಿದ ಡಿಸಿ
ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಎಸ್ಡಿಪಿಐ ಕಾರ್ಯಕರ್ತ ಚಾಂದ್ ಪಾಷಾನನ್ನು ಪೊಲೀಸರು ಬಂಧಿಸಿದ್ದ ಪ್ರಕರಣದ ವಿರುದ್ಧ ಸೇಡು ತೀರಿಸಿಕೊಳ್ಳಲು ಎಸ್ಡಿಪಿಐ ಕಾರ್ಯಕರ್ತ… pic.twitter.com/yN43R20LAN
— R. Ashoka (ಆರ್. ಅಶೋಕ) (@RAshokaBJP) February 20, 2024
ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ತೀರ್ಪು ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಎಸ್ಡಿಪಿಐ ಕಾರ್ಯಕರ್ತ ಚಾಂದ್ ಪಾಷಾ ಎಂಬಾತನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಇದಕ್ಕೆ ಪ್ರತಿಯಾಗಿ ಚಾಂದ್ ಪಾಷಾರ ಕಡೆಯೊಬ್ಬರು ನೀಡಿದ್ದ ಸುಳ್ಳು ದೂರಿನ ಆಧಾರದ ಮೇಲೆ ಐಜೂರು ಪೊಲೀಸರು ವಕೀಲರ ಸಂಘದ 40 ವಕೀಲರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ವಕೀಲರು ಆರೋಪಿಸಿದ್ದರು. ಎಫ್ಐಆರ್ ರದ್ದುಗೊಳಿಸುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:04 am, Tue, 20 February 24