
ರಾಮನಗರ, ಜುಲೈ 02: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು 7 ಕೂಲಿ ಕಾರ್ಮಿಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದ ಬಳಿ ನಡೆದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ದುರಂತ ಸಂಭವಿಸಿದ್ದು, ಸುಮಾರು 40 ಅಡಿ ಮೇಲಿಂದ ಬಂಡೆ ಬಿದ್ದ ಪರಿಣಾಮ ದೊಡ್ಡ ಪ್ರಮಾಣ ಸಾವುನೋವು ಉಂಟಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ದುರಂತ ಸ್ಥಳದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಕಾವೇರಿ ಕ್ರಷರ್‌ನಲ್ಲಿ ಘಟನೆ ನಡೆದಿದ್ದು, ಈ ವೇಳೆ 10-15 ಜನ ಬಿಹಾರದವರು, 2-3 ಸ್ಥಳೀಯರು ಕೆಲಸ ಮಾಡುತ್ತಿದ್ದರು. ಹಿಟಾಚಿಯಿಂದ ಕೆಲಸ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಘಟನೆಯಲ್ಲಿ 5 ಜನ ಕೂಲಿ ಕಾರ್ಮಿಕರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆರ್.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ಏಕಾಏಕು ಬಂಡೆ ಬಿದ್ದಿದೆ. ತಾನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಕೇವಲ 10 ಅಡಿ ದೂರದಲ್ಲಿ ಘಟನೆ ನಡೆದಿದೆ ಎಂದು ಮಾದಪಟ್ಟಣ ಗ್ರಾಮದ ಬಳಿ ಟಿವಿ9ಗೆ ಹಿಟಾಚಿ ಆಪರೇಟರ್ ತಿಳಿಸಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣದ ದೇವರಹಳ್ಳಿ ಗ್ರಾಮದಲ್ಲಿ ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ; ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರಯವ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ, ಅನುಮತಿ ಪಡೆದೇ ಬಂಡೆ ಸ್ಫೋಟಿಸಿದ್ದಾರೆ. ಆದರೆ ಹೇಗೆ ದುರಂತ ಸಂಭವಿಸಿತು ಎಂದು ಕಾರಣ ಗೊತ್ತಿಲ್ಲ. ಸ್ಥಳ ಪರಿಶೀಲನೆ ಬಳಿಕ ಅವಘಡಕ್ಕೆ ಕಾರಣ ಗೊತ್ತಾಗಲಿದೆ ಎಂದವರು ತಿಳಿಸಿದ್ದಾರೆ. ಮತ್ತೊಂದೆಡೆ ದುರಂತ ಸ್ಥಳದಲ್ಲಿ ಮೃತಪಟ್ಟವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಹೊಟ್ಟೆಪಾಡಿಗಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಬಂದಿದ್ದೇವೆ. ಕಳೆದ ಒಂದು ವರ್ಷದಿಂದ ಇಲ್ಲಿಗೆ ಬಂದು ಕೆಲಸ ಮಾಡಿ ಜೀವನ ನಡೆಸುತ್ತಿದ್ದೇವೆ ಎಂದು ಅಲವತ್ತುಕೊಂಡಿದ್ದಾರೆ.
ಕಲ್ಲು ಕ್ವಾರಿಯಲ್ಲಿ ದುರಂತ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಎಸ್.ಟಿ. ಸೋಮಶೇಖರ್, 10 ಕಾರ್ಮಿಕರ ಪೈಕಿ 7 ಮಂದಿ ದುರಂತದಲ್ಲಿ ಮೃತಪಟ್ಟಿರುವ ಮಾಹಿತಿ ಇದೆ. ಈ ಹಿಂದೆಯೇ ಎಚ್ಚೆತ್ತುಕೊಳ್ಳಿ ಎಂದು ಹೇಳಿದ್ದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸರು, ಅರಣ್ಯ ಇಲಾಖೆ ವಿರುದ್ಧ ಕೇಸ್ ದಾಖಲಾಗಬೇಕು. ಘಟನೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:53 am, Thu, 2 July 26