ಬೆಂಗಳೂರಲ್ಲಿ ಜೀವನ ಸಾಗಿಸಲು ವರ್ಷಕ್ಕೆ 50 ಲಕ್ಷ ರೂ. ಸಂಬಳವೂ ಸಾಕಾಗಲ್ಲವೇ? ಟೆಕ್ಕಿಯ ಲೆಕ್ಕಾಚಾರ ವೈರಲ್
ಬೆಂಗಳೂರಿನಲ್ಲಿ ವಾರ್ಷಿಕ 50 ಲಕ್ಷ ರೂ. ವೇತನವಿದ್ದರೂ ಜೀವನ ವೆಚ್ಚ ಮತ್ತು ರಿಯಲ್ ಎಸ್ಟೇಟ್ ಬೆಲೆ ಹೆಚ್ಚಿರುವುದರಿಂದ ಶ್ರೀಮಂತರಾಗುವುದು ಕಷ್ಟ ಎಂದು ಟೆಕ್ಕಿಯೊಬ್ಬರು ವಿಡಿಯೋ ಮೂಲಕ ತಿಳಿಸಿದ್ದಾರೆ. ಕೈಗೆ ಸಿಗುವ ಮಾಸಿಕ ಆದಾಯ, ಮನೆ ಬಾಡಿಗೆ, ಕಾರಿನ EMI ಮತ್ತು PF ಕಡಿತದ ನಂತರ ಉಳಿಯುವ ಹಣದ ಬಗ್ಗೆ ಅವರು ಬಿಚ್ಚಿಟ್ಟಿರುವ ಆಘಾತಕಾರಿ ಲೆಕ್ಕಾಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಮುಖ್ಯಾಂಶಗಳು
- 50 ಲಕ್ಷ ವೇತನವಿದ್ದರೂ ಬೆಂಗಳೂರಿನಲ್ಲಿ ಶ್ರೀಮಂತರಾಗುವುದು ಕಷ್ಟ ಎಂದು ಟೆಕ್ಕಿ ಚರ್ಚೆ.
- ತಿಂಗಳ ಖರ್ಚು ಮತ್ತು ದುಬಾರಿ ರಿಯಲ್ ಎಸ್ಟೇಟ್ ಬೆಲೆಯಿಂದ ಹೂಡಿಕೆಗೆ ಹಿನ್ನಡೆ.
- ಸಣ್ಣ ನಗರಗಳಲ್ಲಿ ವಾಸ ಅಥವಾ ಸ್ವಂತ ಉದ್ಯಮ ಆರಂಭಿಸಲು ಉತ್ತಮ ಸಲಹೆ.
ಬೆಂಗಳೂರು, ಆಗಸ್ಟ್ 12: ದೇಶದ ಪ್ರಮುಖ ಟೆಕ್ ಹಬ್ ಆಗಿರುವ ಬೆಂಗಳೂರಿನಲ್ಲಿ ಕೈತುಂಬ ಸಂಬಳ ಪಡೆಯುತ್ತಿದ್ದರೂ ಶ್ರೀಮಂತರಾಗುವುದು ಕಷ್ಟವೇ? ಇದೀಗ ಟೆಕ್ಕಿಯೊಬ್ಬರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಾರ್ಷಿಕ 50 ಲಕ್ಷ ರೂ. ವೇತನ (50 LPA) ಇದ್ದರೂ ಬೆಂಗಳೂರಿನ ಜೀವನಶೈಲಿ ಹಾಗೂ ಹೆಚ್ಚುತ್ತಿರುವ ಖರ್ಚುಗಳಿಂದಾಗಿ ದೊಡ್ಡ ಪ್ರಮಾಣದಲ್ಲಿ ಸಂಪತ್ತು ಗಳಿಸುವುದು ಕಷ್ಟ ಎಂದು ಟೆಕ್ಕಿ ಅನ್ಮೋಲ್ ಅಗರ್ವಾಲ್ ಹೇಳಿದ್ದಾರೆ.
3 ಲಕ್ಷ ರೂ. ಮಾಸಿಕ ಆದಾಯದಲ್ಲಿ ಎಷ್ಟು ಉಳಿಯುತ್ತೆ?
50 ಲಕ್ಷ ರೂ. ಸಂಪೂರ್ಣವಾಗಿ ಬೇಸಿಕ್ ವೇತನವೆಂದು ಪರಿಗಣಿಸಿ ತಮ್ಮ ಲೆಕ್ಕಾಚಾರವನ್ನು ವಿವರಿಸಿರುವ ಅವರು, ತೆರಿಗೆ ಮತ್ತು EPF ಕಡಿತದ ಬಳಿಕ ಸುಮಾರು 35 ಲಕ್ಷ ರೂ. ಉಳಿಯಬಹುದು ಎಂದು ಹೇಳಿದ್ದಾರೆ. ಅಂದರೆ ತಿಂಗಳಿಗೆ ಸರಿಸುಮಾರು 3 ಲಕ್ಷ ರೂ. ಆದಾಯ ಕೈಗೆ ಸಿಗಬಹುದು. ಆದರೆ ಬೆಂಗಳೂರಿನಲ್ಲಿ 2BHK ಮನೆಯ ಬಾಡಿಗೆಗೆ 60,000-70,000 ರೂ., ಮನೆಕೆಲಸದವರು ಮತ್ತು ಅಡುಗೆ ಕೆಲಸಕ್ಕೆ ತಲಾ ಸುಮಾರು 10,000 ರೂ., ದಿನನಿತ್ಯದ ಖರ್ಚು, ಜಿಮ್, ಶಾಪಿಂಗ್ ಹಾಗೂ ಪ್ರಯಾಣಕ್ಕೆ ಸೇರಿ ತಿಂಗಳಿಗೆ 1.2 ಲಕ್ಷದಿಂದ 1.3 ಲಕ್ಷ ರೂ.ವರೆಗೆ ಖರ್ಚಾಗಬಹುದು ಎಂಬುದು ಅವರ ಅಂದಾಜು.
View this post on Instagram
ಕಾರ್ ಖರೀದಿಸಿದರೆ EMI, ನಿರ್ವಹಣೆ ಸೇರಿದಂತೆ ತಿಂಗಳಿಗೆ ಮತ್ತಷ್ಟು 50,000 ರೂ. ಖರ್ಚಾಗಬಹುದು. ಮಕ್ಕಳಿದ್ದರೆ ಶಿಕ್ಷಣ ಸೇರಿದಂತೆ ವೆಚ್ಚ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ತಿಂಗಳಿಗೆ ಸುಮಾರು 1 ಲಕ್ಷದಷ್ಟು ಮಾತ್ರ ಹೂಡಿಕೆಗೆ ಉಳಿಯಬಹುದು ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸುವುದೇ ದೊಡ್ಡ ಸವಾಲು?
ಬೆಂಗಳೂರಿನ ದುಬಾರಿ ರಿಯಲ್ ಎಸ್ಟೇಟ್ ಬೆಲೆಗಳನ್ನೂ ಟೆಕ್ಕಿ ಉಲ್ಲೇಖಿಸಿದ್ದಾರೆ. ಪ್ರಸ್ತುತ 3 ಕೋಟಿ ರೂ. ಬೆಲೆ ಇರುವ ಮನೆಯ ಬೆಲೆ ಮುಂದಿನ ದಿನಗಳಲ್ಲಿ 6-7 ಕೋಟಿ ರೂ.ಗೆ ಏರಬಹುದು ಎಂದು ಅವರು ಅಂದಾಜಿಸಿದ್ದಾರೆ. ಹೀಗಾಗಿ ಹೆಚ್ಚಿನ ಆದಾಯವಿದ್ದರೂ ಸ್ವಂತ ಮನೆ ಖರೀದಿಸಿ ಆರ್ಥಿಕವಾಗಿ ಶ್ರೀಮಂತರಾಗುವುದು ಸವಾಲಾಗಬಹುದು ಎಂಬುದು ಅವರ ವಾದ.
ಇದಕ್ಕೆ ಪರ್ಯಾಯವಾಗಿ ಕಡಿಮೆ ಜೀವನ ವೆಚ್ಚವಿರುವ ಟಿಯರ್-3 ನಗರದಲ್ಲಿ ವಾಸಿಸುತ್ತಾ ರಿಮೋಟ್ ಉದ್ಯೋಗ ಮಾಡುವುದು ಅಥವಾ ಸ್ವಂತ ಉದ್ಯಮ ಆರಂಭಿಸುವುದನ್ನು ಅವರು ಸಲಹೆ ನೀಡಿದ್ದಾರೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 am, Wed, 12 August 26




