ರಾಮನಗರ: ನಿನ್ನೆ(ಏ.11) ಮಾರಕಾಸ್ತ್ರದಿಂದ ಕೊಚ್ಚಿ, ತಲೆಯ ಮೇಲೆ ಕಲ್ಲು ಎತ್ತು ಹಾಕಿ ತಾಲೂಕಿನ ಕೆ ಜಿ ಹೊಸಳ್ಳಿ ಗ್ರಾಮದ ಯುವಕ ಅಶ್ವತ್ಥ್ ಗೌಡ ಎಂಬಾತನನ್ನ ಭೀಕರವಾಗಿ ಕೊಲೆ(Murder) ಮಾಡಲಾಗಿತ್ತು. ಹೌದು ಸ್ವಂತ ಬಾವನನ್ನೇ ಭರತ್ ಮತ್ತು ಆತನ ಕಡೆಯವರು ಹತ್ಯೆ ಮಾಡಿದ್ದರು. ಈ ಸಂಬಂಧ ಮೃತ ಅಶ್ವತ್ಥ್ ಗೌಡ ಸಂಬಂಧಿಕರು ಕೊಲೆ ಆರೋಪಿ ಭರತ್ನ ಸಂಬಂಧಿ ಹುಲಿಯಪ್ಪ ಎಂಬುವವರ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ನಿ ಜೊತೆ ಅಶ್ವತ್ಥ್ ಬೈಕ್ನಲ್ಲಿ ಬರುವ ವೇಳೆ ಅಡ್ಡಗಟ್ಟಿ ಆತನನ್ನ ಹತ್ಯೆ ಮಾಡಲಾಗಿತ್ತು.ಅವರು ಬೈಕ್ ಮೇಲೆ ಬರುವ ವಿಷಯವನ್ನ ಕೊಲೆ ಆರೋಪಿಗೆ ಹುಲಿಯಪ್ಪ ಮಾಹಿತಿ ಕೊಟ್ಟಿದ್ದಾರೆ ಎಂದು ಆತನ ಮನೆಯಲ್ಲಿನ ವಸ್ತುಗಳನ್ನ ಧ್ವಂಸಗೊಳಿಸಿ ಬೆಂಕಿ ಹಚ್ಚಲಾಗಿದ್ದು, ಸದ್ಯ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಘಟನೆ ಹಿನ್ನಲೆ
ಪ್ರೀತಿಸಿ ಮದುವೆಯಾದರು ಎಂಬ ಒಂದೇ ಕಾರಣಕ್ಕೆ ಬಾವನನ್ನೇ ಬಾಮೈದ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆಗೈದಿದ್ದಾನೆ. ಹೌದು ಕೆ ಜಿ ಹೊಸಳ್ಳಿ ಗ್ರಾಮದ ಅಶ್ವತ್ಥ್ ಗೌಡ ಹಾಗೂ ಚನ್ನಪಟ್ಟಣ ನಗರದ ಮಹದೇಶ್ವರ ಬಡಾವಣೆಯ ಸಹನ ದೂರದ ಸಂಬಂಧಿಗಳು ಹಾಗೂ ಒಂದೇ ಜಾತಿ. ಹೀಗಾಗಿ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯ ವಿಚಾರ ಎರಡು ಕುಟುಂಬದವರಿಗೂ ಗೊತ್ತಿತ್ತು. ಹೀಗೆ ವಿರೋಧದ ನಡುವೆ ಕಳೆದ ಎರಡು ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದರು. ಆ ನಂತರ ಇಬ್ಬರು ಕೂಡ ಕೆ ಜಿ ಹೊಸಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು. ನಿನ್ನೆ(ಏ.11) ರಾಮನಗರದಲ್ಲಿ ನೆರವಿಗೆ(ಬೀಗರ ಔತಣಕೂಟ) ಹೋಗಿ ವಾಪಾಸ್ ಬರುವ ವೇಳೆ ಕೆಜಿ ಹೊಸಳ್ಳಿ ಗ್ರಾಮದಲ್ಲಿ ಅಶ್ವತ್ಥ್ ಮನೆಯಿಂದ ಕೂಗಳತೆ ದೂರದಲ್ಲಿ ಹಿಪ್ಪುನೆರಳೆ ಗಿಡಗಳ ಮಧ್ಯೆದಲ್ಲಿ ಹೊಂಚು ಹಾಕಿ ಕುಳಿತಿದ್ದ ಸಹನಾಳ ಸಹೋದರ ಭರತ್ ಅಂಡ್ ಗ್ಯಾಂಗ್ ಏಕಾಏಕಿ ದಾಳಿ ನಡೆಸಿದ್ದರು.
ಇದನ್ನೂ ಓದಿ:ದೊಡ್ಡಬಳ್ಳಾಪುರ: ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವು; ಮಗಳದ್ದು ಕೊಲೆ ಎಂದ ಕುಟುಂಬಸ್ಥರು
ಅವರು ರಾಮನಗರದಿಂದ ಬರುವುದನ್ನೆ ಕಾದು, ಬಳಿಕ ಹಿಂದಿನಿಂದ ಬೈಕ್ ನಲ್ಲಿ ಬಂದು ಮೊದಲಿಗೆ ಸಹನಾಳನ್ನ ತಳ್ಳಿದ್ದು, ಆಕೆ ಕೆಳಗೆ ಬಿದ್ದಿದ್ದಳು. ನಂತರ ಅಶ್ವತ್ ಮೇಲೆ ದಾಳಿ ನಡೆಸಲು ಮುಂದಾಗಿದ್ದರು. ಸ್ವಲ್ಪ ದೂರಕ್ಕೆ ಅಶ್ವತ್ಥ್ ಓಡಿ ಹೋಗಿದ್ದು ಬಳಿಕ ನೆಲಕ್ಕೆ ಬೀತ್ತಿದ್ದ ಈ ವೇಳೆ ಮಾರಕಾಸ್ತ್ರಗಳಿಂದ ಕೊಚ್ಚಿದ್ದರು. ಆನಂತರ ಅಲ್ಲೆ ಇದ್ದ ಸೈಜ್ ಕಲ್ಲನ್ನ ತಲೆಯ ಮೇಲೆ ಎತ್ತಿ ಹಾಕಿದ್ದರು. ಹೀಗಾಗಿ ಅಶ್ವತ್ಥ್ ಸ್ಥಳದಲ್ಲೆ ಸಾವನ್ನಪ್ಪಿದ್ದ. ಇನ್ನು ಬಿಡಿಸಲು ಹೋದ ಸಹನಾ ಮೇಲೂ ಕೂಡ ದಾಳಿ ಮಾಡಿದ್ದು, ಬಳಿಕ ಗ್ರಾಮಸ್ಥರು ಬರುತ್ತಿದ್ದಂತೆ ಎರಡು ಬೈಕ್ ಗಳಲ್ಲಿ ಪರಾರಿಯಾಗಿದ್ದರು.
ಅಂದಹಾಗೆ ಆರೋಪಿ ಭರತ್ ಸಹನಾಳಿಗೆ ಮಲತಾಯಿ ಮಗ. ಭರತ್ನ ತಾಯಿ ತೀರಿ ಹೋದ ನಂತರ ಸಹಾನಳ ತಾಯಿಯನ್ನ ಮದುವೆಯಾಗಿದ್ದರು. ಸಾಕಷ್ಟು ಸಿರಿವಂತರಾಗಿದ್ದರು. ಚನ್ನಪಟ್ಟಣದಲ್ಲಿ ಕಾರ್ ವಾಷಿಂಗ್ ಸೆಂಟರ್ ಸಹ ಇದೆ. ಆದರೆ ಮೊದಲಿನಿಂದಲೂ ಸಹನಾಳ ಮೇಲೆ ಭರತನಿಗೆ ದ್ವೇಷವಿತ್ತು. ಇನ್ನು ಸಹನಾ ಅಶ್ವತ್ಥ್ ನನ್ನ ಮದುವೆಯಾಗುವುದಕ್ಕೂ ಕೂಡ ಭರತ್ ನ ವಿರೋಧವಿತ್ತು. ಹೀಗಾಗಿ ಚನ್ನಪಟ್ಟಣ ಠಾಣೆಯಲ್ಲಿ ದೂರು ಸಹಾ ನೀಡಿದ್ದ. ಪೊಲೀಸರ ಮುಂದೆ ಹೇಳಿಕೆ ಸಹ ಕೊಟ್ಟಿದ್ದರು. ರಾಜಿ ಪಂಚಾಯತಿ ಕೂಡ ನಡೆದಿತ್ತು. ಸಹನಾ ನನಗೆ ನಿಮ್ಮ ಆಸ್ತಿ ಬೇಡವೆಂದು ಬರೆದುಕೊಟ್ಟಿದ್ದಳು. ಆದರೂ ಆಸ್ತಿ ಎಲ್ಲಿ ಕೈತಪ್ಪುತ್ತದೇಯೋ ಎಂದು ಪ್ಲಾನ್ ಮಾಡಿದ ಭರತ್ ತನ್ನ ಜೊತೆ ಇಬ್ಬರನ್ನ ಕರೆದುಕೊಂಡು ಬಂದು ದಾಳಿ ಮಾಡಿ ಕೊಲೆಗೈದಿದ್ದಾನೆ.
ಇದನ್ನೂ ಓದಿ:ದಾವಣಗೆರೆ: ಮನೆ ಮುಂದೆ ಮಲಗಿದ್ದ ವೃದ್ಧನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ; ಹಳೆ ದ್ವೇಷದ ಶಂಕೆ
ಇನ್ನು ಕೊಲೆ ವಿಚಾರ ತಿಳಿಯುತ್ತಿದ್ದಂತೆ ಇಡೀ ಗ್ರಾಮದ ಜನರೇ ಸ್ಥಳದಲ್ಲಿ ನೆರದಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆರೋಪಿಗಳಿಗೆ ಸಹಾಯ ಮಾಡಿದವರನ್ನ ಸ್ಥಳಕ್ಕೆ ಕರೆಯಿಸಿ ಎಂದು ಮೃತದೇಹವನ್ನ ಎತ್ತಲು ಬಿಡದೇ ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರು ಸಮಾಧಾನ ಪಡಿಸಿ ಮೃತದೇಹವನ್ನ ಆಸ್ಪತ್ರೆಗೆ ರವಾನೆ ಮಾಡಿದ್ದರು. ಇನ್ನು ದಾಳಿಯಲ್ಲಿ ಗಾಯಗೊಂಡಿರೋ ಸಹನಾ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ನಂತರ ಕೊಲೆ ಮಾಡಿದ ಭರತ್ ಸೇರಿ ಮೂವರು ಆರೋಪಿಗಳನ್ನ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ಸಹೋದರಿ ಪ್ರೀತಿಸಿ ಮದುವೆಯಾದಳು. ಆಸ್ತಿ ನನಗೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಬಾವನನ್ನೇ ಬಾಮೈದ ಭೀಕರವಾಗಿ ಹತ್ಯೆ ಮಾಡಿ, ತಂಗಿಯ ಬಾಳಿಗೆ ಕೊಳ್ಳಿ ಇಟ್ಟಿದ್ದಾನೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:32 am, Wed, 12 April 23