ಬಿಡದಿಯಲ್ಲಿ ಚೀನಾ ಕಂಪನಿಯಿಂದ ನೌಕರರ ಭವಿಷ್ಯ, ಭವಿಷ್ಯ ನಿಧಿ ಎರಡಕ್ಕೂ ಸಂಚಕಾರ! ಲ್ಯಾಪ್ ಟಾಪ್ ಬ್ಯಾಗ್ ತಯಾರಿಸಿಕೊಡುತ್ತಿದ್ದ ಮಹಿಳೆಯರ ಪಾಡೇನು?
Bidadi: ಈ ಬಗ್ಗೆ ಹೆಚ್ ಆರ್ ಮಮತಾ ರನ್ನ ಕೇಳಿದ್ರೆ ಹಾರಿಕೆ ಉತ್ತರ ನೀಡುತ್ತಿದ್ದು, 21ರ ಒಳಗೆ ಎಲ್ಲವನ್ನು ಕ್ಲಿಯರ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಒಟ್ಟಾರೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದ ಮಹಿಳಾ ನೌಕರರ ಭವಿಷ್ಯ, ಭವಿಷ್ಯ ನಿಧಿ ಎರಡಕ್ಕೂ ಸಂಚಕಾರ ಬಂದಿದೆ.
ಅದು ವಿವಿಧ ಬಗೆಯ ಲ್ಯಾಪ್ ಟಾಪ್ ಬ್ಯಾಗ್ ಗಳನ್ನ ತಯಾರಿಸುವ ಕಾರ್ಖಾನೆ (Garment Factory). ಅಲ್ಲಿ ನೂರಾರು ಮಹಿಳೆಯರು ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಆದರೆ ಏಕಾಏಕಿ ಆ ಕಾರ್ಖಾನೆಯನ್ನ ಬೇರೆಡೆಗೆ ಸ್ಥಳಾಂತರ ಮಾಡಲು, ಕಾರ್ಖಾನೆಯ ಆಡಳಿತ ಮಂಡಳಿ ಮುಂದಾಗಿದೆ. ಆದರೆ ಕಳೆದ ಹಲವು ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡಿದ ಸಿಬ್ಬಂದಿಗೆ ಯಾವುದೇ ಪಿಎಫ್ ಹಣ, ಸಂಬಳ ನೀಡದೇ ಸ್ಥಳಾಂತರ ಮಾಡಲು ಮುಂದಾಗಿದ್ದು, ಇದು ಕಾರ್ಖಾನೆಯ ಸಿಬ್ಬಂದಿಗಳ ಆಕ್ರೋಶಕ್ಕೂ ಕೂಡ ಕಾರಣವಾಗಿದೆ. ಕಾರ್ಖಾನೆಗೆ ಒಳಗೆ ಪ್ರತಿಭಟನೆ ನಡೆಸುತ್ತಿರೋ ಮಹಿಳಾ ನೌಕಕರು (Women). ನೌಕರರ ಜೊತೆಗೆ ಮಾಹಿತಿ ಕಲೆ ಹಾಕುತ್ತಿರೋ ಪೊಲೀಸರು ಹಾಗೂ ಅಧಿಕಾರಿಗಳು. ಕಾರ್ಖಾನೆಯ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸುತ್ತಿರೋ ಕಾಂಗ್ರೆಸ್ ಮುಖಂಡರು. ಅಂದಹಾಗೆ ಇಂತಹ ದೃಶ್ಯ ಕಂಡು ಬಂದಿದ್ದು, ರಾಮನಗರ (Ramanagara) ತಾಲೂಕಿನ ಬಿಡದಿ (Bidadi) ಕೈಗಾರಿಕಾ ಪ್ರದೇಶದಲ್ಲಿರೋ ಕೊರೂನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಾರ್ಖಾನೆಯಲ್ಲಿ.
ಹೌದು ಗಾರ್ಮೆಂಟ್ಸ್ ಒಂದರ ನೌಕರರಿಗೆ ಕಳೆದ ಮೂರು ನಾಲ್ಕು ವರ್ಷಗಳಿಂದ ಪಿಎಫ್ ಹಣವನ್ನ ನೀಡದೇ, ಮೂರು ತಿಂಗಳ ಸಂಬಳವನ್ನು ನೀಡದೇ ಕಾರ್ಖಾನೆಯನ್ನ ಬೇರೆಡೆಗೆ ಸ್ಥಳಾಂತರ ಮಾಡಲು ಕೊರೂನ್ ಗಾರ್ಮೆಂಟ್ಸ್ ನ ಆಡಳಿತ ಮಂಡಳಿ ಮುಂದಾಗಿದ್ದು, ನೌಕರರು ಕೆಲಸವನ್ನ ಸ್ಥಗಿತಗೊಳಿಸಿ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಚೈನಾ (China) ಮೂಲದ ಕೊರೂನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಕಾರ್ಖಾನೆ ಲ್ಯಾಪ್ ಟಾಪ್ ಬ್ಯಾಗಗಳನ್ನ ತಯಾರಿಸುವ ಕಂಪನಿ ಆಗಿದೆ. ಕಳೆದ ಹಲವು ವರ್ಷಗಳಿಂದ ಬಿಡದಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಮಹಿಳೆಯರು ಕೆಲಸ ಸಹಾ ಮಾಡುತ್ತಿದ್ದಾರೆ.
ಆದರೆ ಇದೀಗ ಏಕಾಏಕಿ ಏಪ್ರಿಲ್ 21ರಂದು ಇಲ್ಲಿನ ಘಟಕವನ್ನ ಮುಚ್ಚಿ ಬೇರೆಡೆಗೆ ಸ್ಥಳಾಂತರ ಮಾಡಲು ಕಾರ್ಖಾನೆಯ ಆಡಳಿತ ಮಂಡಳಿ ಮುಂದಾಗಿದೆ. ಆದರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಕಳೆದ ಮೂರು ನಾಲ್ಕು ವರ್ಷಗಳಿಂದ ಪಿಎಫ್ ಹಣ ಬಂದಿಲ್ಲ. ಪ್ರತಿ ತಿಂಗಳು ಸಂಬಳದಲ್ಲಿ ಪಿಎಫ್ ಹಣವನ್ನ ಕಟ್ ಮಾಡಿಕೊಳ್ಳಲಾಗಿದೆ. ಆದರೆ ಪಿಎಫ್ ಅಕೌಂಟ್ ನಲ್ಲಿ ಚೆಕ್ ಮಾಡಿದರೆ ಜೀರೋ ಬ್ಯಾಲೆನ್ಸ್ ತೋರಿಸುತ್ತಿದೆ. ಇನ್ನು ಕಳೆದ ಮೂರು ತಿಂಗಳಿಂದ ಸಂಬಳ ಸಹಾ ಕೊಟ್ಟಿಲ್ಲ. ಹೀಗಾಗಿ ಇವತ್ತು ಮಹಿಳಾ ನೌಕರರು ರೊಚ್ಚಿಗೆದ್ದು ಕೆಲಸವನ್ನ ಸ್ಥಗಿತ ಮಾಡಿ ಕಾರ್ಖಾನೆ ಒಳಗೆ ಪ್ರತಿಭಟನೆ ನಡೆಸಿದ್ರು.
Also Read:
E-Autos: ಇ-ಆಟೋ ಖರೀದಿಗೆ ಬೇಕಿದೆ ಮತ್ತಷ್ಟು ಉತ್ತೇಜನ, ಎಲೆಕ್ಟ್ರಿಕ್ ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳೇನು?
ಅಂದಹಾಗೆ ಕಾರ್ಖಾನೆಯ ಹೆಚ್ ಆರ್ ಆಗಿ ಮಮತಾ ಎಂಬಾಕೆ ಕಾರ್ಖಾನೆಯಲ್ಲಿ ದರ್ಪ ಮೆರೆಯುತ್ತಿದ್ದಾಳೆ. ನೌಕರರು ಏನಾದ್ರು ಪ್ರಶ್ನೆ ಮಾಡಿದ್ರೆ ನೌಕರರನ್ನ ಕೆಲಸದಿಂದ ತೆಗೆಯುವ ಕೆಲಸ ಮಾಡುತ್ತಾರೆ ಅಂತೆ. ಇನ್ನು ಕೆಲವಷ್ಟು ನೌಕರರಿಗೆ ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಹೀಗಾಗಿ ಮಮತಾ ವಿರುದ್ದ ಮಹಿಳೆಯರು ರೊಚ್ಚಿಗೆ ಎದ್ದಿದ್ದರು. ಇನ್ನ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಸಹಾ ಕಾರ್ಖಾನೆಗೆ ದೌಡಾಯಿಸಿ, ಮಹಿಳಾ ನೌಕರರಿಗೆ ಬೆಂಬಲ ಸೂಚಿಸಿದ್ರು. ಕಾರ್ಖಾನೆಯ ಹೆಚ್ ಆರ್ ಆಗಿರೋ ಮಮತಾಗೆ ತರಾಟೆ ಸಹಾ ತೆಗೆದುಕೊಂಡರು. ಸ್ಥಳಕ್ಕೆ ಲೇಬರ್ ಇಲಾಖೆ ಅಧಿಕಾರಿಗಳು, ಬಿಡದಿ ಠಾಣೆ ಪೊಲೀಸರು ಸಹಾ ಆಗಮಿಸಿ ಪರಿಶೀಲನೆ ನಡೆಸಿದ್ರು. ಇನ್ನು ಕೊಲೆ ಬೆದರಿಕೆ ಹಾಕಿರೋ ಹೆಚ್ ಆರ್ ಮಮತಾ ವಿರುದ್ದ ದೂರು ಸಹಾ ನೀಡಿದ್ದಾರೆ.
ಇನ್ನು ಈ ಬಗ್ಗೆ ಹೆಚ್ ಆರ್ ಮಮತಾ ರನ್ನ ಕೇಳಿದ್ರೆ ಹಾರಿಕೆ ಉತ್ತರ ನೀಡುತ್ತಿದ್ದು, 21ರ ಒಳಗೆ ಎಲ್ಲವನ್ನು ಕ್ಲಿಯರ್ ಮಾಡುತ್ತೇವೆ ಎನ್ನುತ್ತಿದ್ದಾರೆ. ಒಟ್ಟಾರೆ ಬರುವ ಕಡಿಮೆ ಸಂಬಳದಲ್ಲೇ ಸೇವಿಂಗ್ಸ್ ಅಂತಾ ಪಿಎಫ್ ಹಣವನ್ನ ಕಟ್ಟಿದ್ರೆ ಅದನ್ನೆ ಹೊಡೆಯುವ ಕೆಲಸಕ್ಕೆ ಹೆಚ್ ಆರ್ ಹಾಗೂ ಆಡಳಿತ ಮಂಡಳಿ ಮುಂದಾಗಿದ್ದಾರೆ. ನೌಕರರ ಭವಿಷ್ಯ, ಭವಿಷ್ಯ ನಿಧಿ ಎರಡಕ್ಕೂ ಸಂಚಕಾರ ಬಂದಿದೆ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9, ರಾಮನಗರ
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ