ಭಾರತದ ಒಲಿಂಪಿಕ್ಸ್ ಸಾಧನೆಯ ಜ್ವರದಲ್ಲಿ ರಾಮನಗರ ಜಿಲ್ಲೆಯಲ್ಲಿ ತಲೆ ಎತ್ತುತ್ತಿವೆ 118 ಸುಸಜ್ಜಿತ ಕ್ರೀಡಾಂಗಣ

ಟೋಕಿಯೋ ಒಲಿಂಪಿಕ್ಸ್​ನಲ್ಲಿನ ಭಾರತದ ಸಾಧನೆಯಿಂದ ಪ್ರೇರಣೆಗೊಂಡು ರಾಮನಗರದಾದ್ಯಂತ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತಿದೆ. ಆ ಬಗ್ಗೆ ವಿವರ ಇಲ್ಲಿದೆ.

ಭಾರತದ ಒಲಿಂಪಿಕ್ಸ್ ಸಾಧನೆಯ ಜ್ವರದಲ್ಲಿ ರಾಮನಗರ ಜಿಲ್ಲೆಯಲ್ಲಿ ತಲೆ ಎತ್ತುತ್ತಿವೆ 118 ಸುಸಜ್ಜಿತ ಕ್ರೀಡಾಂಗಣ
ರಾಮನಗರದ ಸರ್ಕಾರಿ ಶಾಲೆಯಲ್ಲಿ ಸಿದ್ಧಗೊಂಡಿರುವ ಅಂಕಣ
Follow us
| Updated By: Srinivas Mata

Updated on:Aug 12, 2021 | 6:43 PM

ರಾಮನಗರ: ಟೋಕಿಯೋ ಒಲಿಂಪಿಕ್ಸ್​ನಲ್ಲಿನ ಭಾರತದ ಸಾಧನೆ ಹೊಸ ಸಂಚಲನ ಸೃಷ್ಟಿಸಿದೆ. ಜತೆಗೆ ಭವಿಷ್ಯದ ತಲೆಮಾರಿಗೆ ಗುರಿಯೊಂದನ್ನು ನೀಡಿದಂತಾಗಿದೆ. ಒಲಿಂಪಿಕ್ಸ್​ನಂಥ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಬೇಕಾದ ಸಿದ್ಧತೆ, ಪರಿಶ್ರಮ ಇತ್ಯಾದಿಗಳು ಈಗ ಚರ್ಚೆಗೆ ಬಂದಿವೆ. ಇದು ಎಲ್ಲ ಕಡೆಗೆ ಕೇಳಿಬರುತ್ತಿರುವ ಸಂಗತಿಯಾದರೂ ರಾಮನಗರ ಜಿಲ್ಲಾ ಪಂಚಾಯಿತಿಯಿಂದ ಚರ್ಚೆಯಷ್ಟೇ ಅಲ್ಲದೆ ಆ ಸಿದ್ಧತೆಯ ಮುಂದಿನ ಹಂತದ ಪ್ರಯತ್ನ ಶುರುವಾಗಿದೆ. ಸರ್ಕಾರಿ ಶಾಲೆಗಲ್ಲಿ ಪೊಗದಸ್ತಾದ ಮೈದಾನಗಳನ್ನು ಸಿದ್ಧಪರಿಸಲಾಗುತ್ತಿದೆ. ಹೀಗೆ ರಾಮನಗರ ಜಿಲ್ಲೆಯಲ್ಲಿ ಒಟ್ಟು 118 ಮೈದಾನಗಳನ್ನು ಸಿದ್ಧಪಡಿಸುವ ಗುರಿ ಇರಿಸಿಕೊಂಡಿರುವ ಜಿಲ್ಲಾ ಪಂಚಾಯಿತಿಯಿಂದ 11ರ ಕಾಮಗಾರಿ ಪೂರ್ತಿ ಆಗಿದ್ದು, 83 ಮೈದಾನಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರಿ ಶಾಲೆಗಳಲ್ಲಿನ ಆಟದ ಮೈದಾನವನ್ನು ನೋಡಿದರೆ ಜಿಲ್ಲಾ ಕ್ರೀಡಾಂಗಣ ಕೂಡ ಮರೆತುಹೋಗುವಂತೆ ವಿದ್ಯಾರ್ಥಿಗಳಿಗೆ ಸಂಸಿದ್ಧಗೊಳಿಸಲಾಗಿದೆ.

ನರೇಗಾ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡು, ಗ್ರಾಮೀಣ ಭಾಗದಲ್ಲಿನ ಸರ್ಕಾರಿ ಶಾಲೆಗಳ ಆಟದ ಮೈದಾನಗಳಿಗೆ ಹೊಸ ರೂಪ ನೀಡುತ್ತಿದೆ. ಇನ್ನು ವಾಲಿಬಾಲ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಶಟಲ್, ಕಬಡ್ಡಿ, ಕೊಕ್ಕೊ ಮೊದಲಾದ ಆಟಗಳ ಅಂಕಣಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಇದಲ್ಲದೆ ಅಥ್ಲೆಟಿಕ್ಸ್‌ಗೆ ಬೇಕಾಗುವ ಓಟದ ಟ್ರ್ಯಾಕ್‌ಗಳು, ಹೈಜಂಪ್ ಮತ್ತು ಲಾಂಗ್ ಜಂಪ್ ಅಂಕಣ ಸಹ ಶಾಲೆಗಳ ಅಂಗಳದಲ್ಲಿ ನಿರ್ಮಾಣ ಆಗುತ್ತಿರುವುದು ವಿಶೇಷ.

ನರೇಗಾ ಯೋಜನೆ ಅಡಿ ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ ಒಂದು ಕ್ರೀಡಾಂಗಣ ನಿರ್ಮಾಣ ಮಾಡಲಾಗುತ್ತಿದೆ. ಜಾಗ ಲಭ್ಯವಿರುವ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಆಟದ ಮೈದಾನ ನಿರ್ಮಾಣ ಆಗಲಿದೆ. ಕ್ರೀಡಾಂಗಣ ಅಭಿವೃದ್ಧಿಗೆ ನರೇಗಾ ಯೋಜನೆಯು ವರದಾನವಾಗಿದ್ದು, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೆರವನ್ನೂ ಜಿಲ್ಲಾ ಪಂಚಾಯಿತಿಯು ಪಡೆಯುತ್ತಿದೆ. ಜಾಗದ ಕೊರತೆ ಇರುವ ಶಾಲೆಗಳಲ್ಲಿ ಊರಿಗೆ ಹೊಂದಿಕೊಂಡಂತೆ ಇರುವ ಗೋಮಾಳ, ಇಲ್ಲವೇ ಸರ್ಕಾರಿ ಜಮೀನು ಇದ್ದಲ್ಲಿ ಅದನ್ನು ಬಳಸಿಕೊಂಡು ಮುಂದಿನ ಹಂತದಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಲು ಜಿಲ್ಲಾ ಪಂಚಾಯಿತಿಯಿಂದ ಯೋಜನೆ ರೂಪಿಸಲಾಗಿದೆ.

ಎಲ್ಲೆಲ್ಲಿ, ಯಾವಾವ ಕ್ರೀಡಾಂಗಣ ನಿರ್ಮಾಣ? ರಾಮನಗರ ತಾಲೂಕಿನ ಕೂನಗಲ್ ಸರ್ಕಾರಿ ಪ್ರೌಢಶಾಲೆ ಮೈದಾನವನ್ನು ಮೊದಲಿಗೆ ನರೇಗಾ ಯೋಜನೆ ಅಡಿ ಮಾದರಿಯಾಗಿ ಅಭಿವೃದ್ಧಿ ಮಾಡಲಾಗಿತ್ತು. ಆಕರ್ಷಕ ಅಥ್ಲೆಟಿಕ್ ಅಂಕಣ ಎಲ್ಲರ ಮನ ಸೆಳೆದಿತ್ತು. ಅದರ ಬೆನ್ನಲ್ಲಿಯೇ ಇನ್ನೂ ಹತ್ತು ಹಲವು ಕಾಮಗಾರಿಗಳು ಶಾಲೆಗಳ ಮೈದಾನಗಳಲ್ಲಿ ನಡೆಯುತ್ತಿವೆ. ಶತಮಾನದಷ್ಟು ಹಳೆಯದಾದ ರಾಮನಗರ ತಾಲೂಕಿನ ಜಾಲಮಂಗಲ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸದ್ಯಕ್ಕೆ ಆಟದ ಮೈದಾನ ಅಂತಿಮ ಹಂತ ತಲುಪಿದೆ. 3 ಎಕರೆ 10 ಗುಂಟೆ ವಿಸ್ತೀರ್ಣದ ಮೈದಾನದಲ್ಲಿ 200 ಮೀಟರ್ ಉದ್ದದ 8 ಓಟದ ಲೇನ್‌ಗಳುಳ್ಳ ಟ್ರ್ಯಾಕ್, ಜತೆಗೆ ಲಾಂಗ್ ಜಂಪ್ ಪಿಟ್, ಕೊಕ್ಕೊ, ವಾಲಿಬಾಲ್, ಕಬಡ್ಡಿ ಮೊದಲಾದ ಅಂಕಣಗಳೂ ಸಿದ್ಧವಾಗಿವೆ. ಬಹುತೇಕ ಕಾಮಗಾರಿ ಮುಗಿದಿದ್ದು, ಬಣ್ಣದ ಸಿಂಗಾರ ಮಾತ್ರ ಬಾಕಿ ಇದೆ.

ಇದರ ಜತೆಗೆ ವಿದ್ಯಾರ್ಥಿಗಳ ಓಡಾಟಕ್ಕೆ ಅನುಕೂಲ ಆಗುವಂತೆ ನಡಿಗೆ ಪಥ ಸಹ ನಿರ್ಮಾಣ ಆಗುತ್ತಿದೆ. ಇದೆಲ್ಲಕ್ಕೂ ಸೇರಿ 10 ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ. ರಾಮನಗರ ತಾಲೂಕಿನ ಹುಲಿಕೆರೆ-ಗುನ್ನೂರು ಹಾಗೂ ಸುಗ್ಗನಹಳ್ಳಿ ಶಾಲೆಗಳಲ್ಲಿಯೂ ಇದೇ ಮಾದರಿಯಲ್ಲಿ ಆಟದ ಮೈದಾನಗಳ ಪುನರ್ ನಿರ್ಮಾಣ ಆಗುತ್ತಿದ್ದು, ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಸುಗ್ಗನಹಳ್ಳಿ ಮೈದಾನದಲ್ಲಿ 200 ಮೀಟರ್ ಉದ್ದದ 10 ಲೇನ್​ನ ಟ್ರ್ಯಾಕ್ ಜತೆಗೆ ಬ್ಯಾಸ್ಕೆಟ್​ಬಾಲ್, ಶಟಲ್ ಕೋರ್ಟ್, ಕೊಕ್ಕೊ, ಕಬಡ್ಡಿ ಅಂಕಣಗಳು ಸಹ ನಿರ್ಮಾಣ ಆಗುತ್ತಿವೆ. ಆಟದ ಮೈದಾನಗಳ ನಿರ್ಮಾಣದ ವಿಚಾರದಲ್ಲಿ ಜಿಲ್ಲಾ ಪಂಂಚಾಯಿತಿ ಸಿಇಒ ಇಕ್ರಂ ವಿಶೇಷ ಆಸಕ್ತಿ ವಹಿಸಿದ್ದಾರೆ.

ಜಿ.ಪಂ. ಸಿಇಒ ಏನಂತಾರೆ? ಇಕ್ರಂ ಮಾರ್ಗದರ್ಶನದಲ್ಲಿ ಜಿಲ್ಲೆಯ ಇತರ ತಾಲೂಕುಗಳಲ್ಲಿಯೂ ಈಗಾಗಲೇ ಹಲವು ಕಾಮಗಾರಿಗಳು ಮುಕ್ತಾಯ ಆಗಿವೆ. ಕನಕಪುರ ತಾಲೂಕಿನ ಕೋಡಿಹಳ್ಳಿಯಲ್ಲಿ ಆಕರ್ಷಕ ಅಂಕಣಗಳ ನಿರ್ಮಾಣವಾಗಿದೆ. ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ, ಮತ್ತಿಕೆರೆ-ಶೆಟ್ಟಿಹಳ್ಳಿ, ಮಾಗಡಿ ತಾಲೂಕಿನ ಕುದೂರು, ಶ್ರೀಗಿರಿಪುರ. ಹೀಗೆ ಸಾಕಷ್ಟು ಕಡೆಗಳಲ್ಲಿ ಕ್ರೀಡಾಂಗಣಗಳ ನಿರ್ಮಾಣ ಅಂತಿಮ ಹಂತ ತಲುಪಿರುವುದು ವಿಶೇಷ, ಇನ್ನು ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಟಿವಿ8 ಜತೆಗೆ ಮಾತನಾಡಿ, ರಾಮನಗರ ಜಿಲ್ಲೆಯ ಕ್ರೀಡಾಪಟುಗಳೂ ಮುಂದೆ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವಂತೆ ಆಗಬೇಕು. ಅದರ ಸಿದ್ಧತೆಗಾಗಿ ಶಾಲಾ ಹಂತದಲ್ಲೇ ಅವರಿಗೆ ತರಬೇತಿ ನೀಡಲೆಂದು ಈ ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: Tokyo Olympics 2020: ಒಲಿಂಪಿಕ್ಸ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಸಾಧನೆ ಮಾಡಿದ ಭಾರತ

ಇದನ್ನೂ ಓದಿ: ಶಾಲಾ ಕೊಠಡಿಯ ಮೇಲೆ ಮೂಡಿದ ರೈಲು ಬೋಗಿಯ ಚಿತ್ತಾರ; ಮಕ್ಕಳನ್ನು ತನ್ನತ್ತ ಸೆಳೆಯಲು ಸಿದ್ಧವಾಗಿದೆ ರಾಮನಗರದ ಸರ್ಕಾರಿ ಶಾಲೆ

(Various Sports Stadium Building In Ramanagar District With The Inspiration Of India Achievement In Tokyo Olympics)

Published On - 6:40 pm, Thu, 12 August 21