AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ ಕೊಠಡಿಯ ಮೇಲೆ ಮೂಡಿದ ರೈಲು ಬೋಗಿಯ ಚಿತ್ತಾರ; ಮಕ್ಕಳನ್ನು ತನ್ನತ್ತ ಸೆಳೆಯಲು ಸಿದ್ಧವಾಗಿದೆ ರಾಮನಗರದ ಸರ್ಕಾರಿ ಶಾಲೆ

ಶಾಲೆಯ ಒಂದು ಕೊಠಡಿ ಸದ್ಯಕ್ಕೆ ನಲಿಕಲಿ ಎಕ್ಸ್ ಪ್ರೆಸ್ ಆಗಿದ್ದು, ಹೊರಗಡೆ ರೈಲು ಬೋಗಿಯ ಚಿತ್ತಾರ, ಮನಸೆಳೆಯುವ ಪಕ್ಷಿ-ಪ್ರಾಣಿಗಳ ಚಿತ್ರಗಳು ಹಾಗೂ ಒಳಗಡೆ ಮಕ್ಕಳ ಕಲಿಕೆಗೆ ಅನುಕೂಲವಾಗುವ ಕಾಗುಣಿತ, ವರ್ಣಮಾಲೆ, ಅಂಕಿಸಂಖ್ಯೆಗಳು ಹೀಗೆ ಮಕ್ಕಳು ನಲಿಯುತ್ತ ಕಲಿಯುವ ವಾತಾವರಣವನ್ನು ನಿರ್ಮಿಸಲಾಗಿದೆ.

ಶಾಲಾ ಕೊಠಡಿಯ ಮೇಲೆ ಮೂಡಿದ ರೈಲು ಬೋಗಿಯ ಚಿತ್ತಾರ; ಮಕ್ಕಳನ್ನು ತನ್ನತ್ತ ಸೆಳೆಯಲು ಸಿದ್ಧವಾಗಿದೆ ರಾಮನಗರದ ಸರ್ಕಾರಿ ಶಾಲೆ
ಶಾಲಾ ಕೊಠಡಿಯ ಮೇಲೆ ಮೂಡಿದ ರೈಲು ಬೋಗಿಯ ಚಿತ್ತಾರ
TV9 Web
| Updated By: preethi shettigar|

Updated on: Jul 13, 2021 | 8:51 AM

Share

ರಾಮನಗರ: ರಾಜ್ಯದಲ್ಲಿ ಅದೆಷ್ಟೋ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೇ ಮುಚ್ಚಿಹೋಗಿವೆ. ಇನ್ನೂ ಕೆಲವು ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳತ್ತ( Government School) ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಶಿಕ್ಷಕರೊಬ್ಬರು ಹೊಸ ಯೋಜನೆಯೊಂದನ್ನು ಮಾಡಿದ್ದಾರೆ. ಶಾಲೆಯ ಗೋಡೆಗಳ ಮೇಲೆ ರೈಲು ಚಿತ್ರಗಳನ್ನು ಬಿಡಿಸುವುದರ ಮೂಲಕ ಮಕ್ಕಳನ್ನು ಶಾಲೆ ಕಡೆಗೆ ಬರುವಂತೆ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹನಿಯೂರು ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಶಾಲಾ ಕೊಠಡಿಯೊಂದಕ್ಕೆ ತಮ್ಮ ಸ್ವಂತ ಹಣದಿಂದ ರೈಲು ಬೋಗಿಯ ಚಿತ್ತಾರ ಮೂಡಿಸಿದ್ದಾರೆ.

ನಲಿ ಕಲಿ ಎಕ್ಸ್ ಪ್ರೆಸ್ ಹೆಸರಿನೊಂದಿಗೆ ಆರಂಭವಾದ ಈ ರೈಲು ಶಾಲೆ ಮಕ್ಕಳಿಗಾಗಿ ಕಾಯುತ್ತಿದೆ. ಹೊರಗಿನಿಂದ ನೋಡಿದರೆ ನಿಜವಾದ ರೈಲಿನಂತೆಯೇ ಕಾಣಿಸುತ್ತದೆ. ಅದಕ್ಕೆ ಕಿಟಕಿ ಬಾಗಿಲುಗಳೂ ಇವೆ. ಆದರೆ, ಹತ್ತಲು ಆಗಲ್ಲ, ಇಳಿಯಲೂ ಸಹ ಆಗುವುದಿಲ್ಲ. ಆದರೆ ಮಕ್ಕಳನ್ನು ತನ್ನತ್ತ ಸೆಳೆಯುವುದರಲ್ಲಿ ಮಾತ್ರ ಯಾವುದೇ ಮೋಸವಿಲ್ಲ. ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣೇಗೌಡ ಎಂಬುವವರು ಶಾಲೆಯ ಒಂದು ಕೊಠಡಿಯ ಮುಂಭಾಗಕ್ಕೆ ಈ ರೀತಿಯಾದ ಬಣ್ಣವನ್ನು ಬಳಿಸುವ ಮೂಲಕ ಜಿಲ್ಲೆಯಲ್ಲಿಯೇ ವಿಭಿನ್ನವಾಗಿ ಶೃಂಗಾರಗೊಂಡಿರುವ ಮೊದಲ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿದ್ದಾರೆ.

ಕೊರೊನಾ ಬಳಿಕ ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಕವಾದ ಬದಲಾವಣೆಯಾಗುತ್ತಿದೆ. ಖಾಸಗಿ ಶಾಲೆಗಳನ್ನು ಬಿಟ್ಟು ಹಲವು ಪಾಲಕರು ತಮ್ಮ ಮಕ್ಕಳ ದಾಖಲಾತಿಗಾಗಿ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಈ ರೀತಿಯಾಗಿ ಬರುತ್ತಿರುವವರ ಮನಸ್ಸಿಗೆ ಭರವಸೆ ಮೂಡಿಸಬೇಕು ಹಾಗೂ ಮಕ್ಕಳನ್ನು ನಮ್ಮ ಶಾಲೆಯತ್ತ ಸೆಳೆಯಬೇಕು ಎಂಬ ಉದ್ದೇಶದಿಂದ ಈ ರೀತಿಯಾದ ವಿಭಿನ್ನ ಚಿತ್ತಾರ ಮೂಡಿಸುವ ಕಾರ್ಯಕ್ಕೆ ಕೈ ಹಾಕಿದ್ದೇನೆ ಎಂದು ಮುಖ್ಯ ಶಿಕ್ಷಕ ರಾಮಕೃಷ್ಣೇಗೌಡ ತಿಳಿಸಿದ್ದಾರೆ.

ಈ ಸರ್ಕಾರಿ ಶಾಲೆ ಚನ್ನಪಟ್ಟಣ ಮತ್ತು ಸಾತನೂರು ಮುಖ್ಯ ರಸ್ತೆಯಲ್ಲಿದ್ದು, ಇಡೀ ಶಾಲೆಗೆ ವಿಭಿನ್ನವಾಗಿ ಬಣ್ಣ ಬಳಿಸುವ ಯೋಜನೆ ರೂಪಿಸಿದ್ದರು. ಈ ಸಂಬಂಧ ಗ್ರಾಮ ಪಂಚಾಯತಿ ಸೇರಿದಂತೆ ದಾನಿಗಳ ಸಹಕಾರ ಕೋರಿದ್ದರು. ಆದರೆ, ಎರಡು ಕಡೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಕ್ರಿಯೆ ಕಂಡು ಬರದ ಹಿನ್ನೆಲೆಯಲ್ಲಿ ತನ್ನ ಸ್ವಂತ ಹಣದಿಂದ ಒಂದು ಕೊಠಡಿಗೆ ಮಾತ್ರ ಬಣ್ಣದ ಚಿತ್ತಾರವನ್ನು ಮಾಡಿದ್ದಾರೆ.

ಶಾಲೆಯ ಒಂದು ಕೊಠಡಿ ಸದ್ಯಕ್ಕೆ ನಲಿಕಲಿ ಎಕ್ಸ್ ಪ್ರೆಸ್ ಆಗಿದ್ದು, ಹೊರಗಡೆ ರೈಲು ಬೋಗಿಯ ಚಿತ್ತಾರ, ಮನಸೆಳೆಯುವ ಪಕ್ಷಿ-ಪ್ರಾಣಿಗಳ ಚಿತ್ರಗಳು ಹಾಗೂ ಒಳಗಡೆ ಮಕ್ಕಳ ಕಲಿಕೆಗೆ ಅನುಕೂಲವಾಗುವ ಕಾಗುಣಿತ, ವರ್ಣಮಾಲೆ, ಅಂಕಿಸಂಖ್ಯೆಗಳು ಹೀಗೆ ಮಕ್ಕಳು ನಲಿಯುತ್ತ ಕಲಿಯುವ ವಾತಾವರಣವನ್ನು ನಿರ್ಮಿಸಲಾಗಿದೆ. ಮಂಡ್ಯ ಮೂಲದ ಕಲಾವಿದ ಯೋಗೇಶ್ ತನ್ನ ಕುಂಚದ ಮೂಲಕ ಮಕ್ಕಳನ್ನು ಸೆಳೆಯುವ ಚಿತ್ತಾರಗಳನ್ನು ಮೂಡಿಸಿದ್ದು, ಕಡಿಮೆ ಖರ್ಚಿನಲ್ಲಿ ಈ ಕೆಲಸ ಮಾಡಿಕೊಡುವ ಮೂಲಕ ತಮ್ಮ ಆಳಿಲು ಸೇವೆಯನ್ನು ಸಹ ಸಲ್ಲಿಸಿದ್ದಾರೆ.

ಕೊವಿಡ್ ಬಳಿಕ ಸರ್ಕಾರಿ ಶಾಲೆಗಳತ್ತ ಹೆಚ್ಚಿನ ಮಂದಿ ಮುಖ ಮಾಡಿದ್ದಾರೆ. ಶಾಲೆಗಳ ಆಕರ್ಷಣೆ ಮತ್ತು ಅಭಿವೃದ್ಧಿ ನಮ್ಮ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಪಂಗಳ ಸಹಯೋಗದೊಂದಿಗೆ ಹಲವು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಹನಿಯೂರು ಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣೇಗೌಡ ತಮ್ಮ ಪರಿಶ್ರಮದ ಮೂಲಕ ಶಾಲೆಯ ಅಂದ ಹೆಚ್ಚಿಸಿರುವುದು ಶ್ಲಾಘನೀಯ. ಸಮುದಾಯದ ಸಹಕಾರವಿದ್ದರೆ ತಾಲೂಕಿನ ಪ್ರತಿ ಶಾಲೆಗಳು ಸಹ ಕಂಗೊಳಿಸಲಿವೆ ಎಂದು ಚನ್ನಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು ತಿಳಿಸಿದ್ದಾರೆ.

ನಮ್ಮ ಶಾಲೆ ಮುಖ್ಯ ರಸ್ತೆಯಲ್ಲಿದ್ದು, ಶಾಲೆಯನ್ನು ಖಾಸಗಿ ಶಾಲೆಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಮೊದಲ ಹೆಜ್ಜೆಯಾಗಿ ಶಾಲೆಗೆ ವಿಭಿನ್ನವಾದ ಬಣ್ಣ ಬಳಿಸುವ ಕಾರ್ಯಕ್ಕೆ ಕೈ ಹಾಕಲಾಗಿತ್ತು. ದಾನಿಗಳು ಕೊಟ್ಟ ಮೂರು ಸಾವಿರ ಹಣ ಹಾಗೂ ನನ್ನ ಸಂಬಳದ ಹಣ ಬಳಸಿಕೊಂಡು ಒಂದು ಕೊಠಡಿಗೆ ಈ ರೀತಿಯಾದ ಆಕರ್ಷಕ ಬಣ್ಣ ಬಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇಡೀ ಶಾಲೆಗೆ ಈ ಚಿತ್ತಾರ ಮೂಡಿಸುವ ಕಾರ್ಯ ನಡೆಸಲಾಗುವುದು ಎಂದು ಹನಿಯೂರು ಶಾಲೆಯ ಮುಖ್ಯಶಿಕ್ಷಕ ರಾಮಕೃಷ್ಣೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯಲು ಪ್ರಮುಖ ಕಾರಣ ಶಾಲೆಗಳ ಅವ್ಯವಸ್ಥೆ. ಮಾಸಲು ಬಣ್ಣ, ಸೋರುವ ಛಾವಣಿ ಹೀಗೆ ಸಾಲು ಸಾಲು ಕಾರಣಗಳಿವೆ. ಈ ಹಿನ್ನೆಲೆಯನ್ನು ಅರಿತಿರುವ ಜಿಲ್ಲಾ ಪಂಚಾಯತಿ ಸಿಇಒ ಇಕ್ರಂ ಮೊದಲು ಸರ್ಕಾರಿ ಶಾಲೆಗಳು ಆರ್ಕಷಣೀಯವಾಗಿರಬೇಕು ಎಂಬ ಆಶಯವನ್ನು ಹೊಂದಿದ್ದಾರೆ. ಅದರಂತೆ ಗ್ರಾಮ ಪಂಚಾಯತಿಗಳ ಅನುದಾನದಲ್ಲಿ ಶಾಲೆಗಳಲ್ಲಿನ ಮೂಲಭೂತ ಸವಲತ್ತುಗಳನ್ನು ಒದಗಿಸಲು ಕಾರ್ಯಕ್ರಮ ರೂಪಿಸಿದ್ದಾರೆ. ಹನಿಯೂರು ಗ್ರಾಮದ ಶಾಲೆಯ ಮಾದರಿಯಲ್ಲಿ ಜಿಲ್ಲೆಯ ಇತರೆ ಶಾಲೆಗಳು ಸಹ ರೂಪುಗೊಂಡರೆ, ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಬಹುದಾಗಿದೆ. ಈ ಕಾರ್ಯಕ್ಕೆ ಸದ್ಯ ಶಿಕ್ಷಕರು ಮತ್ತು ಆಯಾ ಗ್ರಾಮದ ಸ್ಥಿತಿವಂತರು ಹಾಗೂ ಜನಪ್ರತಿನಿಧಿಗಳು ಚಿಂತಿಸಬೇಕಾಗಿದೆ.

ಇದನ್ನೂ ಓದಿ: ಹೊಸದಾಗಿ 1 ಸಾವಿರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ಯೋಜನೆ; ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಲು ನಿರ್ಧಾರ

ಹಿರೇಬೆಣಕಲ್ ಮೋರೇರ್ ತಟ್ಟಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ: ಶಿಲಾಯುಗ ಕಾಲದ ಪ್ರಯೋಗ ಶಾಲೆ ಎಂದೇ ಇದು ಪ್ರಸಿದ್ಧ