ಮದ್ಯದ ನಶೆಯಲ್ಲಿ ಅಪ್ರಾಪ್ತೆ ಅಪಹರಣಕ್ಕೆ ಯತ್ನ: ಯೂಟ್ಯೂಬರ್ ಸೇರಿ ಇಬ್ಬರು ಅರೆಸ್ಟ್, ಮತ್ತಿಬ್ಬರಿಗೆ ಧರ್ಮದೇಟು
ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ಅಪ್ರಾಪ್ತೆಯ ಜೊತೆ ಅನುಚಿತ ವರ್ತನೆ ತೋರಿದ್ದಲ್ಲದೆ, ಅಪಹರಣ ಯತ್ನ ನಡೆಸಿರುವ ಆರೋಪ ಸಂಬಂಧ ಯೂಟ್ಯೂಬರ್ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬಳಿಕ ಎಸ್ಕೇಪ್ ಆಗಿ ಠಾಣೆಗೆ ಬಂದಿದ್ದ ಮತ್ತಿಬ್ಬರಿಗೆ ಸ್ಥಳೀಯರು ಧರ್ಮದೇಟು ನೀಡಿದ್ದು, ಕೇಸ್ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಮನಗರ, ಜನವರಿ 02: ಕುಡಿದ ಮತ್ತಿನಲ್ಲಿ ಅಪ್ರಾಪ್ತೆಯ ಕಿಡ್ಯಾಪ್ಗೆ ಯತ್ನಿಸಿದ್ದಲ್ಲದೆ ಆಕೆಯ ಜೊತೆ ಅನುಚಿತ ವರ್ತನೆ ತೋರಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಮಾಗಡಿ ಪೊಲೀಸರು ಯೂಟ್ಯೂಬರ್ ಸೇರಿ ಇಬ್ಬರನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಪೋಕ್ಸೋ ಕೇಸ್ ದಾಖಳಿಸಿದ್ದಾರೆ. ಸಂಬಂಧಿಕರ ಮನೆಯಲ್ಲಿ ಹೊಸ ವರ್ಷ ಆಚರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ಅಪ್ರಾಪ್ತೆಯ ಅಪಹರಣಕ್ಕೆ ಆರೋಪಿಗಳು ಯತ್ನಿಸಿದ್ದು, ಈ ವೇಳೆ ಕುಟುಂಬಸ್ಥರೇ ಆಕೆಯ ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ಏನು?
ಹೊಸ ವರ್ಷಾಚರಣೆ ಹಿನ್ನೆಲೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ಪಟ್ಟಣದ ವೆಂಕಟೇಶ್ ಎಂಬಾತ ಫಾರ್ಮ್ ಹೌಸ್ನಲ್ಲಿ ನ್ಯೂಇಯರ್ ಪಾರ್ಟಿ ಆಯೋಜನೆ ಮಾಡಿದ್ದ. ಅನುಮತಿ ಇಲ್ಲದೆ ನಡೆದಿದ್ದ ಈ ಪಾರ್ಟಿಯಲ್ಲಿ ಪ್ರಖ್ಯಾತ ಯೂಟ್ಯೂಬರ್ಸ್ ಸೇರಿ ಹಲವರು ಭಾಗಿಯಾಗಿದ್ದರು. ಆ ಪೈಕಿ ತುಮಕೂರು ಜಿಲ್ಲೆ ಶಿರಾ ಮೂಲದ ರವಿಚಂದ್ರ ಎಂಬ ಯೂಟ್ಯೂಬರ್, ಸಂಬಂಧಿಕರ ಮನೆಯಲ್ಲಿ ಹೊಸ ವರ್ಷಾಚರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ಅಪ್ರಾಪ್ತೆಯನ್ನ ತಡೆದಿದ್ದಾನೆ. ಆಕೆಯನ್ನು ಕಾರಿಗೆ ಎಳೆದುಕೊಂಡು ಹೊರಟಿದ್ದಾನೆ. ಮಗಳು ಮನೆಗೆ ಬಾರದ ಹಿನ್ನೆಲೆ ಕಂಗಾಲಾದ ಪೋಷಕರು ಹುಡುಕಾಟ ನಡೆಸಿದ್ದು, ಈ ವೇಳೆ ಸಂತ್ರಸ್ತೆ ಸಹೋದರನಿಗೊಂದು ಕರೆ ಬಂದಿದೆ. ಅದನ್ನು ಆತ ಸ್ವೀಕರಿಸಿದಾಗ ವಿಷಯ ಬೆಳಕಿಗೆ ಬಂದಿದ್ದು, ರವಿಚಂದ್ರನ ಮೊಬೈಲ್ನಿಂದಲೇ ಕುಟುಂಬಸ್ಥರಿಗೆ ಅಪ್ರಾಪ್ತೆ ಕರೆ ಮಾಡಿದ್ದಳು ಎನ್ನಲಾಗಿದೆ. ಕೂಡಲೇ ಅಲರ್ಟ್ ಆದ ಕುಟುಂಬಸ್ಥರು ಮತ್ತು ಊರವರು ಕಾರನ್ನು ಪತ್ತೆ ಮಾಡಿ ಅಡ್ಡಹಾಕಿದ್ದಾರೆ. ಬಾಲಕಿಯ ರಕ್ಷಣೆ ಮಾಡಿದ್ದಲ್ಲದೆ, ಕಾರನ್ನು ಜಖಂಗೊಳಿಸಿದ್ದಾರೆ.
ಇದನ್ನೂ ಓದಿ: ಮೂರು ಮಕ್ಕಳ ತಾಯಿ ಜತೆ ಲವ್ವಿಡವ್ವಿ; ರಾತ್ರಿ ಭೇಟಿಗೆ ಹೋಗಿದ್ದಾಗ ನಡೀತು ಮಾರಣಾಂತಿಕ ಹಲ್ಲೆ
ಪ್ರಕರಣ ಸಂಬಂಧ ಫಾರ್ಮ್ ಹೌಸ್ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದ ವೆಂಕಟೇಶ್ ಹಾಗೂ ಯೂಟ್ಯೂಬರ್ ರವಿಚಂದ್ರನನ್ನ ಪೊಲೀಸರು ಬಂಧಿಸಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿ ಬಳಿಕ ನಾಪತ್ತೆಯಾಗಿದ್ದ ಮಂಡ್ಯ ಮೂಲದ ಯೂಟ್ಯೂಬರ್ಸ್ ಕೆಂಪ ಹಾಗೂ ಕಬ್ಜ ಶರಣ ಕೂಡ ಬಳಿಕ ಪೊಲೀಸ್ ಠಾಣೆ ಬಳಿ ಬಂದಿದ್ದು, ಮೊದಲೇ ಆಕ್ರೋಶಗೊಂಡಿದ್ದ ಸ್ಥಳೀಯರು ಇಬ್ಬರಿಗೂ ಧರ್ಮದೇಟು ನೀಡಿದ್ದಾರೆ. ಈ ಸಂಬಂಧ ಶಾಸಕ ಹೆಚ್.ಸಿ. ಬಾಲಕೃಷ್ಣ ಕೂಡ ಪೊಲೀಸ್ ಠಾಣೆಗೆ ಭೇಟಿ ನೀಡಿ, ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



