ಬೆಂಗಳೂರು: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತರಿಗೆ ಸಂತ್ರಸ್ತೆ ದೂರು ನೀಡುತ್ತಿದ್ದಾರೆ ಎಂದು ಟಿವಿ9ಗೆ ವಕೀಲ ಸೂರ್ಯ ಮುಕುಂದರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಸಂತ್ರಸ್ತೆ ಎಸ್ಐಟಿ ತನಿಖೆಯನ್ನು ವಿರೋಧ ಮಾಡುತ್ತಿಲ್ಲ. ಎಸ್ಐಟಿ ಮೇಲೆ ಒತ್ತಡವಿದೆ ಎಂದು ಉಲ್ಲೇಖಿಸಿರುತ್ತಾರೆ ಅಷ್ಟೆ. ತನ್ನ ಗಮನಕ್ಕೆ ತರದೆ ಎಸ್ಪಿಪಿ ನೇಮಕ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಎಸ್ಐಟಿ ತನಿಖೆಯ ಎಲ್ಲಾ ಮಾಹಿತಿ ಸೋರಿಕೆ ಆಗುತ್ತಿದೆ. ಆರೋಪಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಕರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಹೇಳಿದ್ದಾರೆ.
ಎಲ್ಲಕ್ಕಿಂತ ಮಿಗಿಲಾಗಿ ಆರೋಪಿಯ ದೂರಿನಲ್ಲಿ ಸಂತ್ರಸ್ತೆ ಹೆಸರಿಲ್ಲ. ರಮೇಶ್ ಜಾರಕಿಹೊಳಿ ದೂರಿನಲ್ಲಿ ಸಂತ್ರಸ್ತೆ ಬಗ್ಗೆ ಉಲ್ಲೇಖಿಸಿಲ್ಲ. ಆದರೂ ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆ ಪಿಜಿ ಮೇಲೆ ದಾಳಿ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಪಿಜಿಯಲ್ಲಿ 9 ಲಕ್ಷ ಹಣ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ. ಪಿಜಿಯಲ್ಲಿ ಯುವತಿಯ ಕೊಠಡಿಯಲ್ಲಿ ಹಣ ಸಿಕ್ಕಿದೆ ಅನ್ನುತ್ತಾರೆ. ಯಾವುದೇ ಆಧಾರವಿಲ್ಲದಿದ್ರೂ ಪಿಜಿ ಮೇಲೆ ದಾಳಿ ಮಾಡಿದ್ದೇಕೆ. ಎಸ್ಐಟಿ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮತ್ತೊಂದೆಡೆ ಮುಖ್ಯಮಂತ್ರಿ ಯಡಿಯೂರಪ್ಪ ರಮೇಶ್ ಆರೋಪ ಮುಕ್ತರಾಗಿ ಹೊರಬರುತ್ತಾರೆಂದು ಹೇಳಿಕೆ ನೀಡುತ್ತಾರೆ. ಸರ್ಕಾರದ ಮುಖ್ಯಸ್ಥರೇ ಹೀಗೆ ಹೇಳಿದ ಮೇಲೆ ಎಲ್ಲವೂ ಸ್ಪಷ್ಟ. ಎಸ್ಐಟಿ ಮೇಲೆ ಸರ್ಕಾರದ ಒತ್ತಡವಿದೆ ಎಂಬುದು ಸ್ಪಷ್ಟ ಎಂದು ಸೂರ್ಯ ಮುಕುಂದರಾಜ್ ತಿಳಿಸಿದ್ದಾರೆ.
ಸಂತ್ರಸ್ತೆ ದೂರು ನೀಡಿರುವುದು ಎಂಬುದನ್ನು ಮರೆಮಾಚಿ, ಆಕೆಯೇ ಆರೋಪಿ ಎಂಬಂತೆ ಬಿಂಬಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ ಪೊಲೀಸ್ ಆಯುಕ್ತರಿಗೆ ಸಂತ್ರಸ್ತೆ ದೂರು ನೀಡ್ತಿದ್ದಾರೆ. ಯಾವುದೇ ಒತ್ತಡಕ್ಕೆ ಮಣಿಯದೆ ತಾವು ತನಿಖೆ ನಡೆಸಬೇಕು. ನ್ಯಾಯ ಕೊಡಿಸಬೇಕು ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿ ವಕೀಲ ಸೂರ್ಯ ಮುಕುಂದರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿ ಸಂತ್ರಸ್ತ ಯುವತಿ ಪರ ವಕೀಲ ಕೆ.ಎನ್. ಜಗದೀಶ್ ಮಾತನಾಡಿದ್ದಾರೆ. ಎಸ್ಐಟಿ ತನಿಖೆ ಹಾದಿ ಸರಿ ಇಲ್ಲ, ಹಾದಿ ತಪ್ಪಿಸಲಾಗುತ್ತಿದೆ. ನನಗೆ ಎಸ್ಐಟಿ ತನಿಖೆ ಮೇಲೆ ನಂಬಿಕೆ ಕಾಣಿಸುತ್ತಿಲ್ಲ ಎಂದಿದ್ದಾರೆ. ಸಿಡಿ ಪ್ರಕರಣದ ಸಂತ್ರಸ್ತ ಯುವತಿ ನಂಬಿಕೆ ಇಲ್ಲವೆಂದಿದ್ದಾಳೆ. ಸಂತ್ರಸ್ತೆಯನ್ನೇ ಆರೋಪಿ ಎಂಬಂತೆ ಬಿಂಬಿಸಲಾಗುತ್ತಿದೆ. ಆರೋಪಿ ರಮೇಶ್ರನ್ನ ಹೊರಗೆ ಓಡಾಡಲು ಬಿಟ್ಟಿದ್ದಾರೆ. ಸ್ವತಃ ಸಿಎಂ ಅವರೇ ಆರೋಪಿಯ ಪರವಾಗಿ ನಿಂತಂತಿದೆ. ರಮೇಶ್ ಕುರಿತು ಸಿಎಂ ಬಿಎಸ್ವೈ ಹೇಳಿಕೆ ಕೊಡುತ್ತಾರೆ. ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಹೊರಬರ್ತಾರೆ ಎನ್ನುತ್ತಾರೆ. ಸಿಎಂ ಯಡಿಯೂರಪ್ಪ ಹೇಳಿಕೆಯಿಂದಲೇ ಎಸ್ಐಟಿ ಮೇಲೆ ಸರ್ಕಾರದ ಒತ್ತಡವಿರುವುದು ಗೊತ್ತಾಗುತ್ತದೆ. ತನಿಖೆ ಸ್ವತಂತ್ರವಾಗಿ ನಡೆಯುತ್ತಿಲ್ಲ, ಅತಂತ್ರವಾಗಿ ನಡೀತಿದೆ ಎಂದು ಜಗದೀಶ್ ಹೇಳಿದ್ದಾರೆ.
ಎಸ್ಐಟಿಯನ್ನ ಮುಚ್ಚಿಬಿಡಿ, ಎಸ್ಐಟಿ ಜನರನ್ನು ಫೂಲ್ ಮಾಡುತ್ತಿದೆ. ಎಸ್ಐಟಿ ನ್ಯಾಯ ಕೊಡಿಸುವಂತಹ ಕೆಲಸವನ್ನ ಮಾಡುತ್ತಿಲ್ಲ. ಆರೋಪಿ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕು. ರಮೇಶ್ ಜಾರಕಿಹೊಳಿ ಮೊಬೈಲ್ ವಶಕ್ಕೆ ಪಡೆಯಬೇಕು. ಆರೋಪಿ ರಮೇಶ್ರನ್ನ ಮೆಡಿಕಲ್ ಟೆಸ್ಟ್ಗೆ ಒಳಪಡಿಸಬೇಕು ಎಂದು ಪೊಲೀಸ್ ಕಮಿಷನರ್ ಕಚೇರಿ ಬಳಿ ಜಗದೀಶ್ ಆಗ್ರಹಿಸಿದ್ದಾರೆ.
ಬೆಂಗಳೂರಿನ ಕಮಿಷನರ್ ಕಚೇರಿಗೆ ಸಿಡಿ ಪ್ರಕರಣದ ಯುವತಿಯ ಪರ ವಕೀಲ ಜಗದೀಶ್ ಆಗಮಿಸಿದ್ದಾರೆ. ಜಗದೀಶ್ ಜೊತೆ ಸೂರ್ಯ ಮುಕುಂದ್ರಾಜ್ ಕೂಡ ಬಂದಿದ್ದಾರೆ.
ಆದರೆ, ಈ ವೇಳೆ ಕಚೇರಿಯಲ್ಲಿ ಕಮಿಷನರ್ ಇರಲಿಲ್ಲ. ಈ ಹಿನ್ನೆಲೆ ಜಗದೀಶ್ ಕಮಿಷನರ್ ಮನೆಗೆ ಹೋಗಿ ದೂರು ನೀಡ್ತೇವೆ ಎಂದಿದ್ದಾರೆ. ಕಮಿಷನರ್ ಕಚೇರಿಯ ಸಿಬ್ಬಂದಿ ಅದಕ್ಕೆ ಅವಕಾಶ ನೀಡಿಲ್ಲ. ನಾಳೆ ಬರುವಂತೆ ಜಗದೀಶ್ಗೆ ಕಚೇರಿ ಸಿಬ್ಬಂದಿ ಸೂಚಿಸಿದ್ದಾರೆ. ಕಮಿಷನರ್ ಇ-ಮೇಲ್ ಐಡಿ ಪಡೆದು ಜಗದೀಶ್ ವಾಪಸಾಗಿದ್ದಾರೆ.
ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಸಿಡಿ ಕೇಸ್, ಕಾಂಗ್ರೆಸ್ ಶಾಸಕರನ್ನು ವಿಚಲಿತಗೊಳಿಸಿದ ಡಿ.ಕೆ. ಶಿವಕುಮಾರ್
ಇದನ್ನೂ ಓದಿ: ವಿಶ್ಲೇಷಣೆ: ಹನಿ ಟ್ರ್ಯಾಪ್ ಎಂಬ ನವಯುಗದ ದರೋಡೆ
Published On - 5:50 pm, Sun, 4 April 21