ಸುದ್ದಿ ವಿಶ್ಲೇಷಣೆ | ರಮೇಶ್​ ಜಾರಕಿಹೊಳಿ ಸಿಡಿ ಕೇಸ್​, ಕಾಂಗ್ರೆಸ್​ ಶಾಸಕರನ್ನು ವಿಚಲಿತಗೊಳಿಸಿದ ಡಿ.ಕೆ. ಶಿವಕುಮಾರ್​

ರಮೇಶ್​ ಜಾರಕಿಹೊಳಿ ಸಿಡಿ ಕೇಸಿನಲ್ಲಿ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆ ಪರವಾಗಿಲ್ಲ ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರ ನಿಲುವು ಪಕ್ಷಕ್ಕೆ ಕಂಟಕ ತರಬಹುದು ಎಂಬುದು ಹಲವಾರು ಶಾಸಕರ ಅಭಿಪ್ರಾಯವಾಗಿದೆ.

ಸುದ್ದಿ ವಿಶ್ಲೇಷಣೆ | ರಮೇಶ್​ ಜಾರಕಿಹೊಳಿ ಸಿಡಿ ಕೇಸ್​, ಕಾಂಗ್ರೆಸ್​ ಶಾಸಕರನ್ನು ವಿಚಲಿತಗೊಳಿಸಿದ ಡಿ.ಕೆ. ಶಿವಕುಮಾರ್​
ಡಿ.ಕೆ. ಶಿವಕುಮಾರ್
Follow us
ಡಾ. ಭಾಸ್ಕರ ಹೆಗಡೆ
| Updated By: ganapathi bhat

Updated on: Apr 03, 2021 | 8:21 PM

ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಗುದ್ದಾಟದಲ್ಲಿ ಸಿಡಿಗಿಂತಲೂ ರೋಚಕ ಸಂಗತಿಗಳು ನಿಧಾನಕ್ಕೆ ಬಯಲಾಗುತ್ತಿವೆ. ವಿಧಾನಸಭಾ ಅಧಿವೇಶನದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಭಾರೀ ಸದ್ದು ಮಾಡಿತ್ತು. ವಿಪಕ್ಷ ಕಾಂಗ್ರೆಸ್ ಮುಂಚೂಣಿಯಲ್ಲಿ ನಿಂತು, ರಮೇಶ್ ಜಾರಕಿಹೊಳಿ ಹಾಗೂ ಸರ್ಕಾರದ ಮೇಲೆ ಹರಿಹಾಯ್ದು, ಮಾನಗೇಡಿ ಕೃತ್ಯ ಎಂದು ತರಾಟೆಗೆ ತೆಗೆದುಕೊಂಡಿತ್ತು. ಆದರೆ ವಿಧಾನಸಭೆಯ ಮೊಗಸಾಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಾದ ಚರ್ಚೆ ಬೇರೆಯದ್ದೇ ಆಗಿತ್ತು. ಇಷ್ಟಕ್ಕೂ ಸಿಡಿ ಪ್ರಕರಣದಿಂದ ಕಾಂಗ್ರೆಸ್ ಗಳಿಸಿದ್ದೇನು ಅನ್ನೋದೇ ಬಹುತೇಕ ಮುಖಂಡರ ಚರ್ಚೆಯಾಗಿತ್ತು. ರಾಸಲೀಲೆ ಪ್ರಕರಣ ಮುಂದಿಟ್ಟು ಬಿಜೆಪಿಯನ್ನು ಕುಗ್ಗಿಸುವ ವಿಚಾರದ ಬಗ್ಗೆ ಬಿಸಿ ಬಿಸಿ ಮಾತು ಸಾಗಿತ್ತು. ಕೈ ಪಾಳಯದ ಹಿರಿಯ ನಾಯಕರು, ಶಾಸಕರು ಜತೆ ಸೇರಿ ಮಾತಾಡುತ್ತಿದ್ದಾಗಲೇ ಪಕ್ಷದ ಹಿರಿಯ ನಾಯಕ ಆಡಿದ ಮಾತು ಇತರರು ಮುಖ ಮುಖ ನೋಡಿಕೊಳ್ಳುವಂತೆ ಮಾಡಿತ್ತು. ಸದನದೊಳಗೆ ಹಾಗೂ ಮಾಧ್ಯಮದಲ್ಲಿ ಇದೇ ನಾಯಕ ಕಡ್ಡಿ ಮುರಿದಂತೆ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಹಾಗಿದ್ದರೂ ಆಂತರಿಕವಾಗಿ ಮಾತ್ರ ಅವರ ಮನಸ್ಸಿನಲ್ಲಿದ್ದದ್ದು ಬೇರೆಯೇ ವಿಚಾರ ಇತ್ತು ಎನ್ನುವುದು ಕೈ ನಾಯಕರ ಮೊಗಸಾಲೆಯ ಮಾತುಕತೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು.

ಅಧಿಕೃತವಾಗಿ ಈ ಕುರಿತು ಏನನ್ನೂ ಮಾತನಾಡದೇ ಸುಮ್ಮನಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಇತ್ತು ಎನ್ನುವುದನ್ನು ಪಕ್ಷದ ಮೂಲಗಳು ಹೇಳುತ್ತಿವೆ: ಯಾವುದೇ ಕಾರಣಕ್ಕೂ ಸಿಡಿ ವಿಚಾರವನ್ನು ಅವರು ಕೈ ಬಿಡುವ ಹಾಗಿಲ್ಲ. ಅದನ್ನು ಎತ್ತಿಕೊಂಡು ಆಡಳಿತ ಪಕ್ಷಕ್ಕೆ ಮುಜುಗರ ತರಲೇಬೇಕು ಎಂಬುದು ಪಕ್ಷದ ಕೇಂದ್ರ ನಾಯಕರ ಒತ್ತಡವಾಗಿತ್ತು. ಸಿದ್ದರಾಮಯ್ಯ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರು. ಹಾಗೇ ನೋಡಿದರೆ ಪಕ್ಷದ ಶಾಸಕರಿಗೆ ಸಿದ್ದರಾಮಯ್ಯನವರ ವರಸೆಯಿಂದ ತೊಂದರೆ ಆಗಲಿಲ್ಲ. ಇದೇ ಹೊತ್ತಿನಲ್ಲಿ ಸರಿಯಾಗಿ ಶಿವಕುಮಾರ್ ಹೆಸರನ್ನು ಈ ಈ ಸಿಡಿ ಪ್ರಕರಣಕ್ಕೆ ತಳಕು ಹಾಕುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಸರಿಯಾಗಿ ಅವರೂ ಸಹ ಸದನದ ಒಳಗೂ ಮತ್ತೂ ಸದನದ ಹೊರಗೂ ಸ್ವಲ್ಪ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿರುವ ರೀತಿ ನೋಡಿ ಪಕ್ಷದ ಶಾಸಕರು ಗಾಬರಿಯಾಗಿರುವುದು ನಿಜ. ಪಕ್ಷದ ಒಬ್ಬ ಶಾಸಕನ ಹೆಸರು ಈ ಕೇಸಿನಲ್ಲಿ ತಳಕು ಹಾಕಿಕೊಂಡಿದ್ದರೆ ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ ಶಿವಕುಮಾರ್ ಹೆಸರು ಸಿಡಿ ಪ್ರಕರಣಕ್ಕೆ ತಳಕು ಹಾಕಿರುವುದು ಮತ್ತು ಅದೇ ರೀತಿ ಅವರು ಪ್ರತಿಕ್ರಿಯಿಸುತ್ತಿರುವ ರೀತಿ ನೋಡಿ ಶಾಸಕರು ಸ್ವಲ್ಪ ವಿಚಲಿತರಾಗಿರೋದು ನಿಜ ಎಂದು ಹೆಸರು ಹೇಳಲಿಚ್ಚಿಸದ ಕಾಂಗ್ರೆಸ್ ಶಾಸಕರು ಟಿವಿ9 ಗೆ ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ಬಟ್ಟೆ ಬಿಚ್ಚಿದ್ದು ಕಾಂಗ್ರೆಸ್ಸಿಗರಾ? ರಾಜಕೀಯ ಪಕ್ಷವಾಗಿ ಇಂತಹ ಕೃತ್ಯಗಳನ್ನ ಬಹಿರಂಗ ಪಡಿಸಿದ್ದು ತಪ್ಪೇ ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಪಕ್ಷದ ನಾಯಕರು ಅದರಲ್ಲೂ ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ಕೇಳುತ್ತಿದ್ದಾರೆ. ರಾಜಕೀಯವಾಗಿ ಪರಿಸ್ಥಿತಿಯನ್ನ ಬಳಿಸಿಕೊಳ್ಳುವುದರಲ್ಲಿ ತಪ್ಪಿಲ್ಲ. ರಾಸಲೀಲೆ ಪ್ರಕರಣ ಬಯಲಾದಾಗ ರಾಜೀನಾಮೆಗೆ ಪಟ್ಟು ಹಿಡಿಯುವುದು ರಾಜಕೀಯ ಧರ್ಮ. ಆದರೆ ಘಟನೆ ಸಂಬಂಧಿಸಿದ ಮಹಿಳೆಯನ್ನೇ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಅನುಮಾನ ಜನರಿಗೆ ಬರುವುದು ಒಂದು ಪಕ್ಷಕ್ಕೆ ಶೋಭೆ ತರುವಂಥದಲ್ಲ ಎಂದು ಕೆಲವು ಶಾಸಕರು ಹೇಳಿದ್ದಾರೆ. ಕಾನೂನಾತ್ಮಕವಾಗಿ ಎಷ್ಟೇ ಸಮರ್ಥನೆ ನೀಡಿದರೂ ಜನಮಾನಸದಲ್ಲಿ ಮೂಡುವ ಪ್ರಶ್ನೆಗೆ ಕಾಂಗ್ರೆಸ್ ಉತ್ತರಿಸಬೇಕಿದೆ. ಇದಕ್ಕೆಲ್ಲಾ ಮಿಗಿಲಾಗಿ, ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರು ಯಾರಿಗೆ ಬೆಂಬಲ ನೀಡುತ್ತಿದ್ದಾರೆ? ಈ ಪ್ರಶ್ನೆಗೆ ಉತ್ತರ ಕೊಡುವುದು ಸುಲಭವಲ್ಲ. ರಾಸಲೀಲೆ ವಿಡಿಯೋ ನೋಡಿದವರಿಗೆ ಮೇಲ್ನೋಟಕ್ಕೆ ಇಲ್ಲಿ ಯುವತಿ ಮತ್ತು ರಮೇಶ್‌ ಜಾರಕಿಹೊಳಿ ನಡುವೆ ಪರಿಚಯ ಮತ್ತು ಆಪ್ತತೆ ಇತ್ತು ಎಂದು ಹೇಳಲಾಗುತ್ತಿದೆ. ಸಿಡಿಯ ಅಸಲಿಯೋ ಅಥವಾ ನಕಲಿಯೋ ಎನ್ನುವುದು ತನಿಖೆಯಿಂದ ಸಾಬೀತಾಗಬೇಕಿದೆ ನಿಜ. ನಕಲಿ ಎಂದು ರಮೇಶ್‌ ಜಾರಕಿಹೊಳಿ ಹೇಳುತ್ತಿರುವುದು ತನಿಖೆಯಿಂದ ಸಾಬೀತಾಗುವವರೆಗೂ ಜನರು ಇದನ್ನು ಅಸಲಿ ಎಂದೇ ಭಾವಿಸಿ ಒಂದು ನಿರ್ಣಯಕ್ಕೆ ಬಂದಿರುತ್ತಾರೆ.

ಹನಿಟ್ರ್ಯಾಪ್‌ ಮಾಡಿದ್ದಾರೆ ಎನ್ನುವ ಯುವಕರ ಪರವಾಗಿ ಡಿ.ಕೆ.ಶಿವಕುಮಾರ್‌ ಅನುಕಂಪದ ಮಾತಾಡಿದ್ದಾರೆ. ‘ಪಾಪ ಹುಡುಗರು, ಇಂತಹ ನೀಚ ರಾಜಕಾರಣಿಗಳನ್ನು ಬಯಲಿಗೆಳೆದಿದ್ದಾರೆ’ ಎಂದು ವಿಧಾನಸಭೆಯಲ್ಲಿ ಹೇಳುತ್ತಲೇ ‘ಗುಡ್‌’ ಎಂಬ ಸರ್ಟಿಫಿಕೇಟ್‌ ಬೇರೆ ಕೊಟ್ಟಿದ್ದಾರೆ. ಇದೆಲ್ಲವೂ ಸದನದ ದಾಖಲೆ ಸೇರಿಯಾಗಿದೆ. ನಾಳೆ ಡಿ.ಕೆ.ಶಿವಕುಮಾರ್ ಸಮರ್ಥಿಸಿದ ಹುಡುಗರ ವಿರುದ್ಧ ಚಾರ್ಚ್ ಶೀಟ್ ದಾಖಲಾದ್ರೆ, ಆಗ ಏನಾಗುತ್ತೆ? ಆಗಲೂ ಕೆಪಿಸಿಸಿ ಅಧ್ಯಕ್ಷರು ಬೆಂಬಲಕ್ಕೆ ನಿಲ್ಲುತ್ತಾರಾ? ಅಥವಾ ತಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಜಾರಿಕೊಳ್ಳುತ್ತಾರಾ? ವೀರಾವೇಶದ ಮಾತಾಡಿದಷ್ಟು ಸುಲಭವಾಗಿಲ್ಲ ಈ ಪ್ರಕರಣ. ಇನ್ನೊಂದು ಅಂಶವನ್ನು ನಾವಿಲ್ಲಿ ಮರೆಯಬಾರದು. ಮೇಲ್ನೋಟಕ್ಕೆ ಸಿದ್ದರಾಮಯ್ಯ ಕೂಡ ಸಿಡಿ ಪ್ರಕರಣದಲ್ಲಿ ರಮೇಶ್‌ ಜಾರಕಿಹೊಳಿ ವಿರುದ್ಧ ಮಾತಾಡಿದ್ದಾರೆ. ಡಿ.ಕೆ.ಶಿವಕುಮಾರ್‌ ಕೂಡ ಮಾತಾಡಿದ್ದಾರೆ. ಆದರೆ ಇಬ್ಬರ ಮಾತಲ್ಲೂ ಅಜಗಜಾಂತರ ವ್ಯತ್ಯಾಸವಿದೆ. ಇದು ಕಾಂಗ್ರೆಸ್‌ನ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಮಾಡುತ್ತಿರುವ ಟ್ವೀಟ್‌ ಹಾಗೂ ಸಿದ್ದರಾಮಯ್ಯ ಅವರ ಟ್ವೀಟ್‌ಗಳಲ್ಲೂ ವ್ಯಕ್ತವಾಗುತ್ತಿದೆ. ಅಂದರೆ ಇಲ್ಲಿ ಸಿಡಿ ಪ್ರಕರಣದ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಎರಡು ಬಣಗಳು ಸೃಷ್ಟಿಯಾಗಿರುವುದು ಸ್ಪಷ್ಟ. ಒಬ್ಬರಿಗೆ ಈ ಪ್ರಕರಣದ ಬಗ್ಗೆ ಜೋರಾಗಿ ಮಾತಾಡಿ, ರಮೇಶ್ ಜಾರಕಿಹೊಳಿಯ ಜನ್ಮ ಜಾಲಾಡುವ ವಿಪರೀತ ಆಸಕ್ತಿಯಿದೆ. ಇನ್ನೊಬ್ಬರಿಗೆ ಜಾರಕಿಹೊಳಿ ಒಬ್ಬ ವಾಲ್ಮೀಕಿ ಸಮುದಾಯದ ನಾಯಕ. ರಮೇಶ್‌ ಬಗ್ಗೆ ಮಾತಾಡಿದಷ್ಟು ಕಾಂಗ್ರೆಸ್‌ಗೂ ಒಂದಿಲ್ಲಾ ಒಂದು ಕಡೆ ಹಾನಿ ತಂದೊಡ್ಡುತ್ತದೆ ಎಂಬ ಅರಿವಿದೆ. ಈ ವ್ಯತ್ಯಾಸ ಕಾಂಗ್ರೆಸ್‌ನಲ್ಲಿ ಕಣ್ಣಿಗೆ ರಾಚುವಂತಿದೆ.

SIDDARAMAIAH CONGRESS

ವಿಪಕ್ಷ ನಾಯಕ ಸಿದ್ದರಾಮಯ್ಯ

ಶಿವಕುಮಾರ್​ ತಪ್ಪು ಹೆಜ್ಜೆ? ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜಕೀಯವಾಗಿ ತಪ್ಪು ಹೆಜ್ಜೆ ಇಟ್ಟಿದ್ದಾರೆ ಎಂಬುದೇ ಕೈ ಪಡೆಯ ಹಿರಿಯ ನಾಯಕರ ಅಭಿಪ್ರಾಯ. ಸಿಡಿ ಹಿಂದಿನ ಸೂತ್ರಧಾರಿಗಳಿಗೆ ಪ್ರತ್ಯಕ್ಷವೋ, ಪರೋಕ್ಷವೋ ಬೆಂಬಲ ನೀಡಿ ಆರೋಪಿ ಸ್ಥಾನದಲ್ಲಿರುವ ರಮೇಶ್ ಜಾರಕಿಹೊಳಿ ಪರವಾಗಿ ಅವರ ಸಮುದಾಯದ ಅನುಕಂಪ ಸೃಷ್ಠಿ ಮಾಡಿದ್ದಾರೆ ಎಂಬ ಆತಂಕ ಕಾಂಗ್ರೆಸ್ಸಿಗರದ್ದು. ಕೆಪಿಸಿಸಿ ಅಧ್ಯಕ್ಷರೇ ಎಸ್‌ಟಿ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಬಾಣ ಬಿಡಲು ಬಿಜೆಪಿ ರೆಡಿಯಾಗಿದೆ. ಸಮುದಾಯದ ಸ್ವಾಮೀಜಿ ಕೂಡ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಕಾಂಗ್ರೆಸ್ ಬೆಳಗಾವಿ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ದಯವಿಟ್ಟು ಈ ಪ್ರಕರಣವನ್ನ ಪ್ರಸ್ತಾಪ ಮಾಡಬೇಡಿ ಎನ್ನುತ್ತಿದ್ದಾರೆ. ಕಳೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೋಕಾಕ್‌ನಿಂದ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ, ‘ಇದು ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್’ ಮಾಡುತ್ತೆ ಅಂತ ನೇರವಾಗಿ ಆರೋಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ವಿರುದ್ಧವೇ ಲಖನ್‌ ಬುಸುಗುಟ್ಟಿದ್ದಾರೆ.

ಮೇಲ್ವರ್ಗಗಳು ಕೈಬಿಟ್ಟ ಮೇಲೂ ಕಾಂಗ್ರೆಸ್‌ ಪಕ್ಷವನ್ನು ಹಿಡಿದೆತ್ತಿ ನಿಲ್ಲಿಸುತ್ತಿರುವುದು ಶೋಷಿತ ಸಮುದಾಯಗಳು. ಅಹಿಂದ ವೋಟ್‌ ಬ್ಯಾಂಕ್‌ ಈಗ ಕಾಂಗ್ರೆಸ್‌ಗೆ ನಿರ್ಣಾಯಕ. 2018ರ ವಿಧಾನಸಭಾ ಚುನಾವಣೆಯಲ್ಲಿ ಈ ಅಹಿಂದ ವರ್ಗ ಕಾಂಗ್ರೆಸ್‌ ಜತೆ ನಿಂತಿರಲಿಲ್ಲ ಎನ್ನುವುದನ್ನು ಖುದ್ದು ಸಿದ್ದರಾಮಯ್ಯ ಬಹಿರಂಗ ಭಾಷಣದಲ್ಲೇ ಉಲ್ಲೇಖಿಸಿದ್ದಾರೆ. ಮತ್ತೊಂದೆಡೆ 2023ರ ವಿಧಾನಸಭಾ ಚುನಾವಣೆವರೆಗೂ ಈಗಿನ ಲೆಕ್ಕಾಚಾರ ಪ್ರಕಾರ ಡಿ.ಕೆ.ಶಿವಕುಮಾರ್‌ ಅವರೇ ಕೆಪಿಸಿಸಿ ಅಧ್ಯಕ್ಷರಾಗಿರುತ್ತಾರೆ. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷರೇ ಒಂದು ಸಮುದಾಯದ ಬೆಳೆದ ನಾಯಕನನ್ನು ವೈಯಕ್ತಿಕವಾಗಿ ಟಾರ್ಗೆಟ್‌ ಮಾಡಿದ್ರೆ ಅದರ ವ್ಯತಿರಿಕ್ತ ಪರಿಣಾಮ ಕಾಂಗ್ರೆಸ್‌ ಮೇಲೆ ಬೀರಬಹುದು ಎಂಬ ಮಾತು ಕಾಂಗ್ರೆಸ್‌ ಪಡಸಾಲೆಯಲ್ಲೇ ಓಡಾಡುತ್ತಿದೆ.

ರಮೇಶ್ ಜಾರಕಿಹೊಳಿ ಪ್ರಕರಣ ಕಾಂಗ್ರೆಸ್ ಗಳಿಸಿದ್ದೇನು? 2018ರ ವಿಧಾನಸಭಾ ಚುನಾವಣೆಯ ಕಾವು ಏರುತ್ತಿತ್ತು. ಆ ಹೊತ್ತಿನಲ್ಲಿ ಒಂದು ಆಡಿಯೋ ವೈರಲ್ ಆಗಿತ್ತು. ಒಂದು ಧ್ವನಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ಅಂತ ಹೇಳಲಾಯಿತು. ಇನ್ನೊಂದು ಹೊಳೇನರಸಿಪುರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಪಿ. ಮಂಜೇಗೌಡ ಅವರದ್ದು. ವೈರಲ್ ಆದ ಆಡಿಯೋ ಬಗ್ಗೆ ಈಗ ವಿಶ್ಲೇಷಣೆ ಮಾಡಿದರೆ, ದೇವೇಗೌಡರ ಕುಟುಂಬವನ್ನು ಮುಗಿಸಬೇಕು ಎಂದು ಸಿದ್ದರಾಮಯ್ಯನವರು ಆಡಿದ್ದಾರೆನ್ನುವ ಆ ಧ್ವನಿ ಕೂಡ ಕಾಂಗ್ರೆಸ್ನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ತನ್ನ ಪಾತ್ರ ನಿರ್ವಹಿಸಿತ್ತು. ಇಡೀ ಒಕ್ಕಲಿಗ ಸಮಾಜ 2018 ರ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ಹೆಡೆ ಮುರಿ ಕಟ್ಟಲು ಅಣಿಯಾಗಿದ್ದನ್ನು ಕಾಂಗ್ರೆಸ್ ನೋಡಲು ಆಗಲೇ ಇಲ್ಲ.

ಈಗ 2021 ಕ್ಕೆ ಬರೋಣ. ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಮಾಡುತ್ತೋ ಬಿಡುತ್ತೋ ಎನ್ನುವ ವಿಚಾರವನ್ನು ಮುಂದೆ ನೋಡೋಣ. ಇಡೀ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ಅದರಲ್ಲಿಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ ರೀತಿ ನೋಡಿದರೆ, ಕಾಂಗ್ರೆಸ್ ಪಕ್ಷ ಎಸ್ಟಿ ಸಮಾಜದ ಮತಕ್ಕೆ ಎಳ್ಳು ನೀರು ಬಿಡುವ ಲಕ್ಷಣ ಕಾಣುತ್ತಿದೆ. ಕರ್ನಾಟಕದ ಜಾತಿ ರಾಜಕೀಯದ ಹಾವು-ಏಣಿ ಆಟದಲ್ಲಿ ನಾಯಕರ ಭವಿಷ್ಯ ಮೊದಲೇ ನಿರ್ಧಾರವಾಗುವುದು ಹೊಸದೇನಲ್ಲ. ಈ ಹಿಂದೆ ಯಡಿಯೂರಪ್ಪನವರನ್ನ ನಿರಂತರ ಟಾರ್ಗೆಟ್ ಮಾಡಿದ ಕುಮಾರಸ್ವಾಮಿ ಲಿಂಗಾಯಿತರ ವಿರೋಧ ಕಟ್ಟಿಕೊಂಡಿದ್ದು ಮತ್ತು ದೇವೇಗೌಡರ ಕುಟುಂಬವನ್ನು ಗುರಿ ಮಾಡಿಕೊಂಡು ಮಾಡಿದ ಸಿದ್ದರಾಮಯ್ಯ, ಒಕ್ಕಲಿಗರ ವಿರೋಧ ಕಟ್ಟಿಕೊಂಡಿದ್ದು ಈಗ ಹೊಸ ವಿಚಾರ ಅಲ್ಲ. ಇವೆಲ್ಲಾ ಆಯಾ ಕಾಲದ ಚುನಾವಣಾ ಫಲಿತಾಂಶದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ. ಈಗ ಶಿವಕುಮಾರ್ ಮೇಲೆ ಬರುತ್ತಿರುವ ಶಂಕೆ ಏನಾದರೂ ಜನರ ಮನಸ್ಸಿನಲ್ಲಿ ನಾಟಿದರೆ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಸಂಕಷ್ಟ ಬಂದರೂ ಬರಬಹುದು.

ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ಕರ್ನಾಟಕದಲ್ಲಿ ಕಿಸಾನ್​ ಪಂಚಾಯತ್​ ರ‍್ಯಾಲಿ ಮಕಾಡೆ ಮಲಗಿದ್ದೇಕೆ?

ಇದನ್ನೂ ಓದಿ: ವಿಶ್ಲೇಷಣೆ | ಪಶ್ಚಿಮ ಬಂಗಾಳ ಕದನ ಕಣ; ಮೊದಲ ಹಂತದಲ್ಲಿ ಬಿಜೆಪಿಗೆ ಅನುಕೂಲಕರ ಪರಿಸ್ಥಿತಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ