ವಿಶ್ಲೇಷಣೆ: ಹನಿ ಟ್ರ್ಯಾಪ್ ಎಂಬ ನವಯುಗದ ದರೋಡೆ

ರಮೇಶ್​ ಜಾರಕಿಹೊಳಿ ಅವರ ಸಿಡಿ ಕೇಸಿನಲ್ಲಿ ಹನಿಟ್ರಾಪ್​ ಆಗಿದೆ ಎಂಬ ಗುಮಾನಿ ಇದೆ. ಈ ಘಟನೆಯನ್ನು ಕೂಲಂಕುಶವಾಗಿ ನೋಡಿದರೆ, ಹನಿ ಟ್ರಾಪ್​ನಂತಹ ಗಂಭೀರ ಅಪರಾಧಗಳಿಗೆ ಶಿಕ್ಷೆ ಕೊಡುವ ಕಠಿಣ ಕಾನೂನೇ ಇಲ್ಲ. ಹನಿಟ್ರ್ಯಾಪ್ ಅನ್ನು ಸಮರ್ಥವಾಗಿ ವಿವರಿಸುವಂತಹ ಸೆಕ್ಷನ್‌ ಗಳಿಲ್ಲ

ವಿಶ್ಲೇಷಣೆ: ಹನಿ ಟ್ರ್ಯಾಪ್ ಎಂಬ ನವಯುಗದ ದರೋಡೆ
ಪ್ರಾತಿನಿಧಿಕ ಚಿತ್ರ
Follow us
ಡಾ. ಭಾಸ್ಕರ ಹೆಗಡೆ
| Updated By: ganapathi bhat

Updated on: Apr 03, 2021 | 9:27 PM

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಲೈಂಗಿಕ ದೌರ್ಜನ್ಯದ ಜೊತೆಗೆ ಹನಿಟ್ರ್ಯಾಪ್ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ನೋಡಿದರೆ ಇತ್ತೀಚೆಗೆ ನಮ್ಮ ದೇಶದಲ್ಲಿ ಹನಿಟ್ರ್ಯಾಪ್‌ ಮೂಲಕ ಜನರನ್ನು ಬಲೆಗೆ ಕೆಡವಿ ಹಣ ಮಾಡುವ ಘಟನೆಗಳು ಬೆಳಕಿಗೆ ಬರುತ್ತಿವೆ. ಹಿಂದೆಲ್ಲಾ, ಗೂಢಾಚಾರಿಕೆಗಾಗಿ, ಬೇರೆ ದೇಶಗಳ ರಹಸ್ಯ ಮಾಹಿತಿ ಪಡೆಯಲು ಮಹಿಳೆಯರನ್ನು ಅಸ್ತ್ರವಾಗಿ ಬಳಸಲಾಗುತ್ತಿತ್ತು. ಹನಿಟ್ರ್ಬಾಪ್ ಎಂದರೆ ಆಯಕಟ್ಟಿನ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಆತನಿಗೆ ಮಹಿಳೆಯ ಮೂಲಕ ಲೈಂಗಿಕ ಆಮಿಷವೊಡ್ಡಿ ಆತನಿಂದ ಗೌಪ್ಯ ಮಾಹಿತಿ ಪಡೆಯುವುದು ಅಥವಾ ಹಣ ಮಾಡುವುದು. ಭಾರತದಲ್ಲಿ ಹನಿ ಟ್ರ್ಯಾಪ್ ಹಳೆಯ ಅಸ್ತ್ರವಾದರೂ ಅದನ್ನು ಹಣ ಮಾಡಲು ಬಳಸುವ ಪರಿಪಾಠ ಇತ್ತೀಚೆಗೆ ಆರಂಭವಾಗಿದೆ. ಮೊಬೈಲ್ ಕ್ಯಾಮರಾ, ರಹಸ್ಯ ಕ್ಯಾಮರಾಗಳು ಜನಸಾಮಾನ್ಯರ ಕೈಗೆ ಸಿಗುವಂತಾದ ಬಳಿಕವಂತೂ ಹಣವಂತರನ್ನು ಅದರಲ್ಲೂ ಪ್ರಭಾವಿ ಸ್ಥಾನದಲ್ಲಿರುವವರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸುವ ಚಟುವಟಿಕೆಗಳು ಹೆಚ್ಚಾಗಿವೆ. ಹೀಗಾಗಿಯೇ ಇತ್ತೀಚೆಗೆ ಇಂತಹ ಪ್ರಕರಣಗಳು ಬೆಳಕಿಗೆ ಬರಲು ಆರಂಭಿಸಿದ್ದು, ಬ್ಲಾಕ್ ಮೇಲ್ ಗಳಿಂದ ರೋಸಿ ಹೋಗಿರುವ ನೊಂದ ಜನರು ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಿದ್ದಾರೆ.

ಈ ನೊಂದ ಜನರಲ್ಲಿ ಬಹುಪಾಲು ಜನ ಪುರುಷರೇ ಆಗಿದ್ದಾರೆ. ಉದ್ಯಮಿ, ಹಣವಂತ ಪುರುಷರನ್ನು ಮೊಬೈಲ್ ಕರೆ ಮೂಲಕ, ಫೇಸ್ ಬುಕ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಗೆಳೆತನ ಬೆಳಸುವುದು. ಆಪ್ತತೆ ಗಳಿಸಿದ ನಂತರ ಭೇಟಿ ಮಾಡುವ ನೆಪದಲ್ಲಿ ರೂಮಿಗೆ ಕರೆಸಿ, ಆಪ್ತ ಕ್ಷಣಗಳನ್ನು ರಹಸ್ಯ ಕ್ಯಾಮರಾ ಅಥವಾ ಮೊಬೈಲ್ ಮೂಲಕ ಚಿತ್ರಿಸುವುದು. ಅದಾದ ಬಳಿಕ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡುವ ದಂಧೆ ವ್ಯಾಪಕವಾಗಿ ಹೆಚ್ಚುತ್ತಿದೆ. ಬೆಂಗಳೂರಿನಲ್ಲೇ ಬೆಳಕಿಗೆ ಬಂದ ಒಂದು ಪ್ರಕರಣದಲ್ಲಂತೂ ಫೇಸ್‌ಬುಕ್ ಮೆಸೆಂಬರ್ ಮೂಲಕ ಪುರುಷನೊಬ್ಬನಿಗೆ ವಿಡಿಯೋ ಕಾಲ್ ಮಾಡಿದ ಯುವತಿ ತನ್ನ ಬೆತ್ತಲೆ ದೇಹವನ್ನು ಪ್ರದರ್ಶನ ಮಾಡ್ತಾಳೆ. ನಂತರ ಅದನ್ನೇ ಸ್ಕ್ರೀನ್ ರೆಕಾರ್ಡಿಂಗ್ ಮಾಡಿಕೊಂಡು ಆತನ ಕುಟುಂಬದವರು, ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸುವುದಾಗಿ ಬೆದರಿಸಿ ಲಕ್ಷಾಂತರ ರೂಪಾಯಿ ಹಣ ಪೀಕಿದ್ದಾಳೆ. ಸಾಮಾನ್ಯವಾಗಿ ಯುವತಿ ಒಬ್ಬಳೇ ಇಂತಹ ಕಾರ್ಯ ಮಾಡಲು ಸಾಧ್ಯವಾಗುವುದಿಲ್ಲ. ಯುವತಿಯೊಂದಿಗೆ ಇಂತಹ ವ್ಯವಹಾರದಲ್ಲಿ ನುರಿತ ಪುರುಷರೂ ಸೇರಿ ಈ ರೀತಿ ಬಲೆ ಬೀಸುತ್ತಾರೆ. ಕೆಲವೊಮ್ಮ ಹೋಟೆಲ್ ಗಳಿಗೆ ಕರೆಯುವ ಯುವತಿಯರು ಬಂದ ಸಂತ್ರಸ್ತ ಯುವಕ ರೋಮ್ಯಾನ್ಸ್ ಆರಂಭಿಸುವ ಮೊದಲೇ ಆಕೆಯ ಕಡೆಯವರು ಹೋಟೆಲ್ ದಾಳಿ ಮಾಡಿ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆ ಹಾಕಿದ ಉದಾಹರಣೆಗಳೂ ಇವೆ. ಮಂಗಳೂರು, ಬೆಂಗಳೂರಿನಲ್ಲೂ ಇಂತಹ ಘಟನೆಗಳು ನಡೆದಿವೆ. ಬೆಂಗಳೂರಿನ ಯೂಟ್ಯೂಬ್ ಚಾನಲ್ ಒಂದರ ಮೇಲೆ ದಾಳಿ ನಡೆಸಿ ಪೊಲೀಸರು ಕೆಲವರನ್ನು ಬಂಧಿಸಿದ ಘಟನೆಯೂ ಇತ್ತೀಚೆಗೆ ನಡೆದಿದೆ. ಎಷ್ಟೋ ಬಾರಿ ಇಂತಹ ಹನಿಟ್ರ್ಯಾಪ್ ಗೆ ಒಳಗಾದ ವ್ಯಕ್ತಿಗಳು ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ.

ಪ್ರಭಾವಿಗಳೇ ಇವರ ಟಾರ್ಗೆಟ್‌ 2019 ರಲ್ಲಿ ಮಧ್ಯಪ್ರದೇಶ ರಾಜ್ಯದಲ್ಲಿ ಹನಿಟ್ರ್ಯಾಪ್ ಘಟನೆಗಳು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹರ್ಭಜನ್ ಸಿಂಗ್ ಎಂಬಾತನ ಮೇಲೂ ಹನಿಟ್ರ್ಯಾಪ್ ನಡೆಸಿದ್ದ ಯುವತಿ ಹಾಗೂ ತಂಡ ನಂತರ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದರು. ಈ ಹನಿಟ್ರ್ಯಾಪ್ ದೂರನ್ನು ಆಧರಿಸಿ ಇಂದೋರ್ ಪೊಲೀಸ್ ಹಾಗೂ ಮಧ್ಯಪ್ರದೇಶದ ಎಟಿಎಸ್‌ ತಂಡ ಮನೆಯೊಂದರ ಮೇಲೆ ದಾಳಿ ನಡೆಸಿ ಐವರು ಯುವತಿಯರು ಹಾಗೂ ಒಬ್ಬ ಪುರುಷನನ್ನು ಬಂಧಿಸಿದ್ದರು. ಅವರ ಮನೆ ಶೋಧಿಸಿದಾಗ ಸಾಕಷ್ಟು ಆಡಿಯೋ, ವಿಡಿಯೋ ದೃಶ್ಯಾವಳಿಗಳು ಲಭ್ಯವಾಗಿದ್ದವು. ಎಸ್‌ಐಟಿ ನಡೆಸಿದ ತನಿಖೆಯಲ್ಲಿ ಹನಿಟ್ರ್ಯಾಪ್ ಬಲೆಯಲ್ಲಿ ಮಧ್ಯಪ್ರದೇಶದ ಪ್ರಭಾವಿ ಅಧಿಕಾರಿಗಳು ಹಾಗೂ ರಾಜಕಾರಣಿಗಳೂ ಸಿಲುಕಿದ್ದಾರೆ ಎಂಬ ಸುದ್ದಿ ಹೊರಬಿದ್ದು ಸಂಚಲನ ಮೂಡಿಸಿತ್ತು. ಹನಿಟ್ರ್ಯಾಪ್‌ ತನಿಖೆ ವೇಳೆ ಹೊರಬಂದ ಮಾಹಿತಿಯಿಂದಾಗಿ ಆಗಿನ ಸಿಎಂ ಕಮಲ್‌ ನಾಥ್‌ ಸರ್ಕಾರವೇ ನಡುಗಿ ಎಸ್‌ಐಟಿ ಮುಖ್ಯಸ್ಥರನ್ನೇ ಬದಲಾಯಿಸಿತ್ತು. ಆದರೆ ಬಳಿಕ ಕೋರ್ಟ್ ಮಧ್ಯಪ್ರವೇಶಿಸಿ ಎಸ್‌ಐಟಿಯ ಯಾವುದೇ ಅಧಿಕಾರಿಯನ್ನೂ ಬದಲಾಯಿಸದಂತೆ ಸೂಚಿಸಿತ್ತು.

ಬೆಂಗಳೂರಿನಲ್ಲೂ ಮಹಿಳಾ ಟೀಚರ್‌ ಒಬ್ಬಳು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ ನಲ್ಲಿ ತನ್ನ ಫೋಟೋ ಹೆಸರು ನೋಂದಾಯಿಸಿದ್ದಳು. ಆಸಕ್ತಿ ತೋರಿಸಿದ ಇಂದಿರಾನಗರದ ವ್ಯಕ್ತಿಯ ಮನೆಗೆ ಹೋಗಿ ಆಪ್ತ ದೃಶ್ಯಗಳನ್ನು ರೆಕಾರ್ಡ್ ಮಾಡಿ ಬ್ಲಾಕ್‌ಮೇಲ್ ಆರಂಭಿಸಿದಳು. ಮೊದಲಿಗೆ ಹಣ ನೀಡಿದ ವ್ಯಕ್ತಿ, ನಂತರ ರೋಸಿಹೋಗಿ ಪೊಲೀಸ್ ದೂರು ನೀಡಿದ. ಇಂತಹ ಹತ್ತು ಹಲವು ಘಟನೆಗಳು ಪ್ರತಿ ತಿಂಗಳೂ ಬೆಳಕಿಗೆ ಬರುತ್ತಿವೆ. ಆದರೆ ಇನ್ನೂ ಇಂತಹ ನೂರಾರು ಪ್ರಕರಣಗಳು ಬೆಳಕಿಗೇ ಬರುತ್ತಿಲ್ಲ. ಮರ್ಯಾದೆಗೆ ಅಂಜಿ ಹಣ ಕೊಟ್ಟು ಸುಮ್ಮನಾಗೋ ಜನರೂ ಇದ್ದಾರೆ.

ಹನಿಟ್ರ್ಯಾಪ್ – ಪ್ರಜಾಪ್ರಭುತ್ವ ಬುಡಮೇಲು ರಾಜ್ಯದ ರಾಜಕೀಯ ಪಡಸಾಲೆಯಲ್ಲೂ ಹನಿಟ್ರ್ಯಾಪ್‌ ಗಳ ಸದ್ದು ಇತ್ತೀಚೆಗೆ ಕೇಳಿ ಬರುತ್ತಿವೆ. ಸಿಡಿಗಳ ಬಗ್ಗೆ ಶಾಸಕರೇ ಆರೋಪ ಮಾಡಲಾರಂಭಿಸಿದ್ದಾರೆ. ಸಿಡಿ ಗಳನ್ನಿಟ್ಟುಕೊಂಡು ಕೆಲವರು ಸಚಿವರಾಗಿದ್ದಾರೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಮಾಡಿದ್ದಾರೆ. ಇನ್ನು ಸಿಡಿ ಭೀತಿಯಿಂದ ರಾಜ್ಯದ ಆರು ಪ್ರಭಾವಿ ಸಚಿವರು ಕೋರ್ಟ್ ಮೊರೆ ಹೋಗಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದಾರೆ. ಹೀಗೆ ಶಾಸಕರು, ಸಚಿವರ ವಿರುದ್ಧವೇ ನಡೆಸುವ ಹನಿಟ್ರ್ಯಾಪ್ ನಂತಹ ಘಟನೆಗಳಿಂದ ಇಡೀ ಸರ್ಕಾರವನ್ನೇ ಬ್ಲಾಕ್‌ಮೇಲ್ ಮಾಡಿ ಆಡಳಿತವನ್ನೇ ಪರೋಕ್ಷವಾಗಿ ನಿಯಂತ್ರಿಸುವಂತೆ ಪರಿಸ್ಥಿತಿಯೂ ಉದ್ಭವಿಸಬಹುದು. ಸಚಿವನನ್ನು ಹನಿಟ್ರ್ಯಾಪ್ ಮಾಡಿ ಇಂತಹವರಿಗೇ ಟೆಂಡರ್ ಕೊಡಿ, ಇಂತಹ ಕಾರ್ಯಕ್ರಮ ರೂಪಿಸಿ ಎಂದು ಸರ್ಕಾರದ ನೀತಿ ನಿರೂಪಣೆಯ ಮೇಲೇ ಪ್ರಭಾವ ಬೀರುವ ಪರಿಸ್ಥಿತಿ ಬರಬಹುದು. ಹೀಗಾದರೆ ಸರ್ಕಾರ ನಡೆಸಲು ಮತಗಳಿಗಿಂತ ಇಂತಹ ಸಿಡಿಗಳೇ ಸಾಕಾಗುತ್ತವೆ. ಹಾಗಾದರೆ ಪ್ರಜಾಪ್ರಭುತ್ವವೇ ಬುಡಮೇಲಾಗಿ, ಸಾಂವಿಧಾನಿಕ ವ್ಯವಸ್ಥೆಯೇ ಕುಸಿದು ಬೀಳಬಹುದು.

ಹನಿಟ್ರ್ಯಾಪ್‌ – ಸೂಕ್ತ ಕಾನೂನಿಲ್ಲ ಹೀಗೆ ವ್ಯವಸ್ಥೆಯನ್ನು ಬುಡಮೇಲು ಮಾಡುವ ಇಂತಹ ಗಂಭೀರ ಅಪರಾಧಗಳಿಗೆ ಕಠಿಣ ಕಾನೂನೇ ಇಲ್ಲ. ಹನಿಟ್ರ್ಯಾಪ್ ಅನ್ನು ಸಮರ್ಥವಾಗಿ ವಿವರಿಸುವಂತಹ ಸೆಕ್ಷನ್‌ ಗಳಿಲ್ಲ. ಸದ್ಯ ಪೊಲೀಸರು ಇಂತಹ ಪ್ರಕರಣಗಳಿಗೆ ಹಾಕುತ್ತಿರುವ ಸುಲಿಗೆ, ವಂಚನೆಯಂತಹ ಸೆಕ್ಷನ್‌ ಗಳಲ್ಲಿ ಸುಲಭವಾಗಿ ಜಾಮೀನು ಸಿಗುತ್ತದೆ. ಐಪಿಸಿ ಸೆಕ್ಷನ್‌ 385 ಅಡಿ ಬೆದರಿಕೆ ಹಾಕಿ ಸುಲಿಗೆ ಮಾಡಿದರೆ ಅದಕ್ಕೆ ಕೇವಲ 2 ವರ್ಷ ಸೆರೆವಾಸ ಮಾತ್ರ. ಇನ್ನು ವಂಚನೆ ಪ್ರಕರಣಕ್ಕೆ ಕೇವಲ 1 ವರ್ಷ ಶಿಕ್ಷೆ ಇದೆ. ಎಲ್ಲವೂ ಜಾಮೀನು ನೀಡಬಹುದಾದ ಅಪರಾಧಗಳು. ಹೀಗಾಗಿ ಹನಿಟ್ರ್ಯಾಪ್ ನಿಂದ ಕೋಟ್ಯಾಂತರ ಹಣ ಸುಲಿಗೆ ಮಾಡಿದರೂ, ಮಾನ ಹೋಗುತ್ತದೆಂದು ಸಂತ್ರಸ್ತ ಆತ್ಮಹತ್ಯೆ ಮಾಡಿಕೊಂಡರೂ ಶಿಕ್ಷೆ ಪ್ರಮಾಣ ಮಾತ್ರ ಕಡಿಮೆಯೇ. ಇದಕ್ಕೆ ದರೋಡೆಗಿಂತ ಕಡಿಮೆ ತೀವ್ರತೆಯ ಅಪರಾಧವೆಂದು ಪರಿಗಣಿಸಲಾಗುತ್ತಿದೆ. ದರೋಡೆಗೆ ಐಪಿಸಿ ಅಡಿ 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ. ಹೀಗಾಗಿ ಹನಿಟ್ರ್ಯಾಪ್ ನಂತಹ ಗಂಭೀರ ಪರಿಣಾಮವುಳ್ಳ ಅಪರಾಧ ಎಸಗಿದವರೂ ಸುಲಭವಾಗಿ ಕಾನೂನಿನ ಕುಣಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂಡಿಯನ್ ಪೀನಲ್ ಕೋಡ್ ಗೆ ತಿದ್ದುಪಡಿ ತಂದು ಹನಿಟ್ರ್ಯಾಪ್ ಗೆಂದೇ ಹೊಸ ದೃಷ್ಟಿಕೋನದ ಅಪರಾಧ ಕಾನೂನು ರೂಪಿಸುವ ಅಗತ್ಯವಿದೆ.

ಹನಿ ಟ್ರ್ಯಾಪ್ ಆರೋಪಿಗಳಿಗೆ ಶಿಕ್ಷೆಯೂ ಆಗಿದೆ ಮಂಗಳೂರಿನ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಹನಿಟ್ರ್ಯಾಪ್ ಮೂಲಕ ಬೆದರಿಸಿದ ಇಬ್ಬರು ಯುವತಿಯರು ಹಾಗೂ ಆರು ಯುವಕರಿಗೆ ಮಂಗಳೂರಿನ ನ್ಯಾಯಾಲಯ 3 ವರ್ಷ ಕಠಿಣ ಶಿಕ್ಷೆಗೆ ಗುರಿಪಡಿಸಿತ್ತು. ಇದೇ ರೀತಿ ಪೊಲೀಸ್ ಎಎಸ್ಐ ಶಂಶೇರ್ ಹಾಗೂ ಮಹಿಳೆಯೊಬ್ಬರು ಸೇರಿ ಉದ್ಯಮಿ ಹನಿಟ್ರ್ಯಾಪ್ ಮಾಡಿ ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ಭಿವಾನಿಯ ಕೋರ್ಟ್ ಇಬ್ಬರೂ ಆರೋಪಿಗಳಿಗೆ 3 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಒಟ್ಟಾರೆ ದೇಶದಲ್ಲಿ ಹನಿಟ್ರ್ಯಾಪ್ ಪ್ರಕರಣಗಳಿಗೆ ಶಿಕ್ಷೆಯಾದ ಪ್ರಕರಣಗಳನ್ನು ಗಮನಿಸಿದರೆ ಎಲ್ಲಿಯೂ 3 ವರ್ಷಕ್ಕೂ ಮೀರಿ ಶಿಕ್ಷೆಯಾದ ಉದಾಹರಣೆಗಳಿಲ್ಲ.

ಸಿ.ವಿ. ನಾಗೇಶ್, ಹಿರಿಯ ವಕೀಲರು ಹೀಗೆ ಹೇಳಿದ್ದಾರೆ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚುತ್ತಿವೆ. ಹನಿಟ್ರ್ಯಾಪ್ ಗಳಲ್ಲಿ ಬಳಸಲಾಗುವ ಎಲೆಕ್ಟ್ರಾನಿಕ್ ರೆಕಾರ್ಡಿಂಗ್ ಗಳಿಗೆ ಕೋರ್ಟ್ ಗಳಲ್ಲಿ ಮಾನ್ಯತೆ ಇದೆ. ಆದರೆ ಹನಿಟ್ರ್ಯಾಪ್ ಗೆ ಪ್ರತ್ಯೇಕ ಸೆಕ್ಷನ್‌ ಭಾರತೀಯ ದಂಡ ಸಂಹಿತೆಯಲ್ಲಿ ಇಲ್ಲ. ಸುಲಿಗೆ, ಬೆದರಿಕೆ ಪ್ರಕರಣಗಳಿಗೆ ಬಳಕೆಯಾಗುವ ಸೆಕ್ಷನ್‌ ಗಳಡಿಯೇ ಹನಿಟ್ರ್ಯಾಪ್ ಪ್ರಕರಣಗಳನ್ನೂ ಪರಿಗಣಿಸಲಾಗುತ್ತಿದೆ. ಹೀಗಾಗಿ ಭಾರತೀಯ ದಂಡ ಸಂಹಿತೆಗೆ ಕೇಂದ್ರ ಸರ್ಕಾರವೇ ತಿದ್ದುಪಡಿ ತಂದು ಹನಿಟ್ರ್ಯಾಪ್ ಅನ್ನೇ ಪ್ರತ್ಯೇಕ ಸೆಕ್ಷನ್‌ ಆಗಿ ಸೇರಿಸಬಹುದು. ರಾಜ್ಯಸರ್ಕಾರಕ್ಕೂ ತಿದ್ದುಪಡಿ ತರುವ ಅಧಿಕಾರವಿದೆ. ಹೆಚ್ಚುತ್ತಿರುವ ಹನಿಟ್ರ್ಯಾಪ್ ಪ್ರಕರಣಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನಿನ ವ್ಯಾಪ್ತಿಗೆ ತರುವುದು ಸೂಕ್ತ.

CV NAGESH ADVOCATE

ಸಿ.ವಿ. ನಾಗೇಶ್, ಹಿರಿಯ ವಕೀಲರು

ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ರಮೇಶ್​ ಜಾರಕಿಹೊಳಿ ಸಿಡಿ ಕೇಸ್​, ಕಾಂಗ್ರೆಸ್​ ಶಾಸಕರನ್ನು ವಿಚಲಿತಗೊಳಿಸಿದ ಡಿ.ಕೆ. ಶಿವಕುಮಾರ್​

ಇದನ್ನೂ ಓದಿ: ಸುದ್ದಿ ವಿಶ್ಲೇಷಣೆ | ಕರ್ನಾಟಕದಲ್ಲಿ ಕಿಸಾನ್​ ಪಂಚಾಯತ್​ ರ‍್ಯಾಲಿ ಮಕಾಡೆ ಮಲಗಿದ್ದೇಕೆ?

ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು