ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ತನಿಖಾಧಿಕಾರಿಗಳ ಮುಂದೆ ಹಾಜರಾದ ನರೇಶ್ – ಶ್ರವಣ್! ಮುಂದೇನು?
Ramesh Jarkiholi: ನರೇಶ್ ಮತ್ತು ಶ್ರವಣ್ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಬ್ಲ್ಯಾಕ್ಮೇಲ್ ಪ್ರಕರಣದಲ್ಲಿ ಅವರು ತನಿಖೆಗೆ ಹಾಜರಾಗಿದ್ದಾರೆ. ಐದು ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಇಬ್ಬರಿಗೂ ಸೂಚನೆ ನೀಡಿತ್ತು.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಆರೋಪಿಗಳಾದ ನರೇಶ್ ಗೌಡ ಹಾಗೂ ಶ್ರವಣ್ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ತಮ್ಮ ವಕೀಲರ ಜೊತೆ ಆಗಮಿಸಿರುವ ಆರೋಪಿಗಳು ಆಡುಗೋಡಿ ಟೆಕ್ನಿಕಲ್ ಸೆಲ್ನಲ್ಲಿ ಎಸ್ಐಟಿ ಮುಂದೆ ಇಂದು ಹಾಜರಾದರು. ನರೇಶ್ ಮತ್ತು ಶ್ರವಣ್ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಬ್ಲ್ಯಾಕ್ಮೇಲ್ ಪ್ರಕರಣದಲ್ಲಿ ಅವರು ತನಿಖೆಗೆ ಹಾಜರಾಗಿದ್ದಾರೆ. ಐದು ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಇಬ್ಬರಿಗೂ ಸೂಚನೆ ನೀಡಿತ್ತು.
ಆರೋಪಿಗಳನ್ನು ಎಸ್ಐಟಿ ಪೊಲೀಸರು ವಶಕ್ಕೆ ಪಡೆಯುತ್ತಾರಾ?: ಸಿಡಿ ಕಿಂಗ್‌ಪಿನ್‌ಗಳಾದ ನರೇಶ್ ಮತ್ತು ಶ್ರವಣ್ ಅವರನ್ನು ಬಂಧನದ ಅವಶ್ಯವಿದ್ದರೆ ಬಂಧಿಸಬಹುದು. ಬಂಧಿಸಲು ಎಸ್ಐಟಿ ತನಿಖಾಧಿಕಾರಿಗಳು ಸ್ವತಂತ್ರ ಎಂದು ಕೋರ್ಟ್ ಹೇಳಿದೆ. ಹಾಗಾಗಿ ಇಂದು ವಿಚಾರಣೆಗೆ ಹಾಜರಾಗಿರುವ ಆರೋಪಿಗಳಿಬ್ಬರನ್ನು ಎಸ್ಐಟಿ ಪೊಲೀಸರು ತಮ್ಮ ವಶಕ್ಕೆ ಪಡೆಯುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.
ಈ ಮಧ್ಯೆ, ಆಡುಗೋಡಿ ಟೆಕ್ನಿಕಲ್ ಸೆಂಟರ್ ಗೆ ತನಿಖಾಧಿಕಾರಿ ಎಸಿಪಿ ಧರ್ಮೇಂದ್ರ ಆಗಮಿಸಿದ್ದು, ಕ್ಯಾಬಿನ್ ನಲ್ಲಿ ದಾಖಲೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ. ಆರೋಪಿಗಳಿಗೆ ಕೇಳಲು ಸಿದ್ಧಪಡಿಸಿರು ಪ್ರಶ್ನೆಗಳ ಪುನರ್ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳು ಹಾಜರಾಗಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ವಿಚಾರಣೆಯ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಸಹ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣದಲ್ಲಿ ಸಿಡಿ ಪ್ರಕರಣದ ರೂವಾರಿಗಳು ಎಂದು ಹೇಳಲಾದ ನರೇಶ್ ಗೌಡ ಹಾಗೂ ಶ್ರವಣ್‌ಗೆ ಬೆಂಗಳೂರಿನ 91ನೇ ಸಿಸಿಹೆಚ್ ಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಕಳೆದ ಮಾರ್ಚ್ 2ರಿಂದ ತಲೆಮರೆಸಿಕೊಂಡಿರುವ ಈ ಇಬ್ಬರೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು ತನಿಖಾ ತಂಡ ಇಬ್ಬರನ್ನೂ ಪತ್ತೆಹಚ್ಚಲು ಶ್ರಮಿಸುತ್ತಿತ್ತು.
ತಮ್ಮ ಮೇಲೆ ಕೇಳಿಬಂದ ಸಿಡಿ ಪ್ರಕರಣದ ನಂತರ ಈ ಇಬ್ಬರ ಮೇಲೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹನಿಟ್ರ್ಯಾಪ್ ಮತ್ತು ಬ್ಲ್ಯಾಕ್ಮೇಲ್ ಆರೋಪ ಮಾಡಿದ್ದರು. ನಂತರದ ಬೆಳವಣಿಗೆಗಳಲ್ಲಿ ಇಬ್ಬರು ಆರೋಪಿಗಳು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.
ಇದೇ ವೇಳೆ, ರಮೇಶ್ ಜಾರಕಿಹೊಳಿ ಸಿಡಿ ಪ್ರಕಣದಲ್ಲಿ ಆರೋಪಿಯ ರಕ್ತ, ವೀರ್ಯ, ಉಗುರು, ಕೂದಲ ಸ್ಯಾಂಪಲ್ ಪಡೆದು ಸೂಕ್ತ ತನಿಖೆ ನಡೆಸಿಲ್ಲ ಎಂದು ಹೈಕೋರ್ಟ್‌ಗೆ ಯುವತಿ ಅರ್ಜಿ ಸಲ್ಲಿಸಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಸೂಕ್ತ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.
ಆರೋಪಿಯ ಸಮರ್ಪಕ ವೈದ್ಯಕೀಯ ಪರೀಕ್ಷೆ ನಡೆದಿಲ್ಲ. ಕೇವಲ ಬಿಪಿ, ಶುಗರ್ ಚೆಕ್ ಮಾಡಿದ್ದಾರೆ. ರಕ್ತ, ವೀರ್ಯ, ಉಗುರು, ಕೂದಲ ಸ್ಯಾಂಪಲ್ ಪಡೆದಿಲ್ಲ. ಇನ್ನು, SIT ಮುಖ್ಯಸ್ಥ ಸೌಮೇಂದು ಮುಖರ್ಜಿ ರಜೆಯಲ್ಲಿದ್ದಾರೆ. ಆರೋಪಿಗೆ ಗೃಹ ಸಚಿವರೊಂದಿಗೆ ಸಂಪರ್ಕವಿದೆ. ಹೀಗಾಗಿ ಸರ್ಕಾರ ನೇಮಿಸಿದ ತಂಡದಿಂದ ತನಿಖೆ ಸಾಧ್ಯವಿಲ್ಲ ಎಂದು ಸಿಡಿಯಲ್ಲಿರುವ ಯುವತಿ ತಮ್ಮ ಅರ್ಜಿಯಲ್ಲಿ ಹೈಕೋರ್ಟ್ ಗಮನ ಸೆಳೆದಿದ್ದಾರೆ.
ತನ್ಮೂಲಕ, ರಮೇಶ್ ಜಾರಕಿಹೊಳಿ ಸಿಡಿ ಕೇಸ್ನಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಎಸ್ಐಟಿ ತನಿಖೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಯುವತಿ ಎಸ್ಐಟಿ ತನಿಖೆ ರದ್ದುಪಡಿಸಲು ಕೋರಿದ್ದಾರೆ. ಎಸ್ಐಟಿ ರದ್ದುಪಡಿಸಿ ಹೊಸ ತಂಡ ರಚಿಸಲು ಮನವಿ ಮಾಡಿರುವ ಯುವತಿ ಈವರೆಗಿನ ಎಸ್ಐಟಿ ತನಿಖೆ ಪರಿಗಣಿಸದಂತೆಯೂ ಮನವಿ ಮಾಡಿಕೊಂಡಿದ್ದಾರೆ. ಅರ್ಜಿಯ ಫಲವಾಗಿ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರ ನ್ಯಾಯಪೀಠವು ಎಸ್ಐಟಿ, ಸರ್ಕಾರ, ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ.
(ramesh jarkiholi cd case naresh and shravan appear before sit officer in adugodi along with advocates) ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಕಿಂಗ್ಪಿನ್ಗಳಿಗೆ ಜಾಮೀನು ಸಿಕ್ಕರೂ ರಿಲೀಫ್ ಇಲ್ಲ; ನರೇಶ್ ಗೌಡ, ಶ್ರವಣ್‌ಗೆ ಬಂಧನ ಭೀತಿ ತಪ್ಪಿಲ್ಲ
Published On - 12:45 pm, Sat, 12 June 21