ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡುತ್ತಿರುವ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಂತ್ರಸ್ತ ಯುವತಿಗೆ ನೋಟಿಸ್ ನೀಡಿದ್ದಾರೆ. ಬೆಳಗ್ಗೆ 10 ಗಂಟೆಗೆ ಹಾಜರಾಗುವಂತೆ ರಮೇಶ್ ಜಾರಕಿಹೊಳಿಗೆ ಹಾಗೂ ಬೆಳಗ್ಗೆ 11 ಗಂಟೆಗೆ ಆಗಮಿಸುವಂತೆ ಸಂತ್ರಸ್ತ ಯುವತಿಗೆ ನೋಟಿಸ್ ನೀಡಲಾಗಿದೆ. ಆದರೆ, ಈ ವಿಚಾರಣೆಗೆ ರಮೇಶ್ ಜಾರಕಿಹೊಳಿ ಗೈರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಶ್ಲೀಲ ಸಿಡಿ ಬಹಿರಂಗವಾದ ನಂತರ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳದ ರಮೇಶ್ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿ ಇದ್ದುಕೊಂಡೇ ಪ್ರಕರಣದಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಯೋಜನೆ ರೂಪಿಸುತ್ತಿದ್ದಾರೆ. ಸದ್ಯ ಅನಾರೋಗ್ಯದ ನೆಪವನ್ನೂ ಒಡ್ಡಿರುವ ರಮೇಶ್ ಜಾರಕಿಹೊಳಿ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಂತೆಯೇ, ಇಂದು ಸಹ ಆರೋಗ್ಯ ಸಮಸ್ಯೆಯ ಕಾರಣ ನೀಡಿ, ವಕೀಲರ ಮೂಲಕ ಎಸ್ಐಟಿ ಅಧಿಕಾರಿಗಳಿಗೆ ಮನವಿ ಮಾಡಲು ನಿರ್ಧರಿಸಿರುವ ರಮೇಶ್ ಜಾರಕಿಹೊಳಿ ವಿಚಾರಣೆಯಿಂದ ವಿನಾಯಿತಿ ಪಡೆಯಲಿದ್ದಾರೆ ಎನ್ನಲಾಗಿದೆ.
ಹೀಗಾಗಿ ಇಂದು ವಿಚಾರಣೆಗೆ ರಮೇಶ್ ಜಾರಕಿಹೊಳಿ ಹಾಜರಾಗುವುದು ಬಹುತೇಕ ಅನುಮಾನವಾಗಿದ್ದು, ಕಳೆದ ಎಂಟು ದಿನಗಳಿಂದ ಸಂಪರ್ಕಕ್ಕೆ ಸಿಗದ ಅವರು ತಮ್ಮ ವಕೀಲರ ಜೊತೆ ಈ ಬಗ್ಗೆ ಈಗಾಗಲೇ ಸಮಾಲೋಚನೆ ನಡೆಸಿದ್ದಾರೆ.
ಇನ್ನೊಂದೆಡೆ, ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್ ಮಾಧ್ಯಮ ಪ್ರಕಟಣೆ ನೀಡಿದ್ದು, ಯುವತಿಯ ಪರ ವಕೀಲರು ಆಧಾರ ರಹಿತ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ಮೂಲಕ, ಎಸ್ಐಟಿ ತನಿಖಾಧಿಕಾರಿಗಳ ಮೇಲೆ ಒತ್ತಡ ಹೇರುವ ಯತ್ನ ಮಾಡಲಾಗುತ್ತಿದೆ. ತನಿಖೆಯ ದಾರಿ ತಪ್ಪಿಸುವ ಉದ್ದೇಶದಿಂದ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ರಮೇಶ್ ಪರ ವಕೀಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎಸ್ಐಟಿ ತನಿಖೆ ಮೇಲೆ ಯುವತಿ ಪರ ವಕೀಲರಿಂದ ಹಸ್ತಕ್ಷೇಪವಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಅಡ್ಡಿ ಮಾಡುವ ಯತ್ನ ನಡೆಯುತ್ತಿದೆ. ರಾಜಕಾರಣಿಗಳ ವಿರುದ್ಧ ಸಂಘಟಿತ ಅಪರಾಧ ನಡೆಯುತ್ತಿದೆ. ಅಂತಹವರ ವಿರುದ್ಧ ಕ್ರಮ ತಪ್ಪಿಸಲು ಯತ್ನವಾಗುತ್ತಿದೆ ಎಂದು ಶ್ಯಾಮ್ ಸುಂದರ್ ಆರೋಪಿಸಿದ್ದಾರೆ. ನನ್ನ ಕಕ್ಷಿದಾರ ರಮೇಶ್ ವಿರುದ್ಧದ ಆರೋಪಗಳು ಸುಳ್ಳು. ಯುವತಿ ಹಾಗೂ ಆಕೆಯ ಪರ ವಕೀಲರು ಹಸ್ತಕ್ಷೇಪ ಮಾಡುವುದು, ಸುಳ್ಳು ಹಾಗೂ ಆಧಾರ ರಹಿತ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಈ ಮೂಲಕ ತನಿಖೆಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:
ಯುವತಿ ಪರ ವಕೀಲರಿಂದ ಎಸ್ಐಟಿ ತನಿಖಾದಿಕಾರಿಗಳ ಮೇಲೆ ಒತ್ತಡ ಹೇರುವ ಯತ್ನ: ರಮೇಶ್ ಜಾರಕಿಹೊಳಿ ಪರ ವಕೀಲ ಶ್ಯಾಮ್ ಸುಂದರ್
ಮಾಜಿ ಸಚಿವರು ನನಗೆ ₹18 ಲಕ್ಷ ಮೌಲ್ಯದ ಆಭರಣ, ಮೊಬೈಲ್ ಹಾಗೂ ಎರಡು ಬ್ಯಾಗ್ ಬಟ್ಟೆ ಕೊಡಿಸಿದ್ದರು: ಸಂತ್ರಸ್ತ ಯುವತಿ