
ಬೆಂಗಳೂರು, ಜೂನ್ 30: ಸ್ವಪಕ್ಷದ ಶಾಸಕರಿಂದಲೇ ಭ್ರಷ್ಟಾಚಾರ ಆರೋಪ, ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳು, ಸಚಿವ ಕೆಎನ್ ರಾಜಣ್ಣ ಅವರ ‘ಸೆಪ್ಟೆಂಬರ್ ಕ್ರಾಂತಿ’ ಹೇಳಿಕೆಗಳಿಂದ ತಲ್ಲಣಗೊಂಡಿರುವ ಕರ್ನಾಟಕ ಕಾಂಗ್ರೆಸ್ (Karnataka Congress) ಆಂತರಿಕ ಗೊಂದಲಗಳಿಗೆ ತೆರೆ ಎಳೆಯಲು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Surjewala) ಇಂದು ಬೆಂಗಳೂರಿಗೆ ಬರುತ್ತಿದ್ದಾರೆ. ಮೂರು ದಿನಗಳ ಕಾಲ ರಾಜ್ಯ ರಾಜಧಾನಿಯಲ್ಲಿ ವಾಸ್ತವ್ಯ ಕೂಡಲಿರುವ ಅವರು, ಕಾಂಗ್ರೆಸ್ ಶಾಸಕರ ಜೊತೆ ಮುಖಾಮುಖಿ (ಒನ್ ಟು ಒವ್) ಸಭೆ ನಡೆಸಲಿದ್ದಾರೆ. ಶಾಸಕರ ಅಭಿಪ್ರಾಯ ಸಂಗ್ರಹಿಸಲಿರುವ ಅವರು ಹೈಕಮಾಂಡ್‌ಗೆ ರವಾನಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ, ಶಾಸಕರ ಬಳಿ ಸಮಾಲೋಚನೆ ನಡೆದಲು ಸುರ್ಜೇವಾಲ ಆರು ಪ್ರಶ್ನೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪ್ರಶ್ನೆಗಳ ಬಗ್ಗೆ ಶಾಸಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಅವುಗಳಿಗೆ ಸಮರ್ಪಕ ಮಾಹಿತಿ ಸಿದ್ಧ ಮಾಡಿ ಇಟ್ಟುಕೊಳ್ಳುವಂತೆಯೂ ಶಾಸಕರಿಗೆ ಸೂಚನೆ ನೀಡಲಾಗಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ.
ರಾಜ್ಯದ 10 ಜಿಲ್ಲೆಗಳ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಶಾಸಕರ ಜತೆ ಮಾತುಕತೆಗೆ ಸುರ್ಜೇವಾಲ ಸಮಯ ನಿಗದಿಪಡಿಸಿದ್ದಾರೆ ಎನ್ನಲಾಗಿದೆ.
ರಣದೀಪ್ ಸುರ್ಜೇವಾಲ ಶಾಸಕರ ಜತೆ ಒನ್ ಟು ಒನ್ ಮಾತುಕತೆಗೆ ಸಿದ್ಧರಾದ ಬೆನ್ನಲ್ಲೇ, ‘ಸೆಪ್ಟೆಂಬರ್ ಕ್ರಾಂತಿ’ಗೆ ವೇದಿಕೆ ಸಿದ್ಧವಾಗುತ್ತಿದೆಯಾ ಎಂಬ ಅನುಮಾನಗಳೂ ಮೂಡಿವೆ. ಸಂಪುಟ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ನಾಯಕತ್ವ ಬದಲಾವಣೆ ವಿಚಾರದಲ್ಲಿ ಮಾತ್ರ ಸ್ಪಷ್ಟತೆ ಇಲ್ಲ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಡಿಸಿಎಂ ಡಿಕೆ ಶಿವಕುಮಾರ್ ಮಾತ್ರ ಆಪ್ತ ಶಾಸಕರನ್ನು ಹುರಿಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಸುರ್ಜೇವಾಲಾ ಜತೆ ಮಾತುಕತೆಗೆ ಬರುವಂತೆ ತಾವೇ ಖುದ್ದಾಗಿ ಕರೆ ಮಾಡಿ ಶಾಸಕರಿಗೆ ಆಹ್ವಾನ ನೀಡುತ್ತಿದ್ದಾರೆ. ಕೆಲ ಆಪ್ತ ಶಾಸಕರಿಗೆ ಸಂದೇಶವನ್ನೂ ರವಾನಿಸಿದ್ದಾರೆ. ‘ಎಲ್ಲಿ ಏನು ಹೇಳಬೇಕೋ ಎಲ್ಲವನ್ನೂ ಹೇಳಿ’ ಎಂದು ಡಿಕೆ ಶಿವಕುಮಾರ್ ಆಪ್ತರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಗೊಂದಲ, ಬಿಕ್ಕಟ್ಟು ಶಮನಕ್ಕೆ ಇಂದು ಬೆಂಗಳೂರಿಗೆ ಸುರ್ಜೇವಾಲ
ಹೈಕಮಾಂಡ್ ಪ್ರಶ್ನೆಗಳನ್ನು ಹೊರತುಪಡಿಸಿ ಶಾಸಕರು ವೈಯಕ್ತಿಕ ಅಭಿಪ್ರಾಯವನ್ನೂ ಹಂಚಿಕೊಳ್ಳುವ ಸಾಧ್ಯತೆ ಇದೆ. ಶಾಸಕರ ಕಾರ್ಯಕ್ಷಮತೆ ಕೂಡ ಸುರ್ಜೆವಾಲಾ ಸಭೆಯಲ್ಲಿ ಪರಿಶೀಲನೆಗೆ ಒಳಪಡಲಿದೆ. ಪಕ್ಷ ಸಮರ್ಥಕರು ಯಾರು, ಪಕ್ಷದಿಂದ ಅಂತರ ಕಾಯ್ದುಕೊಳ್ಳುವವರು ಯಾರು ಎಂಬುದನ್ನೂ ಪರಿಗಣಿಸಿ ಸುರ್ಜೇವಾಲ ಚರ್ಚೆ ನಡೆಸಲಿದ್ದಾರೆ. ಮುಂದಿನ ನಾಯಕತ್ವದ ಬಗ್ಗೆಯೂ ಸುರ್ಜೇವಾಲ ಬಳಿ ವೈಯಕ್ತಿಕ ಅಭಿಪ್ರಾಯ ಹಂಚಿಕೊಳ್ಳಲು ಕೆಲ ಶಾಸಕರು ತಯಾರಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.