ರೈತರಿಂದ ಗ್ರಾಹಕರಿಗೆ ಸಹಜ, ಸಾವಯವ ಆಹಾರ ತಲುಪಿಸುವ ರಾ ಗ್ರಾನ್ಯುಲ್ಸ್; ಮಲೆನಾಡ ಮಣ್ಣಲ್ಲಿ ಹುಟ್ಟಿದ ಹೊಸ ಆನ್‌ಲೈನ್ ಮಾರುಕಟ್ಟೆ

Raw Granules: ಕೊರೊನಾ ಕಾಲದಲ್ಲಿ ಮತ್ತಷ್ಟು ಪ್ರಚಲಿತಕ್ಕೆ ಬಂದ ಆನ್​ಲೈನ್​ ಮಾರುಕಟ್ಟೆಯನ್ನೇ ಮುಖ್ಯ ವೇದಿಕೆಯಾಗಿಸಿಕೊಂಡು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಂಸಗಾರು ಗ್ರಾಮದ ಕಾರ್ತಿಕ್​ ಹಾಗೂ ತಲವಾಟ ಗ್ರಾಮದ ಪ್ರಶಾಂತ್ ಎಂಬುವವರು ಪಾರದರ್ಶಕ ಮಾರುಕಟ್ಟೆಯೊಂದನ್ನು ಹುಟ್ಟುಹಾಕಿ ರೈತರಿಗೆ ನ್ಯಾಯಯುತ ಲಾಭಾಂಶ ದೊರಕಿಸಿಕೊಡುವ ಪ್ರಯತ್ನ ಆರಂಭಿಸಿದ್ದಾರೆ.

ರೈತರಿಂದ ಗ್ರಾಹಕರಿಗೆ ಸಹಜ, ಸಾವಯವ ಆಹಾರ ತಲುಪಿಸುವ ರಾ ಗ್ರಾನ್ಯುಲ್ಸ್; ಮಲೆನಾಡ ಮಣ್ಣಲ್ಲಿ ಹುಟ್ಟಿದ ಹೊಸ ಆನ್‌ಲೈನ್ ಮಾರುಕಟ್ಟೆ
ರಾ ಗ್ರಾನ್ಯುಲ್ಸ್
Skanda

| Edited By: Apurva Kumar Balegere

Jun 15, 2021 | 2:49 PM

ಶಿವಮೊಗ್ಗ: ಕೊರೊನಾ ಆರಂಭವಾದ ನಂತರ ಆರೋಗ್ಯದ ಬಗ್ಗೆ ಜನರಿಗೆ ಕಾಳಜಿ ಸಹಜವಾಗಿಯೇ ಹೆಚ್ಚಿದೆ. ಫಾಸ್ಟ್​ಫುಡ್, ಕರಿದ ತಿನಿಸು, ಬೇಕರಿ ಐಟಂ ಎಂದು ಮುಗಿಬಿದ್ದು ತಿನ್ನುತ್ತಿದ್ದವರಲ್ಲಿ ಬಹುಪಾಲು ಮಂದಿ ನಾಲಿಗೆ ರುಚಿಗಿಂತ ಆರೋಗ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಟ್ಟು ಪಾರಂಪರಿಕ ಶೈಲಿ ಹಾಗೂ ರಾಸಾಯನಿಕ ಮುಕ್ತ ಆಹಾರ ಪದಾರ್ಥಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಸಾವಯವ ಕೃಷಿ ಹೆಸರಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳು ಲಾಭ ಗಿಟ್ಟಿಸಿಕೊಳ್ಳಲು ನುಗ್ಗುತ್ತಿರುವುದೇ ಹೆಚ್ಚಾಗಿದ್ದು ರೈತರಿಗೆ ಅದರಿಂದ ಸಿಗಬೇಕಾದ ನ್ಯಾಯಯುತ ಬೆಲೆ ಸಿಗುತ್ತಿಲ್ಲ. ಇದನ್ನು ಮನಗಂಡ ಮಲೆನಾಡಿನ ಕೃಷಿಕರಿಬ್ಬರು ರೈತರಿಂದಲೇ ನೇರವಾಗಿ ಉತ್ಪನ್ನ ಖರೀದಿಸಿ ಗ್ರಾಹಕರಿಗೆ ತಲುಪಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಕೊರೊನಾ ಕಾಲದಲ್ಲಿ ಮತ್ತಷ್ಟು ಪ್ರಚಲಿತಕ್ಕೆ ಬಂದ ಆನ್​ಲೈನ್​ ಮಾರುಕಟ್ಟೆಯನ್ನೇ ಮುಖ್ಯ ವೇದಿಕೆಯಾಗಿಸಿಕೊಂಡು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹಂಸಗಾರು ಗ್ರಾಮದ ಕಾರ್ತಿಕ್​ ಹಾಗೂ ತಲವಾಟ ಗ್ರಾಮದ ಪ್ರಶಾಂತ್ ಎಂಬುವವರು ಪಾರದರ್ಶಕ ಮಾರುಕಟ್ಟೆಯೊಂದನ್ನು ಹುಟ್ಟುಹಾಕಿ ರೈತರಿಗೆ ನ್ಯಾಯಯುತ ಲಾಭಾಂಶ ದೊರಕಿಸಿಕೊಡುವ ಪ್ರಯತ್ನ ಆರಂಭಿಸಿದ್ದಾರೆ.

ಆಹಾರ ಪದಾರ್ಥಗಳನ್ನು ಮಾರುಕಟ್ಟೆಯ ಬೆಲೆಗಿಂತ ಹೆಚ್ಚಿನ ಬೆಲೆಗೆ ರೈತರಿಂದ ಕೊಂಡು, ರೈತರ ಹಿತವನ್ನೂ ಕಾಪಾಡುವ ದೃಷ್ಟಿಯಿಂದ ಕಾರ್ತಿಕ್​ ಮತ್ತು ಪ್ರಶಾಂತ್ ಇಬ್ಬರೂ ಸೇರಿ ರಾ ಗ್ರಾನ್ಯುಲ್ಸ್ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ಪಾರದರ್ಶಕ ವ್ಯವಸ್ಥೆ ಮೂಲಕ ವಹಿವಾಟು ನಡೆಸಬೇಕು, ರೈತರಿಗೆ ಯಾವುದೇ ನಷ್ಟವಿಲ್ಲದೆ, ಮಧ್ಯವರ್ತಿಗಳ ತೊಂದರೆಯೂ ಇಲ್ಲದೇ, ಗ್ರಾಹಕರಿಗೂ ಹೊರೆಯಾಗದಂತೆ ಮಾರುಕಟ್ಟೆ ಸೃಷ್ಟಿಸಬೇಕೆಂಬುದು ರಾ ಗ್ರಾನ್ಯುಲ್ಸ್ ಸಂಸ್ಥೆಯ ಮೂಲ ಉದ್ದೇಶವಾಗಿದ್ದು, ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಯುವಕರು ಇಂಥದ್ದೊಂದು ದೊಡ್ಡ ಪ್ರಯತ್ನಕ್ಕೆ ಕೈ ಹಾಕಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ರಾ ಗ್ರಾನ್ಯುಲ್ಸ್

ರಾ ಗ್ರಾನ್ಯುಲ್ಸ್

ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಿ, ಪರಿಷ್ಕರಿಸಿ, ಉತ್ತಮ ಗುಣಮಟ್ಟದ ಪ್ಯಾಕಿಂಗ್ ಮಾಡಿ, ವೆಬ್​ಸೈಟ್​ ಮತ್ತು ಇತರೇ ಆನ್​ಲೈನ್​ ಮಾರುಕಟ್ಟೆಯ ಮುಖಾಂತರ ಜನತೆಗೆ ತಲುಪಿಸುವ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ. ಮಲೆನಾಡಿನಲ್ಲೇ ಆರಂಭವಾಗಿರುವ ಸ್ಟಾರ್ಟ್​ಅಪ್​ನ ಮುಖ್ಯ ಉದ್ದೇಶವೇ ಸ್ವಾಭಾವಿಕ ಆಹಾರ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಬೇಕು ಎನ್ನುವುದಾಗಿರುವ ಕಾರಣ ಯಾವುದೇ ರೀತಿಯ ಹೆಚ್ಚುವರಿ ಸಂಸ್ಕರಣೆಗೆ ಉತ್ಪನ್ನವನ್ನು ಒಳಪಡಿಸಲಾಗುತ್ತಿಲ್ಲ. ಯಾವುದೇ ರಾಸಾಯನಿಕಗಳಿಲ್ಲದೇ ಸಹಜ ಪದ್ಧತಿ ಅನುಸರಿಸುವ ಕಾರಣ ಉತ್ಪಾದನಾ ವೆಚ್ಚ ಕೊಂಚ ಹೆಚ್ಚಾಗಿದ್ದು, ಮೇಲ್ನೋಟಕ್ಕೆ ದುಬಾರಿ ಎನ್ನಿಸುವಂತಿದೆ. ಆದರೆ, ಇದರ ಗುಣಮಟ್ಟವು ಸಂಪೂರ್ಣ ಪ್ರಮಾಣೀಕರಿಸಲ್ಪಟ್ಟಿರುವುದರಿಂದ ಬೆಲೆಗೆ ಯೋಗ್ಯವಾದ ಆಹಾರವನ್ನೇ ಒದಗಿಸುತ್ತೇವೆ ಎಂಬುದು ರಾ ಗ್ರಾನ್ಯುಲ್ಸ್ ಸಂಸ್ಥಾಪಕರ ಅಂಬೋಣ.

ಕೆಂಪು ಅಕ್ಕಿ, ಕಾಡಿನ ಜೇನುತುಪ್ಪ, ಆರೋಗ್ಯ ವರ್ಧಕ ಪಾನೀಯಗಳು, ಬೆಲ್ಲ, ಕೊಬ್ಬರಿ ಎಣ್ಣೆ, ಉಪ್ಪಿನಕಾಯಿ, ಸಾಬೂನು, ಮಕ್ಕಳಿಗೆ ಹಚ್ಚಬಹುದಾದ ಎಣ್ಣೆ ಹಾಗೂ ವಿವಿಧ ಮಸಾಲಾ ಪದಾರ್ಥಗಳು ಇಲ್ಲಿ ಮಾರಾಟಕ್ಕಿವೆ. ಆಸಕ್ತರು ರಾ ಗ್ರಾನ್ಯಲ್ಸ್ ಪ್ರೈವೇಟ್ ಲಿಮಿಟೆಡ್, ತಲವಾಟ (ಅಂಚೆ), ಸಾಗರ (ತಾಲ್ಲೂಕು), ಶಿವಮೊಗ್ಗ (ಜಿಲ್ಲೆ) – 577421 ವಿಳಾಸವನ್ನು ಸಂಪರ್ಕಿಸಬಹುದು. ಅಥವಾ 73495 41756 / 9743502791 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು. ರಾ ಗ್ರಾನ್ಯಲ್ಸ್​ ವೆಬ್​ಸೈಟ್​ಗೆ ಭೇಟಿ ನೀಡಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ಉತ್ತಮ ನಾಳೆಗಾಗಿ ಇಂದು ಸುರಕ್ಷಿತವಾದ ಆಹಾರ ಸೇವಿಸಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada