
ದೇವನಹಳ್ಳಿ: ಕಂದಾಯ ಸಚಿವ ಸೇರಿದಂತೆ ಪೌರಾಡಳಿತ ಸಚಿವರು ಕಾರ್ಯ ನಿರ್ವಹಿಸುತ್ತಿರುವ ಮತ್ತು ಸಿಲಿಕಾನ್ ಸಿಟಿಗೆ ಹೊಂದಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರಿಗಾಗಿ ಹಾಹಾಕಾರ ಸೃಷ್ಟಿಯಾದರೂ ಜನಪ್ರತಿನಿಧಿಗಳು ಮಾತ್ರ ಯಾವುದೇ ರೀತಿಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೇಸಿಗೆಯ ಆರಂಭದಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲದಲ್ಲಿ ನೀರಿಗಾಗಿ ಹಾಹಾಕರ ಶುರುವಾಗಿದೆ. ಜತೆಗೆ ಕಿಲೋ ಮೀಟರುಗಟ್ಟಲೆ ನಡೆದುಕೊಂಡು ಹೋಗಿ ನೀರು ತರುವಂತ ದುಸ್ಥಿತಿ ಗ್ರಾಮೀಣ ಭಾಗದ ಜನರಿಗೆ ಎದುರಾಗಿದೆ. ಪ್ರತಿನಿತ್ಯ ನೀರು ತುಂಬಿಕೊಳ್ಳುವುದೇ ಇಲ್ಲಿನ ಜನರರಿಗೆ ದೊಡ್ಡ ಸಾಹಸವಾಗಿದೆ.
ನೀರಿನ ಅಭಾವ ಇರುವ ಬಗ್ಗೆ ಜನಪ್ರತಿನಿಧೀಗಳ ಮತ್ತು ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರು ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಮುಂದಾಗುತ್ತಿಲ್ಲ. ಹೀಗಾಗಿ ಜನ ಸೇರಿದಂತೆ ಜಾನುವಾರುಗಳು ನೀರಿಲ್ಲದೆ ಪರದಾಡುತ್ತಿವೆ ಎಂದು ಗೃಹಿಣಿ ಮುನಿರತ್ನಮ್ಮ ಅಳಲು ತೋಡಿಕೊಂಡಿದ್ದಾರೆ.

ನೀರಿಗಾಗಿ ಕಾದು ಕುಳಿತಿರುವ ಗ್ರಾಮಸ್ಥರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 330 ಹಳ್ಳೀಗಳಲ್ಲಿ ಈಗಾಗಲೇ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಜತೆಗೆ ಜಿಲ್ಲೆಯಲ್ಲಿನ ನೀರಿನ ಸಮಸ್ಯೆ ಕುರಿತು ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಸರ್ವೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಸರ್ಕಾರಕ್ಕೆ 30 ಕೋಟಿಯ ಅಂದಾಜು ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ ಜಿಲ್ಲೆಯಲ್ಲಿ ಆಡಳಿತ ಸರ್ಕಾರದ ಶಾಸಕರಿಲ್ಲ ಎಂದು ಜಿಲ್ಲೆಯನ್ನ ಕಡೆಗಣಿಸಿದ್ದು, 30 ಕೋಟಿ ಹಣಕ್ಕೆ ಬದಲಾಗಿ ತಾಲೂಕಿಗೆ 50 ಲಕ್ಷದಂತೆ ನಾಲ್ಕು ತಾಲೂಕುಗಳಿಗೆ ಕೇವಲ 2 ಕೋಟಿ ನೀಡಿದ್ದಾರೆ. ಹೀಗಾಗಿ ಜನ ಜಾನುವಾರುಗಳ ನೀರಿನ ಬವಣೆ ನೀಗಿಸಲು ಆಗದೆ ಅಧಿಕಾರಿಗಳು, ಜನಪ್ರತಿನಿಧಿಗಳು ಪರದಾಡುತ್ತಿದ್ದಾರೆ .ಇದೇ ರೀತಿ ಮುಂದುವರೆದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಜನಪ್ರತಿನಿಧೀಗಳು ಒಂದಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿ.ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಕಿಲೋ ಮೀಟರುಗಟ್ಟಲೆ ನಡೆದುಕೊಂಡು ಹೋಗಿ ನೀರು ತರಬೇಕಾದ ದುಸ್ಥಿತಿ
ಒಟ್ಟಾರೆ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನದಿಂದ ಗ್ರಾಮಸ್ಥರು ಕಂಗಲಾಗಿದ್ದು, ಜನ -ಜಾನುವಾರುಗಳು ಕುಡಿಯುವ ನೀರಿಗೂ ಪರದಾಡುವಂತಾಗಿರುವುದು ನಿಜಕ್ಕೂ ವಿಪರ್ಯಾಸ. ಇನ್ನಾದರೂ ಸರ್ಕಾರ ಮತ್ತು ಸಚಿವರು ಎಚ್ಚೆತ್ತು ಜಿಲ್ಲೆಯಲ್ಲಿನ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿದೆ.
ಇದನ್ನೂ ಓದಿ:
ಯೂರಿಯಾ ಮಿಶ್ರಿತ ನೀರು ಕುಡಿದು 4 ಎತ್ತು, ಒಂದು ಜಿಂಕೆ ಸಾವು; ಕಿಡಿಗೇಡಿಗಳ ಕೃತ್ಯಕ್ಕೆ ಮೂಕಪ್ರಾಣಿಗಳು ಬಲಿ