
ಬೆಂಗಳೂರು, ಜುಲೈ 01: ರಾಜ್ಯದಲ್ಲಿ ಉಂಟಾಗಿರುವ ಮಳೆ (Rain) ಕೊರತೆ ಹಾಗೂ ಕಚ್ಚಾ ವಸ್ತುಗಳ ಅಭಾವದಿಂದಾಗಿ ಅಕ್ಕಿ (Rice) ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ತಿಂಗಳಷ್ಟೇ ಪ್ರತಿ ಕೆಜಿ ಅಕ್ಕಿ ಬೆಲೆಯಲ್ಲಿ 3 ರಿಂದ 5 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಆದರೆ, ಇಂದಿನಿಂದ ಅಕ್ಕಿ ದರ ಮತ್ತೊಮ್ಮೆ ಏರಿಕೆಯಾಗಿದ್ದು, ಸಾಮಾನ್ಯ ತಳಿಯ ಅಕ್ಕಿ ಬೆಲೆ ಕೆಜಿಗೆ 5 ರೂ ಹಾಗೂ ಗುಣಮಟ್ಟದ ಅಕ್ಕಿ ಬೆಲೆ ಕೆಜಿಗೆ 10 ರೂಪಾಯಿಯಷ್ಟು ದುಬಾರಿಯಾಗಿದೆ.
ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಸಾಮಾನ್ಯ ಅಕ್ಕಿ ಚೀಲದ (ಕ್ವಿಂಟಾಲ್/ಮೂಟೆ) ಮೇಲೆ 130 ರೂಪಾಯಿ ಹಾಗೂ ಗುಣಮಟ್ಟದ ಅಕ್ಕಿ ಚೀಲದ ಮೇಲೆ 260 ರೂಪಾಯಿವರೆಗೆ ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹೊಸ ಅಕ್ಕಿಯ ದರ ಇಂದಿನಿಂದಲೇ ಜಾರಿಗೆ ಬಂದಿದ್ದು, ಹೋಲ್‌ಸೇಲ್ ದರದಲ್ಲಿ ಕೆಜಿಗೆ 5 ರಿಂದ 10 ರೂ ಏರಿಕೆಯಾಗಿದ್ದರೆ, ಚಿಲ್ಲರೆ ಮಾರುಕಟ್ಟೆಗೆ ತಲುಪುವಷ್ಟರಲ್ಲಿ ಗ್ರಾಹಕರಿಗೆ ಪ್ರತಿ ಕೆಜಿಗೆ 15 ರಿಂದ 20 ರೂಪಾಯಿಯಷ್ಟು ಹೊರೆ ಬೀಳಲಿದೆ.
ಇನ್ನು ಜುಲೈ ಎರಡನೇ ವಾರದಲ್ಲಿ ಅಕ್ಕಿ ದರ ಮತ್ತೊಮ್ಮೆ ಹೆಚ್ಚಾಗಲಿದೆ ಎಂದು ಹೋಲ್‌ಸೇಲ್ ವ್ಯಾಪಾರಿಗಳು ಮುನ್ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಮುಂಗಾರು ಮಳೆ ಸರಿಯಾಗಿ ಆಗದಿರುವುದು ಮತ್ತು ಜಲಾಶಯಗಳಲ್ಲಿ ನೀರಿನ ಕೊರತೆಯಿಂದಾಗಿ ಭತ್ತದ ಇಳುವರಿ ಕುಸಿದಿರುವುದು ಈ ಸತತ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ರಫ್ತು ಪ್ರಕ್ರಿಯೆಯೂ ಈ ಬೆಲೆ ಏರಿಕೆಗೆ ಮತ್ತೊಂದು ಪ್ರಮುಖ ಕಾರಣವಾಗಿದೆ.
ಪ್ರಸ್ತುತ ಭಾರತದಿಂದ ಶ್ರೀಲಂಕಾಕ್ಕೆ ಭಾರಿ ಪ್ರಮಾಣದಲ್ಲಿ ಅಕ್ಕಿ ಸರಬರಾಜಾಗುತ್ತಿದ್ದು, ಅಲ್ಲಿಂದ ಅದು ಬೇರೆ ಬೇರೆ ದೇಶಗಳಿಗೆ ಮರು ರಫ್ತಾಗುತ್ತಿದೆ. ಇದರಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ, ಪ್ರಮುಖವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ಕಿಯ ತೀವ್ರ ಕೊರತೆ ಎದುರಾಗಿದೆ. ಈ ಕುರಿತು ಆತಂಕ ವ್ಯಕ್ತಪಡಿಸಿರುವ ಗ್ರಾಹಕರು, ಅಕ್ಕಿ ಮೂಟೆಯೊಂದಕ್ಕೆ ಈಗಾಗಲೇ 250 ರಿಂದ 300 ರೂಪಾಯಿವರೆಗೆ ಹೆಚ್ಚುವರಿ ಹಣ ನೀಡಬೇಕಾಗಿ ಬಂದಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮತ್ತೊಂದು ಬೆಲೆ ಏರಿಕೆ ಬಿಸಿ: ಗ್ಯಾಸ್ ಬೆನ್ನಲ್ಲೇ ಗಗನಕ್ಕೇರಿದ ಅಕ್ಕಿ ದರ, ಕೆಜಿಗೆ 10 ರಿಂದ 20 ರೂ. ಹೆಚ್ಚಳ
ಕೇವಲ ಎರಡು ತಿಂಗಳ ಅವಧಿಯಲ್ಲಿ ಎರಡು ಬಾರಿ ದರ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗಲಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.