AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾ ರೀತಿ ಪ್ರಧಾನಿ ಮೋದಿ ಮನೆಗೆ ಜನ ನುಗ್ಗುವ ದಿನ ದೂರವಿಲ್ಲ: ಕಾಂಗ್ರೆಸ್ ಶಾಸಕ ಜಿಎಸ್ ಪಾಟೀಲ್

ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟ ರಾಜ್ಯಪಾಲರಿಗೆ ಬಾಂಗ್ಲಾದೇಶದ ಪ್ರಧಾನಿಗೆ ಆದ ಗತಿಯಾಗಲಿದೆ ಎಂದು ಕಾಂಗ್ರೆಸ್ ಎಂಎಲ್​ಸಿ ಐವನ್ ಡಿ ಸೋಜಾ ಹೇಳಿದ್ದು ಕರ್ನಾಟಕದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ರೋಣ ಕಾಂಗ್ರೆಸ್ ಶಾಸಕ ಪ್ರಧಾನಿ ಮೋದಿಯವರನ್ನು ಉದ್ದೇಶಿಸಿ ಅಂಥದ್ದೇ ಹೇಳಿಕೆ ನೀಡಿದ್ದಾರೆ. ಜಿಎಸ್ ಪಾಟೀಲ್ ಹೇಳಿಕೆಯ ವಿವರ ಹಾಗೂ ವಿಡಿಯೋ ಇಲ್ಲಿದೆ.

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Ganapathi Sharma|

Updated on: Aug 28, 2024 | 1:45 PM

Share

ಗದಗ, ಆಗಸ್ಟ್ 28: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತು ನಮ್ಮ ನಮ್ಮ ವಿರುದ್ಧ ಹುನ್ನಾರ ಮಾಡುತ್ತಿದ್ದಾರೆ. ಅವರು ಮೊದಲಿನಿಂದಲೂ ಇದೇ ರೀತಿ ಮಾಡುತ್ತಾ ಬಂದಿದ್ದಾರೆ. ಇದೇ ರೀತಿ ಮುಂದುವರಿದರೆ, ಯಾವರೀತಿ ಬಾಂಗ್ಲಾ ದೇಶದಲ್ಲಿ ಜನ ಪ್ರಧಾನಿ ಮನೆ ಹೊಕ್ಕರೋ ಅದೇ ರೀತಿ ನಮ್ಮ ದೇಶದಲ್ಲೂ ಪ್ರಧಾನಿ ಮನೆಗೆ ನುಗ್ಗುವ ದಿನ ದೂರವಿಲ್ಲ ಎಂದು ರೋಣ ಕಾಂಗ್ರೆಸ್ ಶಾಸಕ ಜಿಎಸ್ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗಜೇಂದ್ರಗಡದಲ್ಲಿ ನಡೆದ ಅಹಿಂದ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಕೇಂದ್ರ ಸರ್ಕಾರ, ಮೋದಿ ಹಾಗೂ ಅಮಿತ್ ಶಾ ಅವರನ್ನು ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜಿಎಸ್ ಪಾಟೀಲ್ ಹೇಳಿದ್ದೇನು?

ನಾವೆಲ್ಲರೂ ಒಂದಾಗಬೇಕು, ಗಟ್ಟಿಯಾಗಬೇಕು. ಧ್ವನಿಗಟ್ಟಿಗೊಳಿಸಬೇಕು. ನಮ್ಮ ಹೋರಾಟ ಮುಂದುವರೆಯಬೇಕು. ಸಿದ್ದರಾಮಯ್ಯ, ಕಾಂಗ್ರೆಸ್ ವಿರುದ್ಧ ಬಿಜೆಪಿ ಹುನ್ನಾರ ಮಾಡಿದೆ. ಸಿದ್ದರಾಮಯ್ಯಗೆ ಈ ಸ್ಥಿತಿ ಬರಲು ಅವರೇ (ಅಮಿತ್ ಶಾ) ಕಾರಣ. ಅವರು ರಾಜಕೀಯ ಜೀವನದ ಉದ್ದಕ್ಕೂ ಅಂಥದ್ದನ್ನೇ ಮಾಡಿಕೊಂಡು ಬಂದವರು. ಅಂಥವರ ಕೈಗೆ ನಾವು ದೇಶ ಕೊಟ್ಟಿದ್ದೇವೆ. ಈ ದೇಶ ಯಾವ ರೀತಿ ಮುನ್ನಡೆಯಬೇಕು ಎಂಬ ಬಗ್ಗೆ ನಾವು ಯೋಚಿಸಬೇಕು. ಬಾಂಗ್ಲಾದೇಶದಲ್ಲಿ ಜನ ಪ್ರಧಾನಿ ಮನೆಗೆ ಹೊಕ್ಕಂತೆ ಈ ದೇಶದಲ್ಲಿಯೂ ನುಗ್ಗುವ ದಿನ ಬಹಳ ದೂರ ಇಲ್ಲ. ಅದಕ್ಕೇ ಹೇಳುತ್ತಿದ್ದೇನೆ, ನಾವೆಲ್ಲ ಒಂದಾಗಬೇಕು. ಗಟ್ಟಿಯಾಗಬೇಕು. ನಮ್ಮ ಧ್ವನಿ ಗಟ್ಟಿಯಾಗಬೇಕು, ನಮ್ಮ ಹೋರಾಟ ಮುಂದುವರಿಯಬೇಕು ಎಂದು ಅವರು ಹೇಳಿದ್ದಾರೆ.

ವ್ಯಾಪಕ ವಿರೋಧ

ಜಿಎಸ್ ಪಾಟೀಲ್ ವಿವಾದಾತ್ಮಕ ಹೇಳಿಕೆಗೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಪಾಟೀಲ್ ಹೇಳಿಕೆಗೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಹಾಗೂ ಶಾಸಕರ ಬುದ್ಧಿಯೇ ಅಷ್ಟೆ ಎಂದು ಅವರು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರು, ಶಾಸಕರಿಗೆ ಜಾಸ್ತಿ ತಿಳವಳಿಕೆ ಇಲ್ಲ. ಚುನಾವಣೆಯಲ್ಲಿ ಗೆದ್ದು ಬಂದಿದ್ದಕ್ಕೆ ದೊಡ್ಡವರು ಎಂದು ತಿಳಿದುಕೊಂಡಿದ್ದಾರೆ. ರಾಜ್ಯವನ್ನು ಹದೆಗೆಡಿಸಿದ್ದಾರೆ, ಒಂದೂ ಅಭಿವೃದ್ಧಿ ಕೆಲಸ ಮಾಡಿಲ್ಲ ಏನಿಲ್ಲಾ. ಸುಡಗಾಡು ಅದೂ ಇದೂ ಕೊಡುತ್ತೇನೆಂದು ಜನರ ತಲೆ ಕೆಡಿಸಿ ಅಧ್ವಾನಕ್ಕೆ ತಂದಿಟ್ಟಿದ್ದಾರೆ. ಸಿದ್ದರಾಮಯ್ಯ ಈಗಾ ಅಹಿಂದ ಎಂದು ಹೇಳುತ್ತಿರುವುದು ತಪ್ಪು ಎಂದು ಜಿಗಜಿಣಗಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ವಿರುದ್ಧ ಸಿಡಿದೆದ್ದ ಬಿಜೆಪಿ: ಸಂಕಷ್ಟಕ್ಕೆ ಸಿಲುಕಿದ ಐವನ್ ಡಿಸೋಜಾ, ಪೊಲೀಸರು

ರೋಣ ಶಾಸಕ ಕಾಂಗ್ರೆಸ್ ಜಿಎಸ್ ಪಾಟೀಲ್ ಬಾಂಗ್ಲಾ ದೇಶದಂತೆ ಜನರು ದಂಗೆ ಏಳುತ್ತಾರೆಂದು ಹೇಳಿದ್ದು ಸರಿಯಲ್ಲ. ಬಾಂಗ್ಲಾ ದೇಶದ ಪರಿಸ್ಥಿತಿ ಮೋದಿಗೆ ಆಗಲು ಸಾಧ್ಯವಿಲ್ಲ. ಅದೇನಾದರೂ ಆದರೆ, ಅದು ಕಾಂಗ್ರೆಸ್​​​ಗೆ ಆಗಬೇಕಷ್ಟೆ ಎಂದು ರಮೇಶ ಜಿಗಜಿಣಗಿ ತಿರುಗೇಟು ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ