ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ವಿರುದ್ಧ ಸಿಡಿದೆದ್ದ ಬಿಜೆಪಿ: ಸಂಕಷ್ಟಕ್ಕೆ ಸಿಲುಕಿದ ಐವನ್ ಡಿಸೋಜಾ, ಪೊಲೀಸರು
ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. 24 ಗಂಟೆಯಲ್ಲಿ ಎಫ್ಐಆರ್ ದಾಖಲಿಸುವಂತೆ ಗಡುವು ನೀಡಲಾಗಿದೆ. ಹೀಗಾಗಿ ಸದ್ಯ ಐವನ್ ಡಿಸೋಜಾ ಮತ್ತು ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಂಗಳೂರು, ಆಗಸ್ಟ್ 21: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ರಾಜ್ಯಪಾಲರ ಥಾಮರ್ ಚಂದ್ ಗೆಹಲೋತ್ ವಿರುದ್ಧ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾ (Ivan dsouza) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತಾಗಿ ಬಿಜೆಪಿ ದೂರು ಕೂಡ ನೀಡಿದೆ. ಆದರೂ ಐವನ್ ಡಿಸೋಜಾ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ. ಇದೀಗ ಎಸಿಬಿ ಪ್ರತಾಪ ಸಿಂಹ ಥೋರಟ್ ಜತೆ ಚರ್ಚಿಸಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು, ಮತ್ತೆ 24 ಗಂಟೆ ಗಡುವು ನೀಡಿದ್ದಾರೆ. ಆ ಮೂಲಕ ಕೊನೆ ಕ್ಷಣದಲ್ಲಿ ಮುತ್ತಿಗೆ ನಿರ್ಧಾರ ಕೈಬಿಟ್ಟಿದ್ದಾರೆ.
ನಾಳೆ ಸಂಜೆಯೊಳಗೆ ಎಫ್ಐಆರ್ ದಾಖಲು ಮಾಡುವಂತೆ ಆಗ್ರಹಿಸಿದ್ದು, ಒಂದು ವೇಳೆ ದಾಖಲು ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬಾಂಗ್ಲಾ ಪ್ರಧಾನಿಗೆ ಬಂದ ಸ್ಥಿತಿ ರಾಜ್ಯಪಾಲರಿಗೂ ಬರಬಹುದು: ಕಾಂಗ್ರೆಸ್ MLC ಹೇಳಿಕೆಗೆ ಭುಗಿಲೆದ್ದ ಆಕ್ರೋಶ
ಮುತ್ತಿಗೆ ಕರೆ ಹಿನ್ನೆಲೆ ಬರ್ಕೆ ಪೊಲೀಸ್ ಠಾಣೆ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಕೆಎಸ್ ಆರ್ಪಿ, ಸಿಎಆರ್ ಸೇರಿದಂತೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಐವನ್ ಡಿಸೋಜಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಎರಡು ದಿನದ ಹಿಂದೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ದೂರು ನೀಡಿದ್ದರು.
ಇದನ್ನೂ ಓದಿ: ಕುಮಾರಸ್ವಾಮಿ ಅರೆಸ್ಟ್ಗೆ ನೂರು ಸಿದ್ದರಾಮಯ್ಯ ಅಲ್ಲ, ಒಬ್ಬ ಕಾನ್ಸ್‌ಟೇಬಲ್ ಸಾಕು: ಸಿಎಂ ತಿರುಗೇಟು
ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸರು ಹಿಂಬರಹ ನೀಡಿದ್ದರು. ಎಫ್ಐಆರ್ ದಾಖಲಿಸಲು ಬಿಜೆಪಿ ಯುವ ಮೋರ್ಚಾ ಒಂದು ದಿನದ ಗಡುವು ನೀಡಿತ್ತು. ಸದ್ಯ ಎಫ್ಐಆರ್ ದಾಖಲು ಮಾಡದ ಹಿನ್ನೆಲೆ ಪೊಲೀಸ್ ಠಾಣೆಗೆ ಮುತ್ತಿಗೆ ಕರೆ ನೀಡಲಾಗಿತ್ತು.
ಐವನ್ ಡಿಸೋಜಾ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಮಂಗಳೂರಿನ ಲಾಲ್ ಬಾಗ್ ವೃತ್ತದಲ್ಲಿ ನಡೆದಿದ್ದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ್ದ ಐವನ್ ಡಿಸೋಜಾ, ಬಾಂಗ್ಲಾದೇಶದ ಹಿಂದಿನ ಪ್ರಧಾನಿಗೆ ಆದ ಗತಿಯೇ ನಿಮಗೂ ಆಗುತ್ತದೆ. ನೀವು ರಾಜ್ಯ ಬಿಟ್ಟು ಪಲಾಯನ ಮಾಡಬೇಕಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:55 pm, Wed, 21 August 24