ಚಿಕ್ಕಮಗಳೂರು: ಆತ್ಮಹತ್ಯೆಗೆ ಶರಣಾಗಿರುವ ವಿಧಾನ ಪರಿಷತ್ ಉಪಸಭಾಪತಿ S.L.ಧರ್ಮೇಗೌಡ ಅಂತ್ಯಕ್ರಿಯೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸರಪನಹಳ್ಳಿ ನೆರವೇರಿತು. ತಂದೆ ಚಿತೆಗೆ ಪುತ್ರ ಎಸ್.ಡಿ.ಸೋನಾಲ್ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಅವರು ಪಂಚಭೂತಗಳಲ್ಲಿ ಲೀನವಾದರು.
ಅಂತ್ಯಸಂಸ್ಕಾರಕ್ಕೂ ಮುನ್ನ ಸಖರಾಯಪಟ್ಟಣದ ಕಾಲೇಜು ಆವರಣದಲ್ಲಿ ಧರ್ಮೇಗೌಡರಿಗೆ ಸರ್ಕಾರಿ ಗೌರವ ಸಲ್ಲಿಸಲಾಯಿತು. ಈ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಜರಿದ್ದರು. ಧರ್ಮೇಗೌಡರಿಗೆ ಗಣ್ಯಾತಿಗಣ್ಯರು, ಮಠಾಧೀಶರು, ಕುಟುಂಬ ಸದಸ್ಯರು, ಬಂಧುಗಳು, ಗ್ರಾಮಸ್ಥರ ಅಶ್ರುತರ್ಪಣ ಅರ್ಪಿಸಿದರು. ಇನ್ನು ಅಂತ್ಯ ಸಂಸ್ಕಾರದ ವೇಳೆ ಅಪಾರ ಸಂಖ್ಯೆಯಲ್ಲಿ ಸಂಬಂಧಿಕರು, ಬಂಧುಗಳು ನೆರೆದಿದ್ದರು.
ಆತ್ಮಹತ್ಯೆಗೆ ಶರಣಾಗಿದ್ದ ಧರ್ಮೇಗೌಡ H.D.ಕುಮಾರಸ್ವಾಮಿ ಆಪ್ತರಾಗಿದ್ದ ಎಸ್.ಎಲ್.ಧರ್ಮೇಗೌಡ. ಗನ್‌ಮ್ಯಾನ್, ಎಸ್ಕಾರ್ಟ್ ಸಿಬ್ಬಂದಿ ಮನೆಗೆ ಕಳುಹಿಸಿ ಸೋಮವಾರ ಸಂಜೆ ವೇಳೆಗೆ ತಮ್ಮ ಡ್ರೈವರ್ ಜತೆ ಕಾರಿನಲ್ಲಿ ಸಖರಾಯಪಟ್ಟಣದ ಮನೆಯಿಂದ ಗುಣಸಾಗರಕ್ಕೆ ಬಂದಿದ್ದರು.
ಬಳಿಕ ರೈಲು ಹಳಿ ಬಳಿ ಕಾರು ನಿಲ್ಲಿಸಲು ಕಾರು ಚಾಲಕನಿಗೆ ಸೂಚಿಸಿದ್ದರು. ನನಗೆ ಒಬ್ಬರ ಜೊತೆ ಖಾಸಗಿಯಾಗಿ ಮಾತನಾಡಬೇಕು. ನೀನು ಹೋಗು ಎಂದು ಚಾಲಕನನ್ನು ಮನೆಗೆ ಕಳುಹಿಸಿದ್ದಾರೆ. ನಂತರ ಕಡೂರಿನ ವ್ಯಕ್ತಿಗೆ ಕರೆ ಮಾಡಿ ಜನಶತಾಬ್ಧಿ ರೈಲು ಬರುವ ಸಮಯವನ್ನು ವಿಚಾರಿಸಿದ್ದಾರೆ. ಬಳಿಕ ತಮ್ಮ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡು ಚಲಿಸುವ ರೈಲಿಗೆ ತಲೆ ಕೊಟ್ಟಿದ್ದಾರೆ. ರಾತ್ರಿ 10 ಗಂಟೆಯಾದರೂ ಅವರು ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಧರ್ಮೇಗೌಡ ಅವರಿಗಾಗಿ ಹುಡುಕಾಟ ಶುರುವಾಗಿತ್ತು. ಈ ವೇಳೆ ಗುಣಸಾಗರ ಬಳಿ ತಡರಾತ್ರಿ 1.30ರ ಸುಮಾರಿಗೆ ಧರ್ಮೇಗೌಡರ ಮೃತದೇಹ ಪತ್ತೆಯಾಗಿತ್ತು.
ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ವಿಧಾನ ಪರಿಷತ್ ಉಪ ಸಭಾಪತಿ ಎಸ್ ಎಲ್ ಧರ್ಮೇಗೌಡ