ಸಕಾಲ ಸಪ್ತಾಹ ಉದ್ಘಾಟಿಸಿದ ಸಚಿವ ಸುರೇಶ್ ಕುಮಾರ್: ಸದ್ಬಳಕೆಗೆ ಸೂಚನೆ
ನಗರಾಭಿವೃದ್ಧಿ, ಕಂದಾಯ, ಸಾರಿಗೆ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಗಳಲ್ಲಿ ನವೆಂಬರ್ 30 ರಿಂದ ಡಿಸೆಂಬರ್ 5 ರವರೆಗೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಡಿಸೆಂಬರ್ 7 ರಿಂದ 11 ರವರೆಗೆ ಸಕಾಲ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರು: ಸಕಾಲ ಯೋಜನೆಯಡಿ ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಗಳ ತ್ವರಿತ ವಿಲೇವಾರಿ ಮತ್ತು ಯೋಜನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲೆಂದು ಸಕಾಲ ಸಪ್ತಾಹ ಆಯೋಜಿಸಲಾಗಿದೆ ಎಂದು ಸಚಿವ ಎಸ್.ಸುರೇಶ್ಕುಮಾರ್ ಹೇಳಿದರು.
ವಿಡಿಯೊ ಕಾನ್ಫರೆನ್ಸ್ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನವೆಂಬರ್ 30 ರಿಂದ ಡಿಸೆಂಬರ್ 5 ರವರೆಗೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಡಿಸೆಂಬರ್ 7 ರಿಂದ 11 ರವರೆಗೆ ಸಕಾಲ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ನಗರಾಭಿವೃದ್ಧಿ, ಕಂದಾಯ, ಸಾರಿಗೆ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಗಳಲ್ಲಿ ಹೊಸದಾಗಿ ಸ್ವೀಕರಿಸಿರುವ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸಿ ನಿಗದಿತ ಕಾಲಮಿತಿಯಲ್ಲಿ ವಿಲೇವಾರಿ ಮಾಡುವುದು, ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಿಗೆ ಮಾಹಿತಿ ನೀಡುವುದು, ಸಕಾಲ ತಂಡದಿಂದ ಕಚೇರಿಗಳ ಭೇಟಿ ಹಾಗೂ ತಪಾಸಣೆ, ಹೆಲ್ಫ್ ಡೆಸ್ಕ್ ಸಹಾಯದೊಂದಿಗೆ ಪ್ರಶ್ನಾವಳಿಯನ್ನು ಸಾರ್ವಜನಿಕರಿಂದ ಭರ್ತಿ ಮಾಡಿಸುವುದು ಸಪ್ತಾಹದ ಪ್ರಮುಖ ಅಂಶಗಳು ಎಂದು ತಿಳಿಸಿದರು.
ಸಕಾಲ ಯೋಜನೆಯನ್ನು ಏಪ್ರಿಲ್ 02, 2012 ರಂದು 11 ಇಲಾಖೆಗಳ 151 ಸೇವೆಗಳೊಂದಿಗೆ ರಾಜ್ಯಾದಂತ ಪ್ರಾರಂಭಿಸಲಾಗಿದೆ. ಪ್ರಸ್ತುತ 98 ಇಲಾಖೆಗಳ 1,025 ಸೇವೆಗಳನ್ನು ಈ ವ್ಯಾಪ್ತಿಗೆ ತರಲಾಗಿದೆ ಎಂದು ಹೇಳಿದರು.
ಅಕ್ಟೋಬರ್ 2020ರಲ್ಲಿ ನಡೆಸಲಾದ ಮಾಸಿಕ ವಿಶ್ಲೇಷಣೆಯಲ್ಲಿ ನಿಗದಿತ ಸಮಯದಲ್ಲಿ ವಿಲೇವಾರಿ, ಅರ್ಜಿಗಳ ಸ್ವೀಕೃತಿಯ ಹೆಚ್ಚಳ ಹಾಗೂ ಉತ್ತಮ ಪ್ರದರ್ಶನ ನೀಡಿದ ಮಂಡ್ಯ, ಚಿಕ್ಕಮಗಳೂರು ಹಾಗೂ ಚಿಕ್ಕಬಳ್ಳಾಪುರಗಳಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ನೀಡಲಾಗಿದೆ ಎಂದು ತಿಳಿಸಿದರು.
ಸಚಿವರು ಇದೇ ಸಮಯದಲ್ಲಿ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ವಿಡಿಯೊ ಕಾನ್ಫರೆನ್ಸ್ ಮೂಲಕ ಉತ್ತಮ ಸಾಧನೆಯ ಜಿಲ್ಲೆಗಳಿಗೆ ಶುಭಾಶಯ ಕೋರಿ, ಉಳಿದ ಜಿಲ್ಲೆಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಕಡೆಯ ಸ್ಥಾನದಲ್ಲಿ ಬೆಂಗಳೂರು ನಗರ ಜಿಲ್ಲೆ ಇದ್ದು, ಮುಂಬರುವ ದಿನಗಳಲ್ಲಿ ಇದು ಸುಧಾರಣೆ ಕಂಡುಕೊಳ್ಳಬೇಕೆಂದರು. ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳಲ್ಲಿ ಸಕಾಲಕ್ಕಾಗಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರತಿ ಕಚೇರಿಯಲ್ಲಿ ಸಕಾಲದ ಕುರಿತು ಫಲಕಗಳನ್ನು ಅಳವಡಿಸಬೇಕು ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಟಿ.ಎಂ.ವಿಜಯಭಾಸ್ಕರ್ ಮಾತನಾಡಿ, ಸಕಾಲ ಅರ್ಜಿಗಳ ವಿಲೇವಾರಿ ಮಾಡುವಲ್ಲಿ ಯಾವ ಇಲಾಖೆಗಳೂ ವಿಳಂಬ ಧೋರಣೆ ತೋರಬಾರದು. ಸಕಾಲದಡಿ 1,813 ಮೇಲ್ಮನವಿ ಅರ್ಜಿಗಳು ಬಾಕಿ ಉಳಿದಿದ್ದು, ಕಾಯ್ದೆಯಡಿ ದಂಡ ವಿಧಿಸಲು ಅವಕಾಶವಿರುತ್ತದೆ ಎಂದು ಎಚ್ಚರಿಸಿದರು.