ಡ್ರಗ್ಸ್ ಹಗರಣ ಶುರುವಾದ ನಂತರ ದಿನಕ್ಕೊಂದು ಪತ್ರಿಕಾ ಗೋಷ್ಟಿ ನಡೆಸಿದ ನಂತರ ಕೆಲ ಸಮಯದವರೆಗೆ ಸುಮ್ಮನಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಇಂದು ವಿಧಾನ ಸೌಧಕ್ಕೆ ಆಗಮಿಸಿ ಪುನಃ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ವಿರುದ್ಧ ಹೊಸ ಆರೋಪಗಳನ್ನು ಮಾಡಿದರು.
‘‘ಜಮೀರ್ ಅಹ್ಮದ್ ವಿದೇಶ ಪ್ರವಾಸಕ್ಕೆ ಹೋದ ಮಾಹಿತಿ ಸರ್ಕಾರಕ್ಕೆ ನೀಡದೆ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ, ಈ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೂ ದೂರು ನೀಡಿದ್ದೇನೆ ಮತ್ತು ಸಿಸಿಬಿ ಅಧಿಕಾರಿಗಳಿಗೆ ಡಿಜಿಟಲ್ ಎವಿಡೆನ್ಸ್ ನೀಡಲಿದ್ದೇನೆ,’’ ಅಂತ ಸಂಬರಗಿ ಹೇಳಿದರು.
‘‘ಜಮೀರ್ ಹಲವಾರು ಸಲ ಕೊಲಂಬೊಗೆ ಹೋಗಿದ್ದಾರೆ, ಆದರೆ ಅವರ ಪ್ರವಾಸದ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡದೆ ಹೋಗಿ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಹಾಗಾಗಿ ಜಮೀರ್ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಸಿಎಂ ಅವರನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದೇನೆ,’’ ಎಂದು ಸಂಬರಗಿ ತಾನು ವಿಧಾನ ಸೌಧಕ್ಕೆ ಬಂದಿದ್ದ ಕಾರಣವನ್ನು ವಿವರಿಸಿದರು.