ತೀವ್ರ ಸ್ವರೂಪ ಪಡೆದುಕೊಂಡ ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್: ಸಂತ್ರಸ್ತೆಯಿಂದ ಮೊದಲ ದೂರು ದಾಖಲು
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇನ್ನು ದೌರ್ಜನ್ಯಕ್ಕೊಳಗಾದ ಸಂತ್ರಸ್ತೆ ಮಹಿಳೆಯೊಬ್ಬರು ಮಹಿಳಾ ಆಯೋಗಕ್ಕೆ ಮೊದಲ ದೂರು ನೀಡಿದ್ದಾರೆ. ಮತ್ತೊಂದೆಡೆ ಸೈಬರ್ ಕ್ರೈಂ ಠಾಣೆಗೆ ಜೆಡಿಎಸ್ ಚುನಾವಣಾ ಏಜೆಂಟ್ ದೂರು ಕೊಟ್ಟಿದ್ದು, ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ಬೆಂಗಳೂರು/ಹಾಸನ, (ಏಪ್ರಿಲ್ 28): ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ (Prajwal Revanna Scandal Case) ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ದೂರು ದಾಖಲಾಗಿದೆ. ನೊಂದ ಸಂತ್ರಸ್ತೆ ಕೊನೆಗೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ನಿನ್ನೆ ಓರ್ವ ಸಂತ್ರಸ್ತೆ ಪೋನ್ ಕಾಲ್ ಮೂಲಕ ದೂರು ನೀಡಿದ್ದರೆ, ಇಂದು ಮಹಿಳಾ ಆಯೋಗಕ್ಕೆ ವಾಟ್ಸಾಪ್ ಮೂಲಕ ದೂರು ನೀಡಿದ್ದಾರೆ. ಇನ್ನು ಮತ್ತೊಂದೆಡೆ ಇದೇ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ಗೆ ಸಂಬಂಧಿಸಿದಂತೆ ಜೆಡಿಎಸ್ ಚುನಾವಣಾ ಏಜೆಂಟ್ ಹಾಸನದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.
ಜೆಡಿಎಸ್ನಿಂದಲೂ ದೂರು
ಏಪ್ರಿಲ್ 21ರಂದು ಪೆನ್ಡ್ರೈವ್, ಸಿಡಿ ಮೂಲಕ ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಜೆಡಿಎಸ್ ಚುನಾವಣಾ ಏಜೆಂಟ್, ಏಪ್ರಿಲ್ 23ರಂದು ಅರೇಹಳ್ಳಿ ನವೀನ್ ಗೌಡ ಎಂಬುವರ ವಿರುದ್ಧ ಹಾಸನದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಹಾಸನ ಎನ್ ಡಿ ಎ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಮಣಿಸಲು ಅವರ ಮುಖವನ್ನ ಮಾರ್ಫ್ ಪೋಟೋ ವಿಡಿಯೋ ಮಾಡಿ ಮತದಾರರಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ನವೀನ್ ಗೌಡ ಎಂಬುವರ ವಿರುದ್ಧ FIR ದಾಖಲಾಗಿದೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್: ಎಚ್ಡಿಕೆ ಖಡಕ್ ಮಾತು, ದೇವೇಗೌಡ ಹೇಳಿದ್ದೇನು ಗೊತ್ತಾ?
ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ
ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಮುಖಂಡರ ಎಸ್ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ ಮಹಿಳಾ ಕಾರ್ಯಕರ್ತೆಯರು, ಪ್ರಜ್ವಲ್ ರೇವಣ್ಣ ಪ್ರತಿಕೃತಿಗೆ ಪೊರಕೆಯೊಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಇದೇ ವೇಳೆ ದೇವೇಗೌಡರ ಹಾಗೂ ಎಚ್ಡಿ ಕುಮಾರಸ್ವಾಮಿ ಮುಖವಾಡ ಹಾಕಿ ಅಣಕು ಪ್ರದರ್ಶನ ಮಾಡಿ ವಿಕೃತಿ ಕಾಮಿ ಪ್ರಜ್ವಲ್ ರೇವಣ್ಣನಿಗೆ ದಿಕ್ಕಾರ ಕೂಗಿದರು.
ಅಲ್ಲದೇ ಕೂಡಲೇ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿಸುವಂತೆ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರ್ ನಾಥ್ ನೇತೃತ್ವದಲ್ಲೂ ಸಹ ಡಿಜಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದು, ಕಾಮುಕನನ್ನು ಬಂಧಿಸುವಂತೆ ಆಗ್ರಹಿಸಿದರು. ಈ ವೇಳೆ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಪೊಲೀಸರು ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರನ್ನು ವಶಕ್ಕೆ ಪಡೆದುಕೊಂಡರು.
ಎಸ್ಐಟಿ ರಚನೆಗೆ ರಾಜ್ಯ ಸರ್ಕಾರ ತೀರ್ಮಾನ
ಪ್ರಜ್ವಲ್ ರೇವಣ್ಣ ವಿರುದ್ಧ ದೌರ್ಜನ್ಯ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ರಾಜ್ಯ ಮಹಿಳಾ ಆಯೋಗ ಕೂಡಲೇ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಪ್ರಕರಣದ ತನಿಖೆಗೆ ನಡೆಸುವಂತೆ ಮನವಿ ಮಾಡಿತ್ತು. ಈ ಪತ್ರದ ಮೇರೆಗೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಐಟಿ ತಂಡ ರಚನೆಗೆ ತೀರ್ಮಾನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Sun, 28 April 24