ವಾಲ್ಮೀಕಿ, ಮುಡಾ ಬೆನ್ನಲ್ಲೇ ಮತ್ತೊಂದು ಹಗರಣ ಬಯಲಿಗೆ: ವಕ್ಫ್ ಬೋರ್ಡ್ ಹಣ ಗುಳುಂ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣ ಬೆನ್ನಲ್ಲೇ ಕರ್ನಾಟಕ ವಕ್ಫ್ ಮಂಡಳಿಯ ಕೋಟ್ಯಾಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ದೂರು ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಾಲ್ಮೀಕಿ, ಮುಡಾ ಬೆನ್ನಲ್ಲೇ ಮತ್ತೊಂದು ಹಗರಣ ಬಯಲಿಗೆ: ವಕ್ಫ್ ಬೋರ್ಡ್ ಹಣ ಗುಳುಂ
ಕರ್ನಾಟಕ ವಕ್ಫ್ ಮಂಡಳಿ
Follow us
ವಿವೇಕ ಬಿರಾದಾರ
|

Updated on:Jul 14, 2024 | 12:40 PM

ಬೆಂಗಳೂರು, ಜುಲೈ 14: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್​ ಸರ್ಕಾರ (Congress Government) ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಿದ್ದಂತೆ ಒಂದರ ಹಿಂದೆ ಒಂದಂತೆ ಹಗರಣಗಳು ಬೆಳಕಿಗೆ ಬರುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣ, ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆಯಲ್ಲಿ, ಅಪೆಕ್ಸ್​ ಬ್ಯಾಂಕ್​​ನಲ್ಲಿ ನಡೆದ ಹಗರಣ ರಾಜ್ಯ ಸರ್ಕಾರದ ತಲೆಬಿಸಿಗೆ ಕಾರಣವಾಗಿವೆ. ಇದರ ಬೆನ್ನಲ್ಲೇ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಕರ್ನಾಟಕ ವಕ್ಫ್ ಮಂಡಳಿಯ (Karnataka Waqf Board) ಹಣ ಅಕ್ರಮವಾಗಿ ವರ್ಗಾವಣೆಯಾದ ಆರೋಪ ಕೇಳಿ ಬಂದಿದ್ದು, ಮಾಜಿ ಸಿಇಒ ಝುಲ್ಫಿಕಾರುಲ್ಲಾ ವಿರುದ್ಧ ವಕ್ಫ್ ಮಂಡಳಿ ದೂರು ನೀಡಿದೆ. ಮಂಡಳಿ ಮುಖ್ಯ ಲೆಕ್ಕಾಧಿಕಾರಿ ಮೀರ್ ಅಹಮದ್ ಅಬ್ಬಾಸ್ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು‌ ನೀಡಿದ್ದು, ಎಫ್​ಐಆರ್​ ದಾಖಲಾಗಿದೆ.

ವಕ್ಫ್ ಮಂಡಳಿ ಆಸ್ತಿ ಮಾರಾಟ ಸಂಬಂಧ 4 ಕೋಟಿ ರೂ. ಹಣ ಮಂಡಳಿ‌ ಬ್ಯಾಂಕ್‌ ಖಾತೆಗೆ ಜಮೆಯಾಗಿದೆ. ಈ ಹಣವನ್ನು ಝುಲ್ಫಿಕಾರುಲ್ಲಾ 2016ರಲ್ಲಿ ಚಿಂತಾಮಣಿಯ ವಿಜಯ ಬ್ಯಾಂಕ್​ಗೆ ಸಿಇಒ ಹೆಸರಿನಲ್ಲಿ ಎರಡು ಚೆಕ್​ಗಳ‌ ಮೂಲಕ ವರ್ಗಾವಣೆ ಮಾಡಿದ್ದರು. ಇದರಿಂದ ವಕ್ಫ್ ಮಂಡಳಿಗೆ 8 ಕೋಟಿ ರೂ.‌ನಷ್ಟವಾಗಿದೆ. ಝುಲ್ಫಿಕಾರುಲ್ಲಾ ಅವರು ಮಂಡಳಿಯ ಗಮನಕ್ಕೆ ತರದೆ ಹಣ ವರ್ಗಾವಣೆ, ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ದೂರು ವಕ್ಫ ಮಂಡಳಿ ದೂರು ದಾಖಲಿಸಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ 2.O ಸರ್ಕಾರದಲ್ಲಿ ಹೊರಬಂದ ಹಗರಣಗಳು

ಮುಡಾ ಹಗರಣ

ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ 50:50 ಅನುಮಾತದಲ್ಲಿ ನಿವೇಶನ ಹಂಚಿಕೆ ವಿಚಾರವಾಗಿ ಬಹಕೋಟಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದ ಸದಸ್ಯರ ಹೆಸರು ತಳುಕು ಹಾಕಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಅಕ್ರಮಾಗಿ 3 ಎಕರೆ ನಿವೇಶನ ನೀಡಲಾಗಿದೆ ಎಂಬ ಆರೋಪವಿದೆ. ಹಗರಣಕ್ಕೆ ಸಂಬಂಧಿಸಿದಂತೆ ಎಸ್​ಐಟಿ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಶಾಸಕ ಬಸನಗೌಡ‌ ದದ್ದಲ್ ಅಜ್ಞಾತ ಸ್ಥಳಕ್ಕೆ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ

ಸರ್ಕಾರದ ಖಜಾನೆಯಿಂದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಖಾತೆಗೆ ಜಮೆಯಾಗಿದ್ದ 187 ಕೋಟಿ ರೂ. ಹಣ ಅಕ್ರಮವಾಗಿ ಬೆಂಗಳೂರು, ಹೈದರಾಬಾದ್​, ತೆಲಂಗಾಣ ಮತ್ತು ಬಳ್ಳಾರಿಯ ಕೆಲವ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾದ ಆರೋಪ ಕೇಳಿ ಬಂದಿದೆ. ಈ ಹಗರಣದ ತನಿಖೆಯನ್ನು ಎಸ್​ಐಟಿ, ಸಿಬಿಐ ಮತ್ತು ಇಡಿ ನಡೆಸುತ್ತಿದೆ.

ಪ್ರಕರಣ ಸಂಬಂಧ ಸರ್ಕಾರದ ಮೊದಲ ವಿಕೆಟ್​ ಪತನವಾಗಿದೆ. ಹಗರಣದಲ್ಲಿ ನೇರವಾಗಿ ಶಾಮಿಲಾಗಿರುವ ಆರೋಪದಲ್ಲಿ ಬಿ. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಸದ್ಯ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನು ಬಂಧಿಸಿದ್ದು, ತಮ್ಮ ಕಸ್ಟಡಿಗೆ ತೆದುಕೊಂಡಿದ್ದಾರೆ. ಇನ್ನು ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್​ ಅವರಿಗೂ ಈ ಹಗರಣ ಉರುಳಾಗುವ ಸಾಧ್ಯತೆ ಇದೆ. ಹೀಗಾಗಿ ದದ್ದಲ್​ ನಾಪತ್ತೆಯಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:38 pm, Sun, 14 July 24