ಭಯ ಬಿಟ್ಟು ಶಾಲೆಗೆ‌ ಬಂದ ಮಕ್ಕಳು.. ಮೊದಲ‌ ದಿನದ ಹಾಜರಾತಿ ಹೇಗಿತ್ತು ಗೊತ್ತಾ..?

ಶಾಲೆಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿ ಸಮಯ ನಿಗದಿಪಡಿಸಿದ ಹಿನ್ನೆಲೆಯಲ್ಲಿ ಕಳೆದ ವಾರದಿಂದಲೇ ಶಿಕ್ಷಕರ ತಂಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಾಲೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದು, ಅದರಂತೆ ಕೊಠಡಿಗಳ ಸ್ವಚ್ಛತೆ, ಸ್ಯಾನಿಟೈಸ್ ಮಾಡಲಾಗಿತ್ತು.

  • ಪ್ರಭುಗೌಡ.ಎನ್.ಪಾಟೀಲ
  • Published On - 12:27 PM, 2 Jan 2021
ಭಯ ಬಿಟ್ಟು ಶಾಲೆಗೆ‌ ಬಂದ ಮಕ್ಕಳು.. ಮೊದಲ‌ ದಿನದ ಹಾಜರಾತಿ ಹೇಗಿತ್ತು ಗೊತ್ತಾ..?
ಶಾಲೆಯ ಪುನರಾರಂಭದ ಚಿತ್ರಣ

ಹಾವೇರಿ : ಹೊಸ ವರ್ಷದ ಮೊದಲ ದಿನವೇ ಶಾಲೆ ಕಾಲೇಜುಗಳು ಆರಂಭವಾಗಿವೆ. ಜನವರಿ 1 ರಂದು ಸರಕಾರದ ಮಾರ್ಗಸೂಚಿ ಹಾಗೂ ಕೋವಿಡ್-19 ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಜಿಲ್ಲೆಯಲ್ಲಿ ಶಾಲೆಗಳು ಆರಂಭಗೊಂಡಿದ್ದು, ಮೊದಲ ದಿನವೇ ಶಾಲೆಗೆ ಶಿಕ್ಷಕರ ನಿರೀಕ್ಷೆ ಮೀರಿ ಮಕ್ಕಳು ಬಂದಿದ್ದಾರೆ. ಶಾಲಾ ಕೊಠಡಿಯೊಳಗೆ ಮಕ್ಕಳಿಗೆ ಡೆಸ್ಕ್​​ಗೆ ಒಬ್ಬರಂತೆ ಕೂರಿಸಿ ವಿದ್ಯಾಗಮ ಪಠ್ಯ ಬೋಧನೆ ಮಾಡಲಾಯಿತು.

ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ಬರೊಬ್ಬರಿ 10 ತಿಂಗಳ ಕಾಲ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದರು.ಸದ್ಯ ಶಾಲೆಗೆ ಮಕ್ಕಳು ಮರಳಿ ಬಂದಿದ್ದು, ವಿದ್ಯಾಗಮ ಯೋಜನೆ ಆನ್​ಲೈನ್ ಪಾಠಗಳು, ಯೂಟ್ಯೂಬ್ ಕಲಿಕೆಗಳು ಏನು ನಡೆಯುತ್ತಿದ್ದವು ಅವುಗಳಿಗೆ ಮುಕ್ತಿ ದೊರೆತಂತಾಗಿದೆ. ಸರ್ಕಾರ ಶಾಲಾ ಆರಂಭಕ್ಕೆ ಪರಿಷ್ಕೃತ ನಿಯಮಾವಳಿಗಳನ್ನು ರೂಪಿಸಿ ಸುದೀರ್ಘ ಅವಧಿಯ ನಂತರ ಶಾಲೆಯ ಕೊಠಡಿಯೊಳಗೆ ವಿದ್ಯಾಗಮ ತರಗತಿಗಳನ್ನು ನಡೆಸಲು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಹೊಸ ವರ್ಷದ ಮೊದಲ ದಿನವೇ ಮಕ್ಕಳು ಶಾಲೆಗಳಿಗೆ ಉತ್ಸಾಹದಿಂದ ಆಗಮಿಸಿರುವುದು ಕಂಡುಬಂದಿತು.

ಜಿಲ್ಲೆಯಲ್ಲಿ ಮೊದಲ‌ ದಿನ ಶೇಕಡಾ 45ರಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಪಾಠ ಆಲಿಸಿದ್ದು, ಹಾವೇರಿ ತಾಲೂಕಿನಲ್ಲಿ ಶೇ. 50, ಹಾನಗಲ್ ತಾಲೂಕಿನಲ್ಲಿ ಶೇ. 50, ಸವಣೂರ ತಾಲೂಕಿನಲ್ಲಿ ಶೇ. 50, ಬ್ಯಾಡಗಿ ಹಾಗೂ ರಾಣೇಬೆನ್ನೂರ ತಾಲೂಕಿನಲ್ಲಿ ಶೇ. 45, ಹಿರೇಕೆರೂರ ತಾಲೂಕಿನಲ್ಲಿ ಶೇ. 35 ಹಾಗೂ ಶಿಗ್ಗಾಂವ ತಾಲೂಕಿನಲ್ಲಿ ಶೇ. 30 ರಷ್ಟು ಮಕ್ಕಳು ಮೊದಲ ದಿನ ಶಾಲೆಗೆ ಆಗಮಿಸಿರುವುದಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ‌ ನೀಡಿದ್ದಾರೆ.

ಶಾಲೆಗಳನ್ನು ಸಿಂಗರಿಸಿರುವುದು

ಶಾಲೆಗಳ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿ ಸಮಯ ನಿಗದಿಪಡಿಸಿದ ಹಿನ್ನೆಲೆಯಲ್ಲಿ ಕಳೆದ ವಾರದಿಂದಲೇ ಶಿಕ್ಷಕರ ತಂಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಾಲೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದು, ಅದರಂತೆ ಕೊಠಡಿಗಳ ಸ್ವಚ್ಛತೆ, ಸ್ಯಾನಿಟೈಸ್ ಮಾಡಲಾಗಿತ್ತು. ಹೊಸ ವರ್ಷದ ಮೊದಲ‌ ದಿನ ಬೆಳಿಗ್ಗೆ ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ತಳಿರು ತೋರಣ, ರಂಗೋಲಿಗಳನ್ನು ಶಿಕ್ಷಕರು ಸಿದ್ಧಮಾಡಿಕೊಂಡು ಮಕ್ಕಳಿಗೆ ಆತ್ಮೀಯ ಸ್ವಾಗತ ನೀಡಿದರು. ಪಾಲಕರ ಒಪ್ಪಿಗೆ ಪತ್ರದೊಂದಿಗೆ ಶಾಲೆಗೆ ಆಗಮಿಸಿದ ಮಕ್ಕಳು ಬಹುದಿನಗಳ ನಂತರ ಶಾಲೆಯಲ್ಲಿ ಸ್ನೇಹಿತರು, ಶಿಕ್ಷಕರನ್ನು ಭೇಟಿ ಮಾಡಿದ್ದು, ಹೆಚ್ಚು ಉತ್ಸಾಹದಿಂದ ಅಕ್ಷರಭ್ಯಾಸ ಮಾಡಿ ಸಂಭ್ರಮ ಆಚರಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಂಡ ವಿದ್ಯಾರ್ಥಿಗಳು

ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಶಾಲೆಗಳು :
10 ತಿಂಗಳ ನಂತರ ಶಾಲೆಗಳು ಆರಂಭವಾಗಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಬಹುತೇಕ ಶಾಲೆಗಳು ಶಿಕ್ಷಕರು, ಶಾಲಾ‌ ಸುಧಾರಣಾ ಸಮಿತಿ ಸದಸ್ಯರು ಮತ್ತು ಶಾಲಾ ಸಿಬ್ಬಂದಿಯಿಂದ ಭರ್ಜರಿಯಾಗಿ ಅಲಂಕಾರಗೊಂಡಿದ್ದವು. ತಳಿರು ತೋರಣಗಳನ್ನು ಕಟ್ಟಿ ಶಾಲೆಗಳನ್ನು ಅಲಂಕಾರ ಮಾಡಿದ್ದು, ಮಕ್ಕಳನ್ನು ಕೈ ಬೀಸಿ ಕರೆಯುವಂತೆ ಶಾಲೆಯ ದ್ವಾರ ಬಾಗಿಲಿನಿಂದ ಹಿಡಿದು ಶಾಲಾ‌‌ ಕೊಠಡಿಗಳವರೆಗೂ ಆಕರ್ಷಕ‌ ಬಲೂನ್​ಗಳನ್ನು ಕಟ್ಟಲಾಗಿತ್ತು. ಮಕ್ಕಳು ಕೊರೊನಾ ಹರಡುವಿಕೆಯ ಭಯವನ್ನು ಬಿಟ್ಟು ಅಕ್ಷರ ಕಲಿಯಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಶಾಲೆಗಳಲ್ಲಿ ಮಾಡಲಾಗಿತ್ತು ಎನ್ನುವುದು ವಿಶೇಷ.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ ರೋಶನ್ ಶಾಲೆಗೆ ಭೇಟಿ

ಶಾಲೆಗಳಿಗೆ ಸಿಇಓ ಭೇಟಿ :
ನಗರದ ಮುನ್ಸಿಪಲ್ ಹೈಸ್ಕೂಲ್ ಹಾಗೂ ಸರ್ಕಾರಿ ಉರ್ದು ಶಾಲೆಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ ರೋಶನ್ ಭೇಟಿ ನೀಡಿ ಶಾಲಾ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದ್ದು, ಶಿಕ್ಷಕರು ಹಾಗೂ ಮಕ್ಕಳೊಂದಿಗೆ ಸಂವಾದ ನಡೆಸಿದರು. ಪ್ರತಿನಿತ್ಯ ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್​ ಮಾಡುವುದಷ್ಟೇ ಅಲ್ಲದೇ ಕಿಟಕಿ, ಬಾಗಿಲು, ಮಕ್ಕಳು ಕುಳಿತುಕೊಳ್ಳುವ ಆಸನವನ್ನು ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಬೇಕು.

ಮಕ್ಕಳಿಗೆ ಬಿಸಿಯೂಟದ ಬದಲಿಗೆ ಬಿಸಿ ನೀರು ಪೂರೈಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಶಾಲಾ ಕೊಠಡಿಗಳಲ್ಲಿ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು, ಮಕ್ಕಳಿಗೆ ಮಾಸ್ಕ್ ಧರಿಸುವ ಕುರಿತಂತೆ ಆಗಾಗ್ಗೆ ತಿಳಿವಳಿಕೆ ನೀಡವುದು ಹೀಗೆ ಮಕ್ಕಳ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಿಸುವಂತೆ ಸೂಚಿಸಿದ್ದು, ಮಕ್ಕಳ ಆರೋಗ್ಯದಲ್ಲಿ ಸಣ್ಣ ವ್ಯತ್ಯಯ ಕಂಡಬಂದರೂ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ ತಪಾಸಣೆಗೆ ಮುಂದಾಗುವಂತೆ ಸಲಹೆ ನೀಡಿದರು.

ಕೊರೊನಾ ಟೆಸ್ಟ್ ನಡೆಸಿ ಮಕ್ಕಳನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯ

ಆನ್‍ಲೈನ್ ತರಗತಿಗಳು ಸಮರ್ಪಕವಾಗಿ ಕೇಳಲು ಸಾಧ್ಯವಾಗುತ್ತಿರಲಿಲ್ಲ. ಆಗಾಗ ನೆಟ್‍ವರ್ಕ್ ಸಮಸ್ಯೆ ಕಾಡುತ್ತಿತ್ತು. ಮನೆಯಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಮೊಬೈಲ್ ಇರಲಿಲ್ಲ. ಆನ್​ಲೈನ್ ಮತ್ತು ಚಂದನ ವಾಹಿನಿ ಮೂಲಕ ಪಾಠಗಳ ಗ್ರಹಿಕೆ ಕಷ್ಟವಾಗುತ್ತಿತ್ತು. ಈಗ ಶಾಲೆ ಆರಂಭ ಆಗಿರುವುದು ತುಂಬಾ ಖುಷಿ ತಂದಿದೆ ಎಂದು 10ನೇ ತರಗತಿ ವಿದ್ಯಾರ್ಥಿನಿ ದೀಪಾ ಹೇಳಿದ್ದಾರೆ.

ಶಾಲೆಗೆ ಆಗಮಿಸಿದ ಮಕ್ಕಳ ಚಿತ್ರಣ

ರಾಜ್ಯದಲ್ಲಿ ಜನವರಿ 1ರಿಂದ ಶಾಲಾ-ಕಾಲೇಜು ಆರಂಭ; ಪೋಷಕರ ಒಪ್ಪಿಗೆ ಪತ್ರ ಕಡ್ಡಾಯ: ಶಿಕ್ಷಣ ಸಚಿವ ಸುರೇಶ್​ ಕುಮಾರ್ ಪುನರುಚ್ಚಾರ