ಕೊವಿಡ್ ಮೂರನೇ ಅಲೆ: ಗರಿಷ್ಠ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮಹಿಳಾ ಇಲಾಖಾ ಅಧಿಕಾರಿಗಳಿಗೆ ಶಶಿಕಲಾ ಜೊಲ್ಲೆ ತಾಕೀತು
ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವರು, ಕೊವಿಡ್ ಜೊತೆಗೆ ಇತರ ಗಂಭೀರ ಕಾಯಿಲೆ ಪೀಡತ ಮಕ್ಕಳನ್ನು ಹೋಂ ಐಸೋಲೇಷನ್ ಬದಲು ಕೋವಿಡ್ ಮಕ್ಕಳ ವಾರ್ಡ್‍ಗಳಲ್ಲಿ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು.
ಹಾವೇರಿ: ಮಕ್ಕಳ ಮೇಲೆ ಕೊವಿಡ್ ಮೂರನೇ ಅಲೆಯ ಸಂಭಾವ್ಯ ಪರಿಣಾಮ ನಿಯಂತ್ರಣದ ನಿಟ್ಟಿನಲ್ಲಿ ಸೋಂಕಿನಿಂದ ಮಕ್ಕಳ ರಕ್ಷಣೆ, ಮುನ್ನೆಚ್ಚರಿಕೆ, ಜಾಗೃತಿ, ಪ್ರತ್ಯೇಕ ಕೋವಿಡ್ ವಾರ್ಡ್‍ಗಳ ಸಿದ್ಧತೆ, ಪಾಲಕರಿಗೆ ವ್ಯವಸ್ಥೆ ಕುರಿತಂತೆ ಶಿಶು ಅಭಿವೃದ್ಧಿ ಅಧಿಕಾರಿಗಳು ಕ್ಷೇತ್ರಮಟ್ಟಕ್ಕೀಳಿದು ಕಾರ್ಯನಿರ್ವಹಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ತಾಕೀತು ಮಾಡಿದರು.
ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಕೊರೊನಾ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳ ಕಾರ್ಯವೈಖರಿಯ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಎರಡನೇ ಸುತ್ತಿನ ಪ್ರವಾಸದ ಸಂದರ್ಭದಲ್ಲಿ ಕಾರ್ಯವೈಖರಿಯನ್ನು ಸುಧಾರಿಸಿಕೊಳ್ಳದಿದ್ದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಉಪನಿರ್ದೇಶಕ ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆ ಅವರು, ಕೊವಿಡ್ ಜೊತೆಗೆ ಇತರ ಗಂಭೀರ ಕಾಯಿಲೆ ಪೀಡತ ಮಕ್ಕಳನ್ನು ಹೋಂ ಐಸೋಲೇಷನ್ ಬದಲು ಕೋವಿಡ್ ಮಕ್ಕಳ ವಾರ್ಡ್‍ಗಳಲ್ಲಿ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು.
ಮಕ್ಕಳ ಕೊವಿಡ್ ವಾರ್ಡ್ ಹಾಗೂ ಮಕ್ಕಳ ಕೊವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕ್ಕ ಮಕ್ಕಳ ಜೊತೆಗೆ ಪಾಲಕರಿಗೂ ಉಳಿದುಕೊಳ್ಳಲು ವ್ಯವಸ್ಥೆ ಕೈಗೊಳ್ಳುವುದು ಅತ್ಯವಶ್ಯವಾಗಿದೆ. ಐಸಿಯು ವಾರ್ಡ್‍ಗಳಲ್ಲಿ ಮಕ್ಕಳ ಜೊತೆಗೆ ಪಾಲಕರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಹಾಗೂ ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಪಾಲಕರಿಗೆ ಪ್ರತ್ಯೇಕ ವ್ಯವಸ್ಥೆಮಾಡಿ 10 ರಿಂದ 18 ವರ್ಷದೊಳಗಿನ ಸೋಂಕಿತ ಮಕ್ಕಳ ಪೈಕಿ ಬಾಲಕಿಯರಿಗೆ ಹಾಗೂ ಬಾಲಕರಿಗೆ ಪ್ರತ್ಯೇಕ ವ್ಯವಸ್ಥೆ ಕೈಗೊಳ್ಳುವಂತೆ ಸಲಹೆ ನೀಡಿದರು.
ಹೋಂ ಐಸೋಲೇಷನ್‍ನಲ್ಲಿರುವ ಸೋಂಕಿತ ಮಕ್ಕಳು ಪ್ರತ್ಯೇಕತೆ ಹಾಗೂ ಮಾಸ್ಕ್ ಧರಿಸುವ ಅರಿವು ಇರುವುದಿಲ್ಲ. ಕೆಲ ಮನೆಗಳಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಇದರಿಂದ ಪಾಲಕರಿಗೂ ಸೋಂಕು ತಗಲುವ ಅಪಾಯವಾಗಿದೆ. ಈ ಕುರಿತಂತೆ ಅಂಗನವಾಡಿ ಕಾರ್ಯಕರ್ತರು, ಶಿಶು ಅಭಿವೃದ್ಧಿ ಅಧಿಕಾರಿಗಳು ಐಸೋಲೇಷನ್‍ನಲ್ಲಿರುವ ಮಕ್ಕಳಿಗೆ ಹಾಗೂ ಪಾಲಕರ ಕೌನ್ಸಲಿಂಗ್ ನಡೆಸಬೇಕು. ನಿರಂತರ ಜಾಗೃತಿ ಹಾಗೂ ಮುನ್ನೆಚ್ಚರಿಕೆಗಳ ಕುರಿತಂತೆ ಅರಿವು ಮೂಡಿಸಬೇಕು. ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇಲ್ಲದ ಸೋಂಕಿತ ಮಕ್ಕಳನ್ನು ಕೊವಿಡ್ ಆರೈಕೆ ಕೇಂದ್ರಗಳಲ್ಲಿರುವ ಪ್ರತ್ಯೇಕ್ ವಾರ್ಡ್‍ಗಳಲ್ಲಿ ದಾಖಲಿಸಲು ಮನವೊಲಿಸಲು ಸೂಚನೆ ನೀಡಿದರು.
ಕೊವಿಡ್ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳನ್ನು ದತ್ತುಪಡೆಯಲು ಇಲಾಖೆ ಮೂಲಕವೇ ದತ್ತುಪ್ರಕ್ರಿಯೆ ನಡೆಸಬೇಕು. ಅನಾಥ ಮಕ್ಕಳಿಗೆ ಶಿಕ್ಷಣ, ಆರ್ಥಿಕ ನೆರವು, ಉದ್ಯೋಗ, ತರಬೇತಿ ಕುರಿತಂತೆ ಮಾರ್ಗಸೂಚಿಯಂತೆ ಇಲಾಖಾ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ವಲಸೆ ಬಂದ ಮಕ್ಕಳು ಹಾಗೂ ತೀವ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಹಾಗೂ ಸೋಂಕಿನಿಂದ ತುತ್ತಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ತೀವ್ರ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ನ್ಯೂಟ್ರಿಷಿಯನ್ ರಿಯಾಬ್ಲೆಷನ್ ಸೆಂಟರ್‍ಗಳನ್ನು ಬಳ್ಳಾರಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲು ಸೂಚನೆ ನೀಡಿದ ಅವರು ಮಕ್ಕಳ ಪಾಲನಾ ಸಂಸ್ಥೆ ನಡೆಸಲು ಮುಂದೆಬರುವ ಸ್ವಯಂ ಸೇವಾ ಸಂಸ್ಥೆಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದರು.
ವಿಕಲಚೇತನರು, ಸ್ವಾಧಾರ, ನಿರ್ಗತಿಕ ಮಕ್ಕಳ ಕುಟೀರ, ಸರ್ಕಾರಿ ಸುಧಾರಣಾ ಸಂಸ್ಥೆಗಳಲ್ಲಿರುವ ನಿವಾಸಿಗಳಿಗೆ ಕೋವಿಡ್ ಲಸಿಕೆ ಮಾಹಿತಿ ಪಡೆದರು. ಕೋವಿಡ್ ಸಂದರ್ಭದಲ್ಲಿ ಮಕ್ಕಳ ನೆರವಿಗೆ ಹಾಗೂ ಪಾಲಕರ ನೆರವಿಗೆ 1098 ಸಹಾಯವಾಣಿ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಅವರು ಕೋವಿಡ್ ಮೂರನೇ ಅಲೇ ಪ್ರಭಾವದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಮಾಹಿತಿ ನೀಡಿದರು.
ಜೂನ್ 21 ರಿಂದ ಜಿಲ್ಲೆಯ ಸೊನ್ನೆಯಿಂದ 16 ವರ್ಷದೊಳಗಿನ 4,20,835 ಮಕ್ಕಳಿಗೆ ವಿಶೇಷ ಆರೋಗ್ಯ ಕ್ಯಾಂಪ್‍ಗಳನ್ನು ಆಯೋಜಿಸಲಾಗಿದೆ. 200 ವೈದ್ಯರನ್ನು ಚಿಕಿತ್ಸೆಗಾಗಿ ಗುರುತಿಸಲಾಗಿದೆ. ಪ್ರತಿ ವೈದ್ಯರು 100 ಮಕ್ಕಳನ್ನು ತಪಾಸಣೆ ಮಾಡಲಿದ್ದಾರೆ. ಒಂದು ದಿನಕ್ಕೆ 20 ಸಾವಿರ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಗುವುದು. ಏಳು ದಿನದೊಳಗಾಗಿ ಜಿಲ್ಲೆಯ ಎಲ್ಲ ಮಕ್ಕಳ ಆರೋಗ್ಯ ತಪಾಸಣೆಗೆ ನಿರ್ಧರಿಸಲಾಗಿದೆ. ಮೂರನೇ ಅಲೆ ಆರಂಭವಾಗುವ ಮುನ್ನ ಎಲ್ಲ ಮಕ್ಕಳ ತಪಾಸಣೆಗೆ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ. ಪೋಷಕಾಂಶ ಆಹಾರ ಕಿಟ್‍ಗಳನ್ನು ನೀಡಲಾಗುವುದು ಎಂದರು.
ಮಕ್ಕಳಿಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ 15 ಆಕ್ಸಿಜನ್ ಬೆಡ್‍ಗಳ ಒಳಗೊಂಡ ಪ್ರತ್ಯೇಕ ವಾಡ್ ಕಾಯ್ದಿರಿಸಲಾಗಿದೆ. ಜಿಲ್ಲೆಯ 11 ಆಸ್ಪತ್ರೆಗಳಲ್ಲಿ 119 ಬೆಡ್‍ಗಳನ್ನು ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ 195 ಬೆಡ್‍ಗಳನ್ನು ಕೋವಿಡ್ ಸೋಂಕಿತ ಮಕ್ಕಳಿಗಾಗಿ ಕಾಯ್ದಿರಿಸಲಾಗಿದೆ. ಮಕ್ಕಳ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ನಾಲ್ಕು ಜನ ಸೇರಿದಂತೆ ಪ್ರತಿ ತಾಲೂಕುಗಳಲ್ಲಿ ತಲಾ ಒಬ್ಬರಂತೆ ಮಕ್ಕಳ ತಜ್ಞರನ್ನು ಗುರುತಿಸಲಾಗಿದೆ. ಖಾಸಗಿ ಮಕ್ಕಳ ತಜ್ಞರನ್ನು ಚಿಕಿತ್ಸೆಗೆ ಬಳಸಿಕೊಳ್ಳಲು ಈಗಾಗಲೇ ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ತಂದೆ-ತಾಯಿ ಕಳೆದುಕೊಂಡ ಮಕ್ಕಳ ಜೊತೆ ಸಂವಾದ: ಸರ್ಕಾರಿ ನೆರವಿನ ಮಾಹಿತಿ ನೀಡಿದ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ
ಕೊರೊನಾಗೆ ಬಲಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ 30 ಲಕ್ಷ ಪರಿಹಾರ: ಸಚಿವೆ ಶಶಿಕಲಾ ಜೊಲ್ಲೆ