ಬೆಂಗಳೂರು, ನವೆಂಬರ್ 4: ಬಿಜೆಪಿ ಜೆಡಿಎಸ್ ಮೈತ್ರಿಕೂಟ ನೀರಾವರಿ ಮಂತ್ರ ಪಠಿಸಿದರೆ, ಕಾಂಗ್ರೆಸ್ ನಾಯಕರು ಭಗೀರಥ ಅಸ್ತ್ರ ಹೂಡಿದ್ದಾರೆ. ಕೆರೆ ತುಂಬಿಸಿದ್ದು ನಾನು ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅಬ್ಬರಿಸಿದರೆ, ಆ ಕೆರೆ ತುಂಬಿಸಲು ಡ್ಯಾಮ್ ಕಟ್ಟಿಸಿದ್ದು ದೇವೇಗೌಡರು ಎಂದು ಜೆಡಿಎಸ್ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಹೀಗೆ ರಂಗೇರಿರುವ ಚನ್ನಪಟ್ಟಣ ಉಪಚುನಾವಣೆ ಅಖಾಡದಲ್ಲಿ ಇವತ್ತಿನಿಂದ ಹೊಸ ಮಾತಿನ ಯುದ್ಧ ಶುರುವಾಗುತ್ತಿದೆ.
ಚನ್ನಪಟ್ಟಣ ಉಪಚುನಾವಣೆ ಕನಕ್ಕೆ ಇವತ್ತು ಡಿಸಿಎಂ ಡಿಕೆ ಶಿವಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಚನ್ನಪಟ್ಟಣದ ತಗಟೆಗೆರೆ ಪ್ರಚಾರ ಆರಂಭಿಸಿದ್ದಾರೆ. ಪ್ರಚಾರ ಆರಂಭಕ್ಕೂ ಮುನ್ನ ಬೆಂಗಳೂರಿನಲ್ಲೇ ಮಾತನಾಡಿದ ಡಿಕೆ ಶಿವಕುಮಾರ್ ಯಾರು ಏನು ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ತಗಚಗೆರೆಯಲ್ಲಿ ಸಿಪಿ ಯೋಗೇಶ್ವರ್ ಪರ ಡಿಸಿಎಂ ಡಿಕೆ, ಸಚಿವರಾದ ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ವೆಂಕಟೇಶ್ ಪ್ರಚಾರ ನಡೆಸಿದ್ದಾರೆ. ದೋಸ್ತಿಗಳ ವಿರುದ್ಧ ಅಬ್ಬರಿಸಿದ್ದಾರೆ.
ಇದಕ್ಕೂ ಮುನ್ನ ಇವತ್ತು ಬೆಳಗ್ಗೆಯೇ ಸಿಪಿ ಯೋಗೇಶ್ವರ್, ಚುನಾವಣೆ ಗೆಲ್ಲಲು ಆಂಜನೇಯನ ಮೊರೆ ಹೋಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿರುವ ಹೊಳೆ ಆಂಜನೇಯ ಸ್ವಾಮಿಗೆ ಹರಕೆ ಕಟ್ಟಿದ್ದಾರೆ.
ಅತ್ತ ಯೋಗೇಶ್ವರ್ ಪರ ಡಿಕೆ ಪ್ರಚಾರಕಕ್ಕಿಳಿದಿದ್ದರೆ, ಇತ್ತ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಘಟಾನುಘಟಿಗಳು ಕ್ಯಾಂಪೇನ್ ಮಾಡುತ್ತಿದ್ದಾರೆ. ಅಸಲಿಗೆ ಇವತ್ತಿನಿಂದ ಮಾಜಿ ಪ್ರಧಾನಿ ದೇವೇಗೌಡರು ಪ್ರಚಾರ ನಡೆಸಬೇಕಿತ್ತು. ಆದರೆ, ಆರೋಗ್ಯದ ದೃಷ್ಟಿಯಿಂದ ದೇವೇಗೌಡರ ಪ್ರಚಾರ ಕಾರ್ಯಕ್ರಮ ಮುಂದೂಡಲಾಗಿದೆ. ನಿಖಿಲ್ ಪರ ನಿನ್ನೆಯಿಂದಲೂ ಕೇಂದ್ರ ಸಚಿವ ಸೋಮಣ್ಣ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಚನ್ನಪಟ್ಟಣದ ಯಲಚಿಪಾಳ್ಯದಲ್ಲಿ ಪುತ್ರನ ಪರ ಕುಮಾರಸ್ವಾಮಿ ಪ್ರಚಾರ ಮುಂದುವರೆಸಿದ್ದಾರೆ. ಹುಚ್ಚಯ್ಯನ ದೊಡ್ಡಿ ಎನ್.ಆರ್ ಕಾಲೋನಿಯಲ್ಲಿ ರೋಡ್ ಶೋ ನಡೆಸಿ, ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಮತಯಾಚನೆಗಿಳಿದಿದ್ದಾರೆ. ಇದೇ ಮೊದಲ ಬಾರಿಗೆ ಗೌಡರ ಕುಟುಂಬದ ಸೊಸೆ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ. ಚನ್ನಪಟ್ಟಣದ ಪಾಲಿಟೆಕ್ನಿಕ್ ಕಾಲೇಜು ಬಳಿ ಮತಯಾಚಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Mon, 4 November 24