ಶಿರೂರು ಗುಡ್ಡ ಕುಸಿತ: ಸರ್ಕಾರದ ನಡೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಲಾರಿ ಚಾಲಕನ ಕುಟುಂಬ

ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು ಗುಡ್ಡ ಕುಸಿದು ಇಂದಿಗೆ ಏಳು ದಿನ ಕಳೆದಿದೆ. ನಿರಂತರವಾಗಿ ನೂರಾರು ಸಿಬ್ಬಂದಿಗಳು ಕಾರ್ಯಾಚರಣೆ ಮಾಡುತ್ತಿದ್ದಾರೆ. ಇನ್ನು ನಾಲ್ಕು ಜನರ ಮೃತದೇಹಗಳು ಪತ್ತೆಯಾಗಬೇಕಿದೆ. ಈ ಮಧ್ಯೆ ಸರ್ಕಾರದ ವಿರುದ್ಧ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಕುಟುಂಬದಿಂದ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

ಶಿರೂರು ಗುಡ್ಡ ಕುಸಿತ: ಸರ್ಕಾರದ ನಡೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಲಾರಿ ಚಾಲಕನ ಕುಟುಂಬ
ಶಿರೂರು ಗುಡ್ಡ ಕುಸಿತ: ಸರ್ಕಾರದ ನಡೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಲಾರಿ ಚಾಲಕನ ಕುಟುಂಬ
Updated By: ಗಂಗಾಧರ​ ಬ. ಸಾಬೋಜಿ

Updated on: Jul 23, 2024 | 7:53 PM

ಕಾರವಾರ, ಜುಲೈ 23: ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು (Shiroor) ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿತ ಸಂಭವಿಸಿ ಒಂದು ವಾರ ಕಳೆದಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದಿರುವ ಸಾವಿರಾರು ಟನ್ ಮಣ್ಣು ತೆರವು ಕಾರ್ಯ 70% ಮುಕ್ತಾಯವಾಗಿದೆ. ಮೃತರಾದ ಹನ್ನೊಂದು ಜನರ ಪೈಕಿ 8 ಜನರ ಮೃತದೇಹ ಪತ್ತೆ ಆಗಿದ್ದು 4 ಜನರ ಶವ ಪತ್ತೆಯಾಗಬೇಕಿದೆ. ಈ ಮಧ್ಯೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಕುಟುಂಬಸ್ಥರಿಂದ ಸರ್ಕಾರದ ವಿರುದ್ಧ ಹೈಕೋರ್ಟ್ (High Court) ಮೆಟ್ಟಿಲೇರಿದ್ದು ಅರ್ಜಿ ಸಲ್ಲಿಸಲಾಗಿದೆ.

ಘಟನಾ ಸ್ಥಳದಲ್ಲಿ ಲಾರಿಯ ಜಿಪಿಆರ್​ಎಸ್​ ಲಾಸ್ಟ್ ಲೊಕೇಶನ್ ಪತ್ತೆ ಹಿನ್ನೆಲೆ ಕಾರ್ಯಾಚರಣೆ ಅವೈಜ್ಞಾನಿಕವಾಗಿ, ವಿಳಂಬವಾಗಿ ನಡೀತಿದೆ ಎಂದು ಲಾರಿ ಚಾಲಕ ಅರ್ಜುನ್ ಕುಟುಂಬಸ್ಥರಿಂದ ಆರೋಪಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರದಿಂದ ಹೈಕೋರ್ಟ್ ವರದಿ ಕೇಳಿದ್ದು,​ ನಾಳೆ ಈ ಪ್ರಕರಣ ಸಂಬಂಧ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ಪ್ರಕರಣ; ಎಂಟನೇ ದಿನ, 8ನೇ ಶವ ಪತ್ತೆ

ಮಣ್ಣಿನ ಕುಸಿತದಿಂದ ನದಿಯಲ್ಲಿ ತೇಲಿಹೋದ ಗಂಗೆಕೊಳ್ಳದ ಲೋಕೇಶ್ ನಾಯ್ಕ, ಶಿರೂರಿನ ಜಗನ್ನಾಥ ಜಟ್ಟಿ, ಉಳವರೆ ಗ್ರಾಮದ ಸಣ್ಣಿ ಹನುಮಂತಗೌಡ, ಕೇರಳ ಮೂಲದ ಅರ್ಜುನ್ ಶವ ಪತ್ತೆಯಾಗಬೇಕಿದೆ. ಶಂಕಿತ ಸ್ಥಳದಲ್ಲಿ ರಾಡಾರ್ ಮೂಲಕ ಶೋಧ ಕಾರ್ಯ ಮಾಡಿದರೂ ಟ್ರಕ್, ಟ್ಯಾಂಕರ್​ಗಳು ಇರುವುದು ಪತ್ತೆಯಾಗಿಲ್ಲ.

ಈ ಕಾರಣದಿಂದ ರಸ್ತೆಯ ಬದಿ ಇದ್ದ ಅಂಗಡಿ ನೆಲಸಮವಾದ ಕಡೆ ಶೋಧ ಕಾರ್ಯ ನಡೆಸುತಿದ್ದು ಗಂಗಾವಳಿ ನದಿಗೆ ಬಿದ್ದ ಮಣ್ಣಿನ ಗುಡ್ಡದಲ್ಲಿ ಎನ್​​ಡಿಆರ್​ಎಫ್​, ಎಸ್​ಡಿಆರ್​ಎಫ್​ ಹಾಗೂ ಆರ್ಮಿ ಕಮಾಂಡೋಗಳ ತಂಡ ಶೋಧ ಕಾರ್ಯ ಮುಂದುವರೆಸಿದೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತ: ಮೃತದೇಹಗಳನ್ನು ಹುಡುಕುವ ಕಾರ್ಯಾಚರಣೆ ಮುಂದುವರಿದಿದೆ

ಜಿಲ್ಲಾಡಳಿತದ ವಿರುದ್ಧ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಡ್ಡಕುಸಿತದಲ್ಲಿ ಮೃತಪಟ್ಟ ಶಾಂತಿ ಲಕ್ಷಣ ನಾಯ್ಕ ಮನೆಗೆ ಭೇಟಿ ನೀಡಿ ವೇಳೆ ಮಾತನಾಡಿದ ಅವರು, ಕಣ್ಮರೆಯಾದವರ ಶೋಧಕಾರ್ಯದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಆರೋಪ ಮಾಡಿದ್ದಾರೆ.

ದುರಂತದಲ್ಲಿ ಕಣ್ಮರೆಯಾದವರ ಪೈಕಿ 6 ಮಂದಿ ನಾಮಧಾರಿ ಸಮುದಾಯದವರು. ಜಗನ್ನಾಥ ಹಾಗೂ ಲೋಕೇಶ್‌ನನ್ನ ಪತ್ತೆಮಾಡಲು ಇನ್ನೂ ಸಾಧ್ಯವಾಗಿಲ್ಲ. ನಾಮಧಾರಿ ಸಮುದಾಯದವರೆಂದೇ ಸರ್ಕಾರ ಕಡೆಗಣಿಸುತ್ತಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:30 pm, Tue, 23 July 24