ಮತ್ತೆ ಕಾಡುತ್ತಿದೆ ಆಕ್ಸಿಜನ್ ಕೊರತೆ; ಶಿವಮೊಗ್ಗ ಮತ್ತು ಮೈಸೂರು ಜಿಲ್ಲಾಸ್ಪತ್ರೆಗಳಲ್ಲಿ ಹೆಚ್ಚಿದ ಆತಂಕ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಕೂಡ ಆಕ್ಸಿಜನ್ ಕೊರತೆ ಉಂಟಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ ಎಂಬ ಬೋರ್ಡ್ ರಾರಾಜಿಸುತ್ತಿದೆ.
ಶಿವಮೊಗ್ಗ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆಯಲ್ಲಿ ಕೂಡ ಹೆಚ್ಚಳ ಉಂಟಾಗಿದೆ. ಇದರ ಜೊತೆಗೆ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಕೊರೊನಾ ತೀವ್ರತೆಯನ್ನು ಕಡಿಮೆ ಮಾಡುವಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಪಡುತ್ತಿದ್ದರೂ ಬೆಡ್, ಆಕ್ಸಿಜನ್ ಕೊರತೆ ಕಾಡುತ್ತಿದೆ. ಅಂತೇಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆಯಲ್ಲಿ ಕೂಡ ಆಕ್ಸಿಜನ್ ಕೊರತೆ ಉಂಟಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ ಎಂಬ ಬೋರ್ಡ್ ರಾರಾಜಿಸುತ್ತಿದೆ. ಆದರೆ ಆಸ್ಪತ್ರೆ ಆಡಳಿತ ಮಾತ್ರ ಇದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಿಲ್ಲ ಇಲ್ಲ. ಬದಲಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಉತ್ತರ ನೀಡುತ್ತಿದ್ದಾರೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಎರಡು ಆಕ್ಸಿಜನ್ ಸಂಗ್ರಹ ಯುನಿಟ್ ಇದೆ. ಪ್ರತಿದಿನ ಬಳ್ಳಾರಿಯಿಂದ ಒಂದು ಟ್ಯಾಂಕರ್ ಆಕ್ಸಿಜನ್ ಪೂರೈಕೆಯಾಗುತ್ತಿದೆ. ಇದು ಒಂದೇ ದಿನಕ್ಕೆ ಖಾಲಿಯಾಗುತ್ತಿದೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಇದನ್ನು ಚರ್ಚಿಸಿಲಾಯಿತು. ಆದರೆ ಚರ್ಚೆ ವೇಳೆ ಎಲ್ಲವೂ ಸರಿ ಇದೆ ಎಂಬಂತೆ ಮೆಡಿಕಲ್ ಕಾಲೇಜು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆ ಸಾವಿನ ಆತಂಕ ಹೆಚ್ಚಾಗಿದೆ ಎಂದು ಸ್ಥಳೀಯರಾದ ದೇವೇಂದ್ರಪ್ಪ ತಿಳಿಸಿದ್ದಾರೆ.
ಮೈಸೂರಿನಲ್ಲೂ ಆಕ್ಸಿಜನ್ ಬೆಡ್ ಕೊರತೆ: ಬೆಂಗಳೂರು ಬಿಟ್ಟರೆ ಇದೀಗಾ ಮೈಸೂರಿನಲ್ಲಿ ಕೊರೊನಾ ಸ್ಪೋಟವಾಗುತ್ತಿದೆ. ಪ್ರತಿನಿತ್ಯ 2000 ದಿಂದ 3000 ಪ್ರಕರಣಗಳು ಪತ್ತೆಯಾಗುತ್ತಿದೆ. ಅದರಲ್ಲೂ ಸಾಕಷ್ಟು ಜನರಿಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೆ.ಆರ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೆಲದಲ್ಲಿ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ. ಒಂದೊಂದು ಬೆಡ್ನಲ್ಲಿ ಇಬ್ಬರು ಸೋಂಕಿತರಿಗೆ ಅಕ್ಸಿಜನ್ ಕೊಟ್ಟು ಮಲಗಿಸುವ ಪರಿಸ್ಥಿತಿ ಇದೆ. ಈ ವಿಷಯ ಇಡೀ ಮೈಸೂರಿನಲ್ಲಿ ಸದ್ಯ ದೊಡ್ಡ ಆತಂಕಕ್ಕೆ ಕಾರಣವಾಗಿದೆ. ಇದೇ ವಿಚಾರಕ್ಕೆ ವೆಂಟಿಲೇಟರ್ ಕೇಳಿಕೊಂಡು ಡಿಹೆಚ್ಓ ಜೊತೆ ಮಾತನಾಡಿದ ಆಡಿಯೋ ಒಂದು ವೈರಲ್ ಆಗಿದ್ದು, ಈ ಆಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಸಂಬಂಧಿಕರಿಗೆ ಬೆಡ್ ವ್ಯವಸ್ಥೆ ಮಾಡುವಂತೆ ಹೇಳಿದ್ದಾರೆ. ಈ ವೇಳೆ ತನ್ನ ಹೆಂಡತಿಗೆ ಬೆಡ್ ಕೊಡಿಸಲಾಗದ ಸ್ಥಿತಿಯಲ್ಲಿದ್ದೇನೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.
ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಮಾತ್ರ ಬೆಡ್ ಸಮಸ್ಯೆ ಇಲ್ಲ. ಸದ್ಯ ಎಲ್ಲವನ್ನು ಸರಿಪಡಿಸಲಾಗುತ್ತಿದೆ. ನಾವು ಇಂದು ಕೂಡ ನೂರು ಬೆಡ್ ಅಕ್ಸಿಜನ್ ಇರುವ ಆಸ್ಪತ್ರೆ ಉದ್ಘಾಟನೆ ಮಾಡಿದ್ದೇವೆ. ಒಂದೆರಡು ದಿನದಲ್ಲಿ ಸೂಪರ್ ಸ್ಪೆಷಲಿಟಿ ಆಸ್ಪತ್ರೆ ಪ್ರಾರಂಭಮಾಡುತ್ತೇವೆ ಅಲ್ಲೂ ಕೂಡ ಅಕ್ಸಿಜನ್ ಬೆಡ್ ಸಿಗುತ್ತೆ ಎನ್ನುವ ಮಾತುಗಳನ್ನ ಹೇಳುತ್ತಿದ್ದಾರೆ.
ಇದನ್ನೂ ಓದಿ:
ಕೋವಿಡ್ ಸೋಂಕು ಬಂದ ಕೂಡಲೇ ಯಾರಿಗೂ ಆಕ್ಸಿಜನ್ ಕೊರತೆ ಇರುವುದಿಲ್ಲ. ಯಾರು ಆತಂಕಕ್ಕೆ ಒಳಗಾಗೋದು ಬೇಡ.
ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಐಸಿಯು ಸೇರಿ 350 ಆಕ್ಸಿಜನ್ ಬೆಡ್ ಭರ್ತಿ: ಜಿಲ್ಲಾಧಿಕಾರಿ ಸುಂದರೇಶ್ ಬಾಬು