ಶಿವಮೊಗ್ಗ ಕೊವಿಡ್ ಕೇರ್ ಸೆಂಟರ್ನಲ್ಲಿ ಸೂಕ್ತ ಸೌಲಭ್ಯವಿಲ್ಲದೆ ಜನರ ಪರದಾಟ; ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಸೋಂಕಿತರು
ಒಂದೇ ತರದ ಕಳೆಪೆ ಊಟ ನೀಡುತ್ತಿದ್ದಾರೆ. ವಿಟಾಮಿನ್ ಸಿ ಟಾಬ್ಲೇಟ್ ಸಿಗುತ್ತಿಲ್ಲ. ಸೆಂಟರ್ನಲ್ಲಿ ಸ್ವಚ್ಛತೆ ಇಲ್ಲವೆ ಇಲ್ಲ. ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸೋಂಕಿತರು ಇರುವುದರಿಂದ ತಾತ್ಸಾರದಿಂದ ನೋಡುತ್ತಿದ್ದಾರೆಂದು ಸೆಂಟರ್ನಲ್ಲಿ ದಾಖಲು ಆಗಿರುವ ಸೋಂಕಿತ ವ್ಯಕ್ತಿ ಗಂಗಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ: ಕೊರೊನಾ ಎರಡನೇ ಅಲೆಯಿಂದಾಗಿ ಸಾಕಷ್ಟು ಸಂಕಷ್ಟ ಎದುರಾಗಿದೆ. ಅದರಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಚಿಕಿತ್ಸೆ ನೀಡುವುದು ಒಂದು ದೊಡ್ಡ ಸವಾಲಾಗಿದೆ. ಇನ್ನು ಸೋಂಕಿತರನ್ನು ಕೊವಿಡ್ ಕೇರ್ ಸೆಂಟರ್ಗೆ ಕರೆ ತಂದಿದ್ದು, ಸರಿಯಾದ ವ್ಯವಸ್ಥೆ ಇಲ್ಲ ಎನ್ನುವ ಕೂಗು ಹಲವೆಡೆ ಕೇಳಿ ಬರುತ್ತಿದೆ. ಹೀಗಿರುವಾಗಲೇ ಶಿವಮೊಗ್ಗ ಜಿಲ್ಲೆಯ ಕೊವಿಡ್ ಕೇರ್ ಸೆಂಟರ್ನಲ್ಲಿ ಕೊರೊನಾ ಸೋಂಕಿತರು ಸೂಕ್ತ ಸೌಲಭ್ಯಗಲಿಲ್ಲದೇ ಪರದಾಡುತ್ತಿದ್ದಾರೆ. ಸರಕಾರವು ಹಣ ಕೊಟ್ಟರು ಸೆಂಟರ್ಗಳು ಸೂಕ್ತ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಸೊಂಕಿತರು ಕೊವಿಡ್ ಸೆಂಟರ್ಗೆ ಬಂದು ದೊಡ್ಡ ತಪ್ಪು ಮಾಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಲೆನಾಡಿನಲ್ಲಿನಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ಕೊರೊನಾ ಸೋಂಕಿತರು ಮನೆಯಲ್ಲೇ ಇರುವುದು ಬೇಡ. ಇದರಿಂದ ಸೋಂಕು ಹರುವಿಕೆ ಜಾಸ್ತಿಯಾಗುತ್ತದೆ . ಹೀಗಾಗಿ ಶಿವಮೊಗ್ಗದಲ್ಲಿ ಕೊವಿಡ್ ಕೇರ್ ಸೆಂಟರ್ಗಳನ್ನು ನಿರ್ಮಾಣ ಮಾಡಿದ್ದು, ಅಲ್ಲಿಗೆ ಎಲ್ಲರೂ ಬರಬೇಕು ಎಂದು ತಿಳಿಸಿದೆ. ಆದರೆ ಹೀಗೆ ನಿರ್ಮಾಣವಾದ ಕೊವಿಡ್ ಕೇರ್ ಸೆಂಟರ್ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಂತಾಗಿದೆ.
ಶಿವಮೊಗ್ಗದ ಮಲ್ಲಿಗೆನಹಳ್ಳಿ ಕೊವಿಡ್ ಸೆಂಟರ್ನಲ್ಲಿ ಕಳೆದ ಮೂರು ನಾಲ್ಕು ದಿನದಿನಗಳಿಂದ ಸ್ವಚ್ಛತೆ ಮತ್ತು ಊಟದ ಸರಿಯಾದ ವ್ಯವಸ್ಥೆ ಇಲ್ಲದೇ ಸೋಂಕಿತರು ಪರದಾಡುತ್ತಿದ್ದಾರೆ. ಗುಣ ಲಕ್ಷಣಗಳು ಇಲ್ಲದೇ ಕೊರೊನಾ ಪಾಸಿಟಿವ್ ಬಂದಿರುವ ಸೋಂಕಿತರನ್ನು ಕೊವಿಡ್ ಕೇರ್ ಸೆಂಟರ್ನಲ್ಲಿ ದಾಖಲಿಸಲಾಗಿದೆ. ಒಂದೇ ತರದ ಕಳೆಪೆ ಊಟ ನೀಡುತ್ತಿದ್ದಾರೆ. ವಿಟಾಮಿನ್ ಸಿ ಟಾಬ್ಲೇಟ್ ಸಿಗುತ್ತಿಲ್ಲ. ಸೆಂಟರ್ನಲ್ಲಿ ಸ್ವಚ್ಛತೆ ಇಲ್ಲವೆ ಇಲ್ಲ. ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸೋಂಕಿತರು ಇರುವುದರಿಂದ ತಾತ್ಸಾರದಿಂದ ನೋಡುತ್ತಿದ್ದಾರೆಂದು ಸೆಂಟರ್ನಲ್ಲಿ ದಾಖಲು ಆಗಿರುವ ಸೋಂಕಿತ ವ್ಯಕ್ತಿ ಗಂಗಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ತಾಲೂಕಿನ ಮಲ್ಲಿಗೆನಹಳ್ಳಿಯ ಬಿಸಿಎಂ ಹಾಸ್ಟೇಲ್ ಅನ್ನು ಕಳೆದ ಒಂದು ತಿಂಗಳಿಂದ ಕೊವಿಡ್ ಸೆಂಟರ್ ಆಗಿ ಮಾಡಿದ್ದಾರೆ. ಈ ಸೆಂಟರ್ನಲ್ಲಿ 102 ಜನರು ಇದ್ದಾರೆ. ಸದ್ಯ ಅವರೆಲ್ಲರಿಗೂ ಉತ್ತಮ ಆಹಾರ ಮತ್ತು ಶುಚಿತ್ವದ ವಾತಾವರಣ ಸೆಂಟರ್ನಲ್ಲಿ ಇರಬೇಕಾಗಿತ್ತು. ಆದರೆ ಅವ್ಯವಸ್ಥೆಯಿಂದಾಗಿ ಇಲ್ಲಿ ಸೌಲಭ್ಯಗಳ ಸಮಸ್ಯೆಗಳ ಒಂದಿಷ್ಟು ವಿಡಿಯೋಗಳನ್ನು ಸೋಂಕಿತರು ವೈರಲ್ ಮಾಡಿದ್ದಾರೆ.
ಸೆಂಟರ್ನಲ್ಲಿರುವುದಕ್ಕಿಂತ ಮನೆಯಲ್ಲೇ ಇರುತ್ತೇವೆ. ಮನೆಯಲ್ಲಿ ಉತ್ತಮ ಊಟ ಮತ್ತು ಆರೈಕೆ ಆಗುತ್ತದೆ. ಕೊವಿಡ್ ಸೆಂಟರ್ನಲ್ಲಿ ನೆಟ್ಟಿಗೆ ಊಟ, ನೀರು, ಶೌಚಾಲಯಗಳು ಸ್ವಚ್ಛವಿಲ್ಲ. ಸೆಂಟರ್ನಲ್ಲಿ ಅವ್ಯವಸ್ಥೆಯನ್ನು ಸರಿಪಡಿಸಬೇಕೆನ್ನುವುದು ನಮ್ಮ ಬೇಡಿಕೆ ಎಂದು ಕೊವಿಡ್ ಸೆಂಟರ್ ನಲ್ಲಿ ಪರದಾಡುತ್ತಿರುವ ಮಹಿಳೆಯರು ತಿಳಿಸಿದ್ದಾರೆ.
ಟಿವಿ9 ಕೊವಿಡ್ ಕೇರ್ ಸೆಂಟರ್ಗೆ ತೆರಳಿ ವರದಿ ಮಾಡುತ್ತಿರುವ ಸುದ್ದಿಯನ್ನು ತಿಳಿದ ಶಿವಮೊಗ್ಗ ತಹಸೀಲ್ದಾರ್ ನಾಗರಾಜ್ ಅವರು ಸ್ಥಳಕ್ಕೆ ದೌಡಾಯಿಸಿದರು. ಕೊವಿಡ್ ಕೇರ್ ಸೆಂಟರ್ನಲ್ಲಿ ಕೆಲವೊಂದು ಸಮಸ್ಯೆಗಳಿವೆ. ಕೂಡಲೇ ಅವುಗಳನ್ನು ಸರಿಪಡಿಸುತ್ತೇವೆ. ಕೊವಿಡ್ ಕೇರ್ ಸೆಂಟರ್ನಲ್ಲಿರುವ ಸಿಬ್ಬಂದಿಗಳು ಮತ್ತು ಹಾಸ್ಟೇಲ್ ವಾರ್ಡ್ಸ್ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನಲೆಯಲ್ಲಿ ಸೆಂಟರ್ನಲ್ಲಿ ಸಮಸ್ಯೆಗಳು ಉದ್ಭವಾಗಿದ್ದವು. ಅವೆಲ್ಲವನ್ನು ಸರಿಪಡಿಸಿ, ಸೋಂಕಿತರಿಗೆ ಉತ್ತಮ ಆಹಾರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ಒದಗಿಸುವ ಭರವಸೆಯನ್ನು ನೀಡಿದ್ದಾರೆ.
ಕೊವಿಡ್ ಕೇರ್ ಸೆಂಟರ್ ಅಂದರೆ ಸೋಂಕಿತರಿಗೆ ಉತ್ತಮ ವ್ಯವಸ್ಥೆಗಳು ಇಲ್ಲಿ ಸಿಗಬೇಕು. ಆದರೆ ಹೀಗೆ ಕೊವಿಡ್ ಕೇರ್ ಸೆಂಟರ್ ಮಾಡಿ ಸೊಂಕಿತರಿಗೆ ಉತ್ತಮ ಅರೈಕೆ ಮತ್ತು ಚಿಕಿತ್ಸೆಗಳಿಲ್ಲದಿದ್ದರೆ ಅವರ ಆರೋಗ್ಯದಲ್ಲಿ ಏರುಪೇರು ಅಗುವ ಸಾಧ್ಯತೆಗಳೇ ಹೆಚ್ಚು. ಇಷ್ಟೊಂದು ಅವ್ಯವಸ್ಥೆಗಳು ಕೊವಿಡ್ ಸೆಂಟರ್ಗಳಲ್ಲಿ ಇದ್ದರೆ ಸೋಂಕಿತರು ಇಲ್ಲಿಗೆ ಬರುವುದಕ್ಕೆ ಹಿಂದೇಟು ಹಾಕುತ್ತಾರೆ. ಇನ್ನು ಮುಂದೆಯಾದರು ಉತ್ತಮ ವ್ಯವಸ್ಥೆಗಳತ್ತ ತಾಲೂಕು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸುವ ಮೂಲಕ ಸೋಂಕಿತರ ನೆರವಿಗೆ ನಿಲ್ಲಬೇಕಿದೆ.
ಇದನ್ನೂ ಓದಿ:
ಮಂಡ್ಯದ ಮಿಮ್ಸ್‌ನಲ್ಲಿ ಕೊರೊನಾ ಸೋಂಕಿತರ ಪರದಾಟ; ಬೆಡ್ ಇಲ್ಲದೆ ಕುಳಿತಲ್ಲೇ ಆಕ್ಸಿಜನ್ ಪಡೆಯುವ ದುಃಸ್ಥಿತಿ ನಿರ್ಮಾಣ
ಮಧ್ಯಾಹ್ನ ಊಟವಿಲ್ಲದೆ ಕೊರೊನಾ ಸೋಂಕಿತರ ಪರದಾಟ; ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ