ಶಿವಮೊಗ್ಗ, ಡಿಸೆಂಬರ್ 19: ಬಾಯ್ಲರ್ ಸ್ಫೋಟ (boiler blast) ಸಂಭವಿಸಿ 7 ಜನರಿಗೆ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿರುವ ಗಣೇಶ್ ರೈಸ್ಮಿಲ್ನಲ್ಲಿ ನಡೆದಿದೆ. ಸದ್ಯ ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಫೋಟಗೊಂಡಿರುವ ರಭಸಕ್ಕೆ ರೈಸ್ಮಿಲ್ ಗೋಡೆ ಕುಸಿತಗೊಂಡಿದೆ. ಘಟನೆಯಿಂದ ರೈಸ್ಮಿಲ್ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದ್ದು, ಹೊಸಮನೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಭದ್ರಾವತಿಯಲ್ಲಿ ಎಸ್‌ಪಿ ಮಿಥುನ್ ಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಸಂಜೆ 6:30ರ ವೇಳೆಗೆ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟಗೊಂಡಿದೆ. ಏಳು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಗೂಡ್ಸ್ ವಾಹನಗಳಿಗೆ ನಿರ್ಬಂಧ: ಪರ್ಯಾಯ ಮಾರ್ಗಗಳು ಹೀಗಿವೆ
ಸ್ಫೋಟಗೊಂಡ ಹಿನ್ನಲೆ ಸಾಕಷ್ಟು ಆಸ್ತಿ-ಪಾಸ್ತಿ ಹಾನಿ ಆಗಿದೆ. ಒಂದೆರೆಡು ಮನೆಗಳಿಗೆ ಸಹ ಹಾನಿ ಆಗಿದೆ. ವಿದ್ಯುತ್ ವ್ಯತ್ಯಯವಾಗಿದ್ದು, ಇಂದು ಕೆಲವು ಕಡೆ ವಿದ್ಯುತ್ ಇರಲ್ಲ. ಸ್ಥಳದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿ ಪೊಲೀಸರು ಕಾರ್ಯಚರಣೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಸ್ಪೋಟಗೊಂಡ ಸ್ಥಳದಲ್ಲಿ ಓರ್ವ ಮಿಸ್ಸಿಂಗ್ ಆಗಿದ್ದಾನೆ. ನಾಪತ್ತೆಯಾಗಿರುವ ರಘುಗಾಗಿ ಹುಡುಕಾಟ ನಡೆಸಲಾಗುತ್ತಿದೆ. 25 ಜನ ಅಗ್ನಿಶಾಮಕದಳ ಸಿಬ್ಬಂದಿಗಳಿಂದ ಹುಡುಕಾಟ ನಡೆಸಲಾಗುತ್ತಿದೆ. ಸ್ಫೋಟದ ತೀವ್ರತೆಗೆ ನೂರಾರು ಕ್ವಿಂಟಾಲ್ ಭತ್ತ ಚಲ್ಲಾಪಲ್ಲಿ ಆಗಿದೆ. ಭತ್ತದ ಚೀಲದ ಅಡಿಯಲ್ಲಿ ರಘು ಸಿಲುಕಿರುವ ಸಾಧ್ಯತೆ ಹಿನ್ನಲೆ ಹುಡುಕಾಟ ಮಾಡಲಾಗುತ್ತಿದೆ.
ಮತ್ತೊಂದು ಪ್ರಕರಣದಲ್ಲಿ ಪ್ರವಾಸಿಗರ ವಾಹನವೊಂದು (ಟಿಟಿ) ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ಪಶ್ಚಿಮ ಘಟ್ಟದ ಕುದುರೆಮುಖದಲ್ಲಿ ಇತ್ತೀಚೆಗೆ ನಡೆದಿದೆ. ಉಡುಪಿಯ ಪ್ರವಾಸಿ ವಾಹನದಲ್ಲಿ ಕಾರ್ಕಳ ಮಾಳ ಮಾರ್ಗವಾಗಿ ಕುದುರೆಮುಖದ ಮೂಲಕ ಕಳಸದ ಕಡೆಗೆ ಹನ್ನೊಂದು ಮಂದಿ ಪ್ರಯಾಣಿಸುತ್ತಿದ್ದರು.
ಇದನ್ನೂ ಓದಿ: ಬೆಂಗಳೂರು: ಟ್ರಾಫಿಕ್ ಪೊಲೀಸ್ ಹಲ್ಲೆ ಮಾಡಿದ್ದಕ್ಕೆ ರಸ್ತೆಗೆ ಅಡ್ಡಲಾಗಿ ಕಂಟೈನರ್ ನಿಲ್ಲಿಸಿದ ಚಾಲಕ, ಟ್ರಾಫಿಕ್ ಜಾಮ್
ಕುದುರೆಮುಖ ಸಮೀಪಿಸುತ್ತಿದ್ದಂತೆ ಟೂರಿಸ್ಟ್ ವಾಹನದಲ್ಲಿ ಏಕಾಏಕಿ ಬೆಂಕಿ, ಹೊಗೆ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿ ವಾಹನ ತುಂಬಾ ವ್ಯಾಪಿಸಿದೆ. ಅದೃಷ್ಟವಶಾತ್ ಚಾಲಕ ಸಹಿತ ವಾಹನದೊಳಗಿದ್ದವರು ಆತಂಕದಿಂದ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅಗ್ನಿಯ ಕೆನ್ನಾಲಗೆ ಇಡೀ ವಾಹನಕ್ಕೆ ವ್ಯಾಪಿಸಿದ ಪರಿಣಾಮ ಸಂಪೂರ್ಣ ವಾಹನ ಸುಟ್ಟುಹೋಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕದಳದವರು ಬೆಂಕಿ ನಂದಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.