ಬೆಂಗಳೂರಿನ ವ್ಯಕ್ತಿಗೆ ಬಂತು ಚೀನಾ ಪಾರ್ಸೆಲ್: ನೋಡಿ ಬೆಚ್ಚಿಬಿದ್ದ, ಮುಂದೇನಾಯ್ತು?
ಬೆಂಗಳೂರಿನಲ್ಲಿ ಆನ್‌ಲೈನ್‌ನಲ್ಲಿ ವಸ್ತು ಆರ್ಡರ್ ಮಾಡಿದ ಓರ್ವ ವ್ಯಕ್ತಿಗೆ ಚೀನಾದಿಂದ ಅನುಮಾನಾಸ್ಪದ ಪಾರ್ಸೆಲ್ ಬಂದಿದೆ. ತಾವು ಆರ್ಡರ್ ಮಾಡದ ಪಾರ್ಸೆಲ್‌ನಲ್ಲಿ ಪೌಡರ್ ರೀತಿಯ ವಸ್ತು ಕಂಡುಬಂದಿದೆ. ಇದರಿಂದ ಆತಂಕಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ಅಮೆಜಾನ್ ಹೆಸರಿನಲ್ಲಿ ವಂಚಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 18: ಸದ್ಯ ಆನ್ಲೈನ್ ಜಮಾನ. ಬೆರಳ ತಿದಿಯಲ್ಲೇ ಜನರು ತಮಗೆ ಬೇಕಾದನ್ನು ಆರ್ಡರ್ ಮಾಡಿ ಪಡೆದುಕೊಳ್ಳುತ್ತಾರೆ. ಹೀಗೆ ಪಡೆಯುವ ಆರ್ಡರ್ಗಳು ಜನರಿಗೆ ಬೇಕಾಗಿದ್ದೆ ಇದ್ದರೆ, ಮತ್ತೆ ಕೆಲವೊಮ್ಮೆ ಇನ್ನೇನೋ ಬಂದಿರುತ್ತದೆ. ಆಗ ಜನರು ಹಣ ಕಳೆದುಕೊಳ್ಳುವುದರೊಂದಿಗೆ ಆತಂಕಕ್ಕೂ ಒಳಗಾಗಿರುವುದು ಇದೆ. ಇದೀಗ ಇಂತಹದ್ದೇ ಒಂದು ಘಟನೆ ನಗರದಲ್ಲಿ ನಡೆದಿದೆ. ಚೀನಾ (China Parcel) ಅಡ್ರೆಸ್ನಿಂದ ಬಂದ ಪಾರ್ಸೆಲ್ವೊಂದನ್ನು ನೋಡಿ ವ್ಯಕ್ತಿ ಆತಂಕಗೊಂಡಿದ್ದು, 112 ಪೊಲೀಸ್ ಹೆಲ್ಪ್ ಲೈನ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ನಗರದ ಕಾವಲ್ ಭೈರಸಂದ್ರದ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿರುವ ಶ್ರೀಕಾಂತ್ ಎಂಬುವವರು ಫೇಸ್ಬುಕ್ನಲ್ಲಿ ಬಂದ ಜಾಹೀರಾತು ನೋಡಿ, ಅದರಿಂದ ವಸ್ತುವೊಂದನ್ನು ಬುಕ್ ಮಾಡಿ ತರಿಸಿಕೊಂಡಿದ್ದಾರೆ. ಬುಕ್ ಮಾಡಿದ್ದ ಎರಡು ಪಾರ್ಸೆಲ್ ಈಗಾಗಲೇ ಬಂದಿತ್ತು. 499 ರೂ. ಮತ್ತೊಂದು ಸಿಓಡಿ (COD) ಪಾರ್ಸೆಲ್ ಬಂದಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಗೆ ಬಿದ್ದ ಕಾಲೇಜ್ ಪ್ರಿನ್ಸಿಪಾಲ್
ನಾವೇ ಮಾಡಿರಬಹುದು ಅಂತಾ ಶ್ರೀಕಾಂತ್ ಪಾರ್ಸೆಲ್ ಪಡೆದುಕೊಂಡಿದ್ದಾರೆ. ಅದನ್ನ ಓಪನ್ ಮಾಡಿ ನೋಡಿದಾಗ ಅದರಲ್ಲಿ ಪೌಡರ್ ಮಾದರಿಯ ವಸ್ತು ಕಂಡುಬಂದಿದೆ. ಅಲ್ಲದೆ ಚೀನಾ ವಿಳಾಸ ಕೂಡ ಅದರ ಮೇಲಿದೆ. ತಾನು ಆರ್ಡರ್ ಮಾಡದಿದ್ದರು ಪಾರ್ಸೆಲ್ ಬಂದಿದ್ದರಿಂದ ಶ್ರೀಕಾಂತ್ ಆತಂಕಗೊಂಡಿದ್ದಾರೆ. ಸದ್ಯ ಪ್ಯಾಕೆಟ್ ಓಪನ್ ಮಾಡದೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಮೆಜಾನ್ ಕಂಪನಿಗೆ ಪಂಗನಾಮ ಹಾಕಿದ್ದ ಕಿರಾತಕರು: ಬಂಧನ
ಮತ್ತೊಂದು ಪ್ರಕರಣದಲ್ಲಿ ವಂಚಕರಿಬ್ಬರು ಅಮೆಜಾನ್ ಇ-ಕಾಮರ್ಸ್ ಕಂಪನಿಯ ನಿಯಮವನ್ನೇ ಬಂಡವಾಳವನ್ನಾಗಿಸಿಕೊಂಡು ಕೋಟಿ ಕೋಟಿ ರೂ. ವಂಚನೆ ಮಾಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು. ರಾಜ್ ಕುಮಾರ್ ಮೀನಾ, ಮತ್ತು ಸುಭಾಸ್ ಗುರ್ಜರ್ ಎಂಬ ರಾಜಸ್ಥಾನ ಮೂಲದವರಿಂದ ಈ ಕೃತ್ಯವೆಸಗಲಾಗಿತ್ತು.
ಇವರು ಅಮೆಜಾನ್ ಕಂಪೆನಿಯಿಂದ ಏಕಕಾಲದಲ್ಲಿ ಸುಮಾರು 10ಕ್ಕೂ ಹೆಚ್ಚು ವಸ್ತುಗಳನ್ನು ಆರ್ಡರ್ ಮಾಡುತ್ತಿದ್ದರು. ಆರ್ಡರ್ ಮಾಡಿದ ಪಟ್ಟಿಯಲ್ಲಿ ಎರಡು ಸಾವಿರ ರೂ. ವಸ್ತುವಿನಿಂದ ಹಿಡಿದು ಕೆಲವು 20 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸಹ ಇರುತ್ತಿದ್ದವು. ಆದರೆ ಆರ್ಡರ್ ಇವರು ನೀಡಿದ ವಿಳಾಸಕ್ಕೆ ಬರುತ್ತಿದ್ದಂತೆ ಡೆಲಿವರಿ ಏಜೆಂಟ್‌ಗೆ ಗೊತ್ತಾಗದಂತೆ ದುಬಾರಿ ಬೆಲೆಯ ವಸ್ತುಗಳ ಲೇಬಲ್ ತೆಗೆದು ಕಡಿಮೆ ಬೆಲೆಯ ಐಟಂನ ಬಾಕ್ಸ್‌ಗೆ ಅಂಟಿಸುತ್ತಿದ್ದರು.
ಇದನ್ನೂ ಓದಿ: ಸೈಬರ್ ಕ್ರೈಂ: ವೃದ್ಧೆಯಿಂದ 1 ಕೋಟಿಗೂ ಅಧಿಕ ಹಣ ದೋಚಿದ ವಂಚಕರು
ತಪ್ಪು ಒಟಿಪಿಗಳನ್ನು ನೀಡಿ ತಾಂತ್ರಿಕ ತೊಂದರೆಯಿಂದ ದುಬಾರಿ ಬೆಲೆಯ ವಸ್ತುಗಳನ್ನು ನಾಳೆ ಪಡೆಯುತ್ತೇವೆ ಎಂದು ಹೇಳಿ ಬಳಿಕ ಅದಲು-ಬದಲು ಮಾಡಿದ ಬಾಕ್ಸ್‌ನ್ನು ಡೆಲಿವರಿ ಏಜೆಂಟ್‌ಗೆ ನೀಡಿ ವಾಪಾಸು ಕಳುಹಿಸುತ್ತಿದ್ದರು. ಏಜೆಂಟ್ ಅಲ್ಲಿಂದ ತೆರಳುತ್ತಿದ್ದಂತೆ ದುಬಾರಿ ಬೆಲೆಯ ವಸ್ತುಗಳ ಆರ್ಡರ್‌ನ್ನು ಕ್ಯಾನ್ಸಲ್ ಮಾಡುತ್ತಿದ್ದರು. ಆದರೆ ಆ ಬಾಕ್ಸ್ ಒಳಗೆ ವಸ್ತು ಬದಲಾಗಿದೆ ಎಂಬುದು ಗೋಡೌನ್ಗೆ ಹೋದಾಗಲೇ ಡೆಲಿವರಿ ಕಂಪೆನಿಗಳಿಗೆ ಗೊತ್ತಾಗುತ್ತಿತ್ತು. ಆದರೆ ಈ ರೀತಿ ವಂಚಿಸುತ್ತಿದ್ದ ವಂಚಕರನ್ನು ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:27 pm, Wed, 18 December 24