ಹುಬ್ಬಳ್ಳಿಯಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಗೆ ಬಿದ್ದ ಕಾಲೇಜ್ ಪ್ರಿನ್ಸಿಪಾಲ್
ಹುಬ್ಬಳ್ಳಿಯ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜಿನ ಪ್ರಿನ್ಸಿಪಾಲ್ ನಿರ್ಮಲಾ ಸೋಮನಗೌಡ ಪಾಟೀಲ್ ಅವರು ನಕಲಿ ಪೊಲೀಸ್ ಹೆಸರಿನಲ್ಲಿ ಸೈಬರ್ ವಂಚನೆ ಮಾಡಲಾಗಿದೆ. ವಂಚಕರು ಡಿಜಿಟಲ್ ಅರೆಸ್ಟ್ ಎಂದು ಹೇಳಿಕೊಂಡು ಅವರನ್ನು ಬೆದರಿಸಿ, 14.90 ಲಕ್ಷ ರೂ. ದೋಚಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ, ಡಿಸೆಂಬರ್ 18: ಅವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶಿಕ್ಷಕರು (Teacher). ನಿತ್ಯ ಸಾವಿರಾರು ಮಕ್ಕಳಿಗೆ ಪಾಠ ಮಾಡುತ್ತಾರೆ. ಪ್ರತಿಷ್ಠಿತ ಕಾಲೇಜ್ನಲ್ಲಿ ಪ್ರಿನ್ಸಿಪಾಲ್ ಕೂಡ ಹೌದು. ಮಕ್ಕಳ ಅಂಕು-ಡೊಂಕು ತಿದ್ದಿ ಬುದ್ಧಿ ಹೇಳುವ ಶಿಕ್ಷಕರಿಗೆ ಇದೀಗ ವಂಚಕರು ಬಲೆ ಬಿಸಿದ್ದಾರೆ. ಇನ್ನೇನು ನಿವೃತ್ತಿ ಹೊಂದಬೇಕಿದ್ದ ಪ್ರಿನ್ಸಿಪಾಲ್ರಿಗೆ ಸೈಬರ್ ವಂಚಕರು ಖೆಡ್ಡಾ ತೋಡಿದ್ದು, ಬರೋಬ್ಬರಿ 14.90 ಲಕ್ಷ ರೂ. ಎಗರಿಸಿದ್ದಾರೆ.
ಡಿಜಿಟಲ್ ಅರೆಸ್ಟ್ ಮಾಡಿ ಲಕ್ಷಾಂತರ ರೂ. ವಂಚನೆ
ಹುಬ್ಬಳ್ಳಿಯ ಪ್ರತಿಷ್ಠಿತ ಕಾಡಸಿದ್ದೇಶ್ವರ ಆರ್ಟ್ಸ ಕಾಲೇಜ್ ಪ್ರಿನ್ಸಿಪಾಲ್ ಆಗಿರುವ ನಿರ್ಮಲಾ ಸೋಮನ ಗೌಡ ಪಾಟೀಲ್ ಅವರು ಸೈಬರ್ ವಂಚಕರ ಬಲೆಗೆ ಬಿದ್ದು, ಹೆಚ್ಚು ಕಡಿಮೆ 15 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ನಕಲಿ ಪೊಲೀಸ್ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮಾಡಿ ಲಕ್ಷಾಂತರ ರೂ. ಹಣವನ್ನು ದೋಚಿದದ್ದಾರೆ.
ಇದನ್ನೂ ಓದಿ: ಸೈಬರ್ ಕ್ರೈಂ: ವೃದ್ಧೆಯಿಂದ 1 ಕೋಟಿಗೂ ಅಧಿಕ ಹಣ ದೋಚಿದ ವಂಚಕರು
ಹುಬ್ಬಳ್ಳಿಯ ವಿದ್ಯಾನಗರದಲ್ಲಿನ ಕಾಡಸಿದ್ದೇಶ್ವರ ಆರ್ಟ್ಸ್ ಕಾಲೇಜಿನ ಪ್ರಿನ್ಸಿಪಾಲ್ ನಿರ್ಮಲಾ ಸೋಮನಗೌಡ ಪಾಟೀಲ್ ಎಂಬುವರಿಗೆ ವಾಟ್ಸಾಪ್ ಮೂಲಕ ಕರೆ ಮಾಡಿದ ಸೈಬರ್ ವಂಚಕರು, ನಿಮ್ಮ ಆಧಾರ್ ಕಾರ್ಡ್ ಮಾನವ ಕಳ್ಳ ಸಾಗಾಣಿಕೆ ಮಾಡುವ ಗ್ಯಾಂಗ್ನ ಮೊಬೈಲ್ ನಂಬರ್ ಜೊತೆ ಲಿಂಕ್ ಇದೆ. ಹೀಗಾಗಿ ನೀವು ಸಿಬಿಐಗೆ ದೂರು ಕೊಡಿ ನಿಮ್ಮ ಕಾಲನ್ನು ಕನೆಕ್ಟ್ ಮಾಡುತ್ತೇವೆ ಎಂದು ನಿರ್ಮಲಾ ಅವರಿಗೆ ಹೇಳಿದ್ದಾರೆ.
ಯಾರಿಗೂ ಹೇಳದಂತೆ ಸೂಚನೆ
ಆಗ ಕನೆಕ್ಟ್ ಆಗಿ ಮಾತನಾಡಿದ ಇನ್ನೊಬ್ಬ ವಂಚಕ ನಿಮ್ಮ ಆಧಾರ್ ಐಡಿ ಮಕ್ಕಳ ಅಪಹರಣ, ಕೊಲೆ ಹಾಗೂ ಅಂಗಾಂಗಗಳ ಮಾರಾಟ ಮಾಡುವ ಕೃತ್ಯದ ಜೊತೆಗೆ 6.8 ಮಿಲಿಯನ್ ಹಣ ಕಾನೂನು ಬಾಹಿರವಾಗಿ ವಹಿವಾಟಿನಲ್ಲಿ ಭಾಗಿಯಾಗಿದ್ದು, ಇದನ್ನು ನಾವು ಟ್ರ್ಯಾಕ್ ಮಾಡುತ್ತಿದ್ದೇವೆ. ಜೊತೆಗೆ ನಿಮ್ಮನ್ನು ವಾಟ್ಸಾಪ್ ವಿಡಿಯೋ ಕಾಲ್ ಮೂಲಕ ವಿಚಾರಣೆ ನಡೆಸಬೇಕು ಎಂದು ಹೇಳಿ ವಿವಿಧ ಖಾತೆಗಳಿಗೆ 14,90,000 ಹಣವನ್ನು ವರ್ಗಾವಣೆ ಮಾಡಿಕೊಂಡು ಈ ಬಗ್ಗೆ ಯಾರಿಗೂ ಹೇಳಬೇಡಿ ಇದು ತುಂಬಾ ರಹಸ್ಯವಾಗಿರುತ್ತದೆ ಎಂದು ಪ್ರಿನ್ಸಿಪಾಲ್ಗೆ ವಂಚನೆ ಮಾಡಿದ್ದಾರೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣ ದಿನದಿಂದ ದಿನಕ್ಕೆ ಜಾಸ್ತಿಯಾಗಿದೆ. ಅದರಲ್ಲೂ ವಿದ್ಯಾವಂತರನ್ನು ಟಾರ್ಗೆಟ್ ಮಾಡಿ ಹಣ ವಸೂಲಿ ಮಾಡಲಾಗಿದೆ. ಈಗಂತೂ ಡಿಜಿಟಲ್ ಅರೆಸ್ಟ್ ಹೆಸರಲ್ಲಿ ನಾನಾ ತರಹದ ವಂಚನೆಗಳು ನಡೆಯುತ್ತಿವೆ. ಕೆಲವರಿಗೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಬ್ಲಾಕ್ ಮೇಲ್ ಮಾಡುವ ದಂಧೆಯಂತೂ ಎಗ್ಗಿಲ್ಲದೆ ನಡೆಯತ್ತಿದೆ. ಎಲ್ಲೋ ಕೂತು ವಂಚಕರು ಹಣ ಮಾಡುತ್ತಿದ್ದಾರೆ. ವಿದ್ಯಾಂವತರೇ ಮೋಸ ಹೋಗುತ್ತಿದ್ದು, ಇನ್ನು ಜನಸಾಮಾನ್ಯರ ಗತಿ ಏನೂ ಅನ್ನೋ ಪ್ರಶ್ನೆ ಮೂಡಿದೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಸ್ಥಳೀಯರಾದ ನಾರಾಯಣ ಎಂಬುವವರು ಹೇಳಿದ್ದಾರೆ.
ಇದನ್ನೂ ಓದಿ: ಜಸ್ಟ್ ವಾಟ್ಸ್ ಆ್ಯಪ್ ಕಾಲ್ ಮಾಡಿ ಕೋಟ್ಯಂತರ ರೂ ವಂಚನೆ: ಯಾರಿಗೂ ಹೇಳದಂತೆ ವೃದ್ಧನಿಗೆ ಬೆದರಿಕೆ
ಒಟ್ಟಿನಲ್ಲಿ ಇಷ್ಟು ದಿನಗಳ ಕಾಲ ಸೈಬರ್ ವಂಚಕರು ನಾನಾ ವಿಧದಲ್ಲಿ ವಂಚನೆ ಮಾಡೋದನ್ನು ಕೇಳಿದ್ದೇವೆ. ಆದರೆ ಇದೀಗ ವಂಚಕರು ಪೊಲೀಸ್, ಸಿಬಿಐ ಹೆಸರು ಹೇಳಿಕೊಂಡು ಸಾರ್ವಜನಿಕರನ್ನು ವಂಚನೆ ಮಾಡುತ್ತಿರುವುದು ಹೆಚ್ಚಾಗಿದ್ದು, ಸಾರ್ವಜನಿಕರು ಕೂಡ ಅಲರ್ಟ್ ಆಗಿರಬೇಕು ಎನ್ನುತ್ತಿದ್ದಾರೆ ಪೊಲೀಸರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.