ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದ ಮುಡಿಗೆ ಮತ್ತೆರಡು ಪ್ರಶಸ್ತಿ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಲವು ಜಾಗತಿಕ ಮಟ್ಟದ ಪ್ರಶಸ್ತಿಗಳು ಒಲಿದಿವೆ. ಅದರಲ್ಲೂ ಟರ್ಮಿನಲ್ 2 ಆರಂಭಗೊಂಡ ಬಳಿಕ ನೀಡುತ್ತಿರುವ ಸೇವೆಗೆ ಸಾಕಷ್ಟು ಪ್ರಶಸ್ತಿಗಳ ಮನ್ನಣೆ ದೊರೆಯುತ್ತಿದೆ. ಇದರ ಮಧ್ಯ ಇದೀಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 080 ಲಾಂಜ್ 'ಅತ್ಯುತ್ತಮ ದೇಶಿಯ ವಿಮಾನ ನಿಲ್ದಾಣ ಲಾಂಜ್' ಮತ್ತು ' ಮೆಚ್ಚಿನ ವಿಮಾನ ನಿಲ್ದಾಣ ಲಾಂಜ್' ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಬೆಂಗಳೂರು, (ಡಿಸೆಂಬರ್ 18): ಟ್ರಾವೆಲ್ ಹಾಗೂ ಲೀಶರ್ ಇಂಡಿಯಾ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾದ ‘ಅತ್ಯುತ್ತಮ ದೇಶೀಯ ಏರ್‌ಪೋರ್ಟ್ ಲಾಂಜ್’ ಮನ್ನಣೆಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನ ನಿರ್ಗಮನ ಪ್ರದೇಶದಲ್ಲಿರುವ 080 ಲಾಂಜ್ ಪಡೆದುಕೊಂಡಿದೆ. ಇದಲ್ಲದೆ, ಕಾಂಡೆ ನಾಸ್ಟ್ ರೀಡರ್ಸ್ ಚಾಯ್ಸ್ ಅವಾರ್ಡ್ಸ್ -2024 ನಲ್ಲಿ ಟರ್ಮಿನಲ್ 2 ನಲ್ಲಿನ ಅಂತಾರಾಷ್ಟ್ರೀಯ ನಿರ್ಗಮನ ಪ್ರದೇಶದಲ್ಲಿರುವ 080 ಲಾಂಜ್‌ಗೆ ‘ಮೆಚ್ಚಿನ ವಿಮಾನ ನಿಲ್ದಾಣ ಲಾಂಜ್’ ಎಂಬ ಶೀರ್ಷಿಕೆಯ ಮನ್ನಣೆಯನ್ನು ನೀಡಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ವಿಶ್ವದರ್ಜೆಯ ಪ್ರಯಾಣದ ಅನುಭವ, ಸೌಕರ್ಯ, ಸೌಲಭ್ಯ ಮತ್ತು ಅಸಾಧಾರಣ ಸೇವೆ ನೀಡುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬದ್ದತೆಯನ್ನು ಎತ್ತಿಹಿಡಿಯುತ್ತಿದೆ.
ಪ್ರತಿಷ್ಠಿತ ಟ್ರಾವೆಲ್ ಪ್ಲಸ್ ಲೀಶರ್ ಮತ್ತು ಕಾಂಡೆ ನಾಸ್ಟ್ ಟ್ರಾವೆಲರ್ ನಿಯತಕಾಲಿಕೆಗಳು ಪ್ರಯಾಣ ಮತ್ತು ಆತಿಥ್ಯ ಉದ್ಯಮದಲ್ಲಿನ ಅತ್ಯುತ್ತಮ ಸಂಸ್ಥೆಗಳನ್ನು ಓದುಗರ ಆಯ್ಕೆಯ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡುತ್ತವೆ. ಈ ಪುರಸ್ಕಾರಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 080 ಲಾಂಜ್ ಬಗ್ಗೆ ಪ್ರಯಾಣಿಕರು ಹೊಂದಿರುವ ನಂಬಿಕೆ ಮತ್ತು ಮೆಚ್ಚುಗೆಯ ಪ್ರತಿರೂಪವಾಗಿದೆ.
ಇದನ್ನೂ ಓದಿ: Bengaluru Power Cut: ಬೆಂಗಳೂರಿನಲ್ಲಿ ಡಿ.19, 20ರಂದು ವಿದ್ಯುತ್ ವ್ಯತ್ಯಯ: ಯಾವ್ಯಾವ ಏರಿಯಾಗಳಲ್ಲಿ?
ಈ ಕುರಿತು ಮಾತನಾಡಿದ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (BIAL) ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮರಾರ್, “ಕಾಂಡೆ ನಾಸ್ಟ್ ಟ್ರಾವೆಲರ್ ಮತ್ತು ಟ್ರಾವೆಲ್ + ಲೀಶರ್ ವತಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಲಾಂಜ್‌ಗೆ ಸಿಕ್ಕಿರುವ ಈ ಮನ್ನಣೆ ಪ್ರಶಂಸನೀಯ, ಪ್ರಯಾಣಿಕರಿಗೆ ಮೊದಲ ಆದ್ಯತೆಯಲ್ಲಿ ಉತ್ತಮ ಸೌಕರ್ಯ ಹಾಗೂ ವ್ಯವಸ್ಥೆಯೊಂದಿಗೆ ನಿರ್ಮಾಣವಾಗಿರುವ ಲಾಂಜ್‌ನ್ನು ಇನ್ನಷ್ಟು ಪ್ರಯಾಣಿಕರ ಸ್ನೇಹಿಯಂತೆ ಕಾರ್ಯನಿರ್ವಹಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಅನುಭವವನ್ನು ಇನ್ನಷ್ಟು ಉನ್ನತೀಕರಿಸಲು ಹಾಗೂ ಆತಿಥ್ಯದ ಹೊಸ ಮಾನದಂಡವನ್ನು ಹೆಚ್ಚಿಸಲು ನಮಗೆ ಪ್ರೇರಣೆ ನೀಡಿದಂತಾಗಿದೆ” ಎಂದರು.
ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿ
ಟರ್ಮಿನಲ್ 2 ಆರಂಭಗೊಂಡ ಬಳಿಕ ನೀಡುತ್ತಿರುವ ಸೇವೆಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿಗಳ ಮನ್ನಣೆ ದೊರೆಯುತ್ತಾ ಬಂದಿದ್ದು, ಇದು ವಿಮಾನ ನಿಲ್ದಾಣದ ಸೇವಾ ಉತ್ಕೃಷ್ಟತೆಯ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಟರ್ಮಿನಲ್ 2 ಲಾಂಜ್ ತನ್ನ ವಿಶ್ವ ದರ್ಜೆಯ ವಿನ್ಯಾಸ, ಉನ್ನತ ಆತಿಥ್ಯ ಮತ್ತು ಆಧುನಿಕ ಐಷಾರಾಮಿ ಸೌಕರ್ಯದೊಂದಿಗೆ ಸ್ಥಳೀಯ ಸಂಸ್ಕೃತಿಯ ಅನನ್ಯ ಸಮ್ಮಿಲನದಿಂದ ಕೂಡಿದೆ.
ಟರ್ಮಿನಲ್ 2 ನಲ್ಲಿನ 080 ಲಾಂಜ್‌ಗಳು ಬೆಂಗಳೂರಿನ ಹೆಮ್ಮೆಯ ಸಂಸ್ಕೃತಿ ಮತ್ತು ಹಸಿರು ಪರಿಸರದಿಂದ ಪ್ರೇರಿತವಾದ ನವೀನ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ವೈವಿಧ್ಯಮಯ ತಿಂಡಿ ತಿನಿಸುಗಳ ಆಯ್ಕೆ, ವರ್ಕ್‌ಸ್ಟೇಷನ್, ಹೈ-ಸ್ಪೀಡ್ ವೈ-ಫೈ ಮತ್ತು ಪ್ರೀಮಿಯಂ ಆತಿಥ್ಯ ಸೇವೆಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರಯಾಣಿಕರಿಗೆ ವಿಶ್ರಾಂತಿಯ ಅನುಭವವನ್ನು ನೀಡುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ