ಬೆಂಗಳೂರು: ಟ್ರಾಫಿಕ್ ಪೊಲೀಸ್ ಹಲ್ಲೆ ಮಾಡಿದ್ದಕ್ಕೆ ರಸ್ತೆಗೆ ಅಡ್ಡಲಾಗಿ ಕಂಟೈನರ್ ನಿಲ್ಲಿಸಿದ ಚಾಲಕ, ಟ್ರಾಫಿಕ್ ಜಾಮ್

ಬೆಂಗಳೂರು: ಟ್ರಾಫಿಕ್ ಪೊಲೀಸ್ ಹಲ್ಲೆ ಮಾಡಿದ್ದಕ್ಕೆ ರಸ್ತೆಗೆ ಅಡ್ಡಲಾಗಿ ಕಂಟೈನರ್ ನಿಲ್ಲಿಸಿದ ಚಾಲಕ, ಟ್ರಾಫಿಕ್ ಜಾಮ್

TV9 Web
| Updated By: Ganapathi Sharma

Updated on: Dec 19, 2024 | 9:32 AM

ಸಂಚಾರ ಪೊಲೀಸರು ದುಡ್ಡು ಪಡೆದಿದ್ದಲ್ಲದೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಚಾಲಕನೊಬ್ಬ ಕಂಟೈನರ್ ಲಾರಿಯನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟಿಸಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ನೈಸ್ ರಸ್ತೆ ಬಳಿ ನಡೆದಿದೆ. ಚಾಲಕನ ಮೇಲಿನ ಹಲ್ಲೆ ಖಂಡಿಸಿ ಇತರ ಕಂಟೈನರ್​ಗಳ ಚಾಲಕರೂ ಪ್ರತಿಭಟಿಸಿದ್ದರಿಂದ ಬೆಂಗಳೂರಿನ ಹಲವು ಕಡೆ ಬುಧವಾರ ರಾತ್ರಿ ಟ್ರಾಫಿಕ್ ಜಾಮ್ ಉಂಟಾಯಿತು.

ಬೆಂಗಳೂರು, ಡಿಸೆಂಬರ್ 19: ಸಂಚಾರಿ ಪೊಲೀಸರು ಹಲ್ಲೆ ನಡೆಸಿದ್ದಾಗಿ ಆರೋಪಿಸಿ ಚಾಲಕರೊಬ್ಬರು ಬೃಹತ್ ಕಂಟೈನರ್ ಟ್ರಕ್​ ಅನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಪ್ರತಿಭಟಿಸಿದ ಪರಿಣಾಮ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ವೈಟ್​ ಫೆದರ್​ನಿಂದ ಚಂದಾಪುರ, ಬೊಮ್ಮನಹಳ್ಳಿ ಮಾರ್ಗ‌ ವರೆಗೆ ಟ್ರಾಫಿಕ್ ಜಾಮ್ ಆಯಿತು. ಈ ಘಟನೆ ಬುಧವಾರ ರಾತ್ರಿ 9.30ರ ಸುಮಾರಿಗೆ ನಡೆದಿದೆ.

ಟ್ರಾಫಿಕ್ ಪೊಲೀಸರು 2,000 ರೂ. ಪಡೆದಿದ್ದಲ್ಲದೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿ ಚಾಲಕ ಪ್ರತಿಭಟಿಸಿದ್ದಾನೆ. ನಂತರದಲ್ಲಿ ಇತರ ಕಂಟೈನರ್​​ಗಳ ಚಾಲಕರೂ ರೊಚ್ಚಿಗೆದ್ದು ಪೊಲೀಸರ ವಿರುದ್ಧ ಘೋಷಣೆ ಹಾಕುತ್ತಾ ರಸ್ತೆ ತಡೆ ಮಾಡಿದ್ದಾರೆ. ಪಿಇಎಸ್ ಕಾಲೇಜು ಬಳಿ ನೈಸ್ ರಸ್ತೆ ಜ್ಞ, ಸಿಲ್ಕ್ ಬೊರ್ಡ್ ನಿಂದ ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿಯಿಂದ ಬೊಮ್ಮನಹಳ್ಳಿ ಮಾರ್ಗ‌ ನೈಸ್ ರಸ್ತೆ ಹಾಗೂ ಸರ್ವಿಸ್ ರಸ್ತೆಗಳನ್ನು ಬ್ಲಾಕ್ ಮಾಡಿ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ