Shivamogga Violence Highlights: ಶಿವಮೊಗ್ಗದಲ್ಲಿ ಇನ್ನೂ 2 ದಿನ 144 ಸೆಕ್ಷನ್​ ಮುಂದುವರಿಕೆ: ಶಾಲೆ ಕಾಲೇಜಿಗೆ ರಜೆ

| Updated By: ganapathi bhat

Updated on: Feb 22, 2022 | 10:51 PM

Shimoga, Karnataka Violence News Updates: ಸದ್ಯ ಕೊಲೆ ನಡೆದ ಬಗೆಗೆ ಪೊಲೀಸರು ಹಂತಹಂತವಾಗಿ ತನಿಖೆ ನಡೆಸುತ್ತಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಈವರೆಗೆ 6 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರನ್ನು ನ್ಯಾಯಾಂಗ ಬಂಧನದಲ್ಲಿಡಲಾಗಿದೆ.

Shivamogga Violence Highlights: ಶಿವಮೊಗ್ಗದಲ್ಲಿ ಇನ್ನೂ 2 ದಿನ 144 ಸೆಕ್ಷನ್​ ಮುಂದುವರಿಕೆ: ಶಾಲೆ ಕಾಲೇಜಿಗೆ ರಜೆ
ಬಜರಂಗದಳ ಕಾರ್ಯಕರ್ತ ಹರ್ಷ

ರಾಜ್ಯದಲ್ಲಿ ಒಂದೆಡೆ ಹಿಜಾಬ್​ ವಿವಾದ ತಾರಕಕ್ಕೇರಿದೆ. ಈ ನಡುವೆ  ಫೆ. 20ರಂದು ಶಿವಮೊಗ್ಗದಲ್ಲಿ ಭಜರಂಗದಳದ ಕಾರ್ಯಕರ್ತ ಹರ್ಷ ಎನ್ನುವ ಯುವಕನ ಬರ್ಬರ ಹತ್ಯೆಯಾಗಿದೆ. ಇದರಿಂದ ತಣ್ಣಗಿದ್ದ ಮಲೆನಾಡು ಬೂದಿ ಮುಚ್ಚಿದ ಕೆಂಡದಂತಾಗಿದೆ. ಫೆ.20ರಂದು ರಾತ್ರಿ ನಡುಬೀದಿಯಲ್ಲಿ ಹರ್ಷ ಎನ್ನುವ ಯುವಕ ಬರ್ಬರವಾಗಿ ಹತ್ಯೆಯಾಗಿದ್ದ, ಇದರಿಂದ ಮಲೆನಾಡು ಮಾತ್ರವಲ್ಲದೆ ಇಡೀ ಕರುನಾಡು ಬೆಚ್ಚಿಬಿದ್ದಿದೆ. ಸದ್ಯ ಕೊಲೆ ನಡೆದ ಬಗೆಗೆ ಪೊಲೀಸರು ಹಂತಹಂತವಾಗಿ ತನಿಖೆ ನಡೆಸುತ್ತಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಈ ವರೆಗೆ 6 ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು. ಇಬ್ಬರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.  ಶಿವಮೊಗ್ಗದಲ್ಲಿ ಇನ್ನು 2 ದಿನ  144 ಸೆಕ್ಷನ್​ ಜಾರಿ ಮಾಡಿ ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ.

LIVE NEWS & UPDATES

The liveblog has ended.
  • 22 Feb 2022 09:59 PM (IST)

    ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ‌; ಜಿಗಣಿಯಲ್ಲಿ ಹಿಂದೂಪರ ಸಂಘಟನೆಯಿಂದ ಮೌನಾಚರಣೆ

    ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ‌ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಹರ್ಷ ಆತ್ಮಕ್ಕೆ ಶಾಂತಿ ಕೋರಿ ಜಿಗಣಿಯಲ್ಲಿ ಹಿಂದೂಪರ ಸಂಘಟನೆಯ ಸದಸ್ಯರಿಂದ ಮೌನಾಚರಣೆ, ಕ್ಯಾಂಡಲ್ ಮೆರವಣಿಗೆ ನಡೆಸಲಾಗಿದೆ. ಆನೇಕಲ್‌ ತಾಲೂಕಿನ ಬೆಂಗಳೂರು ಹೊರವಲಯದ ಜಿಗಣಿಯಲ್ಲಿ ಮೌನಾಚರಣೆ ಮಾಡಲಾಗಿದೆ. ಹರ್ಷ ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹ ವ್ಯಕ್ತಪಡಿಸಲಾಗಿದೆ. ಜಿಗಣಿಯ ಎಪಿಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಗಿದೆ.

  • 22 Feb 2022 08:11 PM (IST)

    ಹಾಸನದ ಹೇಮಾವತಿ ಪ್ರತಿಮೆ ಬಳಿ ಹರ್ಷನ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಶ್ರದ್ಧಾಂಜಲಿ

    ಹಾಸನ: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣ ಹಿನ್ನೆಲೆ ಹಾಸನದ ಹೇಮಾವತಿ ಪ್ರತಿಮೆ ಬಳಿ ಹರ್ಷನ ಭಾವಚಿತ್ರದ ಮುಂದೆ ದೀಪ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಕೆ ಮಾಡಲಾಗಿದೆ. ಹಂತಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯ ಮಾಡಲಾಗಿದೆ.

  • 22 Feb 2022 08:10 PM (IST)

    ಹರ್ಷ ಹತ್ಯೆ ಹಿನ್ನೆಲೆ; ಭಾವಸಾರ ಕ್ಷತ್ರಿಯ ಸಮಾಜದ ಗುರುಪೀಠದ ಗುರೂಜಿ ಬೇಸರ

    ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ ಹಿನ್ನೆಲೆ ಭಾವಸಾರ ಕ್ಷತ್ರಿಯ ಸಮಾಜದ ಗುರುಪೀಠದ ಗುರೂಜಿ ಬೇಸರ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಪಂಢರಾಪುರದಲ್ಲಿರುವ ಸಮಾಜದ ಗುರುಪೀಠದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಸರ್ವ ಸಮಾಜದವರು ಒಂದೇ ಎಂದು ಬದುಕಿದ್ದವರು. ನಮ್ಮ ಸಮಾಜದ ಯುವಕ ಹರ್ಷ ಹತ್ಯೆ ಬೇಸರದ ಸಂಗತಿ. ಹರ್ಷನ ಹತ್ಯೆಗೆ ಕಾರಣರಾದವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಭಾವಸಾರ ಕ್ಷತ್ರಿಯ ಸಮಾಜದ ಗುರುಪೀಠದ ಗುರೂಜಿ ಆಗ್ರಹಿಸಿದ್ದಾರೆ. ಗುರೂಜಿ ಪ್ರಭಾಕರ ಬುವಾ ಬೋಧಲೆ ಮಹಾರಾಜ್​ ಹಂತಕರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.

  • 22 Feb 2022 08:09 PM (IST)

    ಶಿವಮೊಗ್ಗ ನಗರದ 4 ಪೊಲೀಸ್ ಠಾಣೆಗಳಿಗೆ ದಂಡಾಧಿಕಾರಿಗಳ ನೇಮಕ

    ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ ಹಿನ್ನೆಲೆ ನಗರದ 4 ಪೊಲೀಸ್ ಠಾಣೆಗಳಿಗೆ ದಂಡಾಧಿಕಾರಿಗಳ ನೇಮಕ ಮಾಡಲಾಗಿದೆ. ದೊಡ್ಡಪೇಟೆ, ಕೋಟೆ, ತುಂಗಾನಗರ ಠಾಣೆಗಳಿಗೆ ತಲಾ ಇಬ್ಬರು, ವಿನೋಬನಗರ ಠಾಣೆಗೆ ಓರ್ವ ದಂಡಾಧಿಕಾರಿ ನೇಮಕ ಮಾಡಲಾಗಿದೆ. ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ​ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.

  • 22 Feb 2022 08:08 PM (IST)

    ಹರ್ಷ ಮನೆಗೆ ಸಂಸದ ತೇಜಸ್ವಿ ಸೂರ್ಯ ಭೇಟಿ

    ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹತ್ಯೆಯಾದ ಹರ್ಷ ಮನೆಗೆ ಸಂಸದ ತೇಜಸ್ವಿ ಸೂರ್ಯ ಭೇಟಿ ನೀಡಿದ್ದಾರೆ. ಶಿವಮೊಗ್ಗದ ಸೀಗೆಹಟ್ಟಿಯಲ್ಲಿರುವ ಕೊಲೆಯಾದ ಹರ್ಷ ಮನೆಗೆ ಭೇಟಿ ನೀಡಿ, ಹರ್ಷ ಪೋಷಕರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಸಂಸದ ತೇಜಸ್ವಿ ಸೂರ್ಯಗೆ ಬಿಜೆಪಿ ಮುಖಂಡರು ಸಾಥ್ ನೀಡಿದ್ದಾರೆ.

  • 22 Feb 2022 06:02 PM (IST)

    Shivamogga Violence Live: ಹತ್ಯೆಗೆ ಸಂಬಂಧಿಸಿ ಇಂದು ನಾಲ್ವರು ಅರೆಸ್ಟ್​: ಇಬ್ಬರಿಗೆ ನ್ಯಾಯಾಂಗ ಬಂಧನ

    ಹರ್ಷ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಇಂದು ನಾಲ್ಕು ಜನರ ಬಂಧನವಾಗಿದೆ. ಖಾಸಿಫ್ ಮತ್ತು ನದೀಮ್ ಇಬ್ಬರು ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಉಳಿದ ನಾಲ್ವರು ಆರೋಪಿಗಳ ವಿಚಾರಣೆ ನಡೆಯುತ್ತಿದೆ ಪ್ರಕರಣದಲ್ಲಿ ಇನ್ನೂ ಅನೇಕರು ಇದ್ದಾರೆ. ತನಿಖೆ ಮುಂದುವರೆದಿದೆ. ಇನ್ನೂ ಬಂಧನ ಸಂಖ್ಯೆ ಹೆಚ್ಚು ಆಗುವ ಸಾಧ್ಯತೆ ಇದೆ ಎಂದು ಶಿವಮೊಗ್ಗದಲ್ಲಿ ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್​​ ಹೇಳಿಕೆ ನೀಡಿದ್ದಾರೆ.

  • 22 Feb 2022 05:58 PM (IST)

    Shivamogga Violence Live: ಹರ್ಷ ಹತ್ಯೆ ಪ್ರಕರಣ: ಕೊಪ್ಪಳದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಶ್ರದ್ಧಾಂಜಲಿ

    ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಹಿನ್ನಲೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.  ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಶ್ರದ್ಧಾಂಜಲಿ ಅರ್ಪಿಸಿದ ಕಾರ್ಯಕರ್ತರು. ಅಮರ್ ರಹೆ ಹರ್ಷ ಎಂದು ಘೋಷಣೆ ಕೂಗಿ ಶ್ರದ್ಧಾಂಜಲಿ ಅರ್ಪಣೆ ಮಾಡಿದ್ದಾರೆ.

  • 22 Feb 2022 05:53 PM (IST)

    Shivamogga Violence Live: ಪ್ರಕರಣದ ನಾಲ್ವರು ಆರೋಪಿಗಳಿಗೆ ಕ್ರಿಮಿನಲ್​ ಹಿನ್ನೆಲೆಯಿದೆ: ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್

    ಎಲ್ಲಾ 6 ಆರೋಪಿಗಳನ್ನು ಶಿವಮೊಗ್ಗದಲ್ಲೇ ಬಂಧಿಸಲಾಗಿದೆ. ಬಂಧಿತ 6 ಆರೋಪಿಗಳ ಪೈಕಿ ನಾಲ್ವರಿಗೆ ಕ್ರಿಮಿನಲ್ ಹಿನ್ನೆಲೆಯಿದೆ.  ಗಲಭೆಯಲ್ಲಿ ಭಾಗಿಯಾಗಿದ್ದ ಅಪರಾಧ ಹಿನ್ನೆಲೆ ಹೊಂದಿದ್ದಾರೆ.  ಎಂದು ಶಿವಮೊಗ್ಗದಲ್ಲಿ ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್​​ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

  • 22 Feb 2022 05:47 PM (IST)

    Shivamogga Violence Live: 6 ಮಂದಿ ಆರೋಪಿಗಳ ಹೆಸರು ಬಹಿರಂಗಗೊಳಿಸಿದ ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್​​

    ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿದ್ದಾರೆ.
    ಹರ್ಷ ಹತ್ಯೆ ಪ್ರಕರಣದಲ್ಲಿ 6 ಆರೋಪಿಗಳನ್ನು ಬಂಧಿಸಲಾಗಿದೆ. ಎ1 ಮೊಹಮ್ಮದ್ ಕಾಸಿಫ್, ಎ2 ಸೈಯದ್ ನದೀಮ್, ಎ3 ಆಸಿಫ್ ಉಲ್ಲಾ ಖಾನ್, ಎ4 ರಿಹಾನ್ ಷರೀಫ್​,  ಎ5 ನಿಹಾನ್, ಎ6 ಅಬ್ದುಲ್ ಅಫ್ನಾನ್​ ಬಂಧಿಸಲಾಗಿದೆ ಎಂದು  ಶಿವಮೊಗ್ಗದಲ್ಲಿ ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್​​ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

  • 22 Feb 2022 05:42 PM (IST)

    Shivamogga Violence Live: ಶಿವಮೊಗ್ಗದಲ್ಲಿ ಇನ್ನೂ 2 ದಿನ 144 ಸೆಕ್ಷನ್​ ಮುಂದುವರಿಕೆ: ಜಿಲ್ಲಾಧಿಕಾರಿ ಸೆಲ್ವಮಣಿ

    ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ  ಶಿವಮೊಗ್ಗದಲ್ಲಿ ಇನ್ನೂ 2 ದಿನ 144 ಸೆಕ್ಷನ್‌ ಮುಂದುವರಿಸಲಾಗಿದೆ ಎಂದು ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ಮಾಹಿತಿ ನೀಡಿದ್ದಾರೆ. ಇಂದು ​ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆವರೆಗೂ 144 ಸೆಕ್ಷನ್‌ ಮುಂದು ವರಿಕೆ ಮಾಡಲಾಗುವುದು ಜತೆಗೆ  ಶಿವಮೊಗ್ಗದಲ್ಲಿ ಶುಕ್ರವಾರದವರೆಗೂ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಪರಿಸ್ಥಿತಿ ನೋಡಿಕೊಂಡು ಮುಂದೆ ತೀರ್ಮಾನ ಕೈಗೊಳ್ಳುತ್ತೇವೆ. ಅಗತ್ಯವಸ್ತುಗಳ ಖರೀದಿಗೆ ಬೆಳಗ್ಗೆ 6-9 ಗಂಟೆವರೆಗೆ ಅವಕಾಶ ಎಂದು ಆದೇಶ ಹೊರಡಿಸಿದ್ದಾರೆ.

  • 22 Feb 2022 05:39 PM (IST)

    Shivamogga Violence Live: ಹರ್ಷ ಹತ್ಯೆ ಕೇಸ್​ನಡಿ ಈವರೆಗೆ 6 ಆರೋಪಿಗಳನ್ನು ಬಂಧನ: ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್​​ ಮಾಹಿತಿ

    ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್​​ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.  ಮೊದಲು ಕಾಸಿಮ್, ನದೀಮ್ ಎಂಬುವರನ್ನು ಬಂಧಿಸಲಾಗಿತ್ತು, ಉಳಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ ಶಿವಮೊಗ್ಗ ನಗರದ ನಿವಾಸಿಗಳು. ಪ್ರಕರಣದಲ್ಲಿ ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಇದುವರೆಗೆ 13 ಎಫ್​ಐಆರ್​ ದಾಖಲಾಗಿವೆ. ಹರ್ಷ ಹತ್ಯೆ ಪ್ರಕರಣದ ಬಗ್ಗೆ ಇನ್ನೂ ತನಿಖೆ ಮಾಡಲಾಗುತ್ತಿದೆ. ಎ1, ಎ2 ಆರೋಪಿಗಳನ್ನು ಶಿವಮೊಗ್ಗದಲ್ಲೇ ಬಂಧಿಸಲಾಯಿತು ನಿನ್ನೆ ಗಲಾಟೆ ವೇಳೆ ಗಾಯಗೊಂಡಿದ್ದಾಗಿ 8 ಜನರಿಂದ ದೂರು ದಾಖಲಿಸಲಾಗಿದ್ದು,  18 ವಾಹನಗಳ ಮೇಲೆ ದಾಳಿ ನಡೆಸಿ ಬೆಂಕಿಯನ್ನೂ ಹಚ್ಚಿದ್ದಾರೆ. ಸದ್ಯ  ಶಿವಮೊಗ್ಗದಲ್ಲಿ 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

  • 22 Feb 2022 05:10 PM (IST)

    Shivamogga Violence Live: ಹರ್ಷ ಹತ್ಯೆ ಪ್ರಕರಣ: ಅಧಿಕಾರಿಗಳ ಜಂಟಿ ಸುದ್ದಿಗೋಷ್ಠಿ

    ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಶಿವಮೊಗ್ಗ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜಂಟಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ.  ಎಸ್​ಪಿ ಬಿ.ಎಂ.ಲಕ್ಷ್ಮೀಪ್ರಸಾದ್,   ಜಿಲ್ಲಾಧಿಕಾರಿ ಸೆಲ್ವಮಣಿ ಮತ್ತು​ ಎಡಿಜಿಪಿ ಎಸ್.ಮುರುಗನ್​ ಜಂಟಿ ಸುದ್ದಿಗೋಷ್ಟಿ ನಡೆಸಿದ್ದಾರೆ.

  • 22 Feb 2022 04:40 PM (IST)

    Shivamogga Violence Live: ಹರ್ಷ ಕೊಲೆ ಪ್ರಕರಣದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ನಡೆಸಲಾಗುತ್ತಿದೆ: ಮಾಜಿ ಸಿಎಂ ಕುಮಾರಸ್ವಾಮಿ

    ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್​ಗೆ ಎಚ್​ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.  ಹರ್ಷ ಕೊಲೆ ಪ್ರಕರಣದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ನಡೆಸಲಾಗುತ್ತಿದೆ. 2 ರಾಷ್ಟ್ರೀಯ ಪಕ್ಷಗಳಿಂದ ವೋಟ್ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.  ಸಚಿವರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಕೊನೆಗೆ ಅಮಾಯಕರನ್ನು ಜೈಲಿಗೆ ಕಳುಹಿಸುತ್ತಾರೆ. ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

  • 22 Feb 2022 04:09 PM (IST)

    Shivamogga Violence Live: ಸಚಿವ ಈಶ್ವರಪ್ಪ ಅವರನ್ನು ವಜಾ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕರ​ ಪಾದಯಾತ್ರೆ

    ಈಶ್ವರಪ್ಪರನ್ನು ವಜಾ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್​ ನಾಯಕರು ರಾಜ್ಯಪಾಲರ ಭೇಟಿಗೆ ತೆರಳಿದ ಕಾಂಗ್ರೆಸ್ ನಾಯಕರು
    ವಿಧಾನಸೌಧದಿಂದ ರಾಜಭವನದವರೆಗೆ ಪಾದಯಾತ್ರೆ ಮೂಲಕ ಹೊರಟಡಿದ್ದಾರೆ. ಈಶ್ವರಪ್ಪರನ್ನು ವಜಾ ಮಾಡುವಂತೆ ರಾಜ್ಯಪಾಲರಿಗೆ  ಕೈ ನಾಯಕರು ಮನವಿ ಸಲ್ಲಿಕೆ ಮಾಡಲಿದ್ದಾರೆ. ರಾಷ್ಟ್ರಧ್ವಜ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಈಶ್ವರಪ್ಪ ಅವರನ್ನು ವಜಾ ಮಾಡುವಂತೆ ಕೈ ನಾಯಕರು ಮನವಿ ಸಲ್ಲಿಸಲಿದ್ದಾರೆ.

  • 22 Feb 2022 03:41 PM (IST)

    Shivamogga Violence Live: ಹರ್ಷ ಹತ್ಯೆ ಪ್ರಕರಣ: ಗೋಕಾಕ್​ನಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ

    ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಖಂಡಿಸಿ ಬೆಳಗಾವಿ ಜಿಲ್ಲೆ ಗೋಕಾಕ್‌ ನಗರದ ಬಸವೇಶ್ವರ ವೃತ್ತದಲ್ಲಿ ಶ್ರೀರಾಮಸೇನೆ ಪ್ರತಿಭಟನೆ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲೂ ಹಿಂದೂಗಳ ಹತ್ಯೆ, ಬಿಜೆಪಿ ಸರ್ಕಾರದಲ್ಲೂ ಹಿಂದೂಗಳ ಹತ್ಯೆಯಾಗುತ್ತಿದೆ. ನಾವು ಹಿಂದೂಗಳ ಪರ ಅಷ್ಟೇ ಯಾವ ಸರ್ಕಾರಕ್ಕೂ ಸಾಥ್ ನೀಡಲ್ಲ.ಈ ಪ್ರಕರಣವನ್ನ ಸರ್ಕಾರ ಕಡೆಗಣಿಸಬಾರದು. ಅವರೇನಾದ್ರೂ ಬೇಲ್ ಮೇಲೆ ಆಚೆ ಬಂದ್ರೆ ಉತ್ತರ ನೀಡಲು ನಮಗೂ ಬರುತ್ತೆ. ಛತ್ರಪತಿ ಶಿವಾಜಿ ಮಹಾರಾಜ, ಸಂಭಾಜಿ ಮಹಾರಾಜ, ಸಂಗೊಳ್ಳಿ ರಾಯಣ್ಣ ರಕ್ತದಲ್ಲಿ ಹುಟ್ಟಿದ್ದೇವೆ. ನಾವು ಗಾಂಧಿವಾದಿಗಳಲ್ಲ, ಗೋಡ್ಸೆವಾದಿಗಳು ಇನ್ಮುಂದೆ ವಿಚಾರ ಮಾಡಿ ಹೆಜ್ಜೆ ಇಡಿ ಎಂದು ಗೋಕಾಕ್ ನಗರದಲ್ಲಿ ಶ್ರೀರಾಮಸೇನೆ ತಾಲೂಕು ಅಧ್ಯಕ್ಷ ರವಿ ಪೂಜಾರಿ ಹೇಳಿಕೆ ನೀಡಿದ್ದಾರೆ.

  • 22 Feb 2022 03:25 PM (IST)

    Shivamogga Violence Live: ಮೂರನೇ ದಿನದ ಕಾರ್ಯನೆರವೇರಿಸಿದ ಕುಟುಂಬ: ಮಗನ ಫೋಟೋ ನೋಡಿ ಕಣ್ಣೀರಿಟ್ಟ ಹರ್ಷ ತಂದೆ

    ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯಾಗಿ ಇಂದಿಗೆ ಮೂರು ದಿನ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು. ಮೂರು ದಿನದ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ತಂದೆ ನಾಗರಾಜ್, ಸಂಬಂಧಿಕರು ಹಾಗೂ ಸ್ನೇಹಿತರಿಂದ ಅಂತಿಮ ಪೂಜಾ-ಕೈಂಕರ್ಯ ನೆರವೇರಿಸಿದ್ದಾರೆ. ಹರ್ಷನಿಗೆ ಇಷ್ಟವಾದ ಆಹಾರ, ತಿಂಡಿ-ತಿನಿಸುಗಳನ್ನಿಟ್ಟು ಪೂಜೆ, ಅಂತಿಮ ವಿಧಿ-ವಿಧಾನ ನೆರವೇರಿಸಿದ ಹರ್ಷ ತಂದೆ ನಾಗರಾಜ್,ಮಗನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವಾಗ ಕಣ್ಣೀರಟ್ಟಿದ್ದಾರೆ. ಅಸ್ತಿ ಬಿಡಲು ಕುಟುಂಬ ತುಂಗಾ-ಭದ್ರಾ ನದಿಗಳು ಸಂಗಮವಾಗುವ ಕೂಡ್ಲಿಗೆ ತೆರಳಿದ್ದಾರೆ. ಶಿವಮೊಗ್ಗ ತಾಲೂಕಿನ ಹೊಳೆಹೊನ್ನೂರು ಸಮೀಪದಲ್ಲಿ ಕೂಡ್ಲಿ ಗ್ರಾಮವಿದೆ.

  • 22 Feb 2022 02:31 PM (IST)

    Shivamogga Violence Live: ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆಗಳ ತುರ್ತು ಸಭೆ

    ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆಗಳು ತುರ್ತು ಸಭೆ ಕರೆದಿದೆ.  ಶಿವಮೊಗ್ಗದ ಸೀಗೆಹಟ್ಟಿ ಬಡಾವಣೆಯ ನಿವಾಸದಲ್ಲಿ ಸಭೆ ಕರೆಯಲಾಗಿದ್ದು, ಸಂತೋಷ್ ಗುರೂಜಿ, RSS ಮುಖಂಡ ಮಧುಕರ್ ಭಟ್,ಕಾರ್ಪೊರೇಟರ್ ಚೆನ್ನಬಸಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಶಿವಮೊಗ್ಗದ ಪ್ರಸಕ್ತ ಬೆಳವಣಿಗೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.

  • 22 Feb 2022 01:50 PM (IST)

    Shivamogga Violence Live: ಕೊಲೆ ಪ್ರಕರಣದ ನಂತರದ ಬೆಳವಣಿಗೆಗಳು ನಿಜಕ್ಕೂ ಖಂಡನೀಯ‌: ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ 

    ಶಿವಮೊಗ್ಗ ಯುವಕನ ಕೊಲೆ ಪ್ರಕರಣದ ನಂತ್ರ ಆದ ಬೆಳವಣಿಗೆಗಳು ನಿಜಕ್ಕೂ ಖಂಡನೀಯ‌. ರಾಜ್ಯದಲ್ಲಿ ದೇಶದಲ್ಲಿ ಕೊಲೆ ಪ್ರಕರಣಗಳು ಹೊಸದೇನಲ್ಲ. ಮಾಧ್ಯಮದ ವರದಿಯ ಪ್ರಕಾರ ಈ ಹತ್ಯೆಯಾದ ವ್ಯಕ್ತಿ ರೌಡಿಶೀಟರ್ ಅಂತಾ ಗೊತ್ತಾಗಿದೆ. ಈ ಕೊಲೆ ನಡೆದ ಸರ್ಕಾರದ ಜವಾಬ್ದಾರಿ ಯುತವಾದ ಸ್ಥಾನದಲ್ಲಿರುವವರ ಮಾತುಗಳು ಖಂಡನೀಯ. ಕೊಲೆ ನಡೆದ ತಕ್ಷಣ ಪೊಲೀಸರ ತನಿಖೆ ಆರಂಭ ವಾಗುವ ಮುನ್ನ, ಸಚಿವ ಈಶ್ವರಪ್ಪ, ರಾಘವೇಂದ್ರ, ಪ್ರತಾಪ್ ಸಿಂಹ ಈ ಹತ್ಯೆಯನ್ನ ಮುಸ್ಲಿಂ ರ ತಲೆಗೆ ಕಟ್ತಾರೆ.  ಪ್ರಚೋದನಕಾರಿ ಹೇಳಿಕೆಯಿಂದ ಮುಸ್ಲಿಂ ಮನೆ ಯ ಮೇಲೆ, ಅಂಗಡಿಯ ಮೇಲೆ , ವಾಹನದ ಮೇಲೆ ಬೆಂಕಿ ಹಚ್ಚಲಾಗಿದೆ.  ಸೆಕ್ಷನ್ ಜಾರಿಯಲ್ಲಿದ್ದರೂ ಈ ರೀತಿ ದಾಂಧಲೆ ಮಾಡಿದ್ದಾರೆ. ಹೀಗಾಗಿ ಇದಕ್ಕೆಲ್ಲಾ ನೇರ ಹೊಣೆ, ಅಕ್ಯೂಸ್ಡ್ ನಂಬರ್ 1 ಈಶ್ವರಪ್ಪನವರು ನಂತರ ಗೃಹ ಸಚಿವ ಅರಗ ಜ್ಞಾನೇಂದ್ರ, ಸಂಸದ ರಾಘವೇಂದ್ರ ರವರೇ ಇದಕ್ಕೆ ನೇರ ಜವಾಬ್ದಾರಿ ಎಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್  ಆರೋಪಿಸಿದ್ದಾರೆ.

  • 22 Feb 2022 01:44 PM (IST)

    Shivamogga Violence Live: ಶಿವಮೊಗ್ಗದಲ್ಲಿ ಪರಿಸ್ಥತಿ ನಿಯಂತ್ರಣಕ್ಕೆ ಬಂದಿದೆ-ಎಡಿಜಿಪಿ‌ ಪ್ರತಾಪ್ ರೆಡ್ಡಿ

    ಮೊನ್ನೆ ನಡೆದ ಕೊಲೆ ಪ್ರಕರಣದ ಹಿನ್ನೆಲೆ ಶಿವಮೊಗ್ಗ ಪ್ರಕ್ಷುಬ್ದವಾಗಿತ್ತು. ಈ ಪರಿಸ್ಥಿತಿ ನಿಯಂತ್ರಣಕ್ಕೆ ರಾಜ್ಯಾದ್ಯಂತ ಪೊಲೀಸ್ ಸಿಬ್ಬಂದಿಗಳನ್ನ ಶಿವಮೊಗ್ಗಕ್ಕೆ ಕರೆತರಲಾಗಿದೆ. ಇದೇ ಕಾರಣಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು  ಶಿವಮೊಗ್ಗದಲ್ಲಿ ಎಡಿಜಿಪಿ‌ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ.
    ಶಿವಮೊಗ್ಗ ನಗರದ 13 ಕಡೆ ದುರ್ಘಟನೆ ನಡೆದಿವೆ. ಬೆಂಕಿ ಹಚ್ಚಲಾಗಿದೆ. ಜೊತೆಗೆ ಈಗ ಇಬ್ಬರನ್ನ ಬಂಧಿಸಲಾಗಿದೆ. ಉಳಿದವರ ಬಂಧನ ಪ್ರಕ್ರಿಯೆ ನಡೆಯುತ್ತದೆ. ಆರೋಪಿತರನ್ನ ವಿಚಾರಣೆ ಮಾಡಲಾಗಿದೆ. ಆರೋಪಿಗಳ ಬಂಧನ ಕೋರ್ಟ್ ಗೆ ಹಾಜರು ಪಡಿಸಿದ ಬಳಿಕ ಮಾಹಿತಿ‌ ನೀಡಲಾಗುವುದು. ರಾಜಕಾರಣಿಗಳ ಬಗ್ಗೆ ನಾನು ಮಾತಾಡಲ್ಲ ಪೊಲೀಸ್ ಬಂದೋಬಸ್ತ ಬಗ್ಗೆ ಮಾತಾಡುವೆ. ಇನ್ನ ಅಗತ್ಯ ಕ್ರಮ ಕೈಗೊಂಡು ಶವಯಾತ್ರೆ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡಿದ ವ್ಯಕ್ತಿಗಳ ವಿರುದ್ಧ ಸಹ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

  • 22 Feb 2022 01:32 PM (IST)

    Shivamogga Violence Live: ಭಜರಂಗದಳ, ಹಿಂದೂಪರ ಸಂಘಟನೆಗಳಿಂದ ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ

    ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಮಂಡ್ಯದಲ್ಲಿ ಭಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಹರ್ಷ ಹತ್ಯೆಗೈದವರ ಗಲ್ಲಿಗೇರಿಸುವಂತೆ ಆಗ್ರಹಿಸಿದ್ದು, SDPI, PFI, CFI ಸಂಘಟನೆಗಳ ನಿಷೇಧ ಮಾಡುವಂತೆ ಒತ್ತಾಯಿಸಲಾಗಿದೆ.  ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಿನ್ನಲೆ.
    ಕೆಲಹೊತ್ತು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

  • 22 Feb 2022 01:26 PM (IST)

    Shivamogga Violence Live: ಹರ್ಷನ ಕೊಲೆ ಹಿಂದೆ ಯಾವುದೇ ಸಂಘಟನೆ, ಶಕ್ತಿ ಇದ್ದರೂ ಅದನ್ನು ದಮನ ಮಾಡಬೇಕು: ನಳೀನ್​ ಕುಮಾರ್​ ಕಟೀಲ್​

    ಮುಂಬೈನಲ್ಲಿ ಪ್ರಯೋಗಿಸಿದ ದಂಡ ರಾಜ್ಯದಲ್ಲೂ ಆಗಬೇಕು. ಮುಂಬೈನಲ್ಲಿ ಭೂಗತ ಪಾತಕಿಗಳು ಹೆಚ್ಚಿದಾಗ ಎನ್‌ಕೌಂಟರ್ ಮಾಡಲಾಗಿತ್ತು. ಆಗ ಮುಂಬೈನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ರಾಜ್ಯದಲ್ಲೂ ಅಂಥ ಕಠೋರವಾದ ಕ್ರಮಕೈಗೊಂಡರೆ ತಪ್ಪಿಲ್ಲ. ಹರ್ಷನ ಕೊಲೆ ಹಿಂದೆ ಯಾವುದೇ ಸಂಘಟನೆ, ಶಕ್ತಿ ಇದ್ದರೂ ಸರ್ಕಾರ ಅದನ್ನು ದಮನ ಮಾಡುವ ಕೆಲಸ ಮಾಡಬೇಕು. ಹತ್ಯೆ ಹಿಂದೆ ಯಾರಿದ್ದಾರೆ, ಅವರಿಗೆ ಬೆಂಗಾವಲು ಯಾರು, ಹಣಕಾಸಿನ ನೆರವು ಯಾರು ನೀಡಿದ್ದಾರೆ ಅವರ ಬಂಧನವೂ ಆಗಬೇಕು  ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದ್ದಾರೆ.

  • 22 Feb 2022 01:22 PM (IST)

    Shivamogga Violence Live: ನಿನ್ನೆ ಹರ್ಷ ಮೃತದೇಹ ಮೆರವಣಿಗೆ ವೇಳೆ 13 ಕಡೆ ಗಲಾಟೆ: ಎಡಿಜಿಪಿ ಪ್ರತಾಪ್ ರೆಡ್ಡಿ ಮಾಹಿತಿ

    ಹರ್ಷ ಕೊಲೆ ಆರೋಪಿಗಳಿಗೆ ಅಪರಾಧ ಹಿನ್ನೆಲೆ ಇದೆ ಎಂದು ಶಿವಮೊಗ್ಗದಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ. ಮುಂದುವರೆದು ಮಾಹಿತಿ ನೀಡಿ ಹರ್ಷ ಮೃತದೇಹ ಮೆರವಣಿಗೆ ವೇಳೆ ನಿನ್ನೆ 13 ಕಡೆ ಗಲಾಟೆಯಾಗಿದೆ. ಈವರೆಗೆ ಮೂರು ಎಫ್‌ಐಆರ್ ದಾಖಲು ಮಾಡಿದ್ದಾರೆ. ಶಿವಮೊಗ್ಗದಲ್ಲಿ ಎಡಿಜಿಪಿ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

  • 22 Feb 2022 01:18 PM (IST)

    Shivamogga Violence Live: ಶಿವಮೊಗ್ಗ ಕರ್ಫ್ಯೂ: ಇಂದು ಸಂಜೆ ಪರಿಸ್ಥಿತಿ ನೋಡಿ ಮುಂದಿನ ಕ್ರಮ – ಜಿಲ್ಲಾಧಿಕಾರಿ

    ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಪರಿಸ್ಥಿತಿ ಹದಗೆ್ಟ್ಟಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳು ಮಾತನಾಡಿ, ಶಿವಮೊಗ್ಗದಲ್ಲಿ ಸದ್ಯ ಕರ್ಫ್ಯೂ ಹೇರಿದ್ದೇವೆ. ಇಂದು ಸಂಜೆ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.  ಶಿವಮೊಗ್ಗ ಜಿಲ್ಲಾಧಿಕಾರಿ ಸೆಲ್ವಮನಿ ಹೇಳಿಕೆ ನೀಡಿದ್ದಾರೆ.

  • 22 Feb 2022 12:51 PM (IST)

    Shivamogga Violence Live: ಮುಧೋಳದಲ್ಲಿ ಹಿಂದುಪರ ಸಂಘಟನೆಗಳಿಂದ ರಸ್ತೆ ತಡೆದು ಪ್ರತಿಭಟನೆ: ಅಂಗಡಿ ಮುಂಗಟ್ಟುಗಳು ಬಂದ್​

    ಹರ್ಷ ಕೊಲೆ ಖಂಡಿಸಿ ಬಾಗಲಕೋಟೆ ಜಿಲ್ಲೆಯ  ಮುಧೋಳ ನಗರದಲ್ಲಿ ವಿವಿಧ ಹಿಂದುಪರ ಸಂಘಟನೆಗಳ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.  ನಗರದ ರನ್ನ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಕೊಲೆ ಕೃತ್ಯದಲ್ಲಿನ ಎಲ್ಲರನ್ನೂ ಕೂಡಲೆ ಬಂಧಿಸಿ ಕಠಿಣ ಶಿಕ್ಷೆಗೆ ಆಗ್ರಹ.. ನೀಡಬೇಕು ಎಂದು ಆಗ್ರಹಿಸಿದ್ದಾರೆ,  ಪ್ರತಿಭಟನೆ ಹಿನ್ನೆಲೆ, ನಗರದಲ್ಲಿ ಸ್ವಯಂಪ್ರೇರಿತ ಅಂಗಡಿ ಮುಂಗಟ್ಟು ಬಂದ್ ಆಗಿದ್ದು. ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.

  • 22 Feb 2022 12:45 PM (IST)

    Shivamogga Violence Live: ಹರ್ಷ ಹತ್ಯೆ ಖಂಡಿಸಿ ಧಾರವಾಡದಲ್ಲಿ ಶ್ರೀರಾಮಸೇನೆ ಪ್ರತಿಭಟನೆ

    ಶಿವಮೊಗ್ಗ ಹರ್ಷ ಹತ್ಯೆ ಪ್ರಕರಣವನ್ನು ಖಂಡಿಸಿ ಧಾರವಾಡದಲ್ಲಿ ಶ್ರೀರಾಮಸೇನೆ ಪ್ರತಿಭಟನೆ ಆರಂಭಿಸಿದೆ. ಎಸ್‌ಡಿಪಿಐ, ಪಿಎಫ್‌ಐ, ಸಿಎಫ್‌ಐ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ, ಧಾರವಾಡ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ಶ್ರೀರಾಮಸೇನೆ ಪ್ರತಿಭಟನೆ ನಡೆಸುತ್ತಿದೆ.  ಮೂರೂ ಸಂಘಟನೆಗಳನ್ನು ಬ್ಯಾನ್ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

  • 22 Feb 2022 12:32 PM (IST)

    Shivamogga Violence Live: ವಿರೋಧ ಪಕ್ಷದ ಗದ್ದಲವೇ ಹರ್ಷ ಕೊಲೆಗೆ ಕಾರಣ: ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಆರೋಪ

    ವಿರೋಧ ಪಕ್ಷದ ಗದ್ದಲವೇ ಹರ್ಷ ಕೊಲೆಗೆ ಕಾರಣ. ಶಿವಮೊಗ್ಗದಲ್ಲಿ ಷಡ್ಯಂತ್ರದಿಂದ ಹರ್ಷ ಕೊಲೆಯಾಗಿದೆ ಎಂದು ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ. ಕಾಂಗ್ರೆಸ್​ ಧರಣಿಯಿಂದ ರಾಜ್ಯದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ರಾಜ್ಯದ ಮಕ್ಕಳಲ್ಲಿ ಗೊಂದಲ ಸೃಷ್ಟಿ ಆಗುವುದು ಬೇಡ. ಸರ್ಕಾರದ ಮಧ್ಯಂತರ ಆದೇಶವನ್ನು ಪಾಲಿಸಬೇಕು. ಶಾಂತಿ ಕಾಪಾಡುವುದು ಕಾಂಗ್ರೆಸ್​ನ ಗಮನದಲ್ಲಿಲ್ಲ.ಪ್ರಕ್ಷುಬ್ದ ವಾತಾವರಣ ಮಾಡುವುದು ಕಾಂಗ್ರೆಸ್ ಉದ್ದೇಶ
    ವಿಧಾನಸಭೆಯಲ್ಲಿ ಸಿಎಂ ಬೊಮ್ಮಾಯಿ ಆರೋಪ ಮಾಡಿದ್ದಾರೆ.

  • 22 Feb 2022 12:18 PM (IST)

    Shivamogga Violence Live: ಹರ್ಷ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಹಿಂದೂಪರ ಕಾರ್ಯಕರ್ತರ ಪ್ರತಿಭಟನೆ

    ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಬೆಳಗಾವಿಯಲ್ಲಿ ಹಿಂದೂಪರ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಶ್ರೀರಾಮ ಸೇನೆ, ಹಿಂದೂರಾಷ್ಟ್ರ ಸಂಘಟನೆ ಕಾರ್ಯಕರ್ತರಿಂದ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಕಾರ್ಯಕರ್ತರು, ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ಬ್ಯಾನ್ ಮಾಡಿ, ಪ್ರಮುಖರನ್ನ ಬಂಧಿಸುವಂತೆ ಒತ್ತಾಯಿಸಿದ್ದಾರೆ.

  • 22 Feb 2022 12:13 PM (IST)

    Shivamogga Violence Live: ಭಜರಂಗದಳ ಕಾರ್ಯಕರ್ತನ ಹತ್ಯೆಗೆ ಕಾಂಗ್ರೆಸ್ ನಾಯಕರ ಹೇಳಿಕೆಗಳೇ ಕಾರಣ: ಶಾಸಕ ರೇಣುಕಾಚಾರ್ಯ

    ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಕಾಂಗ್ರೆಸ್ ನಾಯಕರ ಹೇಳಿಕೆಗಳೇ ಕಾರಣ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.  ದೇಶದ್ರೋಹಿ ಹೇಳಿಕೆ ನೀಡಿದವರನ್ನು ಎನ್‌ಕೌಂಟರ್ ಮಾಡಿ
    ನನಗೆ ಅಧಿಕಾರ ಮುಖ್ಯವಲ್ಲ, ಹಿಂದುತ್ವ ಮುಖ್ಯವೆಂದ ರೇಣುಕಾಚಾರ್ಯ ಅವರು ಹಿಂದೂ ಕಾರ್ಯಕರ್ತನ ಹತ್ಯೆಯಾದರೆ ನಾನು ಸುಮ್ಮನಿರಲ್ಲ. ಸ್ಥಳೀಯ ಕೆಲ ಪೊಲೀಸರ ಲೋಪದಿಂದ ಈ ಹತ್ಯೆಯಾಗಿದೆ ಎಂದು  ಟಿವಿ9ಗೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

  • 22 Feb 2022 12:00 PM (IST)

    Shivamogga Violence Live: ಹರ್ಷ ಹತ್ಯೆ ಪ್ರಕರಣ : ರಾಮನಗರದಲ್ಲಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

    ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ವಿಚಾರವಾಗಿ ರಾಮನಗರದಲ್ಲಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ ಆರಂಭಿಸಿದೆ.  ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಹತ್ಯೆ ಮಾಡಿದವರನ್ನ ಕೂಡಲೇ ಬಂಧಿಸಬೇಕು, ಪಿಎಫ್ ಐ ಸಂಘಟನೆ ನಿಷೇಧಿಸಬೇಕು ಎಂದು ಒತ್ತಾಯಿಸಲಾಗಿದೆ.

  • 22 Feb 2022 11:56 AM (IST)

    Shivamogga Violence Live: ಹರ್ಷಮನೆಗೆ ಮಾಜಿ ಶಾಸಕ ಜೀವರಾಜ್​ ಭೇಟಿ: ಸಾಂತ್ವಾನ ಹೇಳಿ ಧನಸಹಾಯ

    ಕೊಲೆಯಾದ ಹರ್ಷ ಮನೆಗೆ ಮಾಜಿ‌ ಶಾಸಕ ಡಿ ಎನ್ ಜೀವರಾಜ್ ಭೇಟಿ ನೀಡಿ, ಮೃತ ಹರ್ಷ ತಾಯಿ ಸಹೋದರಿಯರಿಗೆ ಸಾಂತ್ವನ ಹೇಳಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಎಂದು‌ ಭರವಸೆ ನೀಡಿದ ಜೀವರಾಜ್, ಮೃತರ ಕುಟುಂಬಕ್ಕೆ ಒಂದು ಲಕ್ಷ‌ ರೂ ಧನ ಸಹಾಯ ಮಾಡಿದ್ದಾರೆ. ಈ ವೇಳೆ ಹಣ ಬೇಡ ಎಂದ ಹರ್ಷ ಮನೆಯವರು, ಈ ರೀತಿ ಹಣ ತೆಗೆದುಕೊಂಡರೆ ಹರ್ಷ ಬೈತಾನೇ
    ಎಲ್ಲರಿಗೂ ಬುದ್ದಿ ಹೇಳುತ್ತಿದ್ದ ಅವನು ಅಂತಾ ನಿರಾಕರಣೆ ಮಾಡಿದ್ದಾರೆ. ಕೊನೆಗೂ ನಿಮ್ಮ ಮನೆ ಮಗನಾಗಿ ಕೊಡುತ್ತಿದ್ದೇನೆ
    ದಯಮಾಡಿ ತೆಗೆದುಕೊಳ್ಳಿ ಎಂದು ಮನವಿ ಮಾಡಿ ಜೀವರಾಜ್ ಹಣ ನೀಡಿದದ್ದಾರೆ.

  • 22 Feb 2022 11:48 AM (IST)

    Shivamogga Violence Live: ಆರೋಪಿಗಳು ಯಾವ ಧರ್ಮದವರಾಗಿದ್ದರೂ ಕ್ರಮ ಕೈಗೊಳ್ಳಬೇಕು: ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ

    ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ಬಿಜೆಪಿಯವರಿಗೆ ಆಡಳಿತ ನಡೆಸುವುದು ಬರುತ್ತಿಲ್ಲ ಹೀಗಾಗಿ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಗುಪ್ತಚರ ಇಲಾಖೆ ಏನಾಗಿದೆ  ಕೊಲೆಯಾದ ಹರ್ಷನ ಜೀವಕ್ಕೆ ಅಪಾಯ ಇತ್ತು ಎಂದು ಅವರ ತಂದೆಯೆ ಹೇಳಿದ್ದಾರೆ. ಇದು ಗೊತ್ತಿದ್ದರು ಪೊಲೀಸ್ ಇಲಾಖೆ ಏನ್ ಮಾಡುತ್ತಿತ್ತು. ಹಿಂದೂ,ಮುಸ್ಲಿಂ, ಕ್ರೈಸ್ತ ಯಾವ ಧರ್ಮದವರೆ ಆಗಲಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಧ್ರುವನಾರಾಯಣ ಹೇಳಿಕೆನೀಡಿದ್ದಾರೆ.

  • 22 Feb 2022 11:36 AM (IST)

    Shivamogga Violence Live: ಈವರೆಗೆ ಮೂರು ಜನ ಅರೆಸ್ಟ್​: ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ

    ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಅಧಿಕೃತವಾಗಿ ಮೂರು ಜನ ಅರೆಸ್ಟ್ ಮಾಡಲಾಗಿದೆ. ಉಳಿದವರ ಇಂಟಾಗ್ರೇಷನ್ ಆಗ್ತಿದೆ.  ತನಿಖೆ ನಡೆಯುತ್ತಿದೆ, ಬಳಿಕ ಮಾಹಿತಿ ಸಿಗಲಿದೆ. ಪೊಲೀಸರು ಆಕ್ಷನ್ ತೆಗೆದುಕೊಳ್ಳುತ್ತಾರೆ. ನಾನು ಹೇಳೋದು ಅಧಿಕೃತ. ನಮ್ಮ ಪೊಲೀಸರು ಸಮರ್ಥರಿದ್ದಾರೆ ಅನ್ನೋ ನಂಬಿಕೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

  • 22 Feb 2022 11:28 AM (IST)

    Shivamogga Violence Live: ಕುಟುಂಬ ಸದಸ್ಯರಿಂದ ಹರ್ಷ ಚಿತಾಭಸ್ಮ ಸಂಗ್ರಹ ಕಾರ್ಯ

    ರುದ್ರಭೂಮಿಯಲ್ಲಿ ಹರ್ಷ ಕುಟುಂಬ ಸದಸ್ಯರಿಂದ ಚಿತಾಭಸ್ಮ ಸಂಗ್ರಹ ಕಾರ್ಯ ನಡೆದಿದೆ.  ಹಿರಿಯ ಸಹೋರಿ ಅಶ್ವಿನಿಯಿಂದ ಶಾಸ್ತ್ರೋಕ್ತವಾಗಿ ಚಿತಾ ಭಸ್ಮ ಸಂಗ್ರಹಿಸಿದ್ದಾರೆ. ರುದ್ರ ಭೂಮಿಯಲ್ಲಿ ತಮ್ಮ ಹರ್ಷಾ ಪೋಟೋ ಮುಂದೆ  ಸಹೋದರಿ ಅಶ್ವಿನಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಿನ್ನೆ ನನ್ನ ತಮ್ಮನ ಶವ ತಂದೆ ಇಂದು ಆತನ ಚಿತಾಭಸ್ಮ ಸಂಗ್ರಹಿಸುತ್ತಿದ್ದೇನೆ. ನಮ್ಮ ಜೀವನದ ಕೆಟ್ಟ ಗಳಿಗೆ ಎಂದು ಸಹೋದರಿ ಅಶ್ವಿನಿ ನೋವು ತೋಡಿಕೊಂಡಿದ್ದಾರೆ.  ಹರ್ಷ ತಂದೆ ನಾಗರಾಜ್ ಸೇರಿದಂತೆ ಕುಟುಂಬ ಸದಸ್ಯರಿಂದ ಚಿತಾ ಭಸ್ಮ ಸಂಗ್ರಹ ಕಾರ್ಯ ನಡೆದಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

  • 22 Feb 2022 11:23 AM (IST)

    Shivamogga Violence Live: ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದ ವಿಪಕ್ಷ ನಾಯಕ ಸಿದ್ದರಾಮಯ್ಯ

    ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆಯ  ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಸುದ್ದಿಗೋಷಿಠಿ ನಡೆಸಿದ್ದಾರೆ.  ಭಾನುವಾರವೇ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿ ಆಗಿದೆ. ಶಿವಮೊಗ್ಗದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದರ ಹೊಣೆಯನ್ನು ಗೃಹ ಸಚಿವರೇ ಹೊರಬೇಕು. ನಿಷೇಧಾಜ್ಞೆ ಇದ್ದರೂ ಮೆರವಣಿಗೆಗೆ ಹೇಗೆ ಅವಕಾಶ ಕೊಟ್ಟರು.  ಸಚಿವರ ಎದುರೇ ಕಲ್ಲುತೂರಾಟ, ಬೆಂಕಿ ಹಚ್ಚಿಸುವುದು ಆಗುತ್ತೆ. ಸರ್ಕಾರದಿಂದಲೇ 144 ಸೆಕ್ಷನ್ ಉಲ್ಲಂಘನೆಯಾಗಿದೆ. ಶಿವಮೊಗ್ಗದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಗೆ ಬಿಜೆಪಿ, RSSನವರು ಬಜರಂಗದಳದವರು ಇವರೆಲ್ಲ ರಸ್ತೆಗಿಳಿದು ಹೋರಾಟ  ಮಾಡಿದ್ದಾರೆ. ಇದು ನಾಗರಿಕ ಸಮಾಜದ ಲಕ್ಷಣವಾ? ಇದನ್ನು ಗೂಂಡಾಗಳ ಸರ್ಕಾರ ಎಂದು ಕರೆಯಬೇಕು. ಸಚಿವರಿಂದಲೇ ಉಲ್ಲಂಘನೆ ಆಗಿದೆ ಅಂದ್ರೆ ಸರ್ಕಾರವೆಲ್ಲಿದೆ. ಇದೆಲ್ಲದಕ್ಕೂ ಸಚಿವ ಕೆ.ಎಸ್.ಈಶ್ವರಪ್ಪ ಕಾರಣ. ಸಂಸದ ಬಿ.ವೈ.ರಾಘವೇಂದ್ರ ಇದರ ಹೊಣೆ ಹೊರಬೇಕು ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ,

Published On - 11:11 am, Tue, 22 February 22

Follow us on