ಶಿಕಾರಿಪುರದಲ್ಲಿ ನಾಡ ಬಂದೂಕು ತಯಾರಿಕಾ ಜಾಲ ಪತ್ತೆ, ರಾಜ್ಯವನ್ನೇ ಬಿಚ್ಚಿಬೀಳಿಸಿದ ಕಾರ್ಪೆಂಟರ್

ಬೆಂಗಳೂರು ಹಾಗೂ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿಗಳು ಪತ್ತೆಯಾಗಿದ್ದು, ಇದರ ಬೆನ್ನಲ್ಲೇ ರಾಜ್ಯವನ್ನೇ ಬೆಚ್ಚಿಬೀಳಿಸುವಂತಹ ಪ್ರಕರಣ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಹೌದು. ನಾಡ ಬಂದೂಕು ತಯಾರಿಕಾ ಜಾಲ ಪತ್ತೆಯಾಗಿದೆ. ವೃತ್ತಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದವ ಬರೋಬ್ಬರಿ 7 ನಾಡ ಬಂದೂಕು ತಯಾರಿಸಿಟ್ಟಿರುವುದು ಬೆಳಕಿಗೆ ಬಂದಿದ್ದು, ಸದ್ಯ ಪೊಲೀಸರು ಕಾರ್ಪೆಂಟರ್ ಅನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಶಿಕಾರಿಪುರದಲ್ಲಿ ನಾಡ ಬಂದೂಕು ತಯಾರಿಕಾ ಜಾಲ ಪತ್ತೆ, ರಾಜ್ಯವನ್ನೇ ಬಿಚ್ಚಿಬೀಳಿಸಿದ ಕಾರ್ಪೆಂಟರ್
Shikaripura Gun
Edited By:

Updated on: Feb 06, 2026 | 6:36 PM

ಶಿವಮೊಗ್ಗ, (ಫೆಬ್ರವರಿ 06): ಸದ್ಯ ಬೆಂಗಳೂರು. ಮೈಸೂರು (Bengaluru And Mysuru) ಡ್ರಗ್ಸ್​ ಫ್ಯಾಕ್ಟರಿ ಪತ್ತೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ (Shivamogga) ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದ ಲಕ್ಷ್ಮಣಪ್ಪ ವೃತ್ತಿಯಲ್ಲಿ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದು, ಇದರ ಜೊತೆಗೆ ನಾಡ ಬಂದೂಕು ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕಾರ್ಪೆಂಟರ್ ವೃತ್ತಿಯ ಲಕ್ಷ್ಮಣಪ್ಪ ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಕಾರ್ಪೆಂಟರ್ ಆಗಿದ್ದ ಲಕ್ಷ್ಮಣಪ್ಪ, ತನ್ನ ಮನೆಯ ಪಕ್ಕದ ಹಳೆ ಮನೆಯಲ್ಲಿ ಬಂದೂಕು ತಯಾರಿಸುತ್ತಿದ್ದ . ಇದುವರೆಗೆ 7 ಸಿಂಗಲ್ ಬ್ಯಾರಲ್​​ ಬಂದೂಕುಗಳನ್ನು ತಯಾರಿಸಿಟ್ಟಿದ್ದಾನೆ. ಯಾವುದೇ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ನಿರ್ಮಿಸಿ ಗ್ರಾಮೀಣ ಪ್ರದೇಶದ ರೈತರಿಗೆ ಮಾರಾಟ ಮಾಡುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಪ್ರಾಣಿಗಳ ಬೇಟೆಗಾಗಿ ಬಳಸುವ ಉದ್ದೇಶದಿಂದ ಈ ನಾಡ ಬಂದೂಕುಗಳನ್ನು ಸಿದ್ಧಪಡಿಸಿ ನೀಡುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ: ಮೈಸೂರು ಫಿನಾಯಿಲ್ ಫ್ಯಾಕ್ಟರಿ ಕೇಸ್​ಗೆ ಬಿಗ್ ಟ್ವಿಸ್ಟ್: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಎನ್​ಸಿಬಿ, ಸರ್ಕಾರಕ್ಕೆ ಮುಖಭಂಗ

ಖಚಿತ ಮಾಹಿತಿ ಮೇರೆಗೆ ಶಿಕಾರಿಪುರ ಪೊಲೀಸರು ದಾಳಿ ಮಾಡಿದಾಗ 7 ನಾಡ ಬಂದೂಕುಗಳು ಪತ್ತೆಯಾಗಿವೆ. ಇನ್ನು ತನಿಖೆಯ ವೇಳೆ ಅಕ್ರಮ ಶಸ್ತ್ರಾಸ್ತ್ರ ತಯಾರಿಕೆಯ ಬಗ್ಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಬಂದೂಕುಗಳಿಗೆ ಅಗತ್ಯವಿರುವ ಟ್ರಿಗರ್, ಟ್ರಿಗರ್ ಗಾರ್ಡ್, ಬಿಡಿ ಭಾಗಗಳು ಹಾಗೂ ಹಳೆಯ ಸ್ಟೀರಿಂಗ್‌ಗಳನ್ನು ಶಿವಮೊಗ್ಗದ ವಿವಿಧ ಗುಜರಿ ಅಂಗಡಿಗಳಿಂದ ಖರೀದಿಸಲಾಗುತ್ತಿತ್ತು. ಬಂದೂಕಿಗೆ ಬೇಕಾದ ಮರದ ಹಿಡಿಕೆಗಳನ್ನು ಲಕ್ಷ್ಮಣಪ್ಪ ತಾನೇ ತಯಾರಿಸುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಸದ್ಯ ಶಸ್ತ್ರಾಸ್ತ್ರ ತಿದ್ದುಪಡಿ ಕಾಯ್ದೆಯಡಿ ಲಕ್ಷ್ಮಣಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ