ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ: ಮೂರು ದಿನಗಳ ಅವಧಿಗೆ ನಿಷೇಧಾಜ್ಞೆ ಜಾರಿ
ಮನೆ ಮುಂದೆ ನಿಲ್ಲಿಸಿದ್ದ ಎರಡು ಬುಲೆಟ್ ಮತ್ತು ಒಂದು ಟಿವಿಎಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ನಸುಕಿನ 2.30ರಿಂದ 3 ಗಂಟೆಯ ಅವಧಿಯಲ್ಲಿ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
ಶಿವಮೊಗ್ಗ: ಬಜರಂಗದಳ ಕಾರ್ಯಕರ್ತನ ಕೊಲೆ ಹಿನ್ನೆಲೆಯಲ್ಲಿ ಉದ್ವಿಗ್ನವಾಗಿರುವ ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ನಿಷೇಧಾಜ್ಞೆ ಜಾರಿ ಮಾಡಿದೆ. ಆರ್ಎಂಎಲ್ ನಗರ 2ನೇ ಹಂತದ 6ನೇ ಅಡ್ಡರಸ್ತೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಲಭೆ ನಡೆದು ಮೂರು ದಿನವಾದರೂ ವಾಹನಗಳಿಗೆ ಬೆಂಕಿ ಇಡುವ ಕಾರ್ಯ ಮುಂದುವರಿದಿರುವುದು ನಗರದ ಜನರಲ್ಲಿ ಆತಂಕ ತಂದಿದೆ. ಮನೆ ಮುಂದೆ ನಿಲ್ಲಿಸಿದ್ದ ಎರಡು ಬುಲೆಟ್ ಮತ್ತು ಒಂದು ಟಿವಿಎಸ್ ವಾಹನಕ್ಕೆ ಬೆಂಕಿ ಹಚ್ಚಲಾಗಿದೆ. ನಸುಕಿನ 2.30ರಿಂದ 3 ಗಂಟೆಯ ಅವಧಿಯಲ್ಲಿ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಫೆಬ್ರುವರಿ 26ರ ಬೆಳಿಗ್ಗೆ 9 ಗಂಟೆಯವರೆಗೆ ಸಿಆರ್ಪಿಸಿ 144ನೇ ಸೆಕ್ಷನ್ ಅನ್ವಯ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಹೀಗಾಗಿ ಮೃತ ಹರ್ಷನ ಸಹೋದರಿ ಅಶ್ವಿನಿ, ಶಾಂತಿ ಕಾಪಾಡುವಂತೆ ಟಿವಿ9 ಮೂಲಕ ಮನವಿ ಮಾಡಿದ್ದಾರೆ. ಎಲ್ಲರೂ ನನ್ನ ಸಹೋದರರೇ. ಹಿಂದೂಗಳು, ಮುಸ್ಲಿಮರು ಎಲ್ಲರೂ ಮನುಷ್ಯರೇ. ಹಿಂದೂ-ಮುಸ್ಲಿಮರು ಗಲಾಟೆ ಮಾಡುವುದು ಬೇಡ. ಪ್ರತಿಯೊಬ್ಬರು ನನ್ನ ಅಣ್ಣ ತಮ್ಮಂದಿರೇ. ನಿಮ್ಮಲ್ಲಿ ಯಾರಿಗೇ ನೋವಾದರೂ ನನಗೆ ನೋವಾಗುತ್ತದೆ. ಹರ್ಷನನ್ನು ಕಳೆದುಕೊಂಡು ನೋವಿನಲ್ಲಿದ್ದೇವೆ. ದಯವಿಟ್ಟು ಶಾಂತಿ ಕಾಪಾಡಿಕೊಳ್ಳಿ. ನನ್ನ ಎಲ್ಲಾ ಅಣ್ಣ, ತಮ್ಮಂದಿರು ಸುರಕ್ಷಿತವಾಗಿರಬೇಕು. ನಮಗೆ ಮನುಷ್ಯರು ಮನುಷ್ಯತ್ವ ಮುಖ್ಯ ಎಂದು ಹೇಳಿದ್ದಾರೆ.
ನಿಮ್ಮಲ್ಲಿ ನಾನು ಭಿಕ್ಷೆ ಕೇಳುತ್ತೇನೆ ಶಾಂತಿ ಕಾಪಾಡಿಕೊಳ್ಳಿ. ಮನೆಯವರ ಬಗ್ಗೆ ಯೋಚನೆ ಮಾಡಿ. ಎಲ್ಲರೂ ಆರಾಮಗಿರಿ, ಖುಷಿಯಾಗಿರಿ. ಹರ್ಷ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾನೆ. ಹಿಂದೂ- ಮುಸ್ಲಿಂ ಎಲ್ಲರೂ ಮನುಷ್ಯರೇ. ಎಲ್ಲರಿಗೂ ನೋವಾಗುತ್ತದೆ. ಎಲ್ಲರಿಗೂ ರಕ್ತ ಬರುತ್ತದೆ. ಅಪ್ಪ-ಅಮ್ಮನ ಬಗ್ಗೆ ಯೋಚನೆ ಮಾಡಿ ಎಂದು ಹರ್ಷ ಸಹೋದರಿ ಅಶ್ವಿನಿ ಮನವಿ ಮಾಡಿದ್ದಾರೆ.
ಕಳೆದ ಭಾನುವಾರ (ಫೆ 20) ಕಾರಿನಲ್ಲಿ ಬಂದ ದುಷ್ಕರ್ಮಿಗಳು ಹರ್ಷನನ್ನು ಕೊಲೆ ಮಾಡಿದ್ದಾರೆ. ಇದರಿಂದಾಗಿ ಶಿವಮೊಗ್ಗ ಈಗ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಕೊಲೆಯ ನಂತರ ಸಿಟ್ಟಿಗೆದ್ದ ಜನರು ಮನಬಂದಂತೆ ಕಲ್ಲು ತೂರಾಟ ನಡೆಸಿದರು. ಕಲ್ಲುತೂರಾಟ ನಿಯಂತ್ರಿಸಲು ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕಾರಿನಲ್ಲಿ ಬಂದಿದ್ದ 4ರಿಂದ 6 ಜನರಿದ್ದ ಗುಂಪು, ಬಜರಂಗದಳ ಕಾರ್ಯಕರ್ತ ಹರ್ಷನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿತು. ತೀವ್ರವಾಗಿ ಗಾಯಗೊಂಡಿದ್ದ ಹರ್ಷನನ್ನು ತಕ್ಷಣ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಹರ್ಷ ಕೊಲೆ ನಂತರ ಪರಿಸ್ಥಿತಿ ವಿಕೋಪಕ್ಕೆ; ಶಾಂತಿ ಕಾಪಾಡುವಂತೆ ಹರ್ಷನ ಸಹೋದರಿ ಅಶ್ವಿನಿ ಮನವಿ
ಇದನ್ನೂ ಓದಿ: ಶಿವಾಜಿ ರೂಪದಲ್ಲಿ ಚಿತ್ರ ಬಿಡಿಸಿ ಹರ್ಷನಿಗೆ ಶ್ರದ್ಧಾಂಜಲಿ; ಸಾಮಾಜಿಕ ಜಾಲತಾಣದಲ್ಲಿ ವೈರಲ್
Published On - 3:02 pm, Wed, 23 February 22